Site icon Vistara News

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?

Benefits Of Tamarind

ಮರದಲ್ಲಿ ಗೆಜ್ಜೆಯಂತೆ ತೂಗುತ್ತಿರುವ ಹುಣಸೆಹಣ್ಣನ್ನು ನೋಡಿ ಬಾಯಲ್ಲಿ ನೀರೂರಿಸಿಕೊಂಡವರೆಷ್ಟು ಮಂದಿಯಿಲ್ಲ? ಮರದ ಗೆಲ್ಲು ಬಗ್ಗಿಸಿ ಜೋತಾಡಿದವರು, ಕೈಗೆಟುಕದೇ ಇದ್ದಿದ್ದಕ್ಕೆ ಕಲ್ಲು ಬೀರಿದವರು, ಕೋಲು ಬೀಸಿದವರು- ಹುಣಸೆ ಹಣ್ಣಿನ ಆಸೆಗಾಗಿ ಮರ ಹತ್ತಿ ಕೊಯ್ದವರು, ಬಿದ್ದು ಕಾಲು ಮುರಿದುಕೊಂಡವರು- ಎಂಥೆಂಥವರಿಲ್ಲ! ಹುಣಸೆ ಮರದ ದೆವ್ವಗಳ ಕಥೆ ಕೇಳಿದ ಮೇಲೂ ಹುಣಸೆ ಹಣ್ಣಿನ ಆಸೆ ಬಿಟ್ಟವರುಂಟೆ? ಕಾಯಿದ್ದಾಗ ಹುಚ್ಚು ಹುಳಿ, ಹಣ್ಣಾದ ಮೇಲೆ ಸ್ವಲ್ಪ ಸಿಹಿ ಉಳಿದಷ್ಟೂ ಹುಳಿ ರುಚಿಯ ಈ ಹಣ್ಣು ತಿನ್ನುವುದಕ್ಕೆ ಆಸೆ ಪಡದವರೆ ವಿರಳ ಎನ್ನಬಹುದು. ಇದು ಬರೀ ಬಾಯಿ ರುಚಿಗೆ ತಿನ್ನುವ ಮಾತಲ್ಲ, (benefits of tamarind) ಹೆಚ್ಚಿನ ಉಪಯೋಗಗಳಿವೆ.

ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ವ್ಯಂಜನಗಳ ಪೈಕಿ ಹುಣಸೆ ಹಣ್ಣು ಸಹ ಒಂದು. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ತಿಳಿಸಾರು, ಹುಳಿ, ಗೊಜ್ಜು, ಚಟ್ನಿ, ಪುಳಿಯೋಗರೆಗಳಿಂದ ಹಿಡಿದು ಬಹಳಷ್ಟು ಅಡುಗೆಗಳನ್ನು ರುಚಿಗಟ್ಟಿಸುವುದಕ್ಕೆ ಹುಣಸೆಹುಳಿ ಬೇಕೆಬೇಕು. ಇವೆಲ್ಲ ರುಚಿಯ ಮಾತಾಯಿತು. ಇಷ್ಟೊಂದು ವ್ಯಾಪಕವಾಗಿ ಬಳಕೆಯಲ್ಲಿರುವ ಈ ಹಣ್ಣಿಗೆ ಆರೋಗ್ಯದ ದೃಷ್ಟಿಯಿಂದ ಒಂದಿಷ್ಟು ಸದ್ಗುಣಗಳು ಇರಲೇಬೇಕಲ್ಲವೇ? ದೊಡ್ಡ ಮಟ್ಟದಲ್ಲಿ ಇದನ್ನು ಬೆಳೆಯಲಾಗುತ್ತಿದೆ ಎಂದಾದರೆ ಅಷ್ಟು ಉಪಯೋಗವೂ ಇರಬೇಕು. ಪರಂಪರಾಗತ ಔಷಧಿಯಲ್ಲಿ ಹುಣಸೆಹಣ್ಣು ಮಾತ್ರವಲ್ಲ, ಇಡೀ ಮರವೇ ಬಳಕೆಯಲ್ಲಿದೆ. ಏನೀ ಹಣ್ಣಿನ (benefits of tamarind) ಪ್ರಯೋಜನಗಳು?

ರೋಗ ನಿರೋಧಕತೆ

ಇದರಲ್ಲಿರುವ ಹುಳಿ ರುಚಿಯ ಟಾರ್ಟಾರಿಕ್‌ ಆಮ್ಲವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಉತ್ಕರ್ಷಣ ನಿರೋಧಕ ಗುಣವೂ ಇದ್ದು, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ನೆರವು

ಇದರಲ್ಲಿ ನಾರಿನಂಶ ಹೇರಳವಾಗಿದೆ. ಹಾಗಾಗಿ ಜೀರ್ಣಾಂಗವನ್ನು ಸ್ವಚ್ಛಗೊಳಿಸಿ, ಪಚನದ ಕೆಲಸವನ್ನು ಸರಿ ಮಾಡುತ್ತದೆ. ಜೊತೆಗೆ, ಇದರಲ್ಲಿರುವ ಫ್ಲೆವನಾಯ್ಡ್‌ ಮತ್ತು ಪಾಲಿಫೆನಾಲ್‌ಗಳು ದೇಹದ ತೂಕ ಇಳಿಸುವುದಕ್ಕೂ ನೆರವಾಗುತ್ತವೆ. ಇದರಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್‌ ಆಮ್ಲವು ಹಸಿವೆಯನ್ನು ಕಡಿಮೆ ಮಾಡುತ್ತದೆ.

ಪೆಪ್ಟಿಕ್‌ ಅಲ್ಸರ್‌ ದೂರ

ಜಠರ ಮತ್ತು ಸಣ್ಣ ಕರುಳಿನ ಒಳಗಿನ ಭಾಗದಲ್ಲಿ ಕಾಣಿಸಿಕೊಳ್ಳುವ ಈ ಹುಣ್ಣುಗಳು ವಿಪರೀತ ನೋವುಂಟು ಮಾಡುತ್ತವೆ. ಹುಣಸೆ ಹಣ್ಣಿನಲ್ಲಿರುವ ಪಾಲಿಫೆನಾಲ್‌ ಅಂಶಗಳು ಜೀರ್ಣಾಂಗದಲ್ಲಿ ಪೆಪ್ಟಿಕ್‌ ಅಲ್ಸರ್‌ ಆಗದಂತೆ ತಡೆಯುವ ಸಾಧ್ಯತೆಯನ್ನು ಹೊಂದಿವೆ.

ಮಧುಮೇಹ ನಿಯಂತ್ರಣ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಸಕ್ಕರೆಯ ಮಟ್ಟ ಧಿಡೀರ್‌ ಏರುಪೇರಾಗದಂತೆ ತಡೆಯುತ್ತವೆ. ಮೇದೋಜೀರಕಾಂಗದ ಆರೋಗ್ಯ ಸುಧಾರಣೆಗೂ ಹುಣಸೆಹಣ್ಣು ಉಪಯುಕ್ತವಾಗಿದೆ. ಇದರಲ್ಲಿರುವ ಅಲ್ಫಾ ಅಮೈಲೇಸ್‌ ಎಂಬ ವಸ್ತುವು ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಪಚನಕಾರಿ

ಇದರಲ್ಲಿರುವ ಟಾರ್ಟಾರಿಕ್ ಮತ್ತು ಮ್ಯಾಲಿಕ್‌ ಆಮ್ಲಗಳಿಗೆ ವಿರೇಚಕ ಗುಣವಿದೆ. ಇದು ಹೊಟ್ಟೆಯ ಸ್ನಾಯುಗಳನ್ನು ವಿಕಸನಗೊಳಿಸುತ್ತದೆ. ಇದರ ಹಣ್ಣನ್ನು ಮಲಬದ್ಧತೆ ನಿವಾರಣೆಗೆ ಉಪಯೋಗಿಸಿದರೆ, ಇದರ ಎಲೆಯನ್ನು ಅತಿಸಾರ ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರ ಕಾಂಡ ಮತ್ತು ಬೇರನ್ನು ತೇಯ್ದು ಹೊಟ್ಟೆ ನೋವಿನ ನಿವಾರಣೆಗೆ ಉಪಯೋಗಿಸಲಾಗುತ್ತದೆ.

ಹೃದಯಕ್ಕೆ ಅನುಕೂಲ

ಇದರಲ್ಲಿ ಮೆಗ್ನೀಶಿಯಂ ಅಂಶ ಹೇರಳವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಮಾತ್ರವಲ್ಲ, ಇದರ ಫ್ಲೆವನಾಯ್ಡ್‌ಗಳು ಎಲ್‌ಡಿಎಲ್‌ ಹೆಚ್ಚದಂತೆ ಕಾಪಾಡಿಕೊಂಡು, ದೇಹದಲ್ಲಿ ಕೆಟ್ಟ ಕೊಬ್ಬು ಜಮೆಯಾಗದಂತೆ ಮಾಡಲು ನೆರವಾಗುತ್ತವೆ. ಹಾಗಾಗಿ ಹೃದಯದ ಕ್ಷೇಮ ಕಾಪಾಡುವಲ್ಲಿ ಇದು ಸಹಕಾರಿ.

ಯಕೃತ್‌ನ ಕಾಳಜಿ

ಅತಿಯಾದ ಕ್ಯಾಲರಿ ಇರುವಂಥ ಆಹಾರಗಳು ಯಕೃತ್‌ನಲ್ಲಿ ಕೊಬ್ಬು ತುಂಬಿ ಫ್ಯಾಟಿ ಲಿವರ್‌ನಂಥ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ. ಕೊಬ್ಬಿಲ್ಲದೆ ಅನುಕೂಲಗಳನ್ನು ತರುವ ಹುಣಸೆ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್‌ನ ಕಾಳಜಿಯನ್ನೂ ಮಾಡುತ್ತವೆ. ನಿಯಮಿತವಾಗಿ ಇದರ ಮಿತ ಸೇವನೆ ದೇಹಕ್ಕೆ ಹಲವು ರೀತಿಯ ಅನುಕೂಲಗಳನ್ನು ತರಬಲ್ಲದು.

ಅಲರ್ಜಿ ನಿಯಂತ್ರಣ

ಹಿಸ್ಟಮಿನ್‌ಗಳನ್ನು ಕಡಿಮೆ ಮಾಡುವಂಥ ಗುಣ ಹುಣಸೆ ಹಣ್ಣಿಗಿದೆ. ಜೊತೆಗೆ ವಿಟಮಿನ್‌ ಸಿ ಅಂಶವೂ ಇದರಲ್ಲಿ ಇರುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಹಾಗಾಗಿ ನೆಗಡಿ, ಕೆಮ್ಮು, ಅಸ್ತಮಾದಂಥ ಅಲರ್ಜಿ ಸಮಸ್ಯೆಗಳನ್ನು ಹತೋಟಿಗೆ ತರಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version