Site icon Vistara News

Cancer Update | ಕಣ್ಣೀರಿನಿಂದ ಕ್ಯಾನ್ಸರ್‌ ಪತ್ತೆಹಚ್ಚುವ ಲೆನ್ಸ್‌ ಅಭಿವೃದ್ಧಿ, ಹೇಗಿದರ ಕಾರ್ಯ?

Cancer Lenses

ವಾಷಿಂಗ್ಟನ್: ಹೆಚ್ಚಿನ ಸಂದರ್ಭದಲ್ಲಿ ಕ್ಯಾನ್ಸರ್‌ಅನ್ನು ಆರಂಭದಲ್ಲಿಯೇ ಪತ್ತೆಹಚ್ಚುವುದು (Cancer Update), ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗುವುದು ಕಷ್ಟವಾಗುತ್ತದೆ. ಆದರೆ, ಹೀಗೆ ಕಷ್ಟಸಾಧ್ಯವಾಗುವುದನ್ನು ಅಮೆರಿಕದ ವಿಜ್ಞಾನಿಗಳು ಸುಲಭಗೊಳಿಸಿದ್ದಾರೆ. ಕ್ಯಾನ್ಸರ್‌ ಎಂಬ ಮಾರಣಾಂತಿಕ ಕಾಯಿಲೆಯನ್ನು ಆರಂಭದಲ್ಲಿಯೇ ಕಣ್ಣೀರಿನ ಮೂಲಕ ಪತ್ತೆಹಚ್ಚಬಹುದಾದ ಕಾಂಟ್ಯಾಕ್ಟ್‌ ಲೆನ್ಸ್‌ ಅಭಿವೃದ್ಧಿಪಡಿಸಿದ್ದಾರೆ.

ಕ್ಯಾಲಿಫೋರ್ನಿಯಾದ ತೆರಾಸಕಿ ಜೀವವಿಜ್ಞಾನ ಸಂಸ್ಥೆಯ (TIBI) ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಲೆನ್ಸ್‌ಗಳು, ಮನುಷ್ಯನ ಶರೀರದಿಂದ ವಿಸರ್ಜನೆಯಾಗುವ ಬೆವರು, ಮೂತ್ರ ಹಾಗೂ ಕಣ್ಣೀರಿನಲ್ಲಿರುವ ಎಕ್ಸೋಸೋಮ್‌ಗಳಲ್ಲಿ ಕಂಡುಬರಬಹುದಾದ ಕ್ಯಾನ್ಸರ್‌ಕಾರಕ ಅಂಶಗಳನ್ನು ಪತ್ತೆಹಚ್ಚುತ್ತವೆ ಎಂದು ಹೇಳಲಾಗಿದೆ.

ಕ್ಷಿಪ್ರವಾಗಿ ಪತ್ತೆ ಸಾಧ್ಯ

ಕಣ್ಣೀರಿನಲ್ಲಿ ವಿಸರ್ಜನೆಗೊಳ್ಳುವ ಅತಿಸೂಕ್ಷ್ಮ ಎಕ್ಸೋಸೋಮ್‌ಗಳನ್ನು ಹಿಡಿದಿಡುವಂಥ ಅತ್ಯಂತ ಸೂಕ್ಷ್ಮ ಕಣಗಳನ್ನು ಈ ಮಸೂರಗಳು ಹೊಂದಿವೆ. ಇದರಿಂದಾಗಿ ಸುಲಭ ಹಾಗೂ ಕ್ಷಿಪ್ರವಾಗಿ ಕ್ಯಾನ್ಸರ್‌ ಕಾಯಿಲೆಯನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಶರೀರವು ತನಗೆ ಬೇಡದ ವಸ್ತುಗಳನ್ನು ಕೋಶಗಳ ಮೂಲಕ ಹೊರಹಾಕುವ ಎಲ್ಲ ವಸ್ತುಗಳಲ್ಲೂ ಎಕ್ಸೋಸೋಮ್‌ಗಳು ಧಾರಾಳವಾಗಿವೆ. ಆಯಾ ದೇಹದ ಜೈವಿಕ ಗುರುತುಗಳಿಂದ ಸಮೃದ್ಧವಾಗಿರುವ ಈ ಎಕ್ಸೋಸೋಮ್‌ಗಳು ದೇಹಕ್ಕೆ ಮುಂದಾಗಬಹುದಾದ ವಿಷಯಗಳ ಮುನ್ಸೂಚನೆ ನೀಡಬಲ್ಲವೆಂಬ ಸೂತ್ರವನ್ನು ವಿಜ್ಞಾನಿಗಳ ಈ ಪ್ರಯೋಗ ಆಧರಿಸಿದೆ.

ಹತ್ತು ಭಿನ್ನ ಮಾದರಿ ಪ್ರಯೋಗ

ಕ್ಯಾನ್ಸರ್‌ ಕೋಶಗಳು ಸ್ರವಿಸಿದ ದ್ರವ ಮತ್ತು ಆರೋಗ್ಯವಂತ ಕೋಶಗಳಿಂದ ಸಂಗ್ರಹಿಸಲಾದ ದ್ರವಗಳಲ್ಲಿ ಇರುವಂಥ ಎಕ್ಸೋಸೋಮ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದಕ್ಕಾಗಿ ಹತ್ತು ಭಿನ್ನ ಮಾದರಿಗಳನ್ನು ಪ್ರಯೋಗಕ್ಕೆ ಒಡ್ಡಲಾಗಿತ್ತು. ಇದರ ಫಲಿತಾಂಶದ ಆಧಾರದ ಮೇಲೆ, ಕ್ಯಾನ್ಸರ್‌ ಕುರಿತಾಗಿ ಎಕ್ಸೋಸೋಮ್‌ಗಳು ಮುನ್ಸೂಚನೆ ನೀಡಬಲ್ಲವು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ತೆರಾಸಕಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ. ಉಲ್ಬಣಾವಸ್ಥೆಗಿಂತ ಉದ್ಭವಾವಸ್ಥೆಯಲ್ಲೇ ರೋಗವನ್ನು ಪತ್ತೆ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಿದೆ.

ಇದನ್ನೂ ಓದಿ | ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

Exit mobile version