Site icon Vistara News

Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Bluetooth Side Effects

ಯಾವುದೇ ಸಾರ್ವಜನಿಕ ಸ್ಥಳದಲ್ಲಿ (Bluetooth Side Effects) ಓಡಾಡುತ್ತಿರುವವರನ್ನು ಗಮನಿಸಿದರೂ ಕೈಯಲ್ಲೊಂದು ಮೊಬೈಲ್‌ ಹಿಡಿದು, ಕಿವಿಗೊಂದು ಬ್ಲೂಟೂತ್‌ ಇಯರ್‌ಫೋನ್‌ ಸಿಕ್ಕಿಸಿಕೊಂಡು ಇರುವವರೇ ಕಾಣುತ್ತಾರೆ. ಬಸ್ಸಲ್ಲಿ, ರೈಲಲ್ಲಿ, ಕ್ಯಾಬ್‌ನಲ್ಲಿ, ನಡೆದು ಹೋಗುವವರು- ಯಾರೇ ಆದರೂ ಕಿವಿಗಳನ್ನು ಬ್ಲೂಟೂತ್‌ ಇಯರ್‌ಪ್ಲಗ್‌ಗಳಲ್ಲಿ ಮುಚ್ಚುಕೊಂಡಿರುವವರೇ. ವಯಸ್ಸು, ಲಿಂಗ, ಜಾತಿ-ಮತಗಳ ಭೇದವಿಲ್ಲದ ಜಾತ್ಯತೀತ ಪ್ರಪಂಚವಿದು. ಆದರೆ ಹೀಗೆ ದಿನದ ಎಷ್ಟೋ ಹೊತ್ತು ಕಿವಿಗಳಿಗೆ ಬ್ಲೂಟೂತ್‌ ಸ್ಪೀಕರ್‌ಗಳನ್ನು ಬಳಸುವುದು ಕ್ಷೇಮವೇ? ಈ ಉಪಕರಣಗಳು ಹೊರಹೊಮ್ಮಿಸುವ ವಿಕಿರಣದಿಂದ ಕ್ಯಾನ್ಸರ್‌ ಬರುತ್ತದೆಂಬ ಮಾತುಗಳಿವೆಯಲ್ಲ?

ಬ್ಲೂಟೂತ್‌ ಪ್ರವರ

2.4 ಗಿಗಾ ಹರ್ಟ್ಸ್‌ ತರಂಗಾಂತರದ ರೇಡಿಯೊ ಕಿರಣಗಳನ್ನು ಉಪಯೋಗಿಸಿ ಕೆಲಸ ಮಾಡುವ ತಂತ್ರಜ್ಞಾನವಿದು. ಇದನ್ನು ವೈಫೈ ರೂಟರ್‌, ಕಾರಿನ ಸ್ಪೀಕರ್‌, ಪ್ರಿಂಟರ್‌, ಮೈಕ್ರೋವೇವ್‌ಗಳಿಂದ ಹಿಡಿದು ಹಲವು ಉಪಕರಣಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ, ಒಂದು ಫೋನ್‌ನಿಂದ ಇನ್ನೊಂದಕ್ಕೆ, ಹೆಡ್‌ಫೋನ್‌, ಸ್ಪೀಕರ್‌ಗಳ ಜೊತೆಗೆಲ್ಲ ಈ ತಂತ್ರಜ್ಞಾನದಿಂದ ಸುಲಭಕ್ಕೆ ಸಂಪರ್ಕ ಸಾಧಿಸಬಹುದು. ಕಡಿಮೆ ದೂರದಲ್ಲಿ ನಿಸ್ತಂತು ಆಗಿ ಸಂಪರ್ಕ ಸಾಧಿಸುವಂಥ ಸಮರ್ಥ ವಿಧಾನವಿದು. ಆದರೆ ಇದು ಸುರಕ್ಷಿತ ವಿಧಾನವೇ ಎಂಬುದೀಗ ಪ್ರಶ್ನೆ.
ಬ್ಲೂಟೂತ್‌ ಹೆಡ್‌ಫೋನ್‌ಗಳ ಬಗೆಗಿನ ಪ್ರಮುಖ ಆತಂಕವೆಂದರೆ, ಅವು ಸೂಸುವ ಕಿರಣಗಳು ನಮ್ಮ ಆರೋಗ್ಯಕ್ಕೆ ಎನಾದರೂ ತೊಂದರೆ ಮಾಡುತ್ತವೆಯೇ ಎಂಬುದು. ಅದರಲ್ಲೂ ವಿಶ್ವದೆಲ್ಲೆಡೆ ಕ್ಯಾನ್ಸರ್‌ ಪ್ರಕರಣಗಳು ರಾಕೆಟ್‌ನಂತೆ ಮೇಲೇರಿರುವ ಹಿನ್ನೆಲೆಯಲ್ಲಿ, ಬ್ಲೂಟೂತ್‌ ಕಿರಣಗಳಿಂದ ಈ ಅಪಾಯ ಹೆಚ್ಚುತ್ತದೆಯೇ? ಎಂಥಾ ವಿಕಿರಣಗಳನ್ನು ಬ್ಲೂಟೂತ್‌ ಸೂಸುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಅಯಾನೀಕರಿಸದ (non-ionizing radiation) ಕಿರಣಗಳನ್ನು ಮಾತ್ರವೇ ಬ್ಲೂಟೂತ್‌ ಉಪಕರಣಗಳು ಹೊರಸೂಸುತ್ತವೆ. ಇದಕ್ಕಿರುವ ಶಕ್ತಿಯ ಪ್ರಮಾಣ ಅತಿ ಕಡಿಮೆ. ಒಂದು ಹಂತದವರೆಗೆ ಮಾನವರಿಗೆ ಇದರಿಂದ ಯಾವುದೇ ಅಪಾಯವಿಲ್ಲ, ಇವು ಕ್ಯಾನ್ಸರ್‌ಕಾರಕ ಅಲ್ಲ ಎಂದೇ ಪರಿಣತರು ಪ್ರತಿಪಾದಿಸುತ್ತಾರೆ. ಅಯಾನೀಕರಿಸಿದ (ionizing radiation) ವಿಕಿರಣಗಳಾದರೆ, ಅಂದರೆ ಎಕ್ಸ್‌-ರೇ ಯಂಥವಾದರೆ ಕೊಂಚ ಯಾಮಾರಿದರೂ ಅಪಾಯ ಆಗುವ ಸಾಧ್ಯತೆಯಿದೆ.
ಈ ರೀತಿಯ ಅಯಾನೀಕರಿಸದ ಕಿರಣಗಳು ರೇಡಿಯೊ ತರಂಗಾಂತರದ ಸ್ಪೆಕ್ಟ್ರಮ್‌ನಲ್ಲಿ ಬರುತ್ತವೆ. ಇಂಥ ಕಿರಣಗಳನ್ನು ಬಹಳಷ್ಟು ಎಲೆಕ್ಟ್ರಾನಿಕ್‌ ಉಪಕರಣಗಳು ಸೂಸುತ್ತವೆ, ಬ್ಲೂಟೂತ್‌ ಮಾತ್ರವಲ್ಲ. ಹಾಗೆ ನೋಡಿದರೆ, ಮೊಬೈಲ್‌ ದೂರವಾಣಿಗಳಿಗಿಂತ ಕಡಿಮೆ ಶಕ್ತಿಯ ಕಿರಣಗಳನ್ನು ಬ್ಲೂಟೂತ್‌ ಉಪಕರಣಗಳು ಸೂಸುತ್ತವೆ. ಅದೂ ಅಲ್ಲದೆ, ಮಾನವರಿಗೆ ಸುರಕ್ಷಿತ ಎನಿಸುವ ಕಿರಣಗಳ ಮಿತಿಯ ಒಳಗೇ ಬ್ಲೂಟೂತ್‌ ಕಿರಣಗಳೂ ಇವೆ ಎನ್ನುವುದು ತಜ್ಞರ ಮಾತು. ಆದಾಗ್ಯೂ ಈ ಕುರಿತಾದ ಅಧ್ಯಯನಗಳು ಪೂರ್ಣ ಪ್ರಮಾಣದ ಮತ್ತು ದೀರ್ಘಕಾಲೀನ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡಿವೆಯೇ ಎನ್ನುವುದು ಪ್ರಶ್ನಾರ್ಹವಾಗಿದೆ.

ಹಾಗಾದರೆ ಸುರಕ್ಷಿತವೇ?

ಮತ್ತದೇ ಪ್ರಶ್ನೆ- ಹಾಗಾದರೆ ಬ್ಲೂಟೂತ್‌ ಹೆಡ್‌ಫೋನ್‌ಗಳು ಸುರಕ್ಷಿತವೇ? ಹೌದು ಎನ್ನಬಹುದು. ಆದರೆ ಅವುಗಳನ್ನು ಹೊಣೆ ಅರಿತು ಬಳಸುವ ಜವಾಬ್ದಾರಿ ಬಳಕೆದಾರರದ್ದು. ಕಿವಿಗಡಚಿಕ್ಕುವಂಥ ಇಯರ್‌ಪ್ಲಗ್‌ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ನಡೆಯುತ್ತಾ, ಆಚೀಚಿನ ವಾಹನಗಳಿಂದ ಅಪಾಯ ತಂದುಕೊಳ್ಳುವುದು ಮುಂದೆಂದೋ ಬರಬಹುದಾದ ರೋಗಕ್ಕಿಂತ ತೀವ್ರ ಪರಿಣಾಮವನ್ನು ಉಂಟುಮಾಡಬಲ್ಲದು. ಹಾಗಾಗಿ ಕಿವಿಗಳಿಗೆ ಅಪಾಯವಾಗದಂತೆ, ಮಿತವಾಗಿ ಯಾವುದೇ ಹೆಡ್‌ಫೋನನ್ನಾದರೂ ಬಳಸುವ ಸಂಕಲ್ಪ ಮಾಡಿಕೊಳ್ಳಿ. ಆಗ ಬ್ಲೂಟೂತ್‌ ಸೂಸುವ ಕಿರಣಗಳು ಸಹ ಬೆಚ್ಚಿ ಬೀಳಿಸುವದಿಲ್ಲ.

ವಿಕಿರಣಗಳು ಇನ್ನೆಲ್ಲಿ?

ಹಾಗಾದರೆ ಆಧುನಿಕ ಜೀವನಶೈಲಿಯಲ್ಲಿ ಇನ್ನೂ ಎಲ್ಲೆಲ್ಲಿ ನಾವು ವಿಕಿರಣಗಳಿಗೆ ಒಡ್ಡಿಕೊಳ್ಳುತ್ತಿದೇವೆ ಎಂಬ ಕುತೂಹಲ ಇರಬಹುದು. ಮೊಬೈಲ್‌ ದೂರವಾಣಿ, ಮೈಕ್ರೋವೇವ್‌ ಅವನ್‌ಗಳು, ಇಂಡಕ್ಷನ್‌ ಕುಕ್‌ಟಾಪ್‌ಗಳು- ಇಂಥವು ಕಡಿಮೆ ವಿಕಿರಣಗಳನ್ನು ಹೊಮ್ಮಿಸುವಂಥವು. ಆರೋಗ್ಯ ತಪಾಸಣೆಗಾಗಿ ಎಕ್ಸ್‌ ರೇ ಅಥವಾ ಸಿಟಿ ಸ್ಕ್ಯಾನ್‌ ಸೇರಿದಂತೆ ನಡೆಸಲಾಗುವ ನಾನಾ ರೀತಿಯ ಪರೀಕ್ಷೆಗಳು ಇವೆಲ್ಲದಕ್ಕಿಂತ ಹೆಚ್ಚಿನ ರೇಡಿಯೇಶನ್‌ ಹೊಮ್ಮಿಸುತ್ತವೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಆರೋಗ್ಯ ತಪಾಸಣೆಯಲ್ಲಿ ಬಳಸಲಾಗುವ ಹಲವು ರೀತಿಯ ವಿಕಿರಣಗಳು ಅಯಾನೀಕರಿಸಿದ ವರ್ಗಕ್ಕೆ ಬರುವಂಥವು ಮತ್ತು ದೇಹಕ್ಕೆ ಹಾನಿಯುಂಟುಮಾಡಬಲ್ಲವು. ಅದರಲ್ಲೂ, ದೇಹವನ್ನು ಒಡ್ಡಿಕೊಳ್ಳಬಹುದಾದ ಕನಿಷ್ಟ ಅಥವಾ ಗರಿಷ್ಟ ಮಟ್ಟದ ವಿಕಿರಣ ಎಂಬುದಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ವಿಕಿರಣಗಳಿಂದ ದೂರವಿರುವುದು ಕ್ಷೇಮ. ಈ ನಿಟ್ಟಿನಲ್ಲಿ ಎಂಆರ್‌ಐ ಪರೀಕ್ಷೆ ಎಲ್ಲದಕ್ಕಿಂತ ಸುರಕ್ಷಿತ ಎನಿಸಿದೆ.

ಇದನ್ನೂ ಓದಿ: Chia seeds: ಚಿಯಾ ಬೀಜಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ, ಈ ಎಚ್ಚರಿಕೆ ನಿಮ್ಮಲ್ಲಿರಲಿ!

Exit mobile version