Site icon Vistara News

Chromotherapy | ಬಣ್ಣದ ಔಷಧಿಯಲ್ಲ, ಬಣ್ಣವೇ ಔಷಧಿ!

color

ಬಣ್ಣಗಳಿಗೆ ಅದ್ಭುತ ಶಕ್ತಿಯಿದೆ. ಕಳೆಗುಂದಿದ ನಮ್ಮ ಮೂಡ್‌ ಅನ್ನು ಇದ್ದಕ್ಕಿದ್ದಂತೆ ಸರಿ ಮಾಡುವ, ಖುಷಿಯನ್ನು ಪಸರಿಸುವ ಸಾಮರ್ಥ್ಯ ಬಣ್ಣಗಳಿಗಿವೆ. ಗಾಢ ಹಾಗೂ ಬೆಚ್ಚನೆಯ ಭಾವ ಕೊಡುವ ಬಣ್ಣಗಳು ಒಮ್ಮಿಂದೊಮ್ಮೆ ನಮ್ಮ ದೇಹಕ್ಕೆ ಮನಸ್ಸಿಗೆ ರಿಲ್ಯಾಕ್ಸ್‌ ಕೊಡಬಹುದು. ಹಾಗಾಗಿ ಬಣ್ಣಗಳನ್ನೇ ಇಟ್ಟುಕೊಂಡು ಮನುಷ್ಯನ ಭಾವನೆಗಳಿಗೆ, ಮನಸ್ಸಿಗೆ ಚಿಕಿತ್ಸೆ ಕೊಡಬಹುದು. ಇದಕ್ಕೆ ಕಲರ್‌ ಥೆರಪಿ ಅಥವಾ ಕ್ರೋಮೋಥೆರಪಿ ಎಂದೂ ಕರೆಯುತ್ತಾರೆ.

ವಿಜ್ಞಾನಿಗಳು ಹೇಳುವ ಪ್ರಕಾರ, ಬಹಳಷ್ಟು ನಮ್ಮ ದೈಹಿಕ ಸಮಸ್ಯೆಗಳ ಮೂಲ ಮಾನಸಿಕ ಸಮಸ್ಯೆಯಲ್ಲೇ ಇರುತ್ತದೆ. ಅಂದರೆ, ನಾವು ನೆಮ್ಮದಿಯಾಗಿದ್ದಂತೆ ಮೇಲ್ನೋಟಕ್ಕೆ ಕಂಡರೂ, ಮನಸ್ಸಿನಾಳದಲ್ಲಿ ಬಾಧಿಸುವ ವಿಚಾರಗಳು ನಮ್ಮ ದೇಹದ ಸಮಸ್ಯೆಗಳ ಮೂಲಕ ವ್ಯಕ್ತವಾಗಬಹುದು. ಅಂದರೆ, ಮನಸ್ಸಿನಾಳದಲ್ಲಿ ಹುದುಗಿದ ಬೇಸ, ದುಃಖಗಳನ್ನು ವ್ಯಕ್ತಪಡಿಸಲಾಗದೆ ತೊಳಲುವ ಮಂದಿಗೆ ಹಲವಾರು ದೈಹಿಕ ಸಮಸ್ಯೆಗಳ ರೂಪದಲ್ಲಿ ಅವರನ್ನು ಕಾಡುತ್ತವೆ. ಮುಖ್ಯವಾಗಿ, ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವುಗಳು ಮಾನಸಿಕ ತಳಮಳದ ಪ್ರತಿಫಲನವೂ ಆಗಿರುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಈ ಬಣ್ಣಗಳ ಮೂಲಕ ಚಿಕಿತ್ಸೆ ನೀಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಇಳಿದುಬಂದಿದೆ.

ಉದಾಹರಣೆಗೆ, ನೀಲಿ ಬಣ್ಣದ ಬೆಳಕನ್ನು ಹೊಂದಿದ ಕೋಣೆಯಲ್ಲಿ ಕೂತು ಶಾಂತಿ ಸಮಾಧಾನವನ್ನು ಕಂಡುಕೊಳ್ಳುವುದು, ಪಿಂಕ್‌ ಬಣ್ಣದ ಬೆಳಕಿನಲ್ಲಿ ಕೂತು ತುಮುಲಗಳಿಂದ ಹೊರಬರುವುದಕ್ಕೆ ನೆರವಾಗುತ್ತದೆ. ಆದರೆ, ಇದನ್ನು ತಜ್ಞರ ಸಹಕಾರದಿಂದ ಮಾಡುವುದು ಮುಖ್ಯವಾಗುತ್ತದೆ.

ತಲೆನೋವಿಗೆ ಬಣ್ಣಗಳು ಬಹಳ ಒಳ್ಳೆಯ ಔಷಧಿಯಂತೆ. ಮೈಗ್ರೇನ್‌ ಹಾಗೂ ಪದೇ ಪದೇ ತಲೆನೋವಿನಿಂದ ಬಳಲುವವರಿಗೆ ಬಣ್ಣಗಳ ಥೆರಪಿ ಚೆನ್ನಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಇದಕ್ಕೆ ಪ್ರತ್ಯೇಕವಾಗಿ ಬಣ್ಣಗಳ ಟ್ರೀಟ್ಮೆಂಟ್‌ ತೆಗೆದುಕೊಳ್ಳುವ ಅಗತ್ಯವೂ ಇಲ್ಲ. ಸುಮ್ಮನೆ ಪ್ರಶಾಂತವಾದ ಹಸಿರು ಹಸಿರಿನ ಪ್ರಕೃತಿಯಲ್ಲಿ ಸುಮ್ಮನೆ ಕೆಲಹೊತ್ತು ಕಳೆದರೂ ಸಾಕು, ತಲೆನೋವು ಎಷ್ಟೋ ಬೆಟರ್‌ ಅನಿಸುತ್ತದೆ. ಇಲ್ಲಿ ಹಸಿರು ಬಣ್ಣ ನಮ್ಮ ತಲೆನೋವಿನ ಶಮನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

ವಿಜ್ಞಾನಿಗಳ ಪ್ರಕಾರ, ಪ್ರಕೃತಿಯ ಸಂಗವೇ ಒಂದು ಥೆರಪಿ. ಪ್ರಕೃತಿಯ ಒಡನಾಟ ಇದ್ದರೆ ಧ್ಯಾನದಂತಹ ಮನೋನಿಗ್ರಹ ಚಟುವಟಿಕೆಗಳ ಅಗತ್ಯವೂ ಇಲ್ಲ. ಪ್ರಕೃತಿ ಕೊಡುವ ಶಾಂತಿ, ನೆಮ್ಮದಿ ಕೊಡುತ್ತದೆ. ವೈಜ್ಞಾನಿಕವಾಗಿಯೂ ಪ್ರಕೃತಿಯಲ್ಲಿರುವ ಹಸಿರು ಬಣ್ಣ ನೋವು ನಿವಾರಕ ಎಂಬುದು ಸಾಬೀತಾಗಿದೆ.

ಕ್ರೋಮೋಥೆರಪಿಯಲ್ಲಿ ಯಾವ ಬಣ್ಣ ದೇಹದ ಯಾವ ಭಾಗದೊಂದಿಗೆ ವಿಶೇಷ ಸಂಬಂಧ ಹೊಂದಿದೆ ಎಂದು ನೋಡೋಣ.

೧. ಕೆಂಪು: ಕೆಂಪು ಎಂದರೆ ಶಕ್ತಿ, ಇದು ರಕ್ತಪರಿಚಲನೆ ಹಾಗೂ ಉಸಿರಾಟಕ್ಕೆ ನೇರ ಸಂಬಂಧ ಹೊಂದಿದೆ. ಹಾಗಾಗಿ ಈ ಬಣ್ಣ ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರುವಲ್ಲಿ ಸಹಾಯ ಮಾಡುವುದಲ್ಲದೆ, ಹೃದಯವನ್ನು ಆರೋಗ್ಯವಾಗಿರಿಸಲು ನೆರವಾಗುತ್ತದೆ.

೨. ಹಳದಿ: ಹಳದಿ ಬಣ್ಣ ಜೀರ್ಣಾಂಗ ವ್ಯವಸ್ಥೆ ಹಾಗೂ ನರಮಂಡಲವನ್ನು ಪ್ರತಿನಿಧಿಸುತ್ತದೆ. ಇದಲ್ಲದೆ, ಉಸಿರಾಟದ ತೊಂದರೆ, ಅಸ್ತಮಾ ಮತ್ತಿತರ ಕಾಯಿಲೆಗಳ ಗುಣಪಡಿಸುವಿಕೆಯಲ್ಲಿ ಹಳದಿ ಬಣ್ಣ ಸಹಾಯ ಮಾಡುತ್ತದೆ.

೩. ನೀಲಿ: ನೀಲಿ ಎಂದರೆ ಶಾಂತಿ, ನೆಮ್ಮದಿ. ಇದು ಶೀತ, ಕೆಮ್ಮು, ಜ್ವರ, ತಲೆನೋವು ಮತ್ತಿತರ ಸಮಸ್ಯೆಯ ಪರಿಹಾರದಲ್ಲಿ ಪಾತ್ರ ವಹಿಸುತ್ತದೆ.

೪. ನೇರಳೆ ಮತ್ತು ಇಂಡಿಗೋ: ಈ ಬಣ್ಣಗಳು ಕಣ್ಣಿಗೆ ಒಳ್ಳೆಯದು. ಕಿವಿ ಹಾಗೂ ಮೂಗಿನ ಸಂಬಂಧಿ ತೊಂದರೆಗೂ ಈ ಬಣ್ಣಗಳು ಒಳ್ಳೆಯದು. ನಮ್ಮ ಮಾಂಸಖಂಡಗಳನ್ನು ರಿಲ್ಯಾಕ್ಸ್‌ ಮಾಡಿಸಿ, ಶಾಂತಿ, ನೆಮ್ಮದಿಯ ಭಾವ ಮೂಡಿಸುವಲ್ಲಿ ಈ ಬಣ್ಣದ ಸಹಾಯ ಮಾಡುತ್ತದೆ.

ಇದನ್ನೂ ಓದಿ: Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ

Exit mobile version