ದ್ರಾಕ್ಷಿ ತಿನ್ನುವ ಅಭ್ಯಾಸವೆ? ಅದರಲ್ಲೂ ಒಣ ದ್ರಾಕ್ಷಿ ಪ್ರಿಯರೇ? ಹಾಗಾದರೆ ಒಣ ದ್ರಾಕ್ಷಿಯಲ್ಲಿರುವ ನಮೂನೆಗಳು, ರುಚಿ ಮತ್ತು ಪೌಷ್ಟಿಕಾಂಶಗಳ ಬಗ್ಗೆ ತಿಳಿಯುವುದಕ್ಕೆ ಕುತೂಹಲವಿರುವುದು ಸಹಜ. ಹಠ ಮಾಡುವ ಮಕ್ಕಳಿಗೆ ಸಮಾಧಾನ ಮಾಡುವುದರಿಂದ ಹಿಡಿದು, ಸುಮ್ಮನೆ ಜಗಿಯುವುದಕ್ಕೆ, ದಾರಿ ಖರ್ಚಿಗೆ, ಮಲಬದ್ಧತೆ ನಿವಾರಣೆಗೆ, ಕಳ್ಳ ಅಥವಾ ಸುಳ್ಳು ಹಸಿವೆಗೆ, ಸಾಲಡ್‌ಗಳ ರುಚಿ ಹೆಚ್ಚಿಸಲು. ಸಿಹಿ ಖಾದ್ಯಗಳ ಒಗ್ಗರಣೆಗೆ… ಹೀಗೆ ಹಲವು ರೀತಿಯಲ್ಲಿ ಒಣದ್ರಾಕ್ಷಿಗಳು ಬದುಕಿನ ರುಚಿಯನ್ನು ಹೆಚ್ಚಿಸಿದೆ ಎಂದರೆ ಅತಿಶಯವಲ್ಲ. ಖರೀದಿಸಲು ಅಂಗಡಿಗೆ ಹೋದರೆ ಒಂದಕ್ಕಿಂತ ಹೆಚ್ಚು ಬಣ್ಣ-ರುಚಿಗಳ ಒಣದ್ರಾಕ್ಷಿ ಕಾಣಬಹುದು. ಯಾವುದನ್ನು ಖರೀದಿಸಬೇಕು? ಯಾವುದು ಆರೋಗ್ಯಕ್ಕೆ ಒಳ್ಳೆಯದು? ಯಾವುದರ ರುಚಿ ಹೆಚ್ಚು (Benefits of Raisins) ಎಂಬ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.
ಒಣದ್ರಾಕ್ಷಿಯ ಬಳಕೆ ಕಾಲ-ದೇಶಗಳಾದ್ಯಂತ ಹರಡಿಕೊಂಡಿದೆ. ಪೂರ್ವ-ಪಡುವಣ ದೇಶಗಳಲ್ಲೆಲ್ಲಾ ಇದರ ಬಳಕೆ ಸರ್ವವ್ಯಾಪಿ. ಹಸಿ ದ್ರಾಕ್ಷಿಯಲ್ಲಿ ಇರುವಂಥ ವ್ಯತ್ಯಾಸಗಳೇ ಒಣದ್ರಾಕ್ಷಿಯಲ್ಲಿಯೂ ಇವೆ. ಆಯಾ ಮಣ್ಣಿಯ ಗುಣ ಮತ್ತು ಹವಾಮಾನಕ್ಕೆ ಅನುಗುಣವಾಗಿ ತಳಿಗಳ ವ್ಯತ್ಯಾಸ ಸಹಜ ಎಂದಾದರೆ, ಆ ದ್ರಾಕ್ಷಿಗಳನ್ನು ಒಣಗಿಸಿದಾಗ ದೊರೆಯುವ ಒಣಹಣ್ಣುಗಳಲ್ಲೂ ವ್ಯತ್ಯಾಸಗಳಿವೆ. ಕೆಲವೊಮ್ಮೆ ಅವುಗಳನ್ನು ಸಂಸ್ಕರಿಸುವ ವಿಧಾನದಿಂದಲೂ ಆ ಬಣ್ಣ ಬರುತ್ತದೆ. ಕಪ್ಪು, ಹಸಿರು, ಕೆಂಪು ಮತ್ತು ಬಂಗಾರ ಬಣ್ಣದ ಒಣ ದ್ರಾಕ್ಷಿಗಳು ಸಾಮಾನ್ಯವಾಗಿ ಕಾಣಸಿಗುವಂಥವು. (Benefits of Raisins) ಏನಿವುಗಳಲ್ಲಿ ಇರುವಂಥ ವ್ಯತ್ಯಾಸ? ನೋಡೋಣ.
ಕಪ್ಪು ದ್ರಾಕ್ಷಿ
ಹೆಸರೇ ಸೂಚಿಸುವಂತೆ ಇದರ ಬಣ್ಣ ಕಡುಕಪ್ಪು. ನಾರಿನಂಶ ಹೇರಳವಾಗಿದ್ದು, ಕಬ್ಬಿಣ ಮತ್ತು ಪೊಟಾಶಿಯಂ ಸಹ ಸಾಕಷ್ಟಿದೆ ಇದರಲ್ಲಿ. ಜೊತೆಗೆ ಉತ್ಕರ್ಷಣ ನಿರೋಧಕಗಳ ದಾಸ್ತಾನೂ ಹೌದು. ಕಬ್ಬಿಣ ಸಾಕಷ್ಟು ಇರುವುದರಿಂದ ಕೂದಲು ಕಪ್ಪಾಗಿ ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ವಿಟಮಿನ್ ಸಿ ಮತ್ತು ಇ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತ್ವಚೆಯನ್ನು ನುಣುಪು ಮತ್ತು ಕಾಂತಿಯುಕ್ತವಾಗಿಸುತ್ತದೆ.
ಇದರಲ್ಲಿ ನಾರಿನ ದೊಡ್ಡ ದಾಸ್ತಾನೇ ಇರುವುದರಿಂದ ಮಲಬದ್ಧತೆಗೆ ಒಳ್ಳೆಯ ಔಷಧಿ. ನೈಸರ್ಗಿಕ ವಿರೇಚಕವಾಗಿರುವ ಇದನ್ನು ಮಕ್ಕಳಿಗೂ ನೀಡಬಹುದು. ಹೊಟ್ಟೆ ಸ್ವಚ್ಛ ಮಾಡಿ, ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುವ ರುಚಿಯಾದ ಉಪಾಯವಿದು.
ಕೆಂಪು ದ್ರಾಕ್ಷಿ
ಕಪ್ಪು ದ್ರಾಕ್ಷಿಗೆ ಹೋಲಿಸಿದಲ್ಲಿ ಇದು ಸ್ವಲ್ಪ ಹೆಚ್ಚು ರಸಭರಿತವಾಗಿರುತ್ತದೆ. ಹಾಗಾಗಿ ರುಚಿಯೂ ಹೆಚ್ಚು. ದ್ರಾಕ್ಷಿಯ ಬಣ್ಣ ನಿರ್ಧಾರವಾಗುವುದು ಇದರಲ್ಲಿರುವ ಪೋಷಕಾಂಶಗಳ ಆಧಾರದ ಮೇಲೆ. ಉತ್ತಮ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳಿರುವ ಕೆಂಪು ದ್ರಾಕ್ಷಿಗಳು ವಿಟಮಿನ್ ಕೆ ಮತ್ತು ಸಿ ಗಳ ಖನಿ. ಇದರಲ್ಲೂ ನಾರಿನಂಶ ಬಹಳವಾಗಿರುವುದರಿಂದ ಮಧುಮೇಹ ನಿಯಂತ್ರಣಕ್ಕೆ ನೆರವಾಗಬಹುದು. ಆದರೆ ತಿನ್ನುವ ಪ್ರಮಾಣ ಮಿತಿಯಲ್ಲಿ ಇರುವುದು ಅಗ್ಯ. ಇದರಲ್ಲಿರುವ ಸತ್ವಗಳು ಹಲ್ಲುಗಳನ್ನು ಸದೃಢವಾಗಿಡಲು ಮತ್ತು ಹುಳುಕುಗಳಿಂದ ದೂರ ಇರಿಸಲು ಉಪಯುಕ್ತ. ವಿಟಮಿನ್ ಎ ಸಹ ಸಾಕಷ್ಟು ಇರುವುದರಿಂದ ಕಣ್ಣುಗಳ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತವೆ.
ಹಸಿರು ದ್ರಾಕ್ಷಿ
ಹಸಿರು ದ್ರಾಕ್ಷಿಯಿಂದಲೇ ಮಾಡಲ್ಪಟ್ಟ ಇವು ಆಕಾರದಲ್ಲಿ ಸಾಮಾನ್ಯವಾಗಿ ಉದ್ದ ಮತ್ತು ಸಪೂರವಾಗಿರುತ್ತವೆ. ಅರಬ್ ದೇಶಗಳು ಮತ್ತು ಏಷ್ಯಾ ಖಂಡಗಳಲ್ಲಿ ಇವುಗಳ ಬಳಕೆ ಹೆಚ್ಚು. ಕಬ್ಬಿಣ ಸೇರಿದಂತೆ ಹಲವು ಖನಿಜಗಳು, ಜೀವಸತ್ವಗಳು ಮತ್ತು ನಾರಿನಿಂದ ಸಮೃದ್ಧವಾಗಿರುತ್ತವೆ ಈ ನಮೂನೆಯ ದ್ರಾಕ್ಷಿಗಳು. ಇದರಲ್ಲಿರುವ ಕೆಲವು ನೈಸರ್ಗಿಕ ಸತ್ವಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಮಧುಮೇಹ ದೂರ ಇರಿಸಲು ನೆರವು ನೀಡುತ್ತವೆ.
ಕಬ್ಬಿಣದ ಅಂಶ ಬಹಳಷ್ಟಿರುವುದರಿಂದ ಅನೀಮಿಯ ಅಥವಾ ರಕ್ತಹೀನತೆ ನಿವಾರಣೆಗೆ ಉಪಯುಕ್ತವಿದು. ಆಹಾರ ಪಚನಕ್ಕೆ ನೆರವಾಗಿ ಜೀರ್ಣಾಂಗಗಳ ಕೆಲಸವನ್ನು ಹಗುವ ಮಾಡುವ ಗುಣವೂ ಇದಕ್ಕಿದೆ. ಜೊತೆಗೆ ಮೂಳೆಗಳನ್ನೂ ಸದೃಢವಾಗಿ ಇರಿಸುತ್ತದೆ.
ಹೊಂಬಣ್ಣದ ದ್ರಾಕ್ಷಿ
ಇದರ ತಯಾರಿ ನಡೆಯುವುದೂ ಹಸಿರು ದ್ರಾಕ್ಷಿಯಿಂದಲೇ. ಆದರೆ ಇದಕ್ಕೆ ಹೊಂಬಣ್ಣ ಬರುವುದಕ್ಕೆ ಕಾರಣ, ಗಂಧಕದ ಡೈಆಕೈಡ್‌ನಿಂದ ಇದನ್ನು ಸಂಸ್ಕರಿಸಿರುವುದು. ಇದೊಂದನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ದ್ರಾಕ್ಷಿಗಳಂತೆಯೇ ಇದರ ಸದ್ಗುಣಗಳಿವೆ. ನೈಸರ್ಗಿಕ ಸಕ್ಕರೆಯಂಶ ಇದರಲ್ಲಿ ಹೆಚ್ಚಿರುವುದರಿಂದ, ಸುಸ್ತು, ಆಯಾಸ ಪರಿಹಾರಕ್ಕೆ ಇದು ಉತ್ತಮ ಆಯ್ಕೆ. ನಾರಿನಂಶವೂ ಭರಪೂರವಿದ್ದು ಮಲಬದ್ಧತೆ ನಿವಾರಣೆಗೆ ಒಳ್ಳೆಯ ಮದ್ದು ಎನಿಸಿದೆ. ಇದರದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂಥ ಖನಿಜಗಳು ಮೂಳೆಗಳ ಆರೋಗ್ಯಕ್ಕೆ ಉಪಯುಕ್ತ.
ಇದನ್ನೂ ಓದಿ: Health Tips: ಮೊಟ್ಟೆ ತಿನ್ನದವರು ಪ್ರೊಟೀನ್‌ಗಾಗಿ ಈ ಸಸ್ಯಾಹಾರಗಳನ್ನು ಸೇವಿಸಬಹುದು!