Site icon Vistara News

Year Ender 2023: ಈ ವರ್ಷ ಹೆಚ್ಚು ಜನಪ್ರಿಯವಾದ ಸಿರಿಧಾನ್ಯಗಳಿವು

Cereals

ಒಂದಾನೊಂದು ಕಾಲದಲ್ಲಿ ಜನರ ಮುಖ್ಯ ಆಹಾರವಾಗಿದ್ದ ಕಿರುಧಾನ್ಯಗಳು ಕಾಲಾನಂತರದಲ್ಲಿ ಅಕ್ಕಿ, ಗೋಧಿಯಂಥ ಧಾನ್ಯಗಳ ಭರಾಟೆಯಲ್ಲಿ ಮರೆಯಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳ ಮಹತ್ವ ಜನರ ಅರಿವಿಗೆ ಬಂದಿರುವುದರಿಂದ, ಈ ತೃಣ ಧಾನ್ಯಗಳ ಸದ್ಗುಣಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, 2023ರಲ್ಲಿ (Year Ender 2023) ಇದಕ್ಕೆ ಹೆಚ್ಚಿನ ಬಲ ದೊರೆತಿದೆ. ಅದರಲ್ಲೂ 2023ನೇ (Year Ender 2023) ಸಾಲನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ ಎಂದು ವಿಶ್ವಸಂಸ್ಥೆಯೇ ಘೋಷಿಸಿದ್ದರಿಂದ, ಈ ಧಾನ್ಯಗಳ ಸಿರಿ ಇನ್ನಷ್ಟು ಹೆಚ್ಚಿದೆ ಈ ವರ್ಷ. ಏನಿವುಗಳ ಹಿರಿಮೆ? 2023ರಲ್ಲಿ (Year Ender 2023) ಹೆಚ್ಚು ಜನಪ್ರಿಯವಾದ ಸಿರಿಧಾನ್ಯಗಳು ಯಾವುವು?

ಏಕೆ ಶ್ರೇಷ್ಠ?

ಫಿಟ್‌ನೆಸ್‌ ಪ್ರಿಯರಿಗೆ, ತೂಕ ಇಳಿಸುವವರಿಗೆ, ಆರೋಗ್ಯದ ಕಾಳಜಿ ಹೊಂದಿದವರಿಗೆ, ಮಧುಮೇಹಿಗಳಿಗೆ- ಹೀಗೆ ಹಲವು ರೀತಿಯ ಜನರಿಗೆ ಇದು ಹೊಂದಿಕೆಯಾಗುವಂಥದ್ದು. ಉತ್ಕೃಷ್ಟ ಪ್ರೊಟೀನ್‌ಗಳು, ಭರಪೂರ ನಾರು, ಖನಿಜಗಳು ಮತ್ತು ಬಹಳಷ್ಟು ಸೂಕ್ಷ್ಮ ಪೋಷಕಾಂಶಗಳನ್ನು ಈ ಧಾನ್ಯಗಳು ಹೊಂದಿವೆ. ಅತಿ ಕಡಿಮೆ ಮಳೆ, ಹವಾಮಾನ ಬದಲಾವಣೆ, ತೀವ್ರ ಬಿಸಿಲು, ಒಣ ಭೂಮಿಯಲ್ಲೂ ಉತ್ತಮ ಇಳುವರಿಯನ್ನು ನೀಡುವಂಥ ಬೆಳೆಗಳಿವು. ಹೀಗೆ ರೈತರ, ಬಳಕೆದಾರರ ಮುಂತಾದ ಎಲ್ಲರ ದೃಷ್ಟಿಯಿಂದಲೂ ಇವೆಲ್ಲ ಯೋಗ್ಯವಾದ ಬೆಳೆಗಳು.

ಗ್ಲೂಟೆನ್‌ ರಹಿತವಾದ ಈ ಧಾನ್ಯಗಳಲ್ಲಿ ಕ್ಯಾಲ್ಶಿಯಂ, ಕಬ್ಬಿಣ ಸೇರಿದಂತೆ ಹಲವು ರೀತಿಯ ಖನಿಜಗಳಿವೆ. ಇವುಗಳ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದ್ದು ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ. ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಈ ಧಾನ್ಯಗಳು ಹಲವು ರೀತಿಯ ರೋಗಗಳನ್ನು ದೂರ ಇರಿಸುವಲ್ಲಿ ನೆರವಾಗುತ್ತವೆ. ಈ ಧಾನ್ಯಗಳನ್ನು ಇಡ್ಲಿ, ದೋಸೆ, ಉಪ್ಪಿಟ್ಟು, ಪಾಯಸ, ಖೀರು ಮುಂತಾದ ಎಲ್ಲವನ್ನೂ ಮಾಡಲು ಬಳಸಬಹುದು. ಅಕ್ಕಿಯಿಂದ ಮಾಡಲಾಗುವ ಬಹುತೇಕ ಎಲ್ಲ ಪಾಕಗಳನ್ನು ಇವುಗಳಲ್ಲೂ ತಯಾರಿಸಬಹುದು.

2023ನೇ ಸಾಲಿನಲ್ಲಿ ಹೆಚ್ಚು ಬಳಕೆಯಾದವು

ತಿನ್ನುವುದಕ್ಕೆ ರುಚಿಯಾಗಿರುವ ಹಾರಕ, ಮಧುಮೇಹಿಗಳಿಗೆ ಅತಿ ಉಪಯುಕ್ತವಾದ ಧಾನ್ಯ. ಪ್ರೊಟೀನ್‌ ಮತ್ತು ನಾರುಭರಪೂರ ಇದ್ದು, ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಇದರಿಂದ ಅಡುಗೆ ಮಾಡುವುದೂ ಕಷ್ಟವಲ್ಲ; ಥೇಟ್‌ ಅನ್ನದಂತೆಯೇ ಉಪಯೋಗಿಸಬಹುದು.

ನವಣೆ

ಮಧುಮೇಹ, ಟ್ರೈಗ್ಲಿಸರೈಡ್‌, ಕೊಲೆಸ್ಟ್ರಾಲ್‌ನಂಥ ಚಯಾಪಚಯದ ರೋಗಗಳನ್ನು ನಿಯಂತ್ರಿಸುವಲ್ಲಿ ಇದುಪರಿಣಾಮಕಾರಿ ಎನ್ನುತ್ತವೆ ಅ‍ಧ್ಯಯನಗಳು. ಅದರಲ್ಲೂ ಅಕ್ಕಿ ಮತ್ತು ಗೋಧಿಯ ಬಳಕೆ ಕಡಿಮೆ ಮಾಡಿ ನವಣೆಯನ್ನು ಹೆಚ್ಚು ತಿಂದರೆ ಟೈಪ್‌-2 ಮಧುಮೇಹಿಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.

ಸಜ್ಜೆ

ಈ ಧಾನ್ಯ ಹಲವು ಪ್ರಾಂತ್ಯಗಳಲ್ಲಿ ಬಳಕೆಯಲ್ಲಿದೆ. ಇತರ ಸಿರಿ ಧಾನ್ಯಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಕೊಂಚದೊಡ್ಡದು. ಪ್ರೊಟೀನ್‌ ಮತ್ತು ನಾರಿನಂಶ ವಿಫುಲವಾಗಿರುವ ಇದರ ಬಳಕೆಯಿಂದ ಮಧುಮೇಹ ದೂರ ಮಾಡಬಹುದು ಎನ್ನುತ್ತವೆ ಅ‍ಧ್ಯಯನಗಳು. ನಿಧಾನವಾಗಿ ಜೀರ್ಣವಾಗುವ ಇವು ರಕ್ತ ಸೇರುವುದು ಸಹ ನಿಧಾನವೇ.

ರಾಗಿ

ಉಳಿದೆಲ್ಲಾ ಕಿರು ಧಾನ್ಯಗಳಿಗೆ ಹೋಲಿಸಿದರೆ ಮೊದಲಿನಿಂದಲೂ ಬಳಕೆಯಲ್ಲಿರುವ ಧಾನ್ಯವಿದು. ಕಬ್ಬಿಣ, ಕ್ಯಾಲ್ಶಿಯಂಸೇರಿದಂತೆ ವಿವಿಧ ಖನಿಜಗಳು ಇದರಲ್ಲಿ ಸಾಂದ್ರವಾಗಿವೆ. ರಾಗಿ ತಿಂದವ ನಿರೋಗಿ ಎಂಬ ಮಾತೇ ಇದರ ಗುಣಗಳಿಗೆ ನೀಡಲಾದ ಪ್ರಮಾಣಪತ್ರ.

ಜೋಳ

ಕಬ್ಬಿಣ, ಪ್ರೊಟೀನ್‌, ನಾರಿನಂಥ ಸತ್ವಗಳಿಂದ ಇದು ಭರಿತವಾಗಿದೆ. ಕೊಲೆಸ್ಟ್ರಾಲ್‌ ಕಡಿಮೆ ಮಾಡುವಲ್ಲಿ ಇದುಉಪಯುಕ್ತ ಎನ್ನುತ್ತವೆ ಅಧ್ಯಯನಗಳು. ಗೋಧಿಯ ಅಲರ್ಜಿ ಇರುವವರಿಗೆಲ್ಲ ಇಂಥ ಧಾನ್ಯಗಳು ಅತ್ಯಂತ ಆರೋಗ್ಯಕರವಾದ ಪರ್ಯಾಯಗಳು.

ಸಾಮೆ

ಕಿರು ಧಾನ್ಯಗಳಲ್ಲೇ ಸಣ್ಣ ಗಾತ್ರದ್ದು ಬಹುತೇಕ ಇದೇ ಇರಬಹುದು. ವಿಟಮಿನ್‌ ಬಿ, ಕ್ಯಾಲ್ಶಿಯಂ, ಕಬ್ಬಿಣ, ಸತು,ಪೊಟಾಶಿಯಂನಂಥ ಅಗತ್ಯ ಪೋಷಕಾಂಶಗಳಿಂದ ಕೂಡಿದೆ ಈ ಧಾನ್ಯ. ಅಡುಗೆಯಲ್ಲಿ ಯಾವುದೇ ಪಾಕಕ್ಕೂ ಹೊಂದಿಕೊಳ್ಳಬಲ್ಲ ಧಾನ್ಯವಿದು.

Unhulled Barnyard Millet Seeds in Wood Spoon

ಊದಲು

ಹೆಚ್ಚಿನ ಪ್ರಮಾಣದ ನಾರಿನಿಂದ ಕೂಡಿದ ಈ ಧಾನ್ಯವು ಮಲಬದ್ಧತೆ ನಿವಾರಣೆಗೆ ಮತ್ತು ತೂಕ ಇಳಿಕೆಗೆ ಸಹಕಾರಿ.ಕ್ಯಾಲ್ಶಿಯಂ ಮತ್ತು ಫಾಸ್ಫರಸ್‌ನಂಥ ಖನಿಜಗಳಿರುವುದರಿಂದ ಮೂಳೆಗಳ ಬಲವರ್ಧನೆಗೂ ನೆರವು ನೀಡುತ್ತದೆ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version