Site icon Vistara News

Benefits of weight training for women: ತೂಕ ಎತ್ತುವ ವ್ಯಾಯಾಮ ಮಹಿಳೆಯರಿಗೆ ಏಕೆ ಬೇಕು?

Benefits of weight training for women

ತೂಕ ಎತ್ತುವುದಕ್ಕೂ ಮಹಿಳೆಯರಿಗೂ (Benefits of weight training for women) ಅಂಥ ಅನುಬಂಧವೇನಿಲ್ಲ. ಹಾಗೆಂದು ಬಾವಿಯಿಂದ ನೀರೆತ್ತುವುದರಿಂದ ಹಿಡಿದು, ಸೌದೆ ಹೊರೆ ಹೊರುವವರೆಗೆ ನಮ್ಮ ಗ್ರಾಮೀಣ ಮಹಿಳೆಯರ ಸಾಮರ್ಥ್ಯ ಊಹೆಗೆ ಮೀರಿದ್ದು. ಇದೀಗ ವ್ಯಾಯಾಮಕ್ಕಾಗಿ ತೂಕ ಎತ್ತುವ ಬಗ್ಗೆ ಹೇಳುವುದಾದರೆ, ಹಲವಾರು ಸ್ತ್ರೀಯರು ಇದನ್ನು ಇಷ್ಟಪಡುವುದಿಲ್ಲ. ಆದರೂ ತೂಕ ಎತ್ತುವ ಮೂಲಕ ಸ್ನಾಯುಗಳಿಗೆ ಪ್ರತಿರೋಧಕತೆಯನ್ನು ಒಡ್ಡಿ, ಈ ಮೂಲಕ ಮಾಂಸಪೇಶಿಗಳನ್ನು ಸಬಲಗೊಳಿಸುವ ಕ್ರಿಯೆ ಹೊಸದೇನಲ್ಲ, ತೀರಾ ಹಳೆಯದ್ದೆ. ಹೀಗೆನ್ನುತ್ತಿದ್ದಂತೆ ವೇಯ್ಟ್‌ ಲಿಫ್ಟರ್‌ಗಳಂತೆ ತೂಕ ಎತ್ತಿ ಹೊಟ್ಟೆ ಕರಗಿಸಿ, ರಟ್ಟೆ ಬೆಳೆಸುವುದು ಎಂಬ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ದೇಹದ ಒಟ್ಟು ಸ್ವಾಸ್ಥ್ಯಕ್ಕೆ ಇವೆಲ್ಲ ಹಲವು ರೀತಿಯಲ್ಲಿ ಇಂಬು ನೀಡುತ್ತವೆ. ಏನು ಲಾಭಗಳಿವೆ ಮಹಿಳೆಯರಿಗೆ ತೂಕ ಎತ್ತುವುದರಿಂದ?

ಶಕ್ತಿ ಹೆಚ್ಚಳ

ಭಾರ ಎತ್ತುವ ವ್ಯಾಯಾಮವೆಂದರೆ ಹತ್ತಿಪ್ಪತ್ತು ಕೇಜಿಗಳನ್ನೇ ಎತ್ತಬೇಕೆಂದಿಲ್ಲ. ನಾಲ್ಕಾರು ಕೇಜಿ ಭಾರವೂ ಉಪಯುಕ್ತವೇ. ಸ್ನಾಯುಬಲ ಹೆಚ್ಚಿಸಿಕೊಳ್ಳುವುದಕ್ಕೆ ಮೊದಲಿಗೆ ಕಡಿಮೆ ಭಾರದ ಪ್ರತಿರೋಧವೇ ಸಾಕಾಗುತ್ತದೆ. ಇದನ್ನು ಕ್ರಮೇಣ ಹೆಚ್ಚಿಸುತ್ತಾ ಹೋದಂತೆ ದೇಹದ ಶಕ್ತಿಯೂ ವೃದ್ಧಿಯಾಗುತ್ತದೆ. ಮಹಿಳೆಯರ ಪ್ರಾಯ ಹೆಚ್ಚಿದಂತೆ ಸ್ನಾಯುಗಳು ಕಡಿಮೆಯಾಗಿ ಕೊಬ್ಬು ಹೆಚ್ಚುವುದು ಸಾಮಾನ್ಯವಾದ್ದರಿಂದ, ತೂಕ ಎತ್ತುವ ವ್ಯಾಯಾಮಗಳು ಅಗತ್ಯವಾಗಿ ಬೇಕಾಗುತ್ತವೆ.

ಕೊಬ್ಬು ಕರಗಿಸಲು

ತೋಳು, ಹೊಟ್ಟೆ ಮತ್ತು ತೊಡೆಗಳಲ್ಲಿನ ಕೊಬ್ಬು ಕೊಂಚ ಹೆಚ್ಚೇ ಹಠಮಾರಿ. ಇದನ್ನು ಕರಗಿಸಲು ಬೆವರು ಹರಿಸಬೇಕು. ಆದರೆ ವೇಯ್ಟ್‌ ಟ್ರೈನಿಂಗ್‌ ನಿಂದ ಹಠಮಾರಿ ಕೊಬ್ಬನ್ನೂ ಕರಗಿಸಬಹುದು. ಇದಕ್ಕಾಗಿ ತೂಕದ ಉಪಕರಣಗಳು ಮಾತ್ರವಲ್ಲ, ರೆಸಿಸ್ಟೆನ್ಸ್‌ ಬ್ಯಾಂಡ್‌ ಸಹ ಪ್ರಯೋಜನಕಾರಿ. ಅಂತೂ ಸ್ನಾಯುಗಳಿಗೆ ಪ್ರತಿರೋಧ ಒಡ್ಡಿದಾಗಲೇ ಕೊಬ್ಬು ಕರಗಿ, ದೃಢತೆ ಹೆಚ್ಚುವುದು.

ಋತುಬಂಧದ ನಂತರ

ಮಹಿಳೆಯರಿಗೆ ಋತುಬಂಧ ಸಮೀಪಿಸುತ್ತಿದ್ದಂತೆ ಸಪೂರನೆಯ ದೇಹ ಉದ್ದುರುಟು ಗಾತ್ರಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲ, ಸ್ನಾಯುಗಳ ಜಾಗವನ್ನು ಕೊಬ್ಬು ಆಕ್ರಮಿಸಿಕೊಂಡು, ಮೂಳೆಗಳಿಗೆ ಆಧಾರ ಕಡಿಮೆಯಾಗುತ್ತದೆ. ಕೀಲುಗಳು ಸವೆಯುವುದು, ಮೂಳೆ ದುರ್ಬಲವಾಗುವಂಥ ತೊಂದರೆಗಳು ಪ್ರಾರಂಭವಾಗುತ್ತವೆ. ಆದರೆ ತೂಕ ಎತ್ತುವ ವ್ಯಾಯಾಮದ ಮೂಲಕ ಕೊಬ್ಬು ಕರಗಿಸಿ, ಮಾಂಸಪೇಶಿಗಳಿಗೆ ಬಲ ತುಂಬುವುದರಿಂದ ಮೂಳೆಗಳು ದುರ್ಬಲವಾಗದಂತೆ ಕಾಪಾಡಿಕೊಳ್ಳಬಹುದು.

ಹಾರ್ಮೋನುಗಳ ಸಮತೋಲನೆಗೆ

ಹಲವು ರೀತಿಯ ಚೋದಕಗಳನ್ನು ಸರಿದಾರಿಗೆ ತರುವುದಕ್ಕೆ ಇವು ಸಹಕಾರಿ. ಭಾರ ಎತ್ತುವ ಮೂಲಕ ತೂಕ ನಿರ್ವಹಣೆ ಮಾಡುವುದರಿಂದ ದೇಹದ ಇನ್‌ಸುಲಿನ್‌ ಪ್ರತಿರೋಧಕತೆಯನ್ನು ನಿಯಂತ್ರಣದಲ್ಲಿ ಇರಿಸಬಹುದು. ಜೊತೆಗೆ ಮಾನಸಿಕ ಒತ್ತಡ ಹೆಚ್ಚಾದಾಗ ದೇಹದಲ್ಲಿ ಏರುಮುಖವಾಗುವ ಕಾರ್ಟಿಸೋಲ್‌ಗಳನ್ನು ಕಡಿಮೆ ಮಾಡುವುದಕ್ಕೆ ಇದರಿಂದ ಅನುಕೂಲ. ಕ್ಸೆನೊಈಸ್ಟ್ರೋಜೆನ್‌ ಮಟ್ಟ ಕುಸಿದರೆ ಶರೀರದಲ್ಲಿ ಉರಿಯೂತದ ಲಕ್ಷಣಗಳು ಕಾಣುತ್ತವೆ. ಪಿಸಿಒಎಸ್‌ ತೊಂದರೆ ಇದ್ದರೂ ತೂಕ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಮಾನಸಿಕ ತೃಪ್ತಿ

ಆರೋಗ್ಯಕರ ಶರೀರವು ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ. ಅದರಲ್ಲೂ ಇಡೀ ದಿನದ ಎಲ್ಲ ಕೆಲಸಗಳಲ್ಲಿ ಈ ಸಂತೋಷವು ವ್ಯಾಪಿಸಿಕೊಳ್ಳುವುದು, ಇಡೀ ಜೀವನದ ಮಟ್ಟವನ್ನೇ ಸುಧಾರಿಸುತ್ತದೆ. ೨೦೧೮ರಲ್ಲಿ ಲಿಮೆರಿಕ್‌ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಮೂಡ್‌ ಬಲದಾವಣೆ, ಜೀವನವೇ ನಶ್ವರವೆಂಬ ಭಾವನೆ ಮತ್ತು ಖಿನ್ನತೆಯಂಥ ಮಾನಸಿಕ ಸಮಸ್ಯೆಗಳಿಗೆ, ಪ್ರತಿರೋಧ ಒಡ್ಡುವ ವ್ಯಾಯಾಮಗಳು ಮದ್ದಾಗಿ ಪರಿಣಮಿಸಬಲ್ಲವು.

Exit mobile version