Site icon Vistara News

Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Benefits Of Litchi

ಈಗ ಲಿಚಿ ಹಣ್ಣಿನ ಕಾಲ. ರಸ್ತೆಬದಿಯ ಗಾಡಿಗಳಲ್ಲಿ, ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಮಾವಿನಹಣ್ಣಿನ ಜೊತೆ ಲಿಚಿಯದ್ದೇ ಕಾರುಬಾರು. ಬೇಸಿಗೆಯ ಧಗೆಗೆ ಲಿಚಿ ಹಣ್ಣು ನೀಡುವ ತಂಪಾದ ಅನುಭೂತಿ ನೀಡುವ ಹಣ್ಣುಗಳಲ್ಲಿ ಒಂದು. ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣು ನಮ್ಮನ್ನು ಸ್ವಾಗತಿಸುತ್ತದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ.
ವಿಟಮಿನ್‌ ಸಿ, ವಿಟಮಿನ್‌ ಡಿ, ಮೆಗ್ನೀಶಿಯಂ, ರೈಬೋ ಫ್ಲೇವಿನ್‌, ತಾಮ್ರ, ಪಾಸ್ಪರಸ್‌, ಹಾಗೂ ಭರಪೂರ ನೀರಿನಂಶವನ್ನು ಹೊಂದಿರುವ ಈ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು. ಬನ್ನಿ, ಲಿಚಿ ಮಾರುಕಟ್ಟೆಯಿಂದ ಮರೆಯಾಗುವ ಮೊದಲು ಅದರ ಲಾಭಗಳನ್ನು (benefits of litchi) ತಿಳಿದು ಸೇವಿಸೋಣ.

ಸಾಕಷ್ಟು ನಾರಿನಂಶ

ಲಿಚಿಯಲ್ಲಿ ಸಾಕಷ್ಟು ನಾರಿನಂಶವಿದೆ. ಈ ನಾರಿನಂಶವಿರುವುದರಿಂದ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವವಿರುತ್ತದೆ. ಸಂತೃಪ್ತಿಯ ಭಾವನೆ ಇರುವುದರಿಂದ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುವುದಿಲ್ಲ. ಇದರಲ್ಲಿ ಅತಿಯಾದ ನೀರಿನಂಶವಿರುವುದರಿಂದ ತೂಕ ಇಳಿಸಲೂ ಕೂಡಾ ಇದು ನೆರವಾಗುತ್ತದೆ. ದಿನದ ಯಾವುಧೇ ಹೊತ್ತಿನಲ್ಲಿ ಈ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು.

ಸೌಂದರ್ಯ ವರ್ಧಕ

ಸೌಂದರ್ಯಕ್ಕೂ ಈ ಹಣ್ಣಿನಿಂದ ಅತ್ಯುತ್ತಮ ಲಾಭವಿದೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಇದು ಒಳ್ಳೆಯದು. ಚರ್ಮ ಸುಕ್ಕಾಗುವುದನ್ನೂ ಇದು ತಡೆಯುತ್ತದೆ. ನಿರಿಗೆಗಳಾಗದಂತೆ ನೋಡಿಕೊಳ್ಳುವ ಇದು ಆಂಟಿ ಏಜಿಂಗ್‌ ಗುಣಗಳನ್ನು ಹೊಂದಿದೆ. ಹೇರಳವಾಗಿ ಆಂಟಿ ಆಕ್ಸಿಡೆಂಟ್‌ ಇದರಲ್ಲಿ ಇರುವುದರಿಂದ ಆಕ್ಸಿಡೇಟಿವ್‌ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

ಲಿಚಿ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ರೋಗ ನಿರೋಧಕತೆಗೆ ಅತ್ಯಂತ ಅಗತ್ಯವಾದ ಪೋಷಕಾಂಶ.

ರಕ್ತದೊತ್ತಡ ಸಮತೋಲನ

ಲಿಚಿಯಲ್ಲಿ ಪೊಟಾಶಿಯಂ ಅಂಶ ಇರುವುದರಿಂದ ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ರಕ್ತದೊತ್ತಡ ಕಡಿಮೆ ಮಾಡಿ ಸಮತೋಲನಕ್ಕೆ ತರಲು ಇದು ಒಳ್ಳೆಯದು.

ಜೀರ್ಣಕ್ರಿಯೆಗೂ ಒಳ್ಳೆಯದು

ಲಿಚಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಮಲಬದ್ಧತೆಯಂತ ಸಮಸ್ಯೆ ಇರುವ ಮಂದಿಗೆ ಲಿಚಿ ಒಳ್ಳೆಯದು. ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಿ ಬೇಡದ ಅಂಶಗಳು ಸುಲಭವಾಗಿ ದೇಹದಿಂದ ಹೊರಹೋಗಲು ಇದು ಸಹಾಯ ಮಾಡುತ್ತದೆ.
ಆದರೆ, ಲಿಚಿಯ ಬಗ್ಗೆ ಸಾಕಷ್ಟ ತಪ್ಪುತಿಳುವಳಿಕೆಗಳೂ ಇವೆ. ಲಿಚಿ ಸಿಹಿಯಾಗಿರುವುದರಿಂದ ಇದನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಎಂಬ ಭಾವನೆಯೂ ಇದೆ. ಆದರೆ, ಈ ಜ್ಯೂಸಿಯಾದ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಇರುವುದಾದರೂ, ಇದನ್ನು ಬೇಡವೇ ಬೇಡ ಎಂಬಷ್ಟು ದೂರ ತಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ, ಇದರಿಂದ ಸಿಗುವ ಅಪರೂಪದ ಪೋ಼ಷಕಾಂಶಗಳಿಗೆ ಇದನ್ನು ಹಿತಮಿತವಾಗಿಯಾದರೂ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಲಿಚಿಯಲ್ಲಿರುವ ವಿಶೇಷ ಗುಣ

ಲಿಚಿಯಲ್ಲಿರುವ ಎಪಿಕ್ಯಾಟೆಚಿನ್‌ ಎಂಬ ಅಂಶವು ಸಾಕಷ್ಟು ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕ್ಯಾನ್ಸರ್‌ ಹಾಗೂ ಮಧುಮೇಹವನ್ನು ಮೊದಲೇ ನಿಯಂತ್ರಿಸುವ ಗುಣವನ್ನೂ ಹೊಂದಿದೆ. ಅಷ್ಟೇ ಅಲ್ಲ, ಲಿಚಿಯಲ್ಲಿ ಆಲಿಗೋನಲ್‌ ಎಂಬ ವಿಶೇಷವಾದ ಪೋಷಕಾಂಶವಿದ್ದು ಇದು ನೈಟ್ರಿಕ್‌ ಆಕ್ಸೈಡ್‌ನ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ದೇಹದಲ್ಲಿ ನೈಟ್ರಿಕ್‌ ಆಕ್ಸೈಡ್‌ ರಕ್ತನಾಳವನನು ಅಗಲವಾಗಿಸುವ ಗುಣ ಹೊಂದಿದ್ದು ಇದರಂದ ರಕ್ತ ಸಹಜವಾಗಿ ಹರಿಯುತ್ತದೆ. ಲಿಚಿಯಲ್ಲಿ ತಾಮ್ರವೂ ಇರುವುದರಿಂದ ಕೂದಲ ಆರೋಗ್ಯಕ್ಕೆ ಇದು ತನ್ನದೇ ಆ ಕಾಣಿಕೆ ಸಲ್ಲಿಸುತ್ತದೆ. ಕೂದಲ ಬೆಳವಣಿಗೆಗೆ ಇದು ಅತ್ಯಂತ ಒಳ್ಳೆಯದು. ಲಿಚಿಯಲ್ಲಿ ಬಯೋ ಫ್ಲೇವನಾಯ್ಡ್‌ಗಳಾದ ರುಟೀನ್‌ ಎಂಬ ಪಾಲಿ ಫಿನಾಲ್‌ ಇದೆ. ಇದು ರಕ್ತನಾಳವನ್ನು ಗಟ್ಟಿಗೊಳಿಸುತ್ತದೆ. ಈ ಎಲ್ಲ ಕಾರಣಕ್ಕಾಗಿಯಾದರೂ, ಈ ಕಾಲದಲ್ಲಿ ಕೆಲವೇ ಸಮಯ ದೊರೆಯುವ ಲಿಚಿ ಹಣ್ಣನ್ನು ಮರೆಯದೆ ತಿನ್ನಿ.

Exit mobile version