ಆಹಾರದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ (Cholesterol) ದೇಹವನ್ನು ಸೇರುವುದರಿಂದ ಆಗುವ ಅಡ್ಡ ಪರಿಣಾಮಗಳು ಇತ್ತೀಚಿನ ದಿನಗಳಲ್ಲಿ ಜಾಗೃತಿ ಮೊದಲಿಗಿಂತ ಹೆಚ್ಚಿದೆ. ಏರಿದ ಕೊಲೆಸ್ಟ್ರಾಲ್‌ನಿಂದ ಹೃದಯದ ತೊಂದರೆಗಳು, ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಕಾಡಬಹುದು. ಇವಿಷ್ಟೇ ಅಲ್ಲ, ಟೈಪ್ 2 ಮಧುಮೇಹವೂ (Type 2 Diabetes) ಬರುತ್ತದೆ ಎನ್ನುತ್ತದೆ ಇತ್ತೀಚೆಗೆ ಹೊರಬಂದ ಅಧ್ಯಯನ.
ನಾವು ತಿನ್ನುವ ಹಲವಾರು ಆಹಾರಗಳಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಉದಾ, ಮೊಟ್ಟೆ, ಕೆಂಪು ಬಣ್ಣದ ಮಾಂಸ, ಬೆಣ್ಣೆ, ಅಡುಗೆ ಎಣ್ಣೆ ಇತ್ಯಾದಿ. ಹಾಗಾಗಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಸೇರಿದರೆ, ಟೈಪ್ 2 ಮಧುಮೇಹ ಬರುವ ಸಾಧ್ಯತೆ ಎಷ್ಟಿದೆ ಎನ್ನುವುದನ್ನು ಈ ಅಧ್ಯಯನ ಪರಿಶೀಲಿಸಿತ್ತು. ಈ ಕುರಿತು ಸುಮಾರು 11 ಬೇರೆಬೇರೆ ಅಧ್ಯಯನಗಳನ್ನು ಮತ್ತು 3.5 ಲಕ್ಷ ರೋಗಿಗಳ ಮಾಹಿತಿಯನ್ನೂ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಇದರ ಪ್ರಕಾರ, ದಿನವೊಂದಕ್ಕೆ 100 ಮಿಲಿ ಗ್ರಾಂ ಕೊಲೆಸ್ಟ್ರಾಲ್ ಆಹಾರದಲ್ಲಿ ಹೆಚ್ಚಾದಂತೆ ಮಧುಮೇಹ ಬರುವ ಸಾಧ್ಯತೆ ಶೇ. 5ರಷ್ಟು ಹೆಚ್ಚುತ್ತದೆ.
ತಡೆಯುವುದು ಹೇಗೆ?
ಹಾಗಾಗಿ ಆಹಾರದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾದಂತೆ, ಮೊಟ್ಟೆಯ ಹಳದಿ ಭಾಗ, ಕೆಂಪು ಬಣ್ಣದ ಮಾಂಸ, ಬೆಣ್ಣೆ ಮತ್ತು ಕರಿದ ಹಾಗೂ ಸಂಸ್ಕರಿತ ಪದಾರ್ಥಗಳನ್ನು ಕಡಿಮೆ ಮಾಡಿದಂತೆ, ಕಾರ್ಬ್ ಪ್ರಮಾಣವೂ ಇಳಿದಂತೆ ಮಧುಮೇಹ ಬರುವ ಸಂಭವವೂ ಕಡಿಮೆಯಾಗುತ್ತದೆ. ಈಗಾಗಲೇ ಮಧುಮೇಹ ಇರುವವರಲ್ಲೂ ಆರೋಗ್ಯ ಸುಧಾರಿಸುತ್ತದೆ. ತಜ್ಞರ ಪ್ರಕಾರ, ವ್ಯಕ್ತಿಯೊಬ್ಬ ತಿನ್ನುವ ಕೊಲೆಸ್ಟ್ರಾಲ್ ಪ್ರಮಾಣ ಇಡೀ ತಿಂಗಳಿಗೆ 500 ಗ್ರಾಂ ಗಿಂತಲೂ ಕಡಿಮೆ ಇರಬೇಕು. ಹಾಗಾಗಿ ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸುವುದು ಸಲ್ಲದು. ರೈಸ್‌ಬ್ರಾನ್ ಎಣ್ಣೆಯ ಜೊತೆಗೆ ಸೂರ್ಯಕಾಂತಿಯಂಥ ಎಣ್ಣೆಗಳನ್ನು ಬಳಸಬಹುದು ಎನ್ನುತ್ತದೆ ಈ ಸಂಶೋಧನೆ.
ಸಿಕ್ಕಾಪಟ್ಟೆ ತಿನ್ನಬೇಡಿ, ತಿಂದಷ್ಟು ಆರೋಗ್ಯಕರವಾಗಿರಲಿ, ಬೆಣ್ಣೆ-ಎಣ್ಣೆಯ ಬಳಕೆ ಕಡಿಮೆ ಮಾಡಿ. ಮುಖ್ಯವಾಗಿ, ತಿಂದಷ್ಟನ್ನೂ ದೈಹಿಕ ಚಟುವಟಿಕೆಯಿಂದ ಕರಗಿಸಿ ಎನ್ನುವುದು ಆರೋಗ್ಯ ಪರಿಣತರ ಮಾತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೇಹಕ್ಕೆ ಅಗತ್ಯವಾದ ಇನ್‌ಸುಲಿನ್ ಉತ್ಪತ್ತಿಯನ್ನು ಯಕೃತ್ತು ಮಾಡದೇ ಹೋದಾಗ ಅಥವಾ ಉತ್ಪತ್ತಿಯಾದ ಇನ್‌ಸುಲಿನನ್ನು ದೇಹವೇ ಸರಿಯಾಗಿ ಬಳಸಿಕೊಳ್ಳದೇ ಹೋದಾಗ ಉಂಟಾಗುವ ಪರಿಸ್ಥಿತಿಯೇ ಮಧುಮೇಹ. ಈ ರೋಗ ಇರುವವರಲ್ಲಿ ಶೇ. 90ಕ್ಕೂ ಹೆಚ್ಚು ಮಂದಿ ಟೈಪ್ 2 ಮಧುಮೇಹದಿಂದ ನರಳುತ್ತಿದ್ದು, ದೇಹದ ತೂಕ ಹೆಚ್ಚಾಗಿದ್ದು, ಸರಿಯಾದ ವ್ಯಾಯಾಮ ಇಲ್ಲದಿರುವುದು ಅಥವಾ ದೋಷಪೂರಿತ ಜೀವನಶೈಲಿಯಿಂದ ಬರುವ ಸಮಸ್ಯೆಯಿದು. ವ್ಯಾಯಾಮ, ದೇಹದ ತೂಕದಂಥ ವಿಷಯಗಳ ಬಗ್ಗೆ ಲಕ್ಷ್ಯ ಕೊಡದಿರುವುದು, ಸಂಸ್ಕರಿತ ಆಹಾರ, ರಿಫೈನ್ ಮಾಡಿದ ಧಾನ್ಯ ಮತ್ತು ಎಣ್ಣೆ ಹಾಗೂ ಅತಿಯಾದ ಸಿಹಿ ತಿನಿಸು- ಪೇಯಗಳಿಗೆ ಕಡಿವಾಣ ಹಾಕದಿರುವುದು ಈ ಸಮಸ್ಯೆಗೆ ಆಹ್ವಾನ ನೀಡಿದಂತೆ.
ಇದನ್ನೂ ಓದಿ | Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!