Site icon Vistara News

Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Chandipura Virus

Chandipura Virus

ಗಾಂಧಿನಗರ: ರಾಜ್ಯ ಸೇರಿದಂತೆ ದೇಶದ ಕೆಲವೆಡೆ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಇತ್ತ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಹಾವಳಿ ಕಂಡು ಬಂದಿದೆ. ಈ ಮಧ್ಯೆ ಗುಜರಾತ್‌ನಲ್ಲಿ ಚಾಂದಿಪುರ ವೈರಸ್ (Chandipura Virus) ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ.

ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಎಲ್ಲ ಸೋಂಕಿತರ ರಕ್ತದ ಮಾದರಿಗಳನ್ನು ದೃಢೀಕರಣಕ್ಕಾಗಿ ಪುಣೆಯ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (National Institute of Virology)ಗೆ ಕಳುಹಿಸಲಾಗಿದೆ.

ರೋಗ ಲಕ್ಷಣ

ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

ಯಾಕಾಗಿ ಈ ಹೆಸರು?

ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಹೀಗಾಗಿ ಇದನ್ನು ಚಾಂದಿಪುರ ವೈರಸ್‌ ಎಂದು ಕರೆಯುತ್ತಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ. ಈ ವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲದ ಕಾರಣ ಇದನ್ನು ಇನ್ನಷ್ಟು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಒಬ್ಬರಿಂದ ಒಬ್ಬರಿಗೆ ಹರಡುತ್ತಾ?

ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣ, ಉಣ್ಣೆಗಳಿಂದ ಈ ಸೋಂಕು ಹರಡುತ್ತದೆ. ಶುಚಿತ್ವ ಕೊರತೆಯೇ ಮುಖ್ಯ ಕಾರಣ. ಸದ್ಯ ಈ ರೀತಿಯ ಅನೇಕ ಪ್ರಕರಣಗಳು ಗುಜರಾತ್‌ನಲ್ಲಿ ಕಂಡುಬಂದಿವೆ. ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಜತೆಗೆ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿಯೂ ಸೋಂಕು ಬಾಧಿಸಿರುವುದು ವರದಿಯಾಗಿದೆ. ಶಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರೋಗದಿಂದ ಪಾರಾಗುವುದು ಹೇಗೆ?

ಚಾಂದಿಪುರ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೈರ್ಮಲ್ಯ ಕಾಪಾಡುವುದು ಅಗತ್ಯ. ಸೊಳ್ಳೆ, ನೊಣ ಮತ್ತು ಕೀಟಗಳು ಕಡಿಯದಂತೆ ಎಚ್ಚರ ವಹಿಸಿ. ಮಕ್ಕಳಿಗೆ ರಾತ್ರಿ ಪೂರ್ಣ ತೋಳಿನ ಬಟ್ಟೆಗಳನ್ನು ತೊಡಿಸಿ. ಸೊಳ್ಳೆಗಳು ಮತ್ತು ಕೀಟಗಳಿಂದ ತಪ್ಪಿಸಿಕೊಳ್ಳಲು ಬಲೆಗಳನ್ನು ಬಳಸಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸಲು ಬಿಡಬೇಡಿ. ಮನೆಯ ಸುತ್ತಮುತ್ತ ನೀಡು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಸಾಕು ಪ್ರಾಣಿಗಳ ಬಳಿಗೆ ತೆರಳುವಾಗ ಎಚ್ಚರವಹಿಸಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Exit mobile version