ಋತುಮಾನದ ಹಣ್ಣುಗಳ ಬಗ್ಗೆ ಹೇಳುವಾಗ ನಮ್ಮ ಮಾರುಕಟ್ಟೆಗಳಿಗೆ ಕೊಂಚ ಹೊಸದು ಎನಿಸುವ ಪರ್ಸಿಮನ್ (Benefits of Persimmon) ಎಂಬ ಕಡು ಕೇಸರಿ ಬಣ್ಣದ ಹಣ್ಣಿನ ಬಗ್ಗೆ ಹೇಳಲೇಬೇಕು. ನೋಡುವುದಕ್ಕೆ ಪುಟ್ಟ ಕುಂಬಳಕಾಯಿಯನ್ನೇ ಹೋಲುವ ಇದನ್ನು ʻಕಾಕಿ ಹಣ್ಣುʼ ಎಂದೂ ಕರೆಯಲಾಗುತ್ತದೆ. ಮೂಲದಲ್ಲಿ ಚೀನಾದಿಂದ ವಿಶ್ವದ ಉಳಿದೆಡೆಗಳಿಗೆ ಹರಡಿರುವ ಈ ಬೆಳೆ ಕೈಗೆ ಬರುವುದು ಚಳಿಗಾಲದಲ್ಲಿ. ಇದನ್ನು ತಿನ್ನುವುದರಲ್ಲಿ ಇರುವ ಲಾಭಗಳೇನು?
ಹೊರಗಿನಿಂದಲೇ ಭಾರತದ ಮಾರುಕಟ್ಟೆ ಬರುವುದರಿಂದ ಋತುವಿನಲ್ಲೂ ಇದರ ಬೆಲೆಯೇನು ತೀರಾ ಕಡಿಮೆ ಇರುವುದಿಲ್ಲ. ಹಾಗೆಂದು ಕೊಟ್ಟ ದುಡ್ಡಿಗೆ ಮೋಸವಾಗುವಂಥದ್ದಲ್ಲ ಇದರ ರುಚಿ ಮತ್ತು ಸತ್ವ. ಜೇನಿನಂತೆ ಮಧುರವಾದ ರುಚಿಯನ್ನು ಹೊಂದಿರುವ ಇದನ್ನು ಕಳಿತ ಮೇಲಷ್ಟೇ ತಿನ್ನಲು ಸಾಧ್ಯ. ಚೆನ್ನಾಗಿ ಹಣ್ಣಾಗದಿದ್ದರೆ ಒಗರಾದ ರುಚಿಯನ್ನಷ್ಟೇ ಈ ಕಾಯಿ ನೀಡಬಲ್ಲದು. ಇದನ್ನು ನೇರವಾಗಿ ತಿನ್ನುವುದೇ ಅಲ್ಲದೆ, ಜ್ಯಾಮ್, ಜೆಲ್ಲಿ, ಪೈ, ಕೇಕ್, ಪುಡ್ಡಿಂಗ್, ಸಲಾಡ್ ಮುಂತಾದ ಹಲವು ರೀತಿಯ ಪಾಕಗಳ ಮೂಲಕ ಸವಿಯಲಾಗುತ್ತದೆ.
ಹಣ್ಣಿನಲ್ಲಿ ಏನೇನಿದೆ?
ಒಂದು ಮಧ್ಯಮ ಗಾತ್ರದ ಪರ್ಸಿಮನ್ ಹಣ್ಣು 120 ಕ್ಯಾಲರಿ ಶಕ್ತಿಯನ್ನು ನೀಡಬಲ್ಲದು. ಅದರಲ್ಲಿ ಸುಮಾರು 30 ಗ್ರಾಂ ಪಿಷ್ಟ, 1 ಗ್ರಾಂ ಪ್ರೊಟೀನ್, ನಗಣ್ಯ ಎನ್ನುವಷ್ಟು ಕೊಬ್ಬು, 6 ಗ್ರಾಂನಷ್ಟು ನಾರು, ಶೇ. 15ರಷ್ಟು ವಿಟಮಿನ್ ಎ, ಶೇ. 14ರಷ್ಟು ವಿಟಮಿನ್ ಸಿ, ಶೇ. 10ರಷ್ಟು ವಿಟಮಿನ್ ಇ, ವಿಟಮಿನ್ ಬಿ6, ವಿಟಮಿನ್ ಕೆ, ಫೋಲೇಟ್, ಪೊಟಾಶಿಯಂ, ತಾಮ್ರ, ಮ್ಯಾಂಗನೀಸ್ನಂಥ ಖನಿಜಗಳು ದೊರೆಯುತ್ತವೆ. ಇದಲ್ಲದೆ ಟ್ಯಾನಿನ್‌ಗಳು, ಫ್ಲೆವನಾಯ್ಡ್‌ಗಳು ಮತ್ತು ಕೆರೊಟಿನಾಯ್ಡ್‌ಗಳಿಂದ ತುಂಬಿದೆ. ಈ ಮರದ ಎಲೆಗಳನ್ನು ಚಹಾ ಮಾಡಿ ಔಷಧಿಯಾಗಿ ಸೇವಿಸಲಾಗುತ್ತದೆ.
ಬೀಟಾ ಕ್ಯಾರೊಟಿನ್
ಗಾಢ ಬಣ್ಣದ ಹಣ್ಣು, ತರಕಾರಿಗಳನ್ನು ಸೇವಿಸುವುದರ ದೊಡ್ಡ ಲಾಭವೆಂದರೆ ಅಗಾಧ ಪ್ರಮಾಣದಲ್ಲಿ ಬೀಟಾ ಕ್ಯಾರೊಟಿನ್ ಲಭ್ಯವಾಗುವುದು. ಕಡು ಬಣ್ಣದ ಬೀಟ್‌ರೂಟ್, ಕ್ಯಾರೆಟ್ ಮುಂತಾದವುಗಳಲ್ಲೂ ಬೀಟಾ ಕ್ಯಾರೊಟಿನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಪರ್ಸಿಮನ್ ಸಹ ಇದಕ್ಕೆ ಹೊರತಲ್ಲ. ಈ ಉತ್ಕರ್ಷಣ ನಿರೋಧಕ ದೇಹಕ್ಕೆ ಹೆಚ್ಚಾಗಿ ಲಭಿಸಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳು, ಹೃದಯ ಸಂಬಂಧಿ ತೊಂದರೆಗಳನ್ನು ದೂರ ಇರಿಸಬಹುದು. ಇದಷ್ಟೇ ಅಲ್ಲ, ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಬೀಟಾ ಕ್ಯಾರೊಟಿನ್ ದೊರೆತರೆ, ಟೈಪ್ ೨ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ.
ಫ್ಲೆವನಾಯ್ಡ್‌ಗಳು
ಕೆಲವು ಫ್ಲೆವನಾಯ್ಡ್‌ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕ್ವೆರ್ಸೆಟಿನ್ ಮತ್ತು ಕೆಂಫೆರೋಲ್‌ನಂಥ ಉತ್ಕರ್ಷಣ ನಿರೋಧಕಗಳು ಪರ್ಸಿಮನ್‌ನಲ್ಲಿದ್ದು, ಇದು ಹೃದಯಕ್ಕೆ ಬೇಕಾದಂಥವು ಎನ್ನುತ್ತವೆ ಅಧ್ಯಯನಗಳು. ಇವು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಮತ್ತು ಉರಿಯೂತ ಶಮನ ಮಾಡುತ್ತವೆ. ಪರ್ಸಿಮನ್ ಕಾಯಿಗಳಿಗೆ ಇರುವಂಥ ಒಗರು ರುಚಿಗೆ ಕಾರಣವಾಗುವ ಟ್ಯಾನಿನ್‌ಗಳು ಹೃದಯಕ್ಕೆ ಆಪ್ತವಾದಂಥವು.
ವಿಟಮಿನ್ ಸಿ
ದೇಹದಲ್ಲಿ ಕಾಲಕಾಲಕ್ಕೆ ಹೆಚ್ಚುವ ಮುಕ್ತ ಕಣಗಳನ್ನು ನಿಯಂತ್ರಿಸಲು ಸಿ ವಿಟಮಿನ್‌ನಂಥ ಉತ್ಕರ್ಷಣನಿರೋಧಕಗಳು ಬೇಕು. ಒಂದೆಡೆ ನಿಲ್ಲದೆ ದೇಹದೆಲ್ಲೆಡೆ ಚಲಿಸಿ, ರೋಗಗಳನ್ನು ದೇಹದುದ್ದಕ್ಕೂ ಹರಡುವ ಈ ಮುಕ್ತಕಣಗಳಿಗೆ ಎಲೆಕ್ಟ್ರಾನ್‌ಗಳನ್ನು ನೀಡಿ, ಅವುಗಳನ್ನು ಒಂದೆಡೆ ಬಂಧಿಸುತ್ತವೆ ಉತ್ಕರ್ಷಣ ನಿರೋಧಕಗಳು. ಮಾತ್ರವಲ್ಲ, ಉರಿಯೂತದಿಂದಲೇ ಕಾಣಿಸಿಕೊಳ್ಳುವ ಆರ್ಥರೈಟಿಸ್, ಕ್ಯಾನ್ಸರ್‌ನಂಥವು ದೂರವಾಗುತ್ತದೆ
ನಾರು
ಕರಗಬಲ್ಲ ನಾರು ಆಹಾರದಲ್ಲಿ ಹೆಚ್ಚಿದಷ್ಟೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ. ಕರಗದಿರುವ ನಾರು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ಪರ್ಸಿಮನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿದ್ದು, ಒಂದು ಮಧ್ಯಮ ಗಾತ್ರದ ಹಣ್ಣಿನಲ್ಲಿ ೬ ಗ್ರಾಂ ನಾರು ದೇಹ ಸೇರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತವೆ ಅಧ್ಯಯನಗಳು.
ವಿಟಮಿನ್ ಎ
ದೃಷ್ಟಿ ಚುರುಕಾಗುವುದಕ್ಕೆ ಅಗತ್ಯವಾಗಿದ್ದು ವಿಟಮಿನ್ ಎ ಸತ್ವ. ಲೂಟಿನ್‌ನಂಥ ಪೋಷಕಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ರೆಟಿನಾದ ಆರೋಗ್ಯ ಕಾಪಾಡುವಂಥ ಕೆಲಸ ಇದರದ್ದು. ಇದರಿಂದ ದೃಷ್ಟಿಹೀನತೆಯಂಥ ಸಮಸ್ಯೆಯನ್ನು ದೂರ ಇರಿಸಬಹುದು.
ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ