Site icon Vistara News

Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?

Grapes Benefits

ನರಿಯೊಂದು ದ್ರಾಕ್ಷಿ (Grapes benefits) ಹಣ್ಣಿಗೆ ಆಸೆಪಟ್ಟು, ಎಷ್ಟು ಪ್ರಯತ್ನಿಸಿದರೂ ದೊರೆಯದೆ, ʻಸಾಯಲತ್ಲಾಗೆ, ಹುಳಿ ದ್ರಾಕ್ಷಿಯಿದುʼ ಎಂದು ಹೊರಟುಹೋದ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಕೇಳಿಯೇ ಇರುತ್ತೇವೆ. ಅದು ನರಿಯ ಕಥೆಯಾಯಿತು, ಈಗ ನಮಗೆ ದ್ರಾಕ್ಷಿ ಹಣ್ಣು ಬೇಕೆಂದರೆ ದ್ರಾಕ್ಷಿಯ ತೋಟಕ್ಕೆ ಹೋಗಿ ಹಾರಾಡಬೇಕೆಂದಿಲ್ಲ, ಅಂಗಡಿಗೆ ಹೋಗಿ ಬೇಕಾದಷ್ಟನ್ನು ಖರೀದಿಸಿ ತಂದರಾಯಿತು. ಗೊಂಚಲಲ್ಲಿ ತೂಗುವ ಈ ರಸಭರಿತ ಹಣ್ಣುಗಳು ಕಣ್ಣಿಗೆ ಮಾತ್ರ ತಂಪಲ್ಲ, ಬಾಯಿ, ಹೊಟ್ಟೆಗೂ ಹಿತ. ಒಂದಿಷ್ಟು ಹುಳಿ, ಕೆಲವೊಮ್ಮೆ ಚಿಟಿಕೆಯಷ್ಟು ಒಗರು, ಬಹಳಷ್ಟು ಸಿಹಿ ರುಚಿಯ ಮಿಶ್ರಣದ ಹಣ್ಣುಗಳಿವು.

ಇದರ ಬಣ್ಣಗಳೇ ಕೆಲವೊಮ್ಮೆ ಬಾಯಲ್ಲಿ ನೀರೂರಿಸಿಬಿಡುತ್ತವೆ. ತಿಳಿ ಹಸಿರು, ಅಚ್ಚ ಹಸಿರು, ನಸುಗೆಂಪು, ತುಸು ಹೆಚ್ಚೇ ಕೆಂಪು, ಕಪ್ಪು, ನಸು ನೀಲಿ, ನೇರಳೆ- ಹೀಗೆ ಹಲವಾರು ಬಣ್ಣಗಳಲ್ಲಿ ದ್ರಾಕ್ಷಿಯನ್ನು ಕಾಣಬಹುದು. ಹೊರಮೈ ಮಾಟಗಳೂ ಅಷ್ಟೇ, ಸಣ್ಣದು, ದೊಡ್ಡದು, ಉರುಟಾದ್ದು, ಮೊಟ್ಟೆಯಾಕಾರದ್ದು, ಉದ್ದ ಮಾಟದ್ದು- ಎಷ್ಟೊಂದು ಬಗೆಗಳಿವೆ. ಹಾಗೆಂದು ಈ ಯಾವ ಬಣ್ಣ, ಮಾಟಗಳ ದ್ರಾಕ್ಷಿ ತಿಂದರೂ, ರುಚಿ ಮತ್ತು ಪೋಷಕತತ್ವಗಳಿಗೆ ಏನೂ ಮೋಸವಿಲ್ಲ. ಹಾಗಾದರೆ ಏನೆಲ್ಲ ಲಾಭಗಳಿವೆ ದ್ರಾಕ್ಷಿ ತಿನ್ನುವುದರಲ್ಲಿ?

ಕ್ಯಾನ್ಸರ್‌ ದೂರ

ಪಾಲಿಫೆನಾಲ್ ಮತ್ತು ರೆಸ್ವೆರಾಟ್ರೋಲ್‌ನಂಥ ಪ್ರಮುಖ ಆಂಟಿ ಆಕ್ಸಿಡೆಂಟ್‌ಗಳು ದ್ರಾಕ್ಷಿಯಲ್ಲಿವೆ. ಕ್ಯಾನ್ಸರ್‌ ಅಥವಾ ಯಾವುದೇ ರೀತಿಯ ಗಡ್ಡೆಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯ ಇವುಗಳಿಗಿರುವುದಾಗಿ ಅಧ್ಯಯನಗಳು ಹೇಳುತ್ತವೆ. ಯಕೃತ್‌, ಕರುಳು, ಸ್ತನ, ಜಠರ, ಚರ್ಮ ಮುಂತಾದ ಕಡೆಗಳಲ್ಲಿ ಕ್ಯಾನ್ಸರ್‌ ಗಡ್ಡೆಗಳು ಬಾರದಂತೆ ಕಾಪಾಡುತ್ತದೆ, ಇದರಲ್ಲಿನ ಕ್ವಾರ್ಸೆಂಟೀನ್‌ ಎಂಬ ಫ್ಲವನಾಯ್ಡ್‌ನಿಂದ ಕ್ಯಾನ್ಸರ್‌ ಕೋಶಗಳ ಬೆಳವಣಿಗೆ ಕುಂಠಿತಗೊಳ್ಳುವುದು ಪತ್ತೆಯಾಗಿದೆ.

ಹೃದಯಾರೋಗ್ಯ ವೃದ್ಧಿ

ಇದರ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸಿ, ಹೃದಯದ ಆಯಸ್ಸು ಹೆಚ್ಚಿಸುತ್ತವೆ. ರಕ್ತದ ಪರಿಚಲನೆಯನ್ನು ವೃದ್ಧಿಸಿ, ಹೃದಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳುತ್ತವೆ. ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗುವಂತೆ ಮಾಡುವ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ.

ದೃಷ್ಟಿ ಚುರುಕು

ನಿಯಮಿತವಾಗಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಯನ್ನು ಶೇ. ೩೬ರಷ್ಟು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಕೆಂಪು ದ್ರಾಕ್ಷಿಯನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ದೃಷ್ಟಿದೋಷದ ಸಾಧ್ಯತೆ ಕ್ಷೀಣವಾಗುತ್ತದೆ.

ಪ್ರತಿರೋಧಕ ಶಕ್ತಿ ವೃದ್ಧಿ

ಹಲವು ಫ್ಲವನಾಯ್ಡ್‌ಗಳು, ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವಗಳು, ಕಬ್ಬಿಣ ಮತ್ತು ಮೆಗ್ನೀಶಿಯಂನಂಥ ಖನಿಜಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಅದರಲ್ಲೂ ದೈನಂದಿನ ಆಹಾರದಲ್ಲಿ ಬೊಗಸೆ ದ್ರಾಕ್ಷಿಗೆ ಸ್ಥಾನ ನೀಡಿದರೆ ಋತು ಬದಲಾವಣೆಯ ಹೊತ್ತಿಗೆ ಬರುವಂಥ ನೆಗಡಿ, ಜ್ವರದಂಥ ಕಿರಕಿರಿಗಳನ್ನು ತಡೆಯಬಹುದು

ಮೂಳೆಗಳ ಬಲವರ್ಧನೆ

ತಾಮ್ರ, ಕಬ್ಬಿಣ, ಮ್ಯಾಂಗನೀಸ್‌ನಂಥ ಅಗತ್ಯ ಖನಿಜಗಳನ್ನು ಹೊಂದಿರುವ ದ್ರಾಕ್ಷಿಯ ಸೇವನೆಯಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸಬಹುದು. ಆಸ್ಟಿಯೊ ಆರ್ಥರೈಟಿಸ್‌ನಿಂದ ಉಂಟಾಗುವ ಮಂಡಿ ನೋವಿನ ಉಪಟಳವನ್ನು ದ್ರಾಕ್ಷಿಗಳು ಶಮನ ಮಾಡಬಲ್ಲವು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೀಲುಗಳಲ್ಲಿ ಶಕ್ತಿ ಸಂಚಯಿಸಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಮಧುಮೇಹಿಗಳಿಗೂ ಕ್ಷೇಮ

ಹೌದು, ಸಿಹಿ ರುಚಿಯ ಹಣ್ಣುಗಳನ್ನು ತಿನ್ನುವಾಗ ಇದು ಮಧುಮೇಹಿಗಳಿಗೆ ಸುರಕ್ಷಿತವೇ ಎಂಬ ಸಂಶಯ ಕಾಡುವುದು ಸಹಜ. ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಮಧ್ಯಮ ಪ್ರಮಾಣದಲ್ಲಿದ್ದು, ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹಿಗಳಿಗೂ ಅಪಥ್ಯವಾಗುವುದಿಲ್ಲ.

ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?

Exit mobile version