Site icon Vistara News

Long Pepper: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೇ?

Long Pepper

ನಮ್ಮ ನಿತ್ಯ ಹರಿದ್ವರ್ಣ ಕಾಡುಗಳಿಂದ ದೊರೆಯುವ ಔಷಧೀಯ ಸಸ್ಯೋತ್ಪನ್ನಗಳಿಗೆ ಲೆಕ್ಕವೇ ಇಲ್ಲ. ಪಶ್ಚಿಮ ಘಟ್ಟಗಳೆಂದರೆ ಅದೊಂದು ಅಮೂಲ್ಯ ಖಜಾನೆ- ಏನುಂಟು ಏನಿಲ್ಲ ಅದರಲ್ಲಿ. ಅಂಥ ದಾಸ್ತಾನಿನಲ್ಲಿರುವ ಕೆಲವು ಅನರ್ಘ್ಯ ಮದ್ದುಗಳ ಪೈಕಿ ಪಿಪ್ಪಲಿಯೂ ಒಂದು. ಆಡು ಮಾತಿನಲ್ಲಿ ಹಿಪ್ಪಲಿ ಎಂದೇ ಕರೆಸಿಕೊಳ್ಳುವ ಇದು ಆಯುರ್ವೇದದಲ್ಲಿ ಮಾತ್ರವಲ್ಲ, ಶತಮಾನಗಳಿಂದ ಪರಂಪರಾಗತ ಔಷಧಿಯಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ. ನೋಡುವುದಕ್ಕೆ ಕರಿ ಕಾಳುಮೆಣಸನ್ನು ಪೋಣಿಸಿ ಇರಿಸಿದಂತೆ ಕಾಣುವ ಬೆರಳುದ್ದದ ಹಿಪ್ಪಲಿ, ಸೂಪರ್‌ಫುಡ್‌ ಎಂಬ ಹಣೆಪಟ್ಟಿಯನ್ನೂ ಗಳಿಸಿದೆ. ಹಲವು ಬಗೆಯಲ್ಲಿ ಔಷಧೀಯ ಉಪಯೋಗಗಳನ್ನು ಹೊಂದಿರುವ ಇದರ (Long Pepper) ಉಪಯೋಗಗಳು ಏನೇನು ಎಂಬುದನ್ನೀಗ ನೋಡೋಣ.

ಜೀರ್ಣಕಾರಿ

ಅಜೀರ್ಣದ ಸಮಸ್ಯೆಯಿದ್ದರೆ ಹಿಪ್ಪಲಿ ನೆರವಾದೀತು. ಕಾರಣ, ಜೀರ್ಣಾಂಗಗಳಲ್ಲಿ ಪಚನಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಪ್ರಚೋದಿಸುವ ಸಾಮರ್ಥ್ಯ ಹಿಪ್ಪಲಿಗಿದೆ. ಇದರಿಂದ ಜೀರ್ಣಕ್ರಿಯೆಯನ್ನು ಸರಾಗ ಮಾಡುವುದು ಮಾತ್ರವಲ್ಲ, ಮಲಬದ್ಧತೆಯನ್ನೂ ನಿವಾರಣೆ ಮಾಡುತ್ತದೆ ಇದು. ಜೊತೆಗೆ, ಹೊಟ್ಟೆಯುಬ್ಬರಿಸುವುದು, ಹೊಟ್ಟೆ ಭಾರವಾದಂತೆ ಎನಿಸಿ ಎದೆ ಉರಿಯುವಂಥ ಪಚನ ದೋಷಗಳನ್ನೆಲ್ಲ ಶಮನ ಮಾಡುತ್ತದೆ.

ಶ್ವಾಸಕೋಶಗಳ ಕ್ಷಮತೆ ಹೆಚ್ಚಳ

ಪುಪ್ಪುಸಗಳ ಆರೋಗ್ಯ ಸುಧಾರಣೆಯಲ್ಲಿ ಇದನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಮೂಗು ಕಟ್ಟಿ, ಕಫ ಬಿಗಿದಂಥ ಸಂದರ್ಭಗಳಲ್ಲಿ, ಶ್ವಾಸನಾಳಗಳನ್ನು ಸಡಿಲಿಸಿ, ಉಸಿರಾಟವನ್ನು ಸರಾಗ ಮಾಡುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸಿ, ಥಂಡಿ-ಶೀತದ ಬಾಧೆಯಿಂದ ರಕ್ಷಿಸುತ್ತದೆ. ಹಾಗಾಗಿ ಫ್ಲೂ ಸಮಯದಲ್ಲಿ ಇದೊಂದು ಉಪಯುಕ್ತ ಮದ್ದು ಎನಿಸಬಹುದು.

ನೋವು ಶಮನ

ಹಲವು ರೀತಿಯ ನೋವುಗಳ ಉಪಶಮನಕ್ಕೆ ಹಿಪ್ಪಲಿಯನ್ನು ಬಳಸಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ವಿರೋಧಿ ಗುಣಗಳು, ಊತವನ್ನು ಕಡಿಮೆ ಮಾಡುತ್ತವೆ. ಸ್ನಾಯುಗಳ ನೋವು, ಕೀಲುಗಳಲ್ಲಿ ಊತದಿಂದ ತೊಡಗಿ ತಲೆನೋವಿನವರೆಗೆ ಬಹಳಷ್ಟು ರೀತಿಯ ನೋವು-ಬಾಧೆಗಳನ್ನಿದು ಕಡಿಮೆ ಮಾಡಬಲ್ಲದು.

ಪ್ರತಿರೋಧಕತೆ ಹೆಚ್ಚಳ

ಸೋಂಕುಗಳೊಂದಿಗೆ ಹೋರಾಡುವಂಥ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಿಪ್ಪಲಿ. ಇದರಲ್ಲಿರುವ ಪ್ರಬಲ ಉತ್ಕರ್ಷಣ ನಿರೋಧಕಗಳು ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತವೆ. ದೇಹದಲ್ಲಿ ಸಂಚರಿಸುತ್ತಾ ಅಪಾಯ ತರುವ ಮುಕ್ತಕಣಗಳನ್ನು ಪ್ರತಿಬಂಧಿಸಿ, ಮಾರಕ ರೋಗಗಳನ್ನು ದೂರ ಇರಿಸುತ್ತವೆ.

ಬಾಯಿಯ ಆರೋಗ್ಯ ಸುಧಾರಣೆ

ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಬಾಯಿಯ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಕೊಡುಗೆ ನೀಡಬಲ್ಲವು. ಬಾಯಿಯ ದುರ್ಗಂಧ ತೊಲಗಿಸಿ, ಒಡಸುಗಳನ್ನು ಭದ್ರ ಮಾಡಿ, ಹಲ್ಲುಗಳ ಬೇರುಗಳನ್ನು ಬಿಗಿ ಮಾಡುವ ಸಾಧ್ಯತೆ ಹಿಪ್ಪಲಿಗಿದೆ. ರಾಸಾಯನಿಕಭರಿತ ಮೌತ್‌ವಾಷ್‌ ಬಳಕೆ ಮಾಡಲು ಮನಸ್ಸಿಲ್ಲದವರು, ಹಿಪ್ಪಲಿಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದನ್ನು ಆಯ್ದುಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳು ಇಲ್ಲದಂತೆ ಸುರಕ್ಷಿತವಾಗಿ ಇದನ್ನು ಬಳಸಬಹುದು.

ಅಡಾಪ್ಟೋಜೆನ್‌

ಬದುಕಿನ ಒಟ್ಟಾರೆ ಸ್ವಾಸ್ಥ್ಯ ಹೆಚ್ಚಿಸುವಂತೆ ಮಾಡುವಂಥ ಸಸ್ಯೋತ್ವನ್ನಗಳಿವು. ಒತ್ತಡ, ಆಯಾಸ, ಸುಸ್ತು ಮುಂತಾದವುಗಳಿಗೆ ನಮ್ಮ ದೇಹ ಮತ್ತು ಮನಸ್ಸುಗಳು ಸ್ಪಂದಿಸುವ ರೀತಿಯನ್ನಿವು ವ್ಯತ್ಯಾಸ ಮಾಡುತ್ತವೆ. ಅಂಥವುಗಳನ್ನು ಅಡಾಪ್ಟೋಜೆನ್‌ ಎನ್ನಲಾಗುತ್ತದೆ. ಇದರಿಂದ ಒತ್ತಡದ ಸಂದರ್ಭಗಳಲ್ಲೂ ನಲುಗದಂತೆ ನಮ್ಮನ್ನು ನಾವು ಕಾಯ್ದುಕೊಳ್ಳಬಹುದು. ಇಂಥ ಅಪರೂಪದ ಗುಣ ಹಿಪ್ಪಲಿಗಿದೆ.

ಕಾಮೋತ್ತೇಜಕ

ಫಲವಂತಿಕೆಯನ್ನು ಹೆಚ್ಚಿಸುವಲ್ಲೂ ಹಿಪ್ಪಲಿ ಬಳಕೆಯಲ್ಲಿದೆ. ಕಾಮೋತ್ತೇಜಕ ಗುಣಗಳು ಇದರಲ್ಲಿದ್ದು, ಫಲವತ್ತತೆಯ ಚಿಕಿತ್ಸೆಗೆ ಇದನ್ನು ಉಳಿದ ಔಷಧಿಗಳ ಜೊತೆಯಲ್ಲಿ ಬಳಸಲಾಗುತ್ತದೆ.

ಬೊಜ್ಜು ಇಳಿಕೆ

ದೇಹದಲ್ಲಿ ಜಮೆಯಾಗಿರುವ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಉಪಯುಕ್ತ. ಹೊಟ್ಟೆ, ಸೊಂಟದ ಸುತ್ತಳತೆ ಕಡಿಮೆ ಮಾಡಲು, ಕೊಲೆಸ್ಟ್ರಾಲ್‌ ಮಟ್ಟ ನಿಯಂತ್ರಿಸಲು, ತೂಕ ಕರಗಿಸಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

Exit mobile version