Site icon Vistara News

Collagen foods | ಚರ್ಮದ ಆರೋಗ್ಯದ ಕೀಲಿಕೈ ಕೊಲಾಜೆನ್‌: ಈ ಐದು ಆಹಾರಗಳಲ್ಲಿದೆ ನೋಡಿ

Collagen foods

ಚರ್ಮದ ವಿಚಾರಕ್ಕೆ ಬಂದರೆ ಬಹುತೇಕ ಎಲ್ಲರೂ ಹೆಚ್ಚು ಆಸ್ಥೆ, ಕಾಳಜಿ ವಹಿಸುತ್ತಾರೆ. ಅದರಲ್ಲೂ ಮುಖದ ಚರ್ಮಕ್ಕೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ. ಮುಖದ ಚರ್ಮಕ್ಕೆ ಏನೂ ಆಗದಿರಲಿ ಎಂದು ಅದರ ಕಾಳಜಿ ಎಲ್ಲರೂ ಮಾಡುವುದುದ ಸಹಜ. ನೀರು ಕುಡಿಯುವುದರಿಂದ ಹಿಡಿಡದು, ಮುಖಕ್ಕೆ ಹಚ್ಚುವ ಕ್ರೀಮು ಸೀರಮ್ಮುಗಳವರೆಗೆ ಎಲ್ಲವೂ ಮುಖದ ಒಳಿತಿಗಾಗಿಯೇ ಎಂಬುದು ಎಲ್ಲರಿಗೂ ಗೊತ್ತಿರುವ ಸೀಕ್ರೆಟ್ಟು. ಹೀಗೆ ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಗೂ ತಿಳಿದಿರುವಂತೆ, ಕೊಲಾಜೆನ್‌ ಚರ್ಮದ ರಕ್ಷಣೆಯ ಅತೀ ಅಗತ್ಯವಾದ ಪೋಷಕಾಂಶಗಳಲ್ಲೊಂದು. ಎಲುಬು, ಕೀಲು, ಮಾಂಸಖಂಡಗಳು, ಕಾರ್ಟಿಲೇಜ್‌ಗಳಲ್ಲಿ ಕೊಲಾಜೆನ್‌ ಎಂಬ ಪ್ರೊಟೀನು ಇದ್ದೇ ಇರುತ್ತದೆ. ಷರ್ಮದ ಹೊಳಪು ಹಾಗೂ ಆರೋಗ್ಯದ ಹಿಂದಿರುವ ಗುಟ್ಟೂ ಕೂಡಾ ಇದೇ ಕೊಲಾಜೆನ್.‌ ಇಂಥ ಕೊಲಾಜೆನ್‌ ವಯಸ್ಸಾದಂತೆ ಉತ್ಪತ್ತಿಯಾಗುವುದು ಕಡಿಮೆಯಾಗುವುದರಿಂದ ಚರ್ಮಕ್ಕೆ ಇದರ ಅಗತ್ಯತೆಯನ್ನು ಪೂರೈಸುವುದೂ ಕೂಡಾ ಅತ್ಯಂತ ಅಗತ್ಯದ ಸಂಗತಿಗಳಲ್ಲೊಂದು.

ದೇಹದಲ್ಲಿ ಕೊಲಾಜೆನ್‌ ಉತ್ಪತ್ತಿಯಾಗಲು ಇತರ ಪೋಷಕಾಂಶಗಳ ಅಗತ್ಯವೂ ಇದೆ. ಅಮಿನೋ ಆಸಿಡ್‌, ಝಿಂಕ್‌, ವಿಟಮಿನ್‌ ಸಿ, ಮ್ಯಾಂಗನೀಸ್‌ ಹಾಗೂ ಕಾಪರ್‌ ಇರುವ ಆಹಾರಗಳು ಕೊಲಾಜೆನ್‌ ಉತ್ಪಾದನೆಗೆ ಹೆಚ್ಚು ಸೂಕ್ತ. ಹೀಗಾಗಿ ಇವುಗಳಿರುವ ಆಹಾರಗಳನ್ನು ನಾವು ಆಯ್ಕೆ ಮಾಡುತ್ತಾ ಬಂದಲ್ಲಿ, ನಮ್ಮ ಚರ್ಮ ಕೊಲಾಜೆನ್‌ ಅಂಶವನ್ನು ತನ್ನಲ್ಲಿ ಹೆಚ್ಚಿಸಿಕೊಂಡು ಆರೋಗ್ಯಕರವೂ, ಸುಂದರವಾಗಿಯೂ ನಳನಳಿಸುತ್ತದೆ.

ಹಾಗಾದರೆ, ಕೊಲಾಜೆನ್‌ ಉತ್ಪಾದನೆಗೆ ಸಹಾಯ ಮಾಡುವ ಯಾವ ಆಹಾರಗಳನ್ನು ಸೇವಿಸುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

೧. ಚಿಕನ್:‌ ಅತ್ಯಂತ ಹೆಚ್ಚು ಕೊಲಾಜೆನ್‌ ಇರುವ ಆಹಾರಗಳಲ್ಲಿ ಚಿಕನ್‌ ಕೂಡಾ ಒಂದು. ಇಡಿಯ ಚಿಕನ್‌ನಲ್ಲಿ ಅತ್ಯಂತ ಉತ್ತಮ ಪ್ರಮಾಣದಲ್ಲಿ ಕನೆಕ್ಟಿವ್‌ ಟಿಶ್ಯೂ ಇರುವುದರಿಂದ ಇದರ ಮೂಲಕ ಕೊಲಾಜೆನ್‌ ನಮ್ಮ ದೇಹಕ್ಕೆ ಸಿಗುತ್ತದೆ. ಹಾಗಾಗಿ, ಚರ್ಮ ನಳನಳಿಸಿ ಪಳಪಳ ಹೊಳೆಯಬೇಕೆಂದಿದ್ದರೆ ಚಿಕನ್‌ ತಿನ್ನಬಹುದು.

೨. ನೆಲ್ಲಿಕಾಯಿ: ನೆಲ್ಲಿಕಾಯಿ ಕೇವಲ ಚರ್ಮದ ಆರೋಗ್ಯ ಮಾತ್ರವಲ್ಲ. ದೇಹದ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಸೂಪರ್‌ ಫುಡ್‌. ಇದರಲ್ಲಿರುವ ವಿಟಮಿನ್‌ ಸಿಯಿಂದ ಸಾಕಷ್ಟು ಪ್ರಯೋಜನಗಳಿದ್ದು ಚರ್ಮದ ಅರೋಗ್ಯಕ್ಕೂ ಅಗತ್ಯ ಆಹಾರ. ಇದು ಪಚನಕ್ರಿಯೆಯನ್ನೂ ವೇಗವಾಗಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

೩. ಮೀನು: ಕೊಲಾಜೆನ್‌ನ ಅತ್ಯಂತ ಶ್ರೀಮಂತ ಮೂಲ ಎಂದರೆ ಅದು ಮೀನು. ಮೀನಿನಲ್ಲಿರುವಷ್ಟು ಕೊಲಾಜೆನ್‌ ಬೇರೆ ಯಾವ ಆಹಾರದ ಮೂಲಕವೂ ನಮ್ಮ ದೇಹಕ್ಕೆ ಸಿಗುವುದಿಲ್ಲ. ಇದರಲ್ಲಿರುವ ಅಮೈನೋ ಆಸಿಡ್‌ ಕೊಲಾಜೆನ್‌ ಉತ್ಪತ್ತಿಗೆ ಪ್ರೇರಣೆಯನ್ನೂ ನೀಡುವ ಮೂಲಕ ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

೪. ಹಾಲು ಹಾಗೂ ಹಾಲಿನ ಉತ್ಪನ್ನಗಳು: ಭಾರತದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಚೀಸ್‌, ಪನೀರ್‌, ಖೋವಾ,ಬೆಣ್ಣೆ ಸೇರಿದಂತೆ ಹಲವುಗಳ ಉಪಯೋಗ ಹೆಚ್ಚಿರುವುದರಿಂದ ಇದು ಎಲ್ಲರಿಗೂ ಸುಲಭವಾಗಿ ಸಿಗಬಹುದಾದ ಕೊಲಾಜೆನ್‌ ಮೂಲ. ಇದರಲ್ಲಿರುವ ಝಿಂಕ್‌ ಹಾಗೂ ಖನಿಜಾಂಶಗಳು ಕೊಲಾಜೆನ್‌ ಉತ್ಪತ್ತಿಗೆ ಸಹಾಯ ಮಾಡುತ್ತವೆ.

೫. ಬೇಳೆಕಾಳುಗಳು: ಬಾರತೀಯ ಅಡುಗೆಯಲ್ಲಿ ಅತ್ಯಂತ ಸಾಮಾನ್ಯವಿರುವ ಆಹಾರವೆಂದರೆ ಬೇಳೆ ಕಾಳುಗಳು. ಸಾಮಾನ್ಯರಿಗೆ ಸುಲಭವಾಗಿ ಕೈಗೆಟಕುವ ಈ ಬೇಳೆಕಾಳುಗಳ ನಿತ್ಯ ಬಳಕೆ ಇಲ್ಲಿದೆ. ಹಾಗಾಗಿ, ಕೇವಲ ಕೊಲಾಜೆನ್‌ ಮಾತ್ರವಲ್ಲದೆ, ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿಗೆ ಬೇಳೆಕಾಳುಗಳೇ ಮೂಲ. ಪ್ರೊಟೀನ್‌ ಹಾಗೂ ಇತರ ಬಹುತೇಕ ಎಲ್ಲ ಪೋಷಕಾಂಶಗಳೂ ಬೇಳೆಕಾಳುಗಳಿಂದ ಪಡೆಯಬಹುದು.

ಇದನ್ನೂ ಓದಿ | Food Habit | ಹಸಿದ ಹೊಟ್ಟೆಗೆ ಈ ಆಹಾರಗಳು ಬೇಡವೇ ಬೇಡ!

Exit mobile version