Site icon Vistara News

ಕ್ಯಾನ್ಸರ್‌ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ

chhavi mittal

ಇತ್ತೀಚಿನ ಬದುಕಿನಲ್ಲಿ ಯಾರೆಂದರವರಿಗೆ ಧುತ್ತನೆ ಎದುರಾಗುತ್ತಿರುವ ಕಂಟಕ ಕ್ಯಾನ್ಸರ್.‌ ಆದರೆ ಈ ಮಾರಿಯನ್ನು ಮಣಿಸಿ, ಬದುಕಿನತ್ತ ನಡೆದವರ ಸಂಖ್ಯೆಯೂ ದೊಡ್ಡದು. ನಟಿ, ನಿರ್ಮಾಪಕಿ ಛವಿ ಮಿತ್ತಲ್‌ ಸಹ ಇದೇ ಸಾಲಿಗೆ ಸೇರಿದವರು. ಸ್ತನ ಕ್ಯಾನ್ಸರ್‌ನಿಂದ ಮುಕ್ತರಾಗಿ, ಬದುಕಿನ ಎಂದಿನ ಲಯಕ್ಕೆ ಮರಳಿರುವ ಅವರು, ತಮ್ಮ ಆಹಾರಪದ್ಧತಿಯಲ್ಲಿ ಮಾಡಿಕೊಂಡಿರುವ ಆರೋಗ್ಯಪೂರ್ಣ ಬದಲಾವಣೆಗಳ ಬಗ್ಗೆ ಎಲ್ಲರ ಗಮನ ಸೆಳೆಯಲು ಯತ್ನಿಸಿದ್ದಾರೆ. ಕ್ಯಾನ್ಸರ್‌ ಮಣಿಸಿದವರಿಗೆ ಮಾತ್ರವಲ್ಲದೆ, ಆರೋಗ್ಯಪೂರ್ಣ ಬದುಕು ಬಯಸುವ ಯಾರಿಗೂ ಮಾರ್ಗದರ್ಶನ ನೀಡುವಂಥ ಸೂತ್ರಗಳಿವು.

ʻನನ್ನ ಆಹಾರಸೂತ್ರ ಸರಳವಾಗಿದೆ. ಹೆಚ್ಚಾಗಿ ಸಸ್ಯಾಹಾರಕ್ಕೆ ನನ್ನ ಆದ್ಯತೆ. ಹುಳಿಯ ರುಚಿ ಹೆಚ್ಚಾಗಿರುವ ಅಥವಾ ಆಸಿಡಿಟಿ ತರಿಸುವಂಥ ಆಹಾರಗಳಿಂದ ದೂರವಿದ್ದೇನೆ. ಸಕ್ಕರೆ ಮತ್ತು ಸಂಸ್ಕರಿತ ಆಹಾರವನ್ನು ಸಂಪೂರ್ಣವಾಗಿ ವರ್ಜಿಸಿದ್ದೇನೆ. ಹಳೆಯ, ಉಳಿಕೆಯ ಆಹಾರದ ಬದಲಿಗೆ ತಾಜಾ ಆಹಾರಗಳಿಗೆ ನನ್ನ ಆದ್ಯತೆ. ಪ್ರಯಾಣಿಸುವಾಗ ಮನೆಯ ಆಹಾರ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ಆಗದಿದ್ದರೆ, ಸ್ವಚ್ಛ ರೆಸ್ಟೋರೆಂಟ್‌ಗಳಲ್ಲಿ ಮಾತ್ರವೇ ಆಹಾರ ಸೇವಿಸುತ್ತೇನೆ. ನಮ್ಮ ಹಾಗಿನ ಆರೋಗ್ಯದವರು ತರಕಾರಿ ಮತ್ತು ಹಣ್ಣುಗಳನ್ನು ಹಸಿಯಾಗಿ ತಿನ್ನುವುದು ಕೆಲವೊಮ್ಮೆ ಸೋಂಕುಗಳಿಗೆ ಕಾರಣವಾಗಬಹುದು. ಅದಕ್ಕಾಗಿ ಅವುಗಳನ್ನು ಸ್ವಲ್ಪವಾದರೂ ಬಿಸಿ ಮಾಡಿಯೇ ತಿನ್ನುತ್ತೇನೆ. ನಡುವೆ ಸ್ವಲ್ಪ ಉಪವಾಸಕ್ಕೂ ನನ್ನ ಆಹಾರದಲ್ಲಿ ಜಾಗವಿದೆ. ಇದು ಸ್ತನ ಕ್ಯಾನ್ಸರ್‌ನಿಂದ ಮುಕ್ತರಾದವರಿಗೆ ಮಧ್ಯಂತರದ ಉಪವಾಸ ಒಳ್ಳೆಯದು ಎಂದು ಅಧ್ಯಯನಗಳು ಹೇಳುತ್ತವೆʼ ಎಂದು ತಮ್ಮ ಆಹಾರದ ಬಗ್ಗೆ ಹೇಳುತ್ತಾರೆ ಮಿತ್ತಲ್.‌

ಇದನ್ನೂ ಓದಿ | ರಾತ್ರಿ ಬೆಳಗಾಗೋದರೊಳಗೆ ಬದುಕೇ ಬದಲಾಗಬಹುದು| ಸ್ತನ ಕ್ಯಾನ್ಸರ್‌ ಅನುಭವ ಬಿಚ್ಚಿಟ್ಟ ಛವಿ ಮಿತ್ತಲ್‌

ಕೀಮೊ ತೆಗೆದುಕೊಳ್ಳುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಸರಿಯಾದ ಆಹಾರದಿಂದ ಈ ಚಿಕಿತ್ಸೆಯ ಕ್ರೂರ ಅಡ್ಡ ಪರಿಣಾಮಗಳಿಂದ ಸುಧಾರಿಸಿಕೊಳ್ಳಲು ಸಾಧ್ಯ. ಈ ಸಂದರ್ಭದಲ್ಲಿ ಆಹಾರವೇ ನಮ್ಮ ಸಂಜೀವಿನಿ. ಆ ದಿನಗಳಲ್ಲಿ ಆರೋಗ್ಯಪೂರ್ಣ ಕೊಬ್ಬಿನ ಆಹಾರ, ಪ್ರೊಟೀನ್‌ ಮತ್ತು ನಾರಿನಂಶ ಹೆಚ್ಚಿರುವ ಆಹಾರಗಳಿಗೆ ಆದ್ಯತೆ ನೀಡಬೇಕಿತ್ತು. ಕೆಲವೊಮ್ಮೆ ಬಾಯಲ್ಲೆಲ್ಲಾ ಹುಣ್ಣಾಗಿ, ಹೊಟ್ಟೆ ತೊಳೆಸಿ ವಾಂತಿಯಾಗುವ ಹಾಗಾಗುತ್ತಿತ್ತು. ಆಗೆಲ್ಲಾ ಕೋಕಮ್‌ ನನ್ನ ನೆರವಿಗೆ ಬರುತ್ತಿತ್ತು. ಆಸಿಡಿಟಿ ಶಮನ ಮಾಡುವ ಅದನ್ನು ಈಗಲೂ ಉಪಯೋಗಿಸುತ್ತೇನೆ ಎನ್ನುತ್ತಾರೆ ಅವರು.

ಪ್ರೊಟೀನ್‌ಗಾಗಿ ಸ್ವಾಭಾವಿಕ ಆಹಾರಮೂಲಗಳೇ ಉತ್ತಮ ಎನ್ನುವುದು ಛವಿ ಅಂಬೋಣ. ʻಖರ್ಜೂರ, ನಟ್‌ಗಳು, ಅಗಸೆ ಬೀಜ, ಎಳ್ಳು ಮುಂತಾದವುಗಳನ್ನು ಉಪಯೋಗಿಸುತ್ತೇನೆ. ಇದಲ್ಲದೆ, ಗ್ರೀಕ್‌ ಯೋಗರ್ಟ್‌, ಬೇಯಿಸಿದ ಮೊಟ್ಟೆ, ಪನೀರ್‌, ಬ್ರೊಕೊಲಿ, ಮೀನು ಸಹ ಬಳಸುತ್ತೇನೆ. ಇಡೀ ಧಾನ್ಯಗಳು ಮತ್ತು ನಾನಾ ರೀತಿಯ ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ, ಬೇಯಿಸಿ ತಿನ್ನುತ್ತೇನೆ. ನಮ್ಮ ರೋಗ ನಿರೋಧಕತೆಯನ್ನು ಹೆಚ್ಚಿಸಲೂ ಇವು ಸಹಕಾರಿʼ ಎಂಬುದು ಆಕೆಯ ವಿವರಣೆ. ಹಸುವಿನ ಹಾಲಿನ ಬಳಕೆಯನ್ನು ಆಕೆ ವರ್ಜಿಸಿದ್ದಾರಂತೆ. ಹಾಲಿಗಾಗಿ ನಾನಾ ರೀತಿಯ ಔಷಧಿ, ರಾಸಾಯನಿಕಗಳನ್ನು ಹಸುಗಳ ಮೇಲೆ ಪ್ರಯೋಗಿಸುವುದರಿಂದ, ಅವು ಉಪಯೋಗಿಸುವವರ ದೇಹವನ್ನೂ ಸೇರುತ್ತವೆ ಎಂಬ ಕಾರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇದಲ್ಲದೆ, ಅವು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದೂ ಕಾರಣವಂತೆ. ಇನ್ನೊಂದು ಮುಖ್ಯವಾದ ಅಂಶವೆಂದರೆ, ಹಸಿವಾಗದೆ ಅವರೆಂದೂ ತಿನ್ನುವುದಿಲ್ಲ. ಅತಿಯಾಗಿ ತಿನ್ನುವುದೂ ಆರೋಗ್ಯಕ್ಕೆ ಹಾನಿಕರ ಎಂಬ ಅಂಶವನ್ನವರು ಮನಗಂಡಿದ್ದಾರೆ.

ಇದನ್ನೂ ಓದಿ | ಛವಿ ಮಿತ್ತಲ್ ಗೆ ಬ್ರೆಸ್ಟ್‌ ಕ್ಯಾನ್ಸರ್‌: ಪಾಸಿಟಿವ್‌ ಪೋಸ್ಟ್‌ ಹಂಚಿಕೊಂಡ ನಟಿ

Exit mobile version