Site icon Vistara News

Benefits Of Jowar: ಚಳಿಗಾಲದಲ್ಲಿ ಜೋಳ ತಿಂದರೆ ಆರೋಗ್ಯಕ್ಕೆ ಒಳ್ಳೆಯದು

Benefits Of Jowar

ಜೋಳ ತಿಂದವನು ತೋಳದಂತಿಹನು ಎನ್ನುತ್ತದೊಂದು ನಾಣ್ಣುಡಿ. ಪರಂಪರಾಗತವಾಗಿ ಆಯಾ ಪ್ರಾಂತ್ಯಗಳಲ್ಲಿ ಬೆಳೆಯುವ ಧಾನ್ಯ, ಕಾಳುಗಳು ಯಾವತ್ತಿಗೂ ಶ್ರೇಷ್ಠವೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕ್ರಮೇಣ ಈ ಬೆಳೆಗಳು ಭೌಗೋಳಿಕವಾಗಿ ಬೇರೆ ಭಾಗಗಳಿಗೂ ಹರಡುತ್ತವೆ. ಹೀಗೆ ಬಳಕೆಯಲ್ಲಿ ಎಲ್ಲೆಡೆ ಹರಡಿರುವ ಜೋಳವನ್ನು (Jowar) ಯಾವಾಗ ಹೇಗೆ ಬಳಸಿದರೂ ಸ್ವಾಸ್ಥ್ಯಕ್ಕೆ ಉಪಕಾರಿ. ಆದರೆ ಚಳಿಗಾಲದಲ್ಲಿ ತಿನ್ನುವುದಕ್ಕೆ ಅದರದ್ದೇ ಆಗ ಪ್ರಯೋಜನಗಳಿವೆ. ಏನವು (Benefits Of Jowar) ಎಂಬುದನ್ನು ತಿಳಿಯೋಣ. ಜೋಳವೆನ್ನುತ್ತಿದ್ದಂತೆ ರೊಟ್ಟಿ ಅಥವಾ ಭಕ್ರಿಯೇ ನೆನಪಾಗುತ್ತದೆ. ಹೆಚ್ಚಾಗಿ ರೊಟ್ಟಿಯ ರೂಪದಲ್ಲೇ ಈ ಧಾನ್ಯ ಬಳಕೆಯಲ್ಲಿ ಇರುವುದು. ಇದಲ್ಲದೆ ಸುಮ್ಮನೆ ಸುಟ್ಟು ತಿನ್ನುವುದು, ಪಾಪ್‌ಕಾರ್ನ್‌ ಮಾಡುವುದು, ಹಲವು ರೀತಿಯ ಚಾಟ್‌ಗಳು, ಕಾಳುಗಳನ್ನು ನೆನೆಸಿ ರುಬ್ಬಿ ಪ್ಯಾಟಿಗಳಂತೆ ಮಾಡುವುದು, ಅದರ ಹಾಲು ತೆಗೆದು ಹಲ್ವಾ- ಹೀಗೆ ಹಲವಾರು ರೀತಿಗಳಲ್ಲಿ ಜೋಳವನ್ನು ಆಹಾರದಲ್ಲಿ ಬಳಸಲು ಸಾಧ್ಯವಿದೆ.

ನಾರು ಅಧಿಕ

ಚಳಿಗಾಲದಲ್ಲಿ ಕುಡಿಯುವ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಕಾಡುವುದು ಸಾಮಾನ್ಯ. ಜೋಳದಲ್ಲಿಇದರಲ್ಲಿ ಕರಗದಿರುವ ಮತ್ತು ಕರಗಬಲ್ಲ, ಎರಡೂ ರೀತಿಯ ನಾರುಗಳು ಹೇರಳವಾಗಿವೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಿಸುತ್ತದೆ. ಕರಗಬಲ್ಲ ನಾರು ದೇಹದಲ್ಲಿನ ಕೊಬ್ಬಿನಂಶ ಕಡಿತ ಮಾಡಲು ನೆರವಾದರೆ, ಕರಗದಿರುವ ನಾರು ಮಲಬದ್ಧತೆ ನಿವಾರಿಸುತ್ತದೆ. ಇದರಿಂದ ದೇಹದ ಒಟ್ಟಾರೆ ಆರೋಗ್ಯ ವೃದ್ಧಿಸುತ್ತದೆ.

ಹೃದಯದ ರಕ್ಷಣೆ

ಚಳಿಗಾಲದ ಆಹಾರವೆಂದರೆ ಹೆಚ್ಚು ಜಿಡ್ಡಿನದು. ಇದರಿಂದ ದೇಹದಲ್ಲಿ ಕೊಬ್ಬು ಜಮೆಯಾಗುತ್ತದೆ. ಆದರೆ ರಕ್ತದಲ್ಲಿನ ಎಲ್‌ಡಿಎಲ್‌ ಮಟ್ಟವನ್ನು ಕಡಿಮೆ ಮಾಡಿ, ಅಂದರೆ ದೇಹದಲ್ಲಿ ಕೊಲೆಸ್ಟ್ರಾಲ್‌ ಕಡಿತ ಮಾಡುವಲ್ಲಿ ಜೋಳ ಉತ್ತಮ ನೆರವು ನೀಡುತ್ತದೆ. ರಕ್ತನಾಳಗಳಲ್ಲಿನ ಉರಿಯೂತ ನಿವಾರಿಸಿ, ರಕ್ತದ ಪರಿಚಲನೆಯನ್ನು ಸರಾಗ ಮಾಡುತ್ತದೆ. ಇದರಲ್ಲಿರುವ ಸಯನಿನ್‌ ಅಂಶಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಜೊತೆಗೆ ರಕ್ತದೊತ್ತಡ ಕಡಿಮೆ ಮಾಡುವಲ್ಲೂ ನೆರವಾಗುತ್ತದೆ. ಹಾಗಾಗಿ ಹೃದಯದ ರಕ್ಷಣೆಗೆ ಇದು ಸೂಕ್ತ ಆಯ್ಕೆ.

ಗ್ಲೂಟೆನ್‌ ರಹಿತ ಆಯ್ಕೆ

ಹಲವು ರೀತಿಯ ಅಲರ್ಜಿಗಳಲ್ಲಿ ಗ್ಲೂ ಟೆನ್‌ ಅಲರ್ಜಿಯೂ ಒಂದು. ಇಂಥ ಅಲರ್ಜಿ ಇರುವವರಿಗೆ, ಅಂದರೆ ಮುಖ್ಯವಾಗಿ ಗೋದಿಯು ಒಗ್ಗದವರಿಗೆ ಹಲವು ರೀತಿಯ ತೊಂದರೆಗಳು ಎದುರಾಗುತ್ತವೆ. ಆಹಾರ ಜೀರ್ಣವಾಗಿ ಪೋಷಕಾಂಶಗಳು ದೇಹಕ್ಕೆ ಸೇರದೆ ಇರುವುದರಿಂದ ಹಿಡಿದು, ಚರ್ಮದ ಮೇಲಿನ ತೊಂದರೆಗಳವರೆಗೆ ನಾನಾ ಸಮಸ್ಯೆಗಳು ಎದುರಾಗುತ್ತದೆ. ಇಂಥವರಿಗೆ ಇದು ಉತ್ತಮವಾದ ಮತ್ತು ಪೌಷ್ಟಿಕವಾದ ಪರ್ಯಾಯ ಧಾನ್ಯ.

ಮಧುಮೇಹಿಗಳಿಗೆ ಉತ್ತಮ

ಜೋಳದ ಗ್ಲೈಸೆಮಿಕ್‌ ಸೂಚಿ ಹೆಚ್ಚಿಲ್ಲ. ಹಾಗಾಗಿ ಇದನ್ನು ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಳಿತ ಆಗುವುದಿಲ್ಲ. ನಾರಿನಂಶ ಹೆಚ್ಚಿರುವುದರಿಂದ ಇದು ನಿಧಾನವಾಗಿ ಕರಗಿ ರಕ್ತವನ್ನು ಸೇರುತ್ತದೆ. ಮಾತ್ರವಲ್ಲ, ಮಧುಮೇಹಿಗಳಿಗೆ ತೂಕ ಇಳಿಸುವುದಕ್ಕೂ ಇದು ನೆರವಾಗುತ್ತದೆ.

ತೂಕ ಇಳಿಕೆ

ಜೋಳವನ್ನು ನಿಯಮಿತವಾಗಿ ಬಳಸುತ್ತಿದ್ದರೆ, ಮಧುಮೇಹಿಗಳಿಗೆ ಮಾತ್ರವಲ್ಲ, ತೂಕ ಇಳಿಸುವ ಯಾರಿಗೇ ಆದರೂ ಅನುಕೂಲವಾಗುತ್ತದೆ. ಒಮ್ಮೆ ಎರಡು ಭಕ್ರಿ ಹೊಟ್ಟೆಗೆ ಹಾಕಿದಿರೋ, ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ದೇಹಕ್ಕೆ ಪೋಷಕಾಂಶಗಳನ್ನು ನೀಡಿ, ದೀರ್ಘ ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಹಾಗಾಗಿ ಶರೀರ ಸೊರಗದೆ, ಕೊಬ್ಬಿನಂಶ ಮಾತ್ರ ಕಡಿಮಾಗುತ್ತದೆ. ಒಟ್ಟಾರೆಯಾಗಿ ತೂಕ ಇಳಿಯುತ್ತದೆ.

ಪೋಷಕಾಂಶಗಳು ಭರಪೂರ

ಇದರಲ್ಲಿ ಮೆಗ್ನೀಶಿಯಂ, ಪೊಟಾಶಿಯಂ, ಕಬ್ಬಿಣ, ಫಾಸ್ಫರಸ್‌ನಂಥ ಅಗತ್ಯ ಖನಿಜಗಳು ಬಹಳಷ್ಟಿವೆ. ಇದರಲ್ಲಿರುವ ಟ್ಯಾನಿನ್‌ ಅಂಶಗಳು ಕಬ್ಬಿಣ ಮತ್ತು ಸತುವನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತವೆ. ಈ ಎಲ್ಲಾ ಖನಿಜಗಳು ನರಗಳ ಆರೊಗ್ಯ ರಕ್ಷಣೆಗೆ, ಮಾಂಸಖಂಡಗಳ ಬೆಳವಣಿಗೆಗೆ, ರಕ್ತದೊತ್ತಡ ನಿಯಂತ್ರಣಕ್ಕೆ, ರಕ್ತದಲ್ಲಿ ಆಮ್ಲಜನಕದ ಮಟ್ಟ ಸರಿಯಾಗಿರಲು, ಮೂಳೆಗಳ ಬಲವರ್ಧನೆಗೆ, ರಲ್ತಹೀನತೆ ತಡೆಯಲು ಮತ್ತು ದೇಹಕ್ಕೆ ಅಗತ್ಯವಾದಷ್ಟು ಶಕ್ತಿ ಸಂಚಯನಕ್ಕೆ ನೆರವಾಗುತ್ತವೆ.

ಇದನ್ನೂ ಓದಿ: Mental Health: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version