Site icon Vistara News

Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

Benefits of Poppy Seeds

ನೈಋತ್ಯ ಭಾಗದಲ್ಲಿ ಮುಂಗಾರು ಮಾರುತಗಳು ಬಂದರೂ, ಸೆಕೆ ಕಡಿಮೆಯಾಗಿಲ್ಲ. ಹಾಗಾಗಿ ದೇಹ ತಂಪಾಗಿಸುವುದಕ್ಕೆ ಹಲವು ಉಪಾಯಗಳು ಬೇಕಾಗುತ್ತವೆ. ಅವುಗಳಲ್ಲಿ ಗಸಗಸೆಯೂ ಒಂದು. ಅದರ ಹೆಸರು ಕೇಳುತ್ತಿದ್ದಂತೆ ಗಸಗಸೆ ಪಾಯಸ, ಖೀರಿನದ್ದೇ ನೆನಪಾಗಬಹುದು. ಆದರೆ ಗಸಗಸೆಯ ಬಳಕೆ ಅದಷ್ಟಕ್ಕೇ ಸೀಮಿತವಲ್ಲ. ಅಂಟಿನುಂಡೆ, ಡ್ರೈಫ್ರೂಟ್ಸ್‌ ಲಡ್ಡುಗಳಲ್ಲಿ ಇದನ್ನು ಸೇರಿಸುವವರಿದ್ದಾರೆ. ಹಲವರು ರೀತಿಯ ಪಕ್ವಾನ್ನಗಳಲ್ಲಿ ಇದನ್ನು ಮಸಾಲೆಯಾಗಿ ಸೇರಿಸಲಾಗುತ್ತದೆ. ಇದರಿಂದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸಬಹುದು. ಏನು ಸತ್ವಗಳಿವೆ (Benefits of Poppy Seeds) ಗಸಗಸೆಯಲ್ಲಿ?

ಸತ್ವಗಳು ಬಹಳಷ್ಟು

ಕ್ಯಾಲ್ಸಿಯಂ, ಮೆಗ್ನೀಶಿಯಂ, ಫಾಸ್ಫರಸ್‌, ಕಬ್ಬಿಣ ಸೇರಿದಂತೆ ಹಲವು ರೀತಿಯ ಖನಿಜಗಳು ಗಸೆಗಸೆಯಲ್ಲಿವೆ. ಈ ಪುಟ್ಟ ಬೀಜಗಳಲ್ಲಿ ಥಿಯಾಮಿನ್‌, ರೈಬೊಫ್ಲೆವಿನ್‌, ನಯಾಸಿನ್‌ ಸೇರಿದಂತೆ ವಿವಿಧ ರೀತಿಯ ಬಿ ಜೀವಸತ್ವಗಳಿವೆ. ಇವೆಲ್ಲ ಆಹಾರವನ್ನು ಶಕ್ತಿಯಾಗಿ ಸಂಚಯಿಸುವಲ್ಲಿ ಮತ್ತು ನರಗಳ ಕ್ಷಮತೆ ಹೆಚ್ಚಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ. ಜೊತೆಗೆ, ಪಾಲಿಫೆನಾಲ್‌ಗಳು ಮತ್ತು ಫ್ಲೆವನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ ಈ ಕಿರುಬೀಜಗಳು. ಆರೋಗ್ಯಕರ ಕೊಬ್ಬು ಸಹ ಇದರ ಭಾಗ. ಈ ಎಲ್ಲ ಸತ್ವಗಳಿಂದ ದೇಹಕ್ಕೆ ಬಹಳಷ್ಟು ರೀತಿಯಲ್ಲಿ ಪ್ರಯೋಜನಗಳಿವೆ.

ನಿದ್ದೆಗೆ ಪೂರಕ

ಶರೀರಕ್ಕೆ ಆರಾಮ ನೀಡಿ, ನಿದ್ದೆ ಬರಿಸುವಂಥ ಸಾಮರ್ಥ್ಯ ಗಸಗಸೆಗೆ ಇದೆಯೆನ್ನುವುದು ಭಾರತೀಯರ ಪರಂಪರಾಗತ ತಿಳುವಳಿಕೆ. ಇದರಲ್ಲಿರುವ ಆಲ್ಕಲಾಯ್ಡ್‌ ಮತ್ತು ಪೆಪ್ಟೈಡ್‌ಗಳಿಗೆ ನೋವು ನಿವಾರಿಸುವ ಮತ್ತು ನಿದ್ದೆ ಬರಿಸುವಂಥ ಗುಣಗಳಿವೆ. ಇವು ನರಗಳನ್ನು ಶಾಂತಗೊಳಿಸುತ್ತವೆ. ಹಾಗಾಗಿ ತೀವ್ರ ಆಯಾಸವಾಗಿದ್ದರೆ, ಶ್ರಮದ ಕೆಲಸದಿಂದ ಮೈ-ಕೈ ನೋವಾಗಿದ್ದರೆ, ನಿದ್ದೆಯಿಲ್ಲದೆ ಒದ್ದಾಡುತ್ತಿದ್ದರೆ, ಸಂಜೆಯ ಹೊತ್ತಿಗೆ ಗಸಗಸೆ ಖೀರು ಕುಡಿದು ನಿದ್ದೆ ಹೊಡೆಯುವುದು ಒಳ್ಳೆಯ ಉಪಾಯ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಈ ಪುಟ್ಟ ಬೀಜಗಳಲ್ಲಿ ನಾರಿನಂಶ ಹೇರಳವಾಗಿದೆ. ಇವುಗಳ ಸೇವನೆಯಿಂದ ಮಲಬದ್ಧತೆಯಂಥ ತೊಂದರೆಯನ್ನು ದೂರ ಮಾಡಲು ಅನುಕೂಲವಾಗುತ್ತದೆ. ನಾರು ಹೆಚ್ಚಿರುವ ಆಹಾರಗಳು ಹೊಟ್ಟೆಯನ್ನು ನಿಯಮಿತವಾಗಿ ಖಾಲಿ ಮಾಡಿಸಿ, ಮಲಬದ್ಧತೆಯನ್ನು ನಿವಾರಿಸಿ, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಜೆಲ್‌ನಂಥ ವಸ್ತುಗಳು, ಜೀರ್ಣಾಂಗಗಳಲ್ಲಿರುವ ಉರಿಯೂತ ನಿವಾರಣೆಗೆ ನೆರವಾಗುತ್ತವೆ.

ಪ್ರತಿರೋಧಕ ಶಕ್ತಿ ಸುಧಾರಣೆ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ಸತು ಮತ್ತು ಮ್ಯಾಂಗನೀಸ್‌ನಂಥ ಸತ್ವಗಳು ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಬೇಸಿಗೆ ಮುಗಿಯುತ್ತಾ ಬಂದು, ಮಳೆಗಾಲದ ಹೊಸಿಲಲ್ಲಿರುವಾಗ ದೇಹಕ್ಕೆ ಬೇಕಾದ ರೋಗ ನಿರೋಧಕತೆಯ ರಕ್ಷಣೆ ನೀಡುವಲ್ಲಿ ಇದು ಸಹಾಯ ಮಾಡಬಲ್ಲದು.

ಚರ್ಮ, ಕೂದಲಿನ ಆರೋಗ್ಯ

ಇದರಲ್ಲಿರುವ ಒಮೇಗಾ 6 ಮತ್ತು ಒಮೇಗಾ 3 ಕೊಬ್ಬಿನಾಮ್ಲಗಳು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡಬಲ್ಲವು. ಇವು ಚರ್ಮ ಮತ್ತು ಕೂದಲಿನ ಆರೋಗ್ಯ ರಕ್ಷಣೆಯಲ್ಲಿ ಹಲವು ರೀತಿಯ ಅನುಕೂಲಗಳನ್ನು ಒದಗಿಸುತ್ತವೆ. ಚರ್ಮದ ಹಿಗ್ಗುವಿಕೆಯನ್ನು ವೃದ್ಧಿಸಿ, ಕೊಲಾಜಿನ್‌ ಹೆಚ್ಚಿಸಿ, ಈ ಮೂಲಕ ಸುಕ್ಕುಗಳನ್ನು ಕಡಿಮೆ ಮಾಡಿ ತ್ವಚೆಗೆ ತಾರುಣ್ಯ ಮರಳಿಸುವ ಸಾಮರ್ಥ್ಯ ಹೊಂದಿವೆ. ಇದರಲ್ಲಿರುವ ಜಿಂಕ್‌ ಅಂಶದಿಂದ ಕೊಲಾಜಿನ್‌ ವೃದ್ಧಿಯಾಗಿ, ಕೂದಲಿನ ಆರೋಗ್ಯ ಸುಧಾರಿಸುತ್ತದೆ. ಕೂದಲು ಬಲಕಳೆದುಕೊಂಡು ತುಂಡಾಗುತ್ತಿದ್ದರೆ, ಅದನ್ನು ತಡೆಯುವುದಕ್ಕೆ ಕೊಲಾಜಿನ್‌ ನೆರವಾಗುತ್ತದೆ. ಹಾಗಾಗಿ ಗಸೆಗಸೆಯನ್ನು ಅಲ್ಪ ಪ್ರಮಾಣದಲಾದರೂ ಬಳಕೆ ಮಾಡುವುದು ದೇಹಾರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Exit mobile version