Site icon Vistara News

Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?

World Breastfeeding Week

ಎಳೆಗೂಸುಗಳಿಗೆ (Breastfeeding diet) ಸರ್ವೋತ್ತಮ ಆಹಾರವೆಂದರೆ ತಾಯಿಯ ಹಾಲು. ಈ ಮೂಲಕವೇ ಶಿಶುಗಳಿಗೆ ಪ್ರೊಟೀನ್‌, ಕೊಬ್ಬು, ಖನಿಜ ಮತ್ತು ಜೀವಸತ್ವಗಳು ದೇಹ ಸೇರುವುದು ಸರಿಯಾದ ಕ್ರಮ. ಹಾಗಾಗಿ ತಾಯಿಯ ಆಹಾರಕ್ರಮ ಹೇಗಿದೆ ಎಂಬುದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೇವಲ ಮಗುವಿನ ಮೇಲಷ್ಟೇ ಅಲ್ಲ, ತಾಯಿಯ ದೇಹ ಮೊದಲಿನಂತಾಗುವುದಕ್ಕೆ, ಶಕ್ತಿ ಸಂಚಯನಕ್ಕೆ ಮತ್ತು ಆರೋಗ್ಯಪೂರ್ಣ ಆಗುವುದಕ್ಕೆ ತಾಯಿ ಸೇವಿಸುವ ಆಹಾರಗಳು ಮಹತ್ವದ್ದೆನಿಸುತ್ತವೆ. ಹಾಗಾಗಿ ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು ಮತ್ತು ಆಹಾರದಲ್ಲಿ ಏನೇನಿರಬೇಕು?

ಪ್ರೊಟೀನ್

ಗರ್ಭಾವಸ್ಥೆಯಿಂದ ಸುಧಾರಿಸಿಕೊಂಡು ಮೊದಲಿನಂತಾಗುವಲ್ಲಿ ತಾಯಿಯ ದೇಹಕ್ಕೆ ದೊರೆಯುವ ಪ್ರೊಟೀನ್‌ ಅಂಶ ಅತಿ ಮಹತ್ವದ್ದು. ಜೊತೆಗೆ, ಮಗುವಿನ ಬೆಳಗಣಿಗೆಗೂ ಇದು ಅಗತ್ಯ. ಡೇರಿ ಉತ್ಪನ್ನಗಳು, ಕಾಳುಗಳು, ಬೀಜಗಳು, ಮೀನು, ಮೊಟ್ಟೆ ಮುಂತಾದ ಲೀನ್‌ ಪ್ರೊಟೀನ್‌ ಮೂಲಗಳನ್ನು ತಾಯಿಯ ಆಹಾರದಲ್ಲಿ ಸೇರಿಸುವುದು ಅಗತ್ಯ. ಇದರಿಂದ ಎಲ್ಲಾ ಅಗತ್ಯವಾದ ಅಮೈನೋ ಆಮ್ಲಗಳನ್ನು ತಾಯಿ-ಮಗುವಿಬ್ಬರೂ ಪಡೆಯಬಹುದು.

ಕ್ಯಾಲ್ಶಿಯಂ

ಹಾಲುಣಿಸುವಾಗ ತಾಯಿಯ ದೇಹದಲ್ಲಿ ಕ್ಯಾಲ್ಶಿಯಂ ಕೊರತೆಯಾಗುವುದು ಸಹಜ. ಇದನ್ನು ಸರಿದೂಗಿಸಿಕೊಳ್ಳಲು ಡೇರಿ ಉತ್ಪನ್ನಗಳು, ಹಸಿರು ಸೊಪ್ಪುಗಳು, ಎಳ್ಳಿನಂಥ ಕಿರು ಬೀಜಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಜೊತೆಗೆ ದಿನದಲ್ಲಿ ಸ್ವಲ್ಪ ಸಮಯ ಬಿಸಿಲಿಗೆ ಒಡ್ಡಿಕೊಳ್ಳುವುದು ಅಗತ್ಯ. ಇದರಿಂದ ವಿಟಮಿನ್‌ ಡಿ ಅಂಶವೂ ದೊರೆಯುತ್ತದೆ. ತಾಯಿ-ಮಗುವಿನ ಪ್ರತಿರೋಧಕತೆ, ಮೂಳೆ-ಹಲ್ಲುಗಳೆಲ್ಲ ಸರಿಯಾಗಿರಬೇಕೆಂದರೆ ಕ್ಯಾಲ್ಶಿಯಂ ಕೊರತೆ ಆಗಬಾರದು.

ಕಬ್ಬಿಣ

ಪ್ರಜನನ ಸಂದರ್ಭದಲ್ಲಿ ಕಬ್ಬಿಣದಂಶವೂ ತಾಯಿಯ ದೇಹದಲ್ಲಿ ಕಡಿಮೆಯಾಗಬಹುದು. ಇದು ತಾಯಿ-ಶಿಶು ಇಬ್ಬರಿಗೂ ಸಮಸ್ಯೆ ತರಬಹುದು. ರಕ್ತಹೀನತೆಯಂಥ ತೊಂದರೆಗಳನ್ನು ದೂರ ಇರಿಸಲು ಕಬ್ಬಿಣಾಂಶವಿರುವ ಆಹಾರಗಳು ತಾಯಿಗೆ ಬೇಕು. ಕಾಳು-ಬೇಳೆಗಳು, ಸೊಪ್ಪುಗಳು, ಬೀಟ್ರೂಟ್‌ನಂಥ ಕೆಂಬಣ್ಣದ ಆಹಾರಗಳು ಅಗತ್ಯ. ಜೊತೆಗೆ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಅನುಕೂಲವಾಗುವಂತೆ ವಿಟಮಿನ್‌ ಸಿ ಹೆಚ್ಚಿರುವಂಥ ಕಿತ್ತಳೆ, ಸ್ಟ್ರಾಬೆರಿ, ಪಪ್ಪಾಯ, ದಪ್ಪಮೆಣಸು ಇತ್ಯಾದಿ ಹಣ್ಣು-ತರಕಾರಿಗಳನ್ನು ಸೇವಿಸಿ.

ವಿಟಮಿನ್‌ ಬಿ೧೨

ಶಿಶುವಿನ ನರಮಂಡಲ ಸರಿಯಾಗಿ ಕೆಲಸ ಮಾಡುವುದಕ್ಕೆ ಬಿ೧೨ ಜೀವಸತ್ವ ಇರಲೇಬೇಕು. ಮೊಟ್ಟೆ, ಮೀನು, ಮಾಂಸ, ಡೇರಿ ಉತ್ಪನ್ನಗಳಲ್ಲಿ ಈ ಅಂಶ ಸಮೃದ್ಧವಾಗಿದೆ. ತಾಯಿ ಪೂರ್ಣ ಸಸ್ಯಾಹಾರಿಯಾಗಿದ್ದರೆ ಇದರ ಪೂರಕಗಳನ್ನು ಸೇವಿಸುವ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಸೂಕ್ತ. ಹಾಗಿಲ್ಲದಿದ್ದರೆ ತಾಯಿ-ಮಗು ಇಬ್ಬರಿಗೂ ಬಿ ೧೨ ಜೀವಸತ್ವದ ಕೊರತೆ ಕಾಡಬಹುದು.

ನೀರು

ಹಾಲುಣಿಸುವ ಅಮ್ಮಂದಿರು ನೀರು ಕುಡಿದಷ್ಟೂ ಕಡಿಮೆಯೆ. ಹಾಗೆಂದ ಮಾತ್ರಕ್ಕೆ ಕೇವಲ ನೀರನ್ನೇ ಕುಡಿಯುತ್ತಾ ಇರಬೇಕೆಂದಲ್ಲ. ಹಾಲು, ಕಷಾಯ, ಸೂಪ್‌, ಬೇಳೆಕಟ್ಟು, ಹಣ್ಣಿನ ರಸ ಮುಂತಾದ ಯಾವುದೇ ರೀತಿಯ ಆರೋಗ್ಯಕರ ಪೇಯಗಳನ್ನು ತಾಯಂದಿರು ಕುಡಿಯಬಹುದು. ದಿನಕ್ಕೆ ಕನಿಷ್ಠ ೧೨ ಗ್ಲಾಸ್‌ನಷ್ಟು ದ್ರವಾಹಾರ ಅವರಿಗೆ ಅಗತ್ಯ. ಕಾಫಿ, ಚಹಾ, ಸೋಡಾದಂಥ ಕೆಫೇನ್‌ ಪೇಯಗಳಿಂದ, ಸಕ್ಕರೆಭರಿತ ಪೇಯಗಳಿಂದ ದೂರವಿರಿ.

ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ಇತರ ಆಹಾರಗಳು

ಈ ಮೇಲಿನ ಆಹಾರಗಳೇ ಅಲ್ಲದೆ, ಇನ್ನೂ ಕೆಲವು ಪರಂಪರಾಗತ ಆಹಾರಗಳು ತಾಯಿಯ ಹಾಲು ಹೆಚ್ಚಾಗುವುದಕ್ಕೆ ನೆರವು ನೀಡುತ್ತವೆ. ಮೊದಲಿಗೆ ತಾಯಿ ದಿನಕ್ಕೆ ಮೂರು ಗ್ಲಾಸ್‌ ಹಾಲು ಕುಡಿಯುವುದು ಅಗತ್ಯ. ಹಾಗೆಯೇ ತುಪ್ಪದ ಸೇವನೆಯೂ ಇರಬೇಕು. ಜೊತೆಗೆ, ಮೆಂತೆ, ಸಬ್ಬಸಿಗೆ ಮತ್ತು ಗಣಕೆ ಸೊಪ್ಪುಗಳು, ಶತಾವರಿ, ಪಪ್ಪಾಯಿ, ಬಾದಾಮಿ, ಕಡಲೆ, ಸೋಂಪು, ಶುಂಠಿ, ಜೀರಿಗೆ, ಇಡೀ ಧಾನ್ಯಗಳು ಮುಂತಾದವು ತಾಯಿಯ ಆಹಾರದಲ್ಲಿ ಇರಬೇಕು. ಇದರಿಂದ ಹೆರಿಗೆಯ ನಂತರ ಚೇತರಿಸಿಕೊಳ್ಳಲು ಬಾಣಂತಿಗೆ ಅನುಕೂಲ. ಜೊತೆಗೆ ಪೌಷ್ಟಿಕ ಆಹಾರಗಳ ಸೇವನೆಯಿಂದ ತಾಯಿ ಜೀವಕ್ಕೆ ಅನುಕೂಲವಷ್ಟೇ ಅಲ್ಲ, ಮಗುವಿಗೂ ಪೌಷ್ಟಿಕಾಂಶಗಳ ಕೊರತೆ ಆಗುವುದಿಲ್ಲ. ರೋಗನಿರೋಧಕ ಶಕ್ತಿಯೂ ಚೆನ್ನಾಗಿದ್ದು, ಬೆಳವಣಿಗೆಯೂ ಸಾಂಗವಾಗುತ್ತದೆ.

Exit mobile version