ಪಂಡಿತ್ ಭಾಗವತ್ ದಯಾಳ್ ಶರ್ಮಾ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PGIMS) ರೋಹ್ಟಕ್‌ನಲ್ಲಿ ಭಾರತದ ಮೊದಲ ಸ್ಥಳೀಯ ಡೆಂಗ್ಯೂ ಲಸಿಕೆ (Dengue Vaccine) 3ನೇ ಹಂತದ ಪ್ರಯೋಗವನ್ನು ಪ್ರಾರಂಭಿಸಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಪ್ಯಾನೇಸಿಯಾ ಬಯೋಟೆಕ್ (Panacea Biotec) ಘೋಷಿಸಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಉಪಕ್ರಮವನ್ನು ಶ್ಲಾಘಿಸಿದ್ದು, ಡೆಂಗ್ಯೂ ಚಿಕೆತ್ಸೆಗಾಗಿ ಭಾರತದ ಮೊದಲ ಸ್ಥಳೀಯ ಲಸಿಕೆಯ 3 ಕ್ಲಿನಿಕಲ್ ಪ್ರಯೋಗದ ಪ್ರಾರಂಭವು ಡೆಂಗ್ಯೂ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪ್ರಗತಿಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಡೆಂಗ್ಯೂ ಲಸಿಕೆ ಅಭಿವೃದ್ಧಿಗೆ ಐಸಿಎಂಆರ್ ಮತ್ತು ಪ್ಯಾನೇಸಿಯಾ ಬಯೋಟೆಕ್ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ ಕೇಂದ್ರ ಆರೋಗ್ಯ ಸಚಿವರು, ಈ ಪಾಲುದಾರಿಕೆಯ ಮೂಲಕ ನಾವು ನಮ್ಮ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಹೆಜ್ಜೆ ಇಡುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ್‌ನ ನಮ್ಮ ದೃಷ್ಟಿಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.
ಪ್ರಸ್ತುತ ದೇಶವು ಡೆಂಗ್ಯೂಗೆ ಯಾವುದೇ ಆಂಟಿವೈರಲ್ ಚಿಕಿತ್ಸೆ ಅಥವಾ ಪರವಾನಗಿ ಪಡೆದ ಲಸಿಕೆಯನ್ನು ಹೊಂದಿಲ್ಲ. ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸಂಕೀರ್ಣ ಮತ್ತು ತುರ್ತು ಅಗತ್ಯವಾಗಿದೆ. ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸಿರೊಟೈಪ್‌ಗಳಲ್ಲಿ ಹೆಚ್ಚಿನ ಪರಿಣಾಮಕಾರಿತ್ವವನ್ನು ಸಾಧಿಸುವಲ್ಲಿ ಸವಾಲು ಇದೆ. ಇದು ದೇಶದ ಅನೇಕ ಪ್ರದೇಶಗಳಲ್ಲಿ ಹರಡುತ್ತಿದೆ ಎಂದರು.
ಟೆಟ್ರಾವಲೆಂಟ್ ಡೆಂಗ್ಯೂ ಲಸಿಕೆ ಸ್ಟ್ರೈನ್ (TV003/TV005) ಆರಂಭದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH), ಯುಎಸ್ ಎನಿಂದ ಅಭಿವೃದ್ಧಿಪಡಿಸಲಾಯಿತು. ಜಾಗತಿಕವಾಗಿ ಪೂರ್ವಭಾವಿ ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಇದರ ಪ್ರಯೋಗ ಆರಂಭಿಸಿದ ಮೂರು ಭಾರತೀಯ ಕಂಪೆನಿಗಳಲ್ಲಿ ಒಂದಾದ Panacea Biotec ಸಂಪೂರ್ಣ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ.
ಈ ಕೆಲಸಕ್ಕಾಗಿ ಕಂಪನಿಯು ಪ್ರಕ್ರಿಯೆಯ ಪೇಟೆಂಟ್ ಅನ್ನು ಹೊಂದಿದೆ. 2018-19ರಲ್ಲಿ ಭಾರತೀಯ ಲಸಿಕೆ ಕ್ಲಿನಿಕಲ್ ಪ್ರಯೋಗ ಹಂತ 1 ಮತ್ತು 2 ಪೂರ್ಣಗೊಂಡಿವೆ. ಇದು ಭರವಸೆಯ ಫಲಿತಾಂಶಗಳನ್ನು ನೀಡಿದೆ.
ಐಸಿಎಂಆರ್ ಸಹಯೋಗದೊಂದಿಗೆ ನಡೆಸಲಾದ ಹಂತ 3 ಕ್ಲಿನಿಕಲ್ ಪ್ರಯೋಗವು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10,335 ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕ ಭಾಗವಹಿಸುವವರನ್ನು ಒಳಗೊಂಡ 19 ಪ್ರದೇಶಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ
ಭಾರತವು ಡೆಂಗ್ಯೂ ರೋಗದ ಅತಿ ಹೆಚ್ಚು ಸಂಭವವಿರುವ ಟಾಪ್ 30 ದೇಶಗಳಲ್ಲಿ ಒಂದಾಗಿದೆ. ಡಬ್ಲ್ಯೂ ಹೆಚ್‌ಒ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಶೇ. 75-80ರಷ್ಟು ಸೋಂಕುಗಳು ಲಕ್ಷಣ ರಹಿತವಾಗಿವೆ. ಆದರೂ ಈ ವ್ಯಕ್ತಿಗಳು ಈಡಿಸ್ ಸೊಳ್ಳೆಗಳ ಕಡಿತದ ಮೂಲಕ ಸೋಂಕನ್ನು ಹರಡಬಹುದು. ರೋಗ ಲಕ್ಷಣಗಳು ಪ್ರಾಯೋಗಿಕವಾಗಿ ಸ್ಪಷ್ಟವಾಗಿ ಕಂಡುಬರುವ ಶೇ. 20-25 ಪ್ರಕರಣಗಳಲ್ಲಿ ಮಕ್ಕಳು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಮರಣದ ಅಪಾಯವೂ ಹೆಚ್ಚಾಗಿರುತ್ತದೆ.