Site icon Vistara News

Air pollution | ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆಯೇ? ಹಾಗಾದರೆ ಇವಿಷ್ಟನ್ನು ನೆನಪಿಡಿ!

Air pollution

ವಾಯು ಮಾಲಿನ್ಯ ಇತ್ತೀಚಿನ ದಿನಗಳಲ್ಲಿ ಬಹುಚರ್ಚಿತ ವಿಷಯ. ಅಕ್ಟೋಬರ್‌ ವೇಳೆಗೆ ಇದರ ಬಗೆಗಿನ ಮಾತು ತಾರಕಕ್ಕೇರುತ್ತದೆ. ಆಕಾಶವೇ ಕಾಣದಂತೆ ಹೊಗೆಯ ಪರದೆ ಭೂಮಿಗೂ ಆಗಸಕ್ಕೂ ನಡುವೆ ಅಡ್ಡಲಾಗಿ ನಿಂತು, ರಾತ್ರಿ ಮಿನುಗುವ ನಕ್ಷತ್ರಗಳೂ ಕಾಣೆಯಾಗುತ್ತವೆ. ಏಷ್ಯಾದ ಅತಿ ಹೆಚ್ಚು ಮಾಲಿನ್ಯವಾದ ನಗರಗಳ ಪಟ್ಟಿಯಲ್ಲಿ ಭಾರತದ ಮೆಟ್ರೋಪಾಲಿಟನ್‌ ನಗರಿಗಳು ಮುಂಚೂಣಿಗೆ ಬರುತ್ತವೆ. ವಾಯು ಮಾಲಿನ್ಯ ತಡೆಗೆ ಹಲವಾರು ಸೂತ್ರಗಳನ್ನು ಹಾಕಿಕೊಂಡರೂ, ಮಾಲಿನ್ಯ ನಿಗ್ರಹ ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬರ ಮನೆಗಳಿಗೂ ನಿಧಾನವಾಗಿ ಏರ್‌ ಪ್ಯೂರಿಫೈಯರ್‌ ಪ್ರವೇಶ ಪಡೆಯಲಾರಂಭಿಸಿದೆ. ಮುಖದ ಮೇಲೆ ಮಾಸ್ಕ್‌ ಶಾಶ್ವತವಾಗಿ ಅಂಟಿಕೊಂಡು ಬಿಡುವ ಸೂಚನೆಗಳು ಕಾಣುತ್ತಿವೆ. ಮೊದಲೇ ಉಸಿರಾಟದ, ಶ್ವಾಸಕೋಶದ ಸಮಸ್ಯೆಯಿರುವ ಮಂದಿ ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಉಸಿರಾಟದ ಸಂದರ್ಭ ನಾವು ಒಳಗೆ ತೆಗೆದುಕೊಳ್ಳುವ ಗಾಳಿಯ ಜೊತೆ ಸಾಕಷ್ಟು ರಾಸಾಯನಿಕಯುಕ್ತ ಗಾಳಿಯ ಒಳ ಸೇರಿ ಕೆಮ್ಮು, ಉಬ್ಬಸ, ನ್ಯುಮೋನಿಯಾ, ಕಣ್ಣುರಿ, ಅಸ್ತಮಾ, ಎದೆ ನೋವಿನಂತಹ ತೊಂದರೆಗಳು ಈಗ ಹೆಚ್ಚಿದೆ. ಮೊದಲೇ ಇಂತಹ ಸಮಸ್ಯೆ ಎದುರಿಸುತ್ತಿದ್ದವರಿಗೆ ಇದು ನುಂಗಲಾರದ ತುತ್ತಾಗಿದೆ. ಇಂತಹ ವಾಯುಮಾಲಿನ್ಯ ಕೇವಲ ಉಸಿರಾಟದ ತೊಂದರೆಗಳಷ್ಟೇ ಅಲ್ಲ, ಮಾರಣಾಂತಿಕ ಕಾಯಿಲೆಗಳಾದ ಶ್ವಾಸಕೋಶದ ಕ್ಯಾನ್ಸರ್‌, ಹೃದಯಾಘಾತ, ಪಾರ್ಶ್ವವಾಯು ಮತ್ತಿತರ ತೊಂದರೆಗಳೂ ಇವೆ.

ಹಾಗಾದರೆ, ವಾಯುಮಾಲಿನ್ಯದ ತೊಂದರೆಗಳಿಂದ ನಮ್ಮ ಶ್ವಾಸಕೋಶಗಳನ್ನು ನಾವು ಕಾಪಾಡಿಕೊಳ್ಳಬೇಕಾದರೆ, ಯಾವೆಲ್ಲ ಕ್ರಮಗಳನ್ನು, ಮುಂಜಾಗ್ರತೆಯನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ.

೧. ವಾಯು ಮಾಲಿನ್ಯ ಹೆಚ್ಚಿದ್ದಾಗ ಹೊರಗಿನ ಚಟುವಟಿಕೆಗಳನ್ನು ಕಡಿಮೆ ಮಾಡಿ. ಸಾಧ್ಯವಾದಷ್ಟೂ ಬೆಳಗಿನ ವಾಕಿಂಗ್‌, ರನ್ನಿಂಗ್‌, ಜಾಗಿಂಗ್‌, ಜಿಮ್‌, ಸೈಕ್ಲಿಂಗ್‌ ಮತ್ತಿತರ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ಬ್ರೇಕ್‌ ಹಾಕಿ. ನವೆಂಬರ್ನಿಂದ ಜನವರಿ ತಿಂಗಳವರೆಗೆ ಆದಷ್ಟೂ ಇಂತಹುಗಳನ್ನು ಕಡಿಮೆ ಮಾಡಿ. ಮನೆಯೊಳಗೇ ಪರ್ಯಾಯವಾಗಿ ಯೋಗ, ವ್ಯಾಯಾಮಗಳನ್ನು ಮಾಡಿಕೊಳ್ಳಬಹುದು. ಆಪ್‌ ಮೂಲಕ ಎಕ್ಯುಐ (ಏರ್‌ ಕ್ವಾಲಿಟಿ ಇಂಡೆಕ್ಸ್‌) ಚೆಕ್‌ ಮಾಡಿಕೊಳ್ಳಿ. ಇದು ೩೦೦ಕ್ಕಿಂತ ಕಡಿಮೆ ಇದ್ದರೆ ನಿಮ್ಮ ದೈನಂದಿನ ಹೊರಾಂಗಣ ಚಟುವಟಿಕೆಗಳನ್ನು ನಿಧಾನವಾಗಿ ಆರಂಭಿಸಬಹುದು. ೨೦೦ಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು. ಚಿಂತೆಯಿಲ್ಲದೆ ಅಡ್ಡಾಡಬಹುದು.

೨. ಏಳು ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳನ್ನು ಎಕ್ಯುಐ ೩೫೦ಕ್ಕಿಂತ ಹೆಚ್ಚಿದ್ದರೆ ಶಾಲೆಗೆ ಕಳುಹಿಸಬೇಡಿ. ಶಾಲೆಯಲ್ಲಿಯೂ ಮಕ್ಕಳು ಅತಿಯಾದ ವಾಯುಮಾಲಿನ್ಯವಿದ್ದ ಸಂದರ್ಭಗಳಲ್ಲಿ ಹೊರಾಂಗಳ ಚಟುವಟಿಕೆ, ಆಟೋಟಗಳನ್ನು ಮಾಡದಿರುವಂತೆ ಶಾಲೆಯ ಗಮನಕ್ಕೆ ತನ್ನಿ.

೩. ಮನೆಯಲ್ಲಿ ಮೇಣದ ಬತ್ತಿ, ಅಗರಬತ್ತಿ, ಧೂಪದಂತಹುಗಳನ್ನು ಉರಿಸುವುದು ಕಡಿಮೆ ಮಾಡಿ. ಪರಿಸರಸ್ನೇಹಿ ಹಣತೆ, ತುಪ್ಪದ ದೀಪ ಹಚ್ಚಿ.

೪. ಬೆಳ್‌ಬೆಳಗ್ಗೆ ಗುಡಿಸುವುದನ್ನು ಬಿಡಿ. ಇದರಿಂದ ಧೂಳು ಮತ್ತೆ ವಾತಾವರಣದಲ್ಲಿ ಹರಡಿಕೊಳ್ಳುತ್ತದೆ. ಹಾಗಾಗಿ, ಒದ್ದೆ ಬಟ್ಟೆಯಿಂದ ಒರೆಸುವುವುದು ಒಳ್ಳೆಯದು. ಆಗ ಧೂಳಿನಿಂದ ಸೀನು, ಅಲರ್ಜಿಗಳು ಬರುವುದಿಲ್ಲ. ಒರೆಸುವ ನೀರಿಗೆ ಸ್ವಲ್ಪ ಬೈಕಾರ್ಬೋನೇಟ್‌ ಸೋಡಾವನ್ನು ಹಾಕಬಹುದು.

ಇದನ್ನೂ ಓದಿ | Air Pollution | ದೇಶದ ಮಾಲಿನ್ಯಯುಕ್ತ ನಗರಗಳ ಪೈಕಿ ಬೆಂಗಳೂರಿಗೆ ಆರನೇ ಸ್ಥಾನ!

೫. ವಾಕ್‌ ಮಾಡುವುದನ್ನು ತಪ್ಪಿಸುವುದು ಕಷ್ಟ ಎನಿಸಿದರೆ, ವಾಹನಗಳು ಹೆಚ್ಚು ಹೋಗುವ, ಜನನಿಬಿಡ ರಸ್ತೆಗಳಲ್ಲಿ ವಾಕ್‌ ಮಾಡಬೇಕು. ಪ್ರಶಾಂತವಾಗಿರುವ ಜನರ ಹಾಗೂ ವಾಹನಗಳ ಓಡಾಟ ಕಡಿಮೆ ಇರುವ ರಸ್ತೆಗಳು ಅಥವಾ ಪಾರ್ಕುಗಳಲ್ಲಿ ವಾಕ್‌ ಮಾಡಿ.

೬. ಹೊರಗೆ ಹೋಗಬೇಕಾದ ಸಂದರ್ಭ ಬಂದಾಗ. ದ್ವಿಚಕ್ರ ವಾಹನ ಚಲಾಯಿಸುವಾಗ, ಮುಖಕ್ಕೆ ಎನ್‌ ೯೫ ಮಾಸ್ಕ್‌ ಧರಿಸಿ. ಕಡೇಪಕ್ಷ ತೆಳುವಾದ ಬಟ್ಟೆ ಮಾಸ್ಕ್‌ ಧರಿಸಿದರೂ, ಕರವಸ್ತ್ರ ಅಡ್ಡ ಹಿಡಿದರೂ ಸಾಕು. ಒಂದು ಮಟ್ಟಿಗೆ ಇದು ರಕ್ಷಣೆ ನೀಡುತ್ತದೆ.  ಧೂಳಿನಂತಹ ಅಲರ್ಜಿಕಾರಕಗಳಿಂದ ದೂರವಿರಬಹುದು ಹಾಗೂ ಸ್ವಲ್ಪ ಮಟ್ಟಿಗಿನ ಸಹಾಯ ಆಗಬಹುದು.

೭. ತರಗೆಲೆ, ಗದ್ದೆಯ ಪೈರು ಇತ್ಯಾದಿಗಳನ್ನು ಉರಿಸುವುದನ್ನು ಮಾಡಬೇಡಿ. ಇವನ್ನೇ ಬೇರೆ ರೀತಿಯಲ್ಲಿ ಸಸ್ಯಗಳಿಗೇ ಗೊಬ್ಬರವಾಗಿ ಬಳಸಿ. ಮನೆಯ ಕಸವನ್ನೂ ಒಟ್ಟು ಮಾಡಿ ಸುಡುವ ಅಭ್ಯಾಸವಿದ್ದರೆ ಅದನ್ನು ಬಿಡಿ.

೮. ಮನೆಯ ಮುಂದೆ ಧೂಳೇಳುತ್ತಿದ್ದರೆ ಬೆಳಗ್ಗೆ ನೀರು ಚಿಮುಕಿಸಿ. ಒಣಗಿದಾಗ ಮತ್ತೆ ನೀರು ಚಿಮುಕಿಸಿ.

೯. ವಿಪರೀತ ವಾಯುಮಾಲಿನ್ಯದ ಸಮಸ್ಯೆಯಿದ್ದರೆ ಮನೆಯ ಕೋಣೆಗಳಿಗೆ ಏರ್‌ ಪ್ಯೂರಿಫೈಯರ್‌ ಬಳಸಬಹುದು.

ಇದನ್ನೂ ಓದಿ | ವಾಯು ಮಾಲಿನ್ಯ | ನಿಮ್ಮ ಚರ್ಮ, ಕೂದಲನ್ನು ರಕ್ಷಿಸಿಕೊಳ್ಳಲು 6 ದಾರಿ

Exit mobile version