ಮನೆಯಲ್ಲೊಂದು ಮಗು (Baby Care In Summer) ಬರುವುದಿದೆ ಎಂದಾಕ್ಷಣ, ಮನೆಮಂದಿಯ ಸಂಭ್ರಮಗಳ ಜೊತೆಗೆ ಸಿದ್ಧತೆಗಳೂ ಮುಗಿಲು ಮುಟ್ಟುತ್ತವೆ. ಗರ್ಭಿಣಿಯರಿಗೆ ಯಾವುದು ಒಳ್ಳೆಯದು- ಕೆಟ್ಟದ್ದು, ಯಾವುದು ಬೇಕು- ಸಾಕು ಇತ್ಯಾದಿಗಳ ಚರ್ಚೆಯೂ ಜೋರಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ಹೇಳುವಾಗ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದೇ ಬಗೆಹರಿಯುವುದಿಲ್ಲ. ಬಸುರಿನಲ್ಲೇ ಹೀಗಿರುವಾಗ ಮಗು ಬಂದ ಮೇಲಂತೂ ಸಲಹೆಗಳ ಪ್ರವಾಹವೇ ಹರಿದು ಬರುತ್ತದೆ. ಬೇಸಿಗೆಯಲ್ಲಿ ನವಜಾತ ಶಿಶುಗಳ ಆರೈಕೆ ಹೇಗಿರಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳಿವು.
ಎಳೆಗೂಸಿಗೆ ಸ್ನಾನ
ಹುಟ್ಟಿದಾಕ್ಷಣ ಶಿಶುವನ್ನು ತೊಳೆದು ಸ್ವಚ್ಛ ಮಾಡಲಾಗುತ್ತದೆ. ಹಾಗಾಗಿ ಮೊದಲ ದಿನದಿಂದಲೇ ಅದಕ್ಕೆ ಸ್ನಾನ ಮಾಡಿಸಬೇಕೆಂದಿಲ್ಲ. ಕತ್ತರಿಸಿದ ಹೊಕ್ಕುಳ ಬಳ್ಳಿ ಒಣಗುವವರೆಗೆ ಸ್ನಾನ ಮಾಡಿಸದೇ ಇರುವುದು ಕ್ಷೇಮ. ಹಾಗೂ ಮಾಡಿಸಲೇಬೇಕೆಂದಿದ್ದರೆ ಈ ಬೇಸಿಗೆಯ ಕಾಲದಲ್ಲಿ ಹಿತವಾದ ಉಗುರು ಬಿಸಿ ನೀರಿನಲ್ಲಿ, ಸ್ನಾನ ಮಾಡಿಸಿದರೆ ಸಾಕು.
ತಾಯಿಗೆ ನೆಗಡಿಯಿದ್ದರೆ ಶಿಶುವಿಗೆ ಹಾಲೂಡಿಸಬೇಕೆ?
ಹೌದು. ತಾಯಿ ತನ್ನ ಕೈಗಳನ್ನು ಸ್ವಚ್ಛ ಇರಿಸಿಕೊಂಡು ಕೂಸನ್ನು ಮುಟ್ಟಬೇಕಾಗುತ್ತದೆ. ತಾಯಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಕಣಗಳು ಶಿಶುವಿಗೆ ದೊರೆಯುವುದು ಹಾಲಿನ ಮೂಲಕವೇ ಆದ್ದರಿಂದ, ಕಡ್ಡಾಯವಾಗಿ ಹಾಲುಣಿಸಬೇಕು. ಇದರಿಂದ ರೋಗನಿರೋಧಕತೆ ಶಿಶುವಿಗೂ ದೊರೆಯುತ್ತದೆ.
ಮಗುವಿನ ಕೋಣೆ
ಗಾಳಿ-ಬೆಳಕು ಸಾಕಷ್ಟಿದ್ದು, ತಾಯಿ-ಶಿಶುವಿಗೆ ಪ್ರಶಸ್ತವಾಗಿರಲಿ. ಕೋಣೆಗೆ ನೇರವಾಗಿ ಬಿಸಿಲು ಹೊಡೆಯುವಂತಿದ್ದರೆ, ಪರದೆಗಳನ್ನು ಹಾಕಿ ಕೋಣೆಯನ್ನು ತಂಪಾಗಿಡಿ. ಸಾಧಾರಣವಾಗಿ 25 ಡಿಗ್ರಿ ಸೆ.ನಷ್ಟು ಉಷ್ಣತೆ ಹಿತಕರವಾಗಿರುತ್ತದೆ. ಏರ್ ಕೂಲರ್ ಅಥವಾ ಕಂಡೀಶನರ್ ಬಳಸುತ್ತಿದ್ದರೆ, ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡುವುದು ಅಗತ್ಯ. ಮಗುವನ್ನು ಹೊರಗೆ ಕರೆದೊಯ್ಯುವಾಗ ಆದಷ್ಟು ಮಧ್ಯಾಹ್ನ 12ರಿಂದ 4 ಗಂಟೆಯ ಹೊತ್ತನ್ನು ತಪ್ಪಿಸಿ. ತೀಕ್ಷ್ಣ ಬಿಸಿಲಿಗೆ ಎಳೆ ಚರ್ಮ ಬೇಗನೆ ಸುಡುತ್ತದೆ.
ಬಟ್ಟೆಗಳು
ಸಡಿಲವಾಗ ಹತ್ತಿಯ ಬಟ್ಟೆಗಳನ್ನೇ ಬಳಸಿ. ದಿನವಿಡೀ ಡೈಪರ್ ಹಾಕುವವರು ನೀವಾದರೆ, ಅದನ್ನು ಕಾಲಕಾಲಕ್ಕೆ ಬದಲಿಸಿ, ಗುಳ್ಳೆಗಳಾಗದಂತೆ ಎಚ್ಚರ ವಹಿಸಿ. ಇಷ್ಟಾಗಿಯೂ ಶಿಶುಗಳಿಗೆ ಬೇಸಿಗೆಯಲ್ಲಿ ಬೆವರುಸಾಲೆಯಂಥ ಚರ್ಮದ ಕಿರಿಕಿರಿ ಬರಬಹುದು. ತಂಪಾಗಿ ಮೈ ಒರೆಸಿ, ಬೆವರು ಕಡಿಮೆಯಾಗುವಂತೆ ನೋಡಿಕೊಳ್ಳಿ.
ನೀರು ಕುಡಿಸಬೇಕೆ?
ಬೇಸಿಗೆಯ ದಿನಗಳಾದ್ದರಿಂದ ಕೂಸಿಗೆ ಕಾಯಿಸಿದ ನೀರು ಕುಡಿಸುವಂತೆ ಯಾರಾದರೂ ಸಲಹೆ ನೀಡುವುದು ಸಾಮಾನ್ಯ. ಇದು ಸಲ್ಲದು. ಆರು ತಿಂಗಳವರೆಗೆ ಮಗುವಿಗೆ ತಾಯಿಯ ಹಾಲಿನ ಹೊರತಾಗಿ ಏನನ್ನೂ ಕುಡಿಸುವ ಅಗತ್ಯವಿಲ್ಲ. ತಾಪಮಾನ ತೀವ್ರವಾಗಿದ್ದರೆ, ಪದೇಪದೆ ಹಾಲೂಡಿಸಿ. ಆದರೆ ತಾಯಿಯನ್ನು ನಿರ್ಜಲೀಕರಣಕ್ಕೆ ಒಡ್ಡದಂತೆ ಎಚ್ಚರಿಕೆ ವಹಿಸಿ. ಮಗುವಿಗೆ ಘನ ಆಹಾರ ಪ್ರಾರಂಭಿಸಿದ ನಂತರವೇ ನೀರು ಕುಡಿಸುವ ಅಗತ್ಯ ಇರುತ್ತದೆ.
ಕಾಡಿಗೆ- ಪೌಡರು- ಎಣ್ಣೆ
ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಸೋಂಕು ಉಂಟಾಗಿ, ಶಿಶುವಿಗೆ ಹಾನಿ ಹೆಚ್ಚುತ್ತದೆ. ಪೌಡರು ಹಚ್ಚುವುದರಿಂದ ಅಲರ್ಜಿ ಅಥವಾ ಒಣಚರ್ಮದ ಸಮಸ್ಯೆ ಕಾಡಬಹುದು. ಮಗುವಿಗೆ ನವಿರಾಗಿ ಎಣ್ಣೆ ಮಸಾಜ್ ಮಾಡಬಹುದು. ಆದರೆ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥ ತೈಲಗಳಿಂದ ನವಿರಾಗಿ ಮಸಾಜ್ ಸಾಕಾಗುತ್ತದೆ. ಸಿಕ್ಕಾಪಟ್ಟೆ ಎಣ್ಣೆ ಹಚ್ಚಿ, ಆ ಎಣ್ಣೆ ತೊಳೆಯುವುದಕ್ಕೆ ಕಠೋರ ಸೋಪು- ಬಿಸಿ ನೀರುಗಳನ್ನು ಹಾಕುವುದರಿಂದ ಎಳೆಯ ಚರ್ಮಕ್ಕೆ ಹಾನಿಯಾಗುತ್ತದೆ. ಕಿವಿಗೆ, ಮೂಗಿಗೆಲ್ಲಾ ಎಣ್ಣೆ ಹಾಕುವುದು ಬೇಡ. ಇದರಿಂದ ಸೋಂಕಿನ ಸಮಸ್ಯೆ ಉಂಟಾಗಬಹುದು.
ಮಗುವಿನ ತಲೆ ತಟ್ಟಿ ಉರುಟಾಗಿಸಬಹುದೆ?
ಕೆಲವೊಮ್ಮೆ ಹುಟ್ಟುವಾಗ ಮಗುವಿನ ತಲೆ ಆಕಾರಗೆಡುವುದು ನಿಜ. ಅದು ಸಾಮಾನ್ಯವಾಗಿ ತಾನಾಗೇ ಒಂದು ಆಕೃತಿಗೆ ಬರುತ್ತದೆ. ಅದಕ್ಕಾಗಿ ಮಗುವಿನ ತಲೆ ತಟ್ಟಬೇಕೆಂದಿಲ್ಲ. ನವಜಾತ ಮಕ್ಕಳ ತಲೆಯ ಮೂಳೆಯ ನಡುವೆ ಸೂಕ್ಷ್ಮ ಅಂತರವಿರುತ್ತದೆ. ಕ್ರಮೇಣ ಅದು ತಾನಾಗಿಯೇ ತುಂಬಿಕೊಳ್ಳುತ್ತದೆ. ಹಾಗಾಗಿ ಉರುಟಾಗಿಸುವ ಸಾಹಸಕ್ಕೆ ಶಿಶುಗಳ ತಲೆ ತಟ್ಟುವುದು ಬೇಕಿಲ್ಲ. ಇದು ಮಗುವಿಗೆ ಅಪಾಯಕಾರಿ. ಇದಕ್ಕಾಗಿ ರಾಗಿಯ ಸಣ್ಣ ದಿಂಬುಗಳನ್ನು ಕೂಸುಗಳಿಗೆ ಬಳಸಬಹುದು.
ಮಕ್ಕಳು ರಾತ್ರಿಯಿಡೀ ನಿದ್ರಿಸಬೇಕೆ?
ಹಾಗೇನಿಲ್ಲ. ಹಸುಗೂಸುಗಳ ಹೊಟ್ಟೆ ಸಣ್ಣದಾದ್ದರಿಂದ ಅವುಗಳಿಗೆ ಆಗಾಗ ಹೊಟ್ಟೆಗೆ ಹಾಕುವುದು ಅಗತ್ಯ. ಹಾಗಾಗಿ ರಾತ್ರಿಡೀ ನಿದ್ರಿಸಲಾಗದೆ ಪದೇಪದೆ ಎದ್ದು ಹೊಟ್ಟೆಗೆ ಹಾಕಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳ ನಂತರ, ಅವುಗಳು ಹಾಲು ಕುಡಿಯುವ ಅಂತರ ಹೆಚ್ಚಿದ ಮೇಲೆ, ನಿದ್ದೆಯ ಸಮಯವೂ ದೀರ್ಘವಾಗುತ್ತಾ ಹೋಗುತ್ತದೆ. ಪುಟ್ಟ ಮಕ್ಕಳು ದಿನಕ್ಕೆ 16-17 ತಾಸು ನಿದ್ರಿಸುವುದು ಹೌದಾದರೂ, ಒಮ್ಮೆಲೆ ಇಷ್ಟು ದೀರ್ಘ ಸಮಯ ನಿದ್ದೆ ಮಾಡುವುದಿಲ್ಲ.
ಇದನ್ನೂ ಓದಿ: Health Tips: ಒಗ್ಗರಣೆಗೆ ಹಾಕುವ ಕರಿಬೇವನ್ನು ನಾವು ನಿತ್ಯವೂ ಏಕೆ ತಿನ್ನಬೇಕು ಗೊತ್ತೇ?