Site icon Vistara News

Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?

Beetroot

ಬೀಟ್‌ರೂಟ್‌ ಗಡ್ಡೆಯಿಂದ ಸಾಕಷ್ಟು ಆರೋಗ್ಯ ಲಾಭ ಗಳಿರುವುದು ನಿಮಗೆ ಗೊತ್ತೇ ಇದೆ. ಬೀಟ್‌ರೂಟ್‌ನಲ್ಲಿ ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ಹಾಗಾಗಿ ಬೀಟ್‌ರೂಟ್‌ ಸೇವನೆಯನ್ನು ಬಹುತೇಕ ಎಲ್ಲರೂ, ಆರೋಗ್ಯವರ್ಧನೆಗೆ ಸಲಹೆ ಕೊಡುತ್ತಾರೆ. ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ, ರಕ್ತ ತುಂಬಿಕೊಳ್ಳಲು, ಚರ್ಮ ಫಳಫಳ ಹೊಳೆದು ಆರೋಗ್ಯದಿಂದ ಕಂಗೊಳಿಸಲು, ಪಿತ್ತಕೋಶದ ಆರೋಗ್ಯಕ್ಕೆ ಸೇರಿದಂತೆ ಹಲವಾರು ಅತ್ಯಗತ್ಯ ಗುಣಗಳು ಇದರಲ್ಲಿರುವುದರಿಂದ ಬೀಟ್‌ರೂಟ್‌ ಆಗಾಗ ಸೇವಿಸುವುದು ಒಳ್ಳೆಯದು ನಿಜ. ಆದರೆ, ಎಲ್ಲರೂ ಹೀಗೆ ಬೇಕಾದಾಗಲೆಲ್ಲ ಬೀಟ್‌ರೂಟ್‌ ಸೇವಿಸಬಹುದೇ? ಇದರಿಂದ ಸಮಸ್ಯೆಗಳಾಗಲಿಕ್ಕಿಲ್ಲವೇ ಎಂಬ ಪ್ರಶ್ನೆ ನಿಮಗೆ ಮೂಡಿದರೆ, ಖಂಡಿತ ಅದಕ್ಕೆ ಉತ್ತರ ಇಲ್ಲಿದೆ. ಯಾಕೆಂದರೆ, ಬೀಟ್‌ರೂಟ್‌ ಸಂಪೂರ್ಣ ಆಹಾರವೇ ಆದರೂ, ಇದರಿಂದ ಕೆಲವೇ ಕೆಲವರಿಗೆ ಸಮಸ್ಯೆಯೂ ಆಗಬಹುದು. ಬನ್ನಿ, ಯಾರೆಲ್ಲ ಬೀಟ್‌ರೂಟನ್ನು ಹೆಚ್ಚು ತಿನ್ನಬಾರದು (Beetroot Side Effects) ಎಂಬುದನ್ನು ನೋಡೋಣ.

Beetroot Rainy Season Food

ಬೀಟ್‌ರೂಟ್‌ನಲ್ಲಿ ಆಕ್ಸಲೇಟ್‌ ಹೇರಳವಾಗಿದೆ. ಸಾಮಾನ್ಯವಾಗಿ ಕಿಡ್ನಿ ಸ್ಟೋನ್‌/ ಕಿಡ್ನಿಯಲ್ಲಿ ಕಲ್ಲು ಹೊಂದಿದವರಿಗೆ ಕಡಿಮೆ ಆಕ್ಸಲೇಟ್‌ ಇರುವ ಆಹಾರವನ್ನು ವೈದ್ಯರು ಸೂಚಿಸುತ್ತಾರೆ. ಹಾಗಾಗಿ, ಬೀಟ್‌ರೂಟ್‌ ತಿನ್ನುವುದರಿಂದ ಕಿಡ್ನಿಯ ಕಲ್ಲಿನ ಸಮಸ್ಯೆ ಉಲ್ಬಣಗೊಳ್ಳಬಹುದು. ಈಗಾಗಲೇ ಕಿಡ್ನಿ ಕಲ್ಲು ಹೊಂದಿರುವ ಮಂದಿ ಬೀಟ್‌ರೂಟ್‌ ಕಡಿಮೆ ತಿಂದರೆ ಒಳ್ಳೆಯದು.

ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ಈ ಕಾರಣದಿಂದ ಅದು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಧಿಕ ರಕ್ತದೊತ್ತಡ ಇರುವ ಮಂದಿಗೆ ಇದು ಒಳ್ಳೆಯದು. ಅದರೆ, ರಕ್ತದೊತ್ತಡ ಕಡಿಮೆ ಇರುವ, ಲೋ-ಬಿಪಿ ಸಮಸ್ಯೆ ಹೊಂದಿರುವ ಮಂದಿ ಇದನ್ನು ಆಗಾಗ ಸೇವಿಸಿದರೆ, ಔಷಧಿಯನ್ನೂ ಜೊತೆಗೆ ತೆಗೆದುಕೊಳ್ಳುತ್ತಿದ್ದರೆ, ಅಗತ್ಯಕ್ಕಿಂತಲೂ ಹೆಚ್ಚು, ರಕ್ತದೊತ್ತಡ ಕೆಳಗಿಳಿಯಬಹುದು. ಅತಿಯಾಗಿ ಬಿಪಿ ಡೌನ್‌ ಆಗುವುದು ಅಪಾಯ ಕೂಡಾ. ಹಿತಮಿತವಾಗಿ ಅಪರೂಪಕ್ಕೊಮ್ಮೆ ಬೀಟ್‌ರೂಟ್‌ ಸೇವನೆ ತೊಂದರೆ ಮಾಡದು.

ಬೀಟ್‌ರೂಟ್‌ನಲ್ಲಿ ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇದ್ದರೂ, ಇದರಲ್ಲಿ ನೈಸರ್ಗಿಕವಾದ ಸಿಹಿಯ ಅಂಶ ಇದೆ. ಹಾಗಾಗಿ, ಈಗಾಗಲೇ ಮಧುಮೇಹದ ಸಮಸ್ಯೆ ಹೊಂದಿದ ಮಂದಿಗೆ ಬೀಟ್‌ರೂಟ್‌ ಅತಿಯಾದ ಸೇವನೆ ಸಮಸ್ಯೆ ತರಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಬಹುದು.

ಕೆಲವರಲ್ಲಿ ಬೀಟೂರಿಯಾ ಎಂಬ ಸಮಸ್ಯೆ ಕಾಣಿಸಬಹುದು. ಬೀಟ್‌ರೂಟ್‌ ತಿಂದರೆ, ವಿಸರ್ಜಿಸುವ ಮೂತ್ರ ಹಾಗೂ ಮಲದ ಬಣ್ಣ ಪಿಂಕ್‌ ಬಣ್ಣಕ್ಕೆ ಬದಲಾಗುತ್ತದೆ. ಇದು ಸಾಮಾನ್ಯ ಹಾಗೂ ಯಾವುದೇ ಅಪಾಯವಿಲ್ಲದ್ದೇ ಆದರೂ, ಅನೇಕರು ಇದನ್ನು ರಕ್ತ ಎಂದು ಭ್ರಮಿಸಿ ಗಾಬರಿಯಾಗುವುದೂ ಉಂಟು. ಹಾಗಾಗಿ ಈ ಬಗ್ಗೆ ತಿಳುವಳಿಕೆ ಇರಲಿ.

ಇದನ್ನೂ ಓದಿ: Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

ಬೀಟ್‌ರೂಟ್‌ನಲ್ಲಿ ಅಧಿಕ ನಾರಿನಂಶ ಇದೆ. ಇದು ಕೆಲವರಿಗೆ ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ತಂದೊಡ್ಡಬಹುದು. ಹೊಟ್ಟೆಯಲ್ಲಿ ಗ್ಯಾಸ್‌ ಅಥವಾ ಹೊಟ್ಟೆಯುಬ್ಬರದ ಸಮಸ್ಯೆಯನ್ನೂ ಹುಟ್ಟುಹಾಕಬಹುದು. ಹಾಗಾಗಿ ಬೀಟ್‌ರೂಟ್‌ ಅಧಿಕವಾಗಿ ಸೇವಿಸಬಾರದು. ಹೆಚ್ಚಾದರೆ ಇಂತಹ ಸಮಸ್ಯೆಗಳು ಕಾಡುವ ಅಪಾಯವೂ ಇದೆ.

Exit mobile version