Site icon Vistara News

Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

Benefits Of Onion Hair Oil

ಈರುಳ್ಳಿಯ ಭಕ್ತರು ಇದ್ದಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದಾರೆ. ರುಚಿಗಾಗಲಿ, ಮದ್ದಿಗಾಗಲಿ ಈರುಳ್ಳಿಗೆ ಸಮನಾದದ್ದಿಲ್ಲ ಎಂದು ಹೊಗಳುವವರು ಒಂದೆಡೆಯಾದರೆ, ಬೆಳಗ್ಗೆ ತಿಂದರೆ ಸಂಜೆಯವರೆಗೂ ಬಾಯೆಲ್ಲ ವಾಸನೆ ಎಂದು ಮುಖ ಕಿವುಚುವವರಿದ್ದಾರೆ. ಇದೀಗ ತಿನ್ನುವ ವಿಷಯವಲ್ಲ, ತಲೆಕೂದಲಿಗೆ ಈರುಳ್ಳಿ ಉಪಯೋಗಿಸಿದರೆ? ʻತಲೆಯೆಲ್ಲ ಒಗ್ಗರಣೆ ವಾಸನೆʼ ಎಂದು ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕೂದಲಿನ ಸಮಸ್ಯೆಗಳಿಗೆ ಈರುಳ್ಳಿ ಎಣ್ಣೆ ಅತ್ತ್ಯುತ್ತಮ ಮದ್ದಿನಂತೆ ಕೆಲಸ ಮಾಡಬಲ್ಲದು (Benefits Of Onion Hair Oil) ಎಂಬುದು ತಿಳಿದಿದೆಯೇ?
ಹೇರಳವಾಗಿ ಸಲ್ಫರ್‌ ಅಂಶವನ್ನು ಹೊಂದಿರುವ ಈರುಳ್ಳಿಯು ಕೂದಲಿನ ಪೋಷಣೆಯನ್ನು ಹಲವು ರೀತಿಯಲ್ಲಿ ಮಾಡುತ್ತದೆ. ಕೂದಲ ಕೋಶಗಳ ಪೋಷಣೆ ಮಾಡಿ, ಕೂದಲು ಉದುರುವುದನ್ನು ಕಡಿಮೆ ಮಾಡಿ, ತುಂಡಾಗುವ ತೊಂದರೆಯನ್ನೂ ಪರಿಹಾರ ಮಾಡುತ್ತದೆ. ಸಲ್ಫರ್‌ ಅಥವಾ ಗಂಧಕದ ಅಂಶವು ಹೆಚ್ಚಿನ ಪ್ರಮಾಣದ ಕೊಲಾಜಿನ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ. ಕೂದಲ ಬೆಳವಣಿಗೆಯಲ್ಲಿ ಕೊಲಾಜಿನ್‌ ಮಹತ್ವ ಅಧಿಕವಾಗಿದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

ಮಾಡುವುದು ಹೇಗೆ?

ಈರುಳ್ಳಿ ತೈಲವನ್ನು ಮಾಡುವ ಕ್ರಮವನ್ನೂ ಈಗ ತಿಳಿಯೋಣ. ಈರುಳ್ಳಿಯ ಸಿಪ್ಪೆಗಳನ್ನು ಬಿಡಿಸಿ, ಹೆಚ್ಚಿ ರಸ ತೆಗೆದು ಇರಿಸಿ. ಇದರ ರಸ ತೆಗೆಯುವುದಕ್ಕೆಂದು ಮಿಕ್ಸಿ ಮಾಡುವಾಗ ಜೊತೆಗೆ ಎರಡು ಚಮಚ ಮೆಂತೆ ಬೀಜಗಳನ್ನೂ ಸೇರಿಸಿಕೊಳ್ಳಬಹುದು. ಈ ರಸಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಿ. ಈರುಳ್ಳಿಯ ಹಸಿ ವಾಸನೆಯೆಲ್ಲ ಹೋಗಿ, ತಿಳಿಯಾದ ಘಮ ವ್ಯಾಪಿಸುತ್ತದೆ. ಈರುಳ್ಳಿ ಮತ್ತು ಮೆಂತೆಯ ಅಂಶಗಳೆಲ್ಲ ತಮ್ಮ ಸತ್ವವನ್ನು ಬಿಟ್ಟು ಎಣ್ಣೆಯ ಮೇಲೆ ತೇಲತೊಡಗುತ್ತವೆ. ಇದೀಗ ಈರುಳ್ಳಿ ಎಣ್ಣೆ ಸಿದ್ಧವಾಗಂತೆ. ಇದನ್ನು ತೆಳುವಾದ ಬಟ್ಟೆಯಲ್ಲಿ ಶೋಧಿಸಿ, ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಂಡು ಉಪಯೋಗಿಸಿಕೊಳ್ಳಿ.

ಹೊಳಪಿನ ಕೇಶರಾಶಿ

ಕೂದಲಿನ ಹೊಳಪು ಹೆಚ್ಚಿಸುವಲ್ಲಿ ಈರುಳ್ಳಿ ಎಣ್ಣೆ ಒಳ್ಳೆಯ ಕೆಲಸ ಮಾಡುತ್ತದೆ. ಇದನ್ನು ಕೂದಲ ಬುಡಕ್ಕೆ ಮಾತ್ರವಲ್ಲ, ತುದಿಯವರೆಗೂ ಹಚ್ಚಿ ಒಂದರಡು ತಾಸಿನ ನಂತರ ತಲೆ ಸ್ನಾನ ಮಾಡಿ. ಇಷ್ಟೇ ಅಲ್ಲ, ಘಾಟು ಸಹಿಸಿಕೊಳ್ಳಬಹುದು ಎನಿಸಿದರೆ ಹಸಿ ಈರುಳ್ಳಿ ಪೇಸ್ಟ್‌ ಮಾಡಿ, ನೇರವಾಗಿ ತಲೆಗೂದಲಿಗೆ ಲೇಪಿಸಿಕೊಳ್ಳಿ. ಒಂದೆರಡು ತಾಸುಗಳ ನಂತರ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ನೈಸರ್ಗಿಕ ಕಂಡೀಶನರ್‌ ರೀತಿಯಲ್ಲಿ ಇದು ಕೆಲಸ ಮಾಡಿ, ಕೂದಲಿನ ಹೊಳಪು ಹೆಚ್ಚಿಸುತ್ತದೆ.

ಕೂದಲು ಉದುರುತ್ತಿದ್ದರೆ

ನಿಯಮಿತವಾಗಿ ಈರುಳ್ಳಿ ಎಣ್ಣೆಯ ಬಳಕೆಯಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಇದರಲ್ಲಿರುವ ಸಲ್ಫರ್‌ ಅಂಶವು ಹೆಚ್ಚಿನ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ತೈಲವನ್ನು ಕೂದಲಿನ ಬುಡಕ್ಕೆ ಮಸಾಜ್‌ ಮಾಡುವುದರಿಂದ, ಕೂದಲಿನ ಬೇರುಗಳು ಸದೃಢವಾಗಿ, ಉದುರುವುದು ಕಡಿಮೆಯಾಗಿ, ಕೇಶರಾಶಿ ದಟ್ಟವಾಗಿ ಬೆಳೆಯುತ್ತದೆ.

ಬಿಳಿಕೂದಲಿಗೆ

ಇದಕ್ಕೂ ಸಹ ಹಸಿ ಈರುಳ್ಳಿ ಪೇಸ್ಟ್‌ ಪರಿಣಾಮಕಾರಿ. ಒಂದೊಮ್ಮೆ ಆ ಘಾಟನ್ನು ಸಹಿಸಲು ಸಾಧ್ಯವಿಲ್ಲ ಎನಿಸಿದರೆ, ರಾತ್ರಿಯೇ ತಲೆಯ ಚರ್ಮಕ್ಕೆ ಈರುಳ್ಳಿ ಎಣ್ಣೆಯಿಂದ ಲಘುವಾಗಿ ಮಸಾಜ್‌ ಮಾಡಿ. ಬೆಳಗಿನವರೆಗೆ ತೈಲ ಕೂದಲಿನಲ್ಲಿ ಉಳಿಯಲಿ. ನಂತರ ತಲೆಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ತಲೆಗೂದಲು ಬಿಳಿಯಾಗುವುದನ್ನು ಮುಂದೂಡಬಹುದು.

ತಲೆಹೊಟ್ಟು ದೂರ

ಈ ಘಾಟುಮದ್ದಿಗೆ ಬ್ಯಾಕ್ಟೀರಿಯದೊಂದಿಗೆ ಹೋರಾಡುವ ಗುಣವಿದೆ. ಜೊತೆಗೆ ಫಂಗಸ್‌ ವಿರೋಧಿ ಸಾಮರ್ಥ್ಯವೂ ಉಂಟು. ಹಾಗಾಗಿ ತಲೆಯ ಚರ್ಮಕ್ಕೆ ಅಂಟುವಂಥ ಸೋಂಕುಗಳನ್ನು ದೂರ ಇರಿಸುವ ಕ್ಷಮತೆ ಈರುಳ್ಳಿ ಎಣ್ಣೆಗಿದೆ. ಯಾವುದೇ ಕಾರಣಕ್ಕೆ ತಲೆಯಲ್ಲಿ ಹೊಟ್ಟಾಗಿದ್ದರೂ, ಅದನ್ನು ನಿವಾರಿಸಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

ಉತ್ಕರ್ಷಣ ನಿರೋಧಕಗಳು

ಈರುಳ್ಳಿಯಲ್ಲಿ ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲ, ತುರಿಕೆಯಂಥ ಸಮಸ್ಯೆಗಳು ದೂರವಾಗುತ್ತದೆ. ಕೂದಲಿಗೆ ಕಡುಕಪ್ಪಾದ ನೈಸರ್ಗಿಕ ಬಣ್ಣ ಹಿಂದಿರುಗುತ್ತದೆ. ಶುಷ್ಕತೆಯೆಲ್ಲ ದೂರವಾಗಿ, ಕೂದಲು ನಯವಾಗಿ ನಳನಳಿಸುತ್ತದೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಲಘುವಾಗಿ ಮಸಾಜ್‌ ಮಾಡುವುದರಿಂದ, ಆ ಭಾಗದಲ್ಲಿ ರಕ್ತ ಸಂಚಾರವೂ ಹೆಚ್ಚುತ್ತದೆ.

Exit mobile version