ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ ಆದರೂ, ಸಾಕಷ್ಟು ಆಹಾರಗಳಲ್ಲಿ ಇಂದು ವ್ಯಾಪಕವಾಗಿ ಎಣ್ಣೆಯ ಬಳಕೆಯಾಗುತ್ತದೆ. ಅದರಲ್ಲೂ ಕೆಲವು ಅಗ್ಗದ ಎಣ್ಣೆಗಳು ಇಂದು ಸಂಸ್ಕರಿಸಿದ ಆಹಾರಗಳ ಮೂಲಕ ನಮ್ಮ ಹೊಟ್ಟೆ ಸೇರುವುದು ನಮಗೆ ಗೊತ್ತೇ ಆಗುವುದಿಲ್ಲ. ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದು ನಾವು ಅಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರಗಳು ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗು ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಬನ್ನಿ, ಯಾವೆಲ್ಲ ಎಣ್ಣೆಗಳನ್ನು ನಾವು ನಮ್ಮ ಆಹಾರದಲ್ಲಿ ನಿತ್ಯವೂ ಬಳಸಬಾರದು (Cooking oils) ಎಂಬುದನ್ನು ನೋಡೋಣ.
ಪಾಮ್ ಎಣ್ಣೆ
ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಂಸ್ಕರಿಸಿದ ಆಹಾರಗಳಲ್ಲಿ, ಪ್ಯಾಕೇಟ್‌ಗಳಲ್ಲಿ ಬಳಸುವ ಎಣ್ಣೆ ಬಹುಪಾಲು ಪಾಮ್ ಎಣ್ಣೆ ಎಂಬುದು ನಿಜವಾದರೂ, ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಕಡಿಮೆ ದರ ಹಾಗೂ ಸುಲಭವಾಗಿ ದೊರೆಯಬಲ್ಲ ಅಗ್ಗದ ಎಣ್ಣೆ ಇದಾಗಿರಿವುದರಿಂದ ಇದನ್ನು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿ ಅತ್ಯಂತ ಹೆಚ್ಚು ಸ್ಯಾಚುರೇಟೆಡ್ ಫ್ಯಾಟ್ ಇರುವುದರಿಂದ ಇದು ಎಲ್‌ಡಿಎಲ್ ಕೊಲೆಸ್ಟೆರಾಲ್ ಮಟ್ಟವನ್ನು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಕೆಟ್ಟದ್ದು.
ಸೋಯಾಬೀನ್ ಎಣ್ಣೆ
ಕಡಿಮೆ ವಾಸನೆಯುಳ್ಳ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಕವಾಗಿ ದೊರೆಯುವ ಸೋಯಾಬೀನ್ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಒಮೆಗಾ 3 ಫ್ಯಾಟಿ ಆಸಿಡ್‌ನ ಅದೇ ಗುಣಗಳನ್ನು ಇದೂ ಹೊಂದಿರುವುದರಿಂದ ಹಾಗೂ ಉರಿಯೂತವನ್ನು ಹೆಚ್ಚಿಸುವ ಸಂಭವ ಇದರಲ್ಲಿ ಹೆಚ್ಚಿರುವುದರಿಂದ ಈ ಎಣ್ಣೆಯ ಬಳಕೆ ಅತಿಯಾಗಬಾರದು. ಒಮೆಗಾ 3 ಫ್ಯಾಟಿ ಆಸಿಡ್‌ನ ಮೂಲಗಳ ಜೊತೆಗೆ ಸಮತೋಲನದಲ್ಲಿ ಇದನ್ನು ಸೇಔಇಸುವುದು ಉತ್ತಮ. ಇದರ ಅತಿಯಾದ ಬಳಕೆ ಸಲ್ಲದು.
ಹತ್ತಿಬೀಜದ ಎಣ್ಣೆ
ಹತ್ತಿಯನ್ನು ತೆಗೆದ ಮೇಳೆ ಅದರ ಬೀಜದಿಂದ ಮಾಡುವ ಎಣ್ಣೆಯಾದ ಕಾಟನ್ ಸೀಡ್ ಆಯಿಲ್ ಅಥವಾ ಹತ್ತಿಬೀಜದ ಎಣ್ಣೆ ಬಹಳಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ವ್ಯಾಪಕವಾಗಿ ಇಂದು ಬಳಕೆಯಾಗುತ್ತಿದೆ. ಇದರಲ್ಲಿಯೂ ಒಮೆಗಾ 6 ಫ್ಯಾಟಿ ಆಸಿಡ್ ಹೇರಳವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?
ವೆಜಿಟೆಬಲ್ ಆಯಿಲ್
ಈ ಸಾಮಾನ್ಯೀಕರಿಸಿದ ಹೆಸರಿಂದ ಬಹುತೇಕರು ಮೋಸಕ್ಕೆ ಒಳಗಾಗುವುದೇ ಹೆಚ್ಚು. ವೆಜಿಟೆಬಲ್ ಆಯಿಲ್ ಅಂದಾಕ್ಷಣ, ಆರೋಗ್ಯಕ್ಕೆ ಸಮಸ್ಯೆಯೇನಿಲ್ಲ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ, ಸೋಯಾಬೀನ್ ಹಾಗೂ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತದೆ. ತೀರಾ ಕೆಟ್ಟದ್ದೇನೂ ಅಲ್ಲದಿದ್ದರೂ, ರಿಫೈನ್ಡ್ ಎಣ್ಣೆ ಇದಾಗಿರುವುದರಿಂದ ಹಾಗೂ ಸಾಕಷ್ಟು ರಾಸಾಯನಿಕಗಳು ಈ ಸಂದರ್ಭ ಬಳಕೆಯಾಗಿರುವುದರಿಂದ, ಒಮೆಗಾ 6 ಫ್ಯಾಟಿ ಆಸಿಡ್ ಹೆಚ್ಚಿರುವುದರಿಂದ ಈ ಎಣ್ಣೆಯೂ ಹೆಚ್ಚು ಬಳಕೆ ಮಾಡುವುದು ಒಳ್ಳೆಯದಲ್ಲ. ನಿತ್ಯದ ಉಪಯೋಗಕ್ಕೆ ಈ ಎಣ್ಣೆ ಅಷ್ಟು ಯೋಗ್ಯವಲ್ಲ.
ಹೈಡ್ರೋಜಿನೇಟೆಡ್ ಆಯಿಲ್‌ಗಳು
ಹೈಡ್ರೋಜಿನೇಷನ್ ಎಂಬ ಪ್ರಕ್ರಿಯೆಗೆ ಒಳಪಡಿಸುವ ಎಣ್ಣೆಗಳು ಇದಾಗಿದ್ದು, ಇದರಲ್ಲಿ ದ್ರವರೂಪದ ಎಣ್ಣೆಯನ್ನು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. ಇಂತಹ ಎಣ್ಣೆಗಳಲ್ಲಿ ಟ್ರಾನ್ಸ್ ಫ್ಯಾಟ್ ಅಧಿಕವಾಗಿರುವುದಲ್ಲದೆ, ಎಲ್‌ಡಿಎಲ್ ಕೊಲೆಸ್ಟೆರಾಲ್ ಮಟ್ಟವನ್ನು ಇದು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.