ತಿರುವನಂತಪುರಂ: ಅಪರೂಪದ ಮೆದುಳು ತಿನ್ನುವ ಅಮೀಬಾ (Brain-Eating Amoeba) ಸೋಂಕಿಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಬಾಲಕನನ್ನು ಮೃದುಲ್ ಇ.ಪಿ. ಎಂದು ಗುರುತಿಸಲಾಗಿದೆ. ಕೋಝಿಕ್ಕೋಡ್ ಜಿಲ್ಲೆಯ ಫೆರೊಕೆ ಮೂಲದ ಈತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 7ನೇ ತರಗತಿಯಲ್ಲಿ ಓದುತ್ತಿದ್ದ ಮೃದುಲ್‌ನಲ್ಲಿ ಕೆಲವು ದಿನಗಳ ಹಿಂದೆ ಸೋಂಕಿನ ಲಕ್ಷಣಗಳಾದ ತೀವ್ರ ತಲೆನೋವು, ವಾಕರಿಕೆ, ವಾಂತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಜೂನ್ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೊಳದಲ್ಲಿ ಸ್ನಾನ ಮಾಡಿದ ನಂತರ ಬಾಲಕನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕೊಳಗಳು ಮತ್ತು ಸರೋವರಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡುಬರುವ ಈ ಅಮೀಬಾ ಮೂಗಿನ ಮೂಲಕ ಶರೀರವನ್ನು ಸೇರಿ ಮಾರಣಾಂತಿಕವಾಗುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ತಿನ್ನುವುದರಿಂದ ಇದನ್ನು ಮೆದುಳು ತಿನ್ನುವ ಅಮೀಬಾ ಎಂದೇ ಕರೆಯಲಾಗುತ್ತದೆ.
ಆರಂಭದಲ್ಲಿ ಮೃದುಲ್‌ನನ್ನು ಎರಡು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಮತ್ತು ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆ್ಯಂಟಿ ಮೈಕ್ರೊಬಿಯಲ್ ಚಿಕಿತ್ಸೆ ನೀಡಲಾಯಿತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ರಾಮನಾಟುಕರ ಮುನ್ಸಿಪಾಲಿಟಿ ಮೃದುಲ್ ಸ್ನಾನ ಮಾಡಿದ್ದ ಕೊಳಕ್ಕೆ ಸಾರ್ವಜನಿಕರ ಪ್ರವೇಸವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಮೂರನೇ ಪ್ರಕರಣ
ಈ ಹಿಂದೆ ಜೂನ್ 25ರಂದು ಕಣ್ಣೂರು ಜಿಲ್ಲೆಯ 13 ವರ್ಷದ ಬಾಲಕಿ ಮತ್ತು ಮೇ 21ರಂದು ಮಲಪ್ಪುರಂನ 5 ವರ್ಷದ ಬಾಲಕಿ ಈ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. “ನಾವು ರಾಜ್ಯದಲ್ಲಿ ಸಂಭವಿಸಿದ ಈ ಮೂರು ಸಾವುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದೇವೆ. ಕಣ್ಗಾವಲು ತೀವ್ರಗೊಳಿಸಿದ್ದೇವೆ. ನಾವು ಮೃದುಲ್‌ನಂತೆ ಅದೇ ಕೊಳದಲ್ಲಿ ಸ್ನಾನ ಮಾಡಿದ ಇತರರನ್ನು ಪರೀಕ್ಷಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾರಲ್ಲಿಯೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ. “ಕೊಳಗಳು ಅಥವಾ ಸರೋವರಗಳಲ್ಲಿ ಸ್ನಾನ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ ಅಪರೂಪದ ಸೋಂಕು. ಅಮೀಬಾ ಪ್ರಭೇದಗಳ ಉಪಸ್ಥಿತಿಯನ್ನು ಪರೀಕ್ಷಿಸಲು ನಾವು ವಿವಿಧ ಜಲ ಮೂಲಗಳ ಮಾದರಿಗಳನ್ನು ಪರೀಕ್ಷಿಸುತ್ತೇವೆ. ಮಳೆ ತೀವ್ರಗೊಳ್ಳುತ್ತಿದ್ದಂತೆ ಸೋಂಕುಗಳ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ” ಎಂದು ಅವರು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Brain eating amoeba | ಮೆದುಳು ತಿನ್ನುವ ಅಮೀಬಾ! ಏನಿದು ವಿಚಿತ್ರ ಕಾಯಿಲೆ?
ಹೇಗೆ ಹರಡುತ್ತದೆ?
ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚು.