Site icon Vistara News

Cashew Benefits: ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲ ಎನ್ನುವುದು ನಿಜವೆ?

cashew benefits

ಸಿಹಿ ತಿಂಡಿಗಳಿಗೂ ಒಗ್ಗರಣೆ ಬೇಕಾಗುತ್ತದೆ- ಅಂದರೆ ಬೆಳ್ಳುಳ್ಳಿ, ಇಂಗು ಇತ್ಯಾದಿಗಳದ್ದಲ್ಲ. ಸಾರಿಗೆ ಹಾಕುವ ಒಗ್ಗರಣೆಗೂ ಪಾಯಸಕ್ಕೆ ಹಾಕುವ ಒಗ್ಗರಣೆಗೂ ವ್ಯತ್ಯಾಸವಿದೆಯಲ್ಲ. ಹಾಗೆ ಪಾಯಸಕ್ಕೆ ಹಾಕುವ ಒಗ್ಗರಣೆಯ ಮುಖ್ಯ ವಸ್ತುಗಳಲ್ಲಿ ಒಂದು ಗೋಡಂಬಿ ಅಥವಾ (cashew benefits) ಗೇರುಬೀಜ. ಇದೇನು ಪಾಯಸಕ್ಕೆ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ಸಿಹಿ ಖಾದ್ಯಗಳಲ್ಲಿ, ಖಾರದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವಂಥದ್ದು. ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.

ಗೋಡಂಬಿಗಳು ತೂಕ ಹೆಚ್ಚಿಸುತ್ತವೆಯೇ?

ಹಾಗೇನಿಲ್ಲ. ಆದರೆ ಇದು ಹೆಚ್ಚಿನ ಕ್ಯಾಲರಿ ಹೊಂದಿರುವ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಸುಮಾರು 100 ಗ್ರಾಂ ಗೋಡಂಬಿಯಲ್ಲಿ ಸುಮಾರು 550 ಕ್ಯಾಲರಿಗಳಿರುತ್ತವೆ. ಹಾಗಾಗಿ ಗೋಡಂಬಿ ಮಾತ್ರವೇ ಅಲ್ಲ, ಎಲ್ಲಾ ಬೀಜಗಳೂ ಕ್ಯಾಲರಿಯಲ್ಲಿ ಹೆಚ್ಚು ತೂಗುವುದರಿಂದ ಅವುಗಳನ್ನು ಮಿತವಾದ ಪ್ರಮಾಣದಲ್ಲಿ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.

ಹಾಗೆ ನೋಡಿದರೆ, ಲೆಕ್ಕಾಚಾರದಲ್ಲಿ ಗೋಡಂಬಿ ತಿನ್ನುವುದರಿಂದ ತೂಕ ಇಳಿಸಲೂ ಸಾಧ್ಯವಿದೆ. ಕಾರಣ, ಇದರಲ್ಲಿರುವ ಮೊನೊ ಅನ್‌ಸ್ಯಾಚುರೇಟೆಡ್‌ ಕೊಬ್ಬಿನಿಂದಾಗಿ ಆರೋಗ್ಯಕ್ಕೆ ಲಾಭವಿದ್ದು, ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಒಟ್ಟಾರೆ ಆರೋಗ್ಯದ ಮೇಲೆ ಪೂರಕ ಪರಿಣಾಮ ಬೀರುತ್ತದೆ.

ಗೋಡಂಬಿ ಸೇವನೆಯಿಂದ ಕೊಲೆಸ್ಟ್ರಾಲ್‌ ನಿಯಂತ್ರಣ ಕಷ್ಟವೇ?

ಇದೂ ಪೂರ್ಣ ನಿಜವಲ್ಲ. ಸಾಮಾನ್ಯವಾಗಿ ಸಸ್ಯಜನ್ಯ ಆಹಾರಗಳಿಂದ ಕೊಲೆಸ್ಟ್ರಾಲ್‌ ಹೆಚ್ಚುವುದಿಲ್ಲ; ಇದೇನಿದ್ದರೂ ಪ್ರಾಣಿಜನ್ಯ ಆಹಾರಗಳಿಂದಲೇ ಹೆಚ್ಚು. ಆದರೊಂದು, ಗೋಡಂಬಿಯಲ್ಲಿರುವ ಫೈಟೊಸ್ಟೆರಾಲ್‌ಗಳ ರಾಸಾಯನಿಕ ವಿನ್ಯಾಸ ಕೊಲೆಸ್ಟ್ರಾಲ್‌ನಂತೆಯೇ ಇದೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದಿನಕ್ಕೆ 25 ಗ್ರಾಂ ಮೀರದಂತೆ ಗೋಡಂಬಿ ತಿನ್ನುವುದರಿಂದ, ದೇಹದಲ್ಲಿ ಎಲ್‌ಡಿಎಲ್‌ ಕಡಿಮೆ ಮಾಡಿ, ಎಚ್‌ಡಿಎಲ್‌ ಏರಿಸುವ ಕೆಲಸಕ್ಕೆ ಸಹಾಯ ದೊರೆಯುತ್ತದೆ.

ಇದರಿಂದ ಮಧುಮೇಹ ಹೆಚ್ಚುವುದೇ?

ಈ ಆರೋಪದಲ್ಲಿಯೂ ಯಾವುದೇ ಹುರುಳಿಲ್ಲ. ಗೋಡಂಬಿಯಲ್ಲಿರುವ ಉತ್ತಮ ಗುಣಮಟ್ಟದ ಕೊಬ್ಬು, ಪ್ರೊಟೀನ್‌ ಮತ್ತು ನಾರಿನಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವು ನೀಡುತ್ತವೆ. ಗೋಡಂಬಿಯ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆಯೇ ಇದೆ (25). ಅಂದರೆ, ಇದು ದೇಹದಲ್ಲಿ ನಿಧಾನಕ್ಕೆ ಹೀರಲ್ಪಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್‌ ಏರಿಕೆ ಮಾಡುವುದಿಲ್ಲ. ಆದರೆ ಮಧುಮೇಹಿಗಳಿಗೆ ಇಂತಹ ಹೆಚ್ಚು ಕ್ಯಾಲರಿಯ ಆಹಾರ ತಿನ್ನುವಾಗ ಹೆಚ್ಚಿನ ಎಚ್ಚರಿಕೆ ಮತ್ತು ನಿಯಂತ್ರಣದ ಅಗತ್ಯವಿದೆ.

ಗೋಡಂಬಿ ತಿನ್ನುವುದರಿಂದ ಮುಖದ ಮೇಲೆ ಮೊಡವೆ ಹೆಚ್ಚುವುದೇ?

ಇದಕ್ಕೂ ವೈಜ್ಞಾನಿಕವಾಗಿ ಯಾವುದೇ ಆಧಾರಗಳಿಲ್ಲ. ಹಾಗೆ ನೋಡಿದರೆ, ಗೋಡಂಬಿಯಲ್ಲಿರುವ ಸೆಲೆನಿಯಂ ಮತ್ತು ವಿಟಮಿನ್‌ ಸಿ ಅಂಶಗಳು ಚರ್ಮದ ಆರೋಗ್ಯಕ್ಕೆ ಲಾಭದಾಯಕವಾದಂಥವು. ಇಷ್ಟು ಮಾತ್ರವಲ್ಲ, ಗೇರುಬೀಜದಲ್ಲಿರುವ ಒಳ್ಳೆಯ ಕೊಬ್ಬಿನಿಂದಾಗಿ ದೇಹದಲ್ಲಿ ಉರಿಯೂತ ಕಡಿಮೆಯಾಗಲು ಸಾಧ್ಯವಿದೆ. ಉರಿಯೂತದ ಪ್ರಮಾಣ ಹೆಚ್ಚುವುದು ಸಹ ಚರ್ಮದ ಕಿರಿಕಿರಿ, ಮೊಡವೆಯಂಥ ಸಮಸ್ಯೆಗಳಿಗೆ ಕಾರಣವಾಗಬಹುದು.

ಆದಾಗ್ಯೂ, ಪ್ರತಿಯೊಬ್ಬರ ದೇಹವೂ ಅನನ್ಯ. ಎಲ್ಲರಿಗೂ ಒಂದೇ ತತ್ವವನ್ನು ಹೇರಲು ಸಾಧ್ಯವಿಲ್ಲ. ಹಾಗಾಗಿ ಬೀಜಗಳ ಅಲರ್ಜಿ ಇರುವವರಿಗೆ ಗೋಡಂಬಿ ಸೇವನೆ ಸಮಸ್ಯೆ ತರಬಹುದು. ಉಸಿರಾಟ ತೊಂದರೆ, ಚರ್ಮದ ಕಿರಿಕಿರಿ ಇಂಥವೆಲ್ಲಾ ಅಲರ್ಜಿಯಿಂದಲೂ ಪ್ರಚೋದನೆ ಪಡೆಯಬಹುದು. ಯಾವ ಆಹಾರ ನಮಗೆ ಹಿತ ಎನ್ನುವುದನ್ನು ನಾವೇ ಕಂಡುಕೊಳ್ಳಬೇಕು. ಜೊತೆಗೆ, ಸೇವನೆಯಲ್ಲಿ ಮಿತಿಮೀರದಂತೆ ಎಚ್ಚರಿಕೆಯೂ ಬೇಕು.

ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!

Exit mobile version