Site icon Vistara News

Benefits Of Cabbage: ಪ್ರತಿರೋಧಕ ಶಕ್ತಿ ಹೆಚ್ಚಿಸುವ ಎಲೆಕೋಸು

Benefits Of Cabbage

ಚಳಿಗಾಲದಲ್ಲಿ ದೊರೆಯುವ ಹಲವು ತರಕಾರಿಗಳ ಪೈಕಿ ಎಲೆಕೋಸು ಸಹ ಒಂದು. ಹಸಿರು ತರಕಾರಿಗಳನ್ನು ತಿನ್ನಬೇಕೆಂದು ಹೇಳಿದಾಗಲೆಲ್ಲ ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ತರಕಾರಿಗಳಲ್ಲಿ ಇದರ ಹೆಸರೂ ಇರುತ್ತದೆ. ಅತಿ ದುಬಾರಿ, ಸಿಕ್ಕಾಪಟ್ಟೆ ರುಚಿ ಮುಂತಾದ ಯಾವ ಪಟ್ಟಿಯಲ್ಲೂ ಸೇರದ ಎಲೆಕೋಸು, ʻಮಡಗಿದಂಗಿರುವʼ ಎನ್ನುವಂತೆ ನಮ್ರತೆಯಿಂದ ತನ್ನಷ್ಟಕ್ಕೆ ಇರುವಂಥದ್ದು. ಹಾಗೆಂದ ಮಾತ್ರಕ್ಕೆ ಇದರ ಸತ್ವಗಳು, ತಿನ್ನುವುದರಿಂದ ಲಾಭಗಳು ಕಡಿಮೆ ಎಂದು ಭಾವಿಸಬೇಕಿಲ್ಲ. ಏನಂಥ ವಿಶೇಷಗಳಿವೆ ಇದರಲ್ಲಿ?

Heart Health In Winter

ಪೋಷಕಾಂಶಗಳು ಭರಪೂರ

ಇದರಲ್ಲಿ ಕ್ಯಾಲರಿಗಳು ಕಡಿಮೆ, ಸತ್ವಗಳು ಹೆಚ್ಚು. ಹಾಗಾಗಿ ಅನುಮಾನಕ್ಕೆ ಎಡೆಯಿಲ್ಲದಂತೆ ಹೊಟ್ಟೆತುಂಬಾ ಎಲೆಕೋಸಿನ ಪಲ್ಯ, ಸಲಾಡ್‌ ಇತ್ಯಾದಿಗಳನ್ನು ತಿನ್ನಬಹುದು. ಇದರ ವಿಟಮಿನ್‌ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಕೆ ಜೀವಸತ್ವವು ರಕ್ತ ಹೆಪ್ಪುಗಟ್ಟುವಲ್ಲಿ ನೆರವಾಗುತ್ತದೆ. ಇದಲ್ಲದೆ, ವಿಟಮಿನ್‌ ಬಿ೬, ಫೋಲೇಟ್‌ ಮತ್ತು ಮೆಗ್ನೀಶಿಯಂ ಸಹ ಎಲೆಕೋಸಿನಲ್ಲಿ ಧಾರಾಳವಾಗಿದೆ.

ಕ್ಯಾನ್ಸರ್‌ ತಡೆ

ಎಲೆಕೋಸಿನಲ್ಲಿರುವ ಗ್ಲೂಕೋಸಿನೋಲೇಟ್‌ ಎಂಬ ಅಂಶವು ಕ್ಯಾನ್ಸರ್‌ ತಡೆಯುವಲ್ಲಿ ಪರಿಣಾಮಕಾರಿ ಎನ್ನುತ್ತವೆ ಅಧ್ಯಯನಗಳು. ಸ್ತನ ಮತ್ತು ಕರುಳು ಕ್ಯಾನ್ಸರ್‌ ಸೇರಿದಂತೆ ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ತಡೆಯುವಲ್ಲಿ ಇವು ನೆರವಾಗುತ್ತವೆ. ಜೊತೆಗೆ ಕ್ಯಾನ್ಸರ್‌ ಕೋಶಗಳು ಬೆಳೆಯದಂತೆ ನಿರ್ಬಂಧಿಸುವಲ್ಲಿಯೂ ಗ್ಲೂಕೋಸಿನೋಲೇಟ್‌ ಸಹಕಾರಿ ಎನ್ನಲಾಗುತ್ತಿದೆ.

ಜೀರ್ಣಾಂಗಗಳು ಚುರುಕು

ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಇದರಿಂದ ಮಲಬದ್ಧತೆಯನ್ನು ದೂರ ಮಾಡಿ, ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬಹುದು. ಎಲೆಕೋಸಿನಲ್ಲಿರುವ ಗಂಧಕದ ಅಂಶಗಳು ಜೀರ್ಣಾಂಗಗಳ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರ ನೀಡುತ್ತವೆ.

ಉರಿಯೂತ ಶಮನ

ದೇಹದಲ್ಲಿ ಉರಿಯೂತ ಹೆಚ್ಚಿದಷ್ಟೂ ಹಲವು ರೀತಿಯ ರೋಗಗಳು ದಾಳಿಯಿಡುತ್ತವೆ. ಸಲ್ಫೋರಫೇನ್‌, ಕೆಂಫೆರೋಲ್‌ ನಂಥ ಹಲವು ಬಗೆಯ ಉತ್ಕರ್ಷಣ ನಿರೋಧಕಗಳು ಎಲೆಕೋಸಿನಲ್ಲಿವೆ. ಹಸಿರು ಬಣ್ಣದ ತರಕಾರಿಗಳನ್ನು ಹೆಚ್ಚು ಸೇವಿಸಿದಂತೆ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತವೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಚಳಿಗಾಲದಲ್ಲಿ ಉರಿಯೂತಗಳು ಹೆಚ್ಚಾಗಿ ದೇಹವೆಲ್ಲಾ ನೋವಿನ ಗೂಡಾಗದಿರುವಂತೆ ಕಾಪಾಡಿಕೊಳ್ಳುವುದಕ್ಕೆ ಎಲೆಕೋಸಿನಂಥ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಹೃದಯಕ್ಕೆ ಹತ್ತಿರ

ಎಲೆಕೋಸೆಂದರೆ ಕೇವಲ ತಿಳಿ ಹಸಿರು ಬಣ್ಣದ್ದು ಮಾತ್ರವಲ್ಲ, ನೇರಳೆ, ಅರೆಗೆಂಪು ಬಣ್ಣದ್ದೂ ಇರುತ್ತವೆ. ಕೋಸಿನ ಬಣ್ಣ ಹೆಚ್ಚು ಗಾಢವಾದಷ್ಟೂ ಅವು ಹೃದಯಕ್ಕೆ ಹೆಚ್ಚು ಹತ್ತಿರವಾಗುತ್ತವೆ. ಬಣ್ಣ ಗಾಢವಿರುವುದರ ಅರ್ಥ, ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೂಟೆನ್‌, ಬೀಟಾ ಕ್ಯಾರೊಟಿನ್‌ನಂಥ ಉತ್ಕರ್ಷಣ ನಿರೋಧಕಗಳಿವೆ ಎಂದು. ದೇಹದಲ್ಲಿ ಎಲ್‌ಡಿಎಲ್‌ ಕಡಿಮೆ ಮಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ರಕ್ತನಾಳಗಳು ಶುದ್ಧವಾಗಿ ಹೃದಯವೂ ಖುಷಿಯಾಗಿರುತ್ತದೆ.

ಕೊಲೆಸ್ಟ್ರಾಲ್‌ ಕಡಿತ

ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್‌ ದೇಹಕ್ಕೆ ಬೇಕು. ಅದಕ್ಕೂ ಅದರದ್ದೇ ಆದ ಕೆಲಸವಿದೆ ಶರೀರದಲ್ಲಿ. ಆದರೆ ಅದೇ ಹೆಚ್ಚಾಗಿಬಿಟ್ಟರೆ ಸಮಸ್ಯೆ ತರುತ್ತದೆ. ರಕ್ತದಲ್ಲಿರುವ ಈ ಅಂಟು ಪದಾರ್ಥ ಹೆಚ್ಚಾದಂತೆ ರಕ್ತನಾಳಗಳು ಕಟ್ಟಿಕೊಳ್ಳುತ್ತವೆ. ಹೃದಯ ಚೀರತೊಡಗಿತ್ತದೆ. ಎಲೆಕೋಸಿನಲ್ಲಿರುವ ಕರಗಬಲ್ಲ ನಾರುಗಳು ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ನಿರ್ಮೂಲನ ಮಾಡುತ್ತವೆ. ಹಾಗಾಗಿ ಚಳಿಗಾಲದ ನೆವದಲ್ಲಾದರೂ ಕ್ಯಾಬೆಜ್‌ ತಿನ್ನಿ.

ಅಡುಗೆಯೂ ಸರಳ

ಎಲೆಕೋಸಿನಲ್ಲಿ ಬಗೆಬಗೆಯ ಅಡುಗೆಗಳನ್ನು ಮಾಡಬಹುದು. ಹಸಿಯಾದ ಸಲಾಡ್‌ನಿಂದ ಹಿಡಿದು, ಚಳಿಗೆ ಬಿಸಿಯಾದ ಸೂಪ್‌, ರುಚಿಕಟ್ಟಾದ ಹಬೆಯಲ್ಲಿ ಬೇಯಿಸಿದ ಮೊಮೊ, ಸ್ಪ್ರಿಂಗ್‌ರೋಲ್‌, ಸಾಂಬಾರ್‌, ಪಲ್ಯ, ಪಲಾವ್‌, ಉತ್ತಪ್ಪ, ಪರಾಟಾ ಮುಂತಾದ ಯಾವುದೇ ಅಡುಗೆಗೂ ಇತರ ತರಕಾರಿಗಳ ಜೊತೆಗೆ ಹೊಂದಿಕೊಳ್ಳಬಲ್ಲದು. ಹಾಗಾಗಿ ಹೆಚ್ಚು ಎಲೆಕೋಸು ತಿನ್ನಿ, ಆರೋಗ್ಯವಾಗಿರಿ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version