Site icon Vistara News

Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

tomato plant

Krishi Khajane Planting Growing and Harvesting Tomatoes tips and other details in kannada

ಕೆಂಪುಕೆಂಪಾದ ಅವುಗಳನ್ನು ಟೊಮೆಟೊ ಹಣ್ಣು ಎಂದೇ ಕರೆಯುವುದು ವಾಡಿಕೆ. ಹಾಗೆಂದು ಅದನ್ನೇನು ಹಣ್ಣಿನಂತೆ ಹೆಚ್ಚಿಕೊಂಡು ತಿನ್ನುವುದಿಲ್ಲ ನಾವು. ಅಡುಗೆಗೆ ತರಕಾರಿಯಂತೆ ಬಳಸುತ್ತೇವೆ. ಆದರೆ ನಿಜಕ್ಕೂ ಅದೊಂದು ಹಣ್ಣು, ತರಕಾರಿಯಲ್ಲ! ದಕ್ಷಿಣ ಅಮೆರಿಕ ಮೂಲದ ಈ ಕೆಂಪು ಸುಂದರಿ ಖಂಡಾಂತರ ವ್ಯಾಪಿಸಿ ಹಲವು ಕಾಲ ಸಂದಿದೆ. ಭಾರತೀಯ ಅಡುಗೆ ಮನೆಗಳಲ್ಲಿ ಈಗ ಟೊಮೆಟೊ ಇಲ್ಲದ ಖಾದ್ಯಗಳನ್ನು ಹುಡುಕಬೇಕಷ್ಟೆ. ಸಾಮಾನ್ಯವಾಗಿ ಕೆಂಪು ಬಣ್ಣದಲ್ಲೇ ದೊರೆಯುವ ಇದು ಗುಲಾಬಿ, ಕೇಸರಿ, ಹಳದಿ, ಕಿತ್ತಳೆ, ನೇರಳೆ, ಅಪಕ್ವವಾಗಿದ್ದರೆ ತೆಳು ಹಸಿರು, ಕಡು ಹಸಿರು ಬಣ್ಣಗಳಲ್ಲೂ ದೊರೆಯಬಹುದು. ಟೊಮೆಟೊಗಳ ಬಣ್ಣದ ವ್ಯತ್ಯಾಸಕ್ಕೆ ಕಾರಣವಾಗುವುದು ಅದರಲ್ಲಿರುವ ವರ್ಣದ್ರವ್ಯಗಳು. ಕೆಂಪಿದ್ದರೆ ಹೆಚ್ಚು ಲೈಕೋಪೇನ್‌, ಕಿತ್ತಳೆ ಮತ್ತು ಹಳದಿಯಿದ್ದರೆ ಕೆರೊಟಿನಾಯ್ಡ್‌ಗಳು, ನೇರಳೆಯಿದ್ದರೆ ಆಂಥೊಸಯನಿನ್‌ಗಳು- ಹೀಗೆ ಇದರ ಉತ್ಕರ್ಷಣ ನಿರೋಧಕಗಳ ಸಂಯೋಜನೆಯಲ್ಲಿನ ವ್ಯತ್ಯಾಸವೇ ವರ್ಣಗಳ ಭಿನ್ನತೆಗೂ ಕಾರಣವಾಗುತ್ತದೆ. ಆದರೆ ಟೊಮೇಟೊವನ್ನು ಅತಿಯಾಗಿ ಬೇಯಿಸುವುದರಿಂದ ಈ ಸತ್ವಗಳು (Superfood Tomato) ನಷ್ಟವಾಗಬಹುದು. ಸಾಧ್ಯವಾದಲ್ಲಿ ಹಸಿಯಾಗಿ ತಿನ್ನುವುದು ಇಲ್ಲವೇ ಸ್ವಲ್ಪವೇ ಬೇಯಿಸುವುದು ಸೂಕ್ತವಾದದ್ದು.

ಸತ್ವಗಳೇನಿವೆ?

ನೀರು, ವಿಟಮಿನ್‌ ಸಿ, ಪೊಟಾಶಿಯಂ, ಫೋಲೇಟ್‌, ವಿಟಮಿನ್‌-ಕೆ ಮುಂತಾದ ಅಮೂಲ್ಯ ಸತ್ವಗಳ ಖನಿಯಿದು. ಲಿಗ್ನಿನ್‌, ಸೆಲ್ಯುಲೋಸ್‌ನಂಥ ಕರಗದಿರುವ ನಾರು ಸಹ ಇದರಲ್ಲಿದೆ. ಸಣ್ಣ- ದೊಡ್ಡ ಗಾತ್ರಗಳು ಮತ್ತು ಭಿನ್ನ ವರ್ಣಗಳು, ರುಚಿ ಹಾಗೂ ಘಮದಲ್ಲಿನ ಅಲ್ಪಸ್ವಲ್ಪ ವ್ಯತ್ಯಾಸದಿಂದಾಗಿ ಅವುಗಳ ಸತ್ವಗಳು ಸಹ ಕೊಂಚ ವ್ಯತ್ಯಾಸವಾಗುತ್ತವೆ. ಹಾಗೆಂದ ಮಾತ್ರಕ್ಕೆ ಟೊಮೆಟೊ ಎಷ್ಟು ದೊಡ್ಡದು ಅಥವಾ ಯಾವ ಬಣ್ಣದ್ದು ಒಳ್ಳೆಯದು ಎಂಬ ಜಿಜ್ಞಾಸೆಗೆ ಬೀಳಬೇಕೆಂದಿಲ್ಲ. ಎಲ್ಲ ರೀತಿಯ ಟೊಮೆಟೊಗಳಲ್ಲೂ ಸದ್ಗುಣಗಳು ಸಾಕಷ್ಟಿವೆ.

ಲೈಕೊಪೇನ್‌

ಟೊಮೆಟೊದಲ್ಲಿರುವ ಉತ್ಕೃಷ್ಟವಾದ ಉತ್ಕರ್ಷಣ ನಿರೋಧಕ ಸತ್ವವಿದು. ಹಲವು ಬಗೆಯ ಕ್ಯಾನ್ಸರ್‌ಗಳ ಭೀತಿಯನ್ನು, ಅದರಲ್ಲೂ ಮುಖ್ಯವಾಗಿ ಪ್ರೊಸ್ಟೇಟ್‌ ಕ್ಯಾನ್ಸರ್‌ ಭೀತಿಯನ್ನು ದೂರ ಮಾಡುವ ಸಾಮರ್ಥ್ಯವನ್ನು ಈ ಸತ್ವ ಹೊಂದಿದೆ ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್‌ ಮಟ್ಟ ಹಾಕಲು ಅಥವಾ ಅಂಥ ಕೋಶಗಳ ಬೆಳವಣಿಗೆಯನ್ನು ಕುಂಠಿತ ಮಾಡುವಲ್ಲಿ ಈ ಸತ್ವ ಹೆಚ್ಚಿನ ಮಹತ್ವ ಪಡೆದಿದೆ.

ಉತ್ಕರ್ಷಣ ವಿರೋಧಿ ಗುಣಗಳು

ದೇಹದೆಲ್ಲೆಡೆ ಸಂಚರಿಸುತ್ತಾ ಹಾನಿಯುಂಟು ಮಾಡುವಂಥ ಮುಕ್ತ ಕಣಗಳನ್ನು ನಿರ್ಬಂಧಿಸಲು ಉತ್ಕರ್ಷಣ ನಿರೋಧಕಗಳು ಶರೀರಕ್ಕೆ ಅಗತ್ಯವಾಗಿ ಬೇಕು. ಇದರಲ್ಲಿರುವ ಲೈಕೊಪೇನ್‌ ಮತ್ತು ಬೀಟಾ ಕ್ಯಾರೊಟಿನ್‌ಗಳು ಇಂಥ ಮುಕ್ತ ಕಣಗಳನ್ನು ಬಂಧಿಸುತ್ತವೆ. ಇದರಿಂದ ಉರಿಯೂತ-ಸಂಬಂಧಿ ಹಲವು ರೋಗಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ.

ರಕ್ತ ಹೆಪ್ಪಾಗದು

ಟೊಮೇಟೊ ಬೀಜಗಳಲ್ಲಿರುವ ದಪ್ಪ ಲೋಳೆಯ ಪದರಕ್ಕೆ ರಕ್ತವನ್ನು ನೀರು ಮಾಡುವ ಗುಣವಿದೆ. ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದಲೇ ಹೃದಯದ ಕಾಯಿಲೆಗಳು, ಪಾರ್ಶ್ವವಾಯುವಿನಂಥ ಸಮಸ್ಯೆಗಳು ಎದುರಾಗುತ್ತವೆ. ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣ ಲೈಕೊಪೇನ್‌ಗೂ ಇದೆ.

ಹೃದಯದ ಗೆಳೆಯ

ಹೃದಯದ ಆರೋಗ್ಯ ಕಾಪಾಡುವಲ್ಲೂ ಟೊಮೆಟೊ ಸಹಕಾರಿ. ಇದರ ಲೈಕೊಪೇನ್‌, ವಿಟಮಿನ್‌ ಸಿ ಮತ್ತು ಪೊಟಾಶಿಯಂ ಸತ್ವಗಳು ರಕ್ತದೊತ್ತಡ ನಿಯಂತ್ರಿಸಿ, ರಕ್ತನಾಳಗಳು ಸಂಕೋಚಗೊಳ್ಳದಂತೆ ಕಾಪಾಡಿ, ಕೊಲೆಸ್ಟ್ರಾಲ್‌ ಕಡಿತ ಮಾಡುವಲ್ಲೂ ನೆರವಾಗುತ್ತವೆ. ಹಾಗಾಗಿ ಆಹಾರದಲ್ಲಿ ಟೊಮೆಟೊ ಬಳಕೆಯನ್ನು ಧಾರಾಳವಾಗಿ ಮಾಡಬಹುದು.

ಚರ್ಮಕ್ಕೆ ಕಳೆ

ಇದರಲ್ಲಿರುವ ವಿಟಮಿನ್‌ ಸಿ ಮತ್ತು ವಿಟಮಿನ್‌ ಎ ಸತ್ವಗಳು ಚರ್ಮದ ಕಾಂತಿ ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುವಂಥವು. ಈ ಜೀವಸತ್ವಗಳ ಜೊತೆಗೆ ಲೈಕೊಪೇನ್‌ ಸೇರಿದರೆ, ಕೊಲಾಜಿನ್‌ ಉತ್ಪತ್ತಿ ಮಾಡುವಲ್ಲಿ ದೇಹಕ್ಕೆ ದೊಡ್ಡ ನೆರವು ದೊರೆತಂತೆ. ಇದರಿಂದ ಚರ್ಮದ ಸುಕ್ಕುಗಳು ಮಾಯವಾಗಿ ಕಾಂತಿ ಹೆಚ್ಚಿಸಲು ಸಾಧ್ಯವಿದೆ.

ತೂಕ ಇಳಿಕೆಗೆ ಪೂರಕ

ಇದರಲ್ಲಿ ಕ್ಯಾಲರಿ ಕಡಿಮೆ, ನೀರು ಮತ್ತು ಸತ್ವ ಹೆಚ್ಚು. ಇದರ ಜೊತೆಗೆ ನಾರೂ ಸಾಕಷ್ಟಿದೆ. ಹಾಗಾಗಿ ತೂಕ ಹೆಚ್ಚುವ ಭೀತಿ ಇಲ್ಲದೆಯೇ ಟೊಮೆಟೊ ಮೆಲ್ಲಬಹುದು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿಸಿಟ್ಟು, ಹಸಿವಿನ ಕೂಗನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: Health Benefits Of Rosemary Tea: ರೋಸ್‌ಮೆರಿ ಚಹಾದಿಂದ ಆರೋಗ್ಯಕ್ಕೇನು ಲಾಭ?

Exit mobile version