Site icon Vistara News

Makeup Side Effect: ನೀವು ಮೇಕಪ್‌ ಮಾಡಿಕೊಳ್ಳುತ್ತೀರಾ? ಈ ಸಂಗತಿಯ ಕುರಿತು ಎಚ್ಚರ ಇರಲಿ

remove makeup

ಮೇಕಪ್‌ ಮಾಡುವುದು ಬಹಳಷ್ಟು ಜನರ ದೈನಂದಿನ ಕಾರ್ಯಗಳಲ್ಲಿ ಒಂದು. ನಗರಗಳು ದೊಡ್ಡದಾಗುತ್ತಾ ಹೋದಷ್ಟೂ ಸಾವಿಲ್ಲದ ಮನೆಯ ಸಾಸಿವೆ ಹುಡುಕುವುದೂ ಮೇಕಪ್‌ ಇಲ್ಲದ ಮುಖ ಹುಡುಕುವುದೂ ಒಂದೇ ಎಂಬಂತಾಗುತ್ತದೆ. ಕೆಲವರಿಗೆ ಇದು ಸೌಂದರ್ಯದ ಪ್ರತೀಕವಾದರೆ, ಹಲವರಿಗೆ ಇದು ಆತ್ಮವಿಶ್ವಾಸ ತುಂಬುವ ವಿಷಯ. ಮುಖಕ್ಕೆ ಮೇಕಪ್‌ ಮಾಡುವುದಕ್ಕೆ ಕಾರಣಗಳು ಏನೇ ಇರಲಿ, ಅಂತೂ ಪ್ರಸಾದನಗಳು ಬೇಕಾಗುತ್ತವೆ. ಇವುಗಳ ಬೆನ್ನಿಗೇ ಪ್ರಶ್ನೆಯೊಂದು ಎದುರಾಗುತ್ತದೆ. ಮುಖಕ್ಕೆ ಸದಾ ಮೇಕಪ್‌ ಮಾಡುತ್ತಿದ್ದರೆ ಚರ್ಮಕ್ಕೆ ಬೇಗ (Makeup Side Effect) ವಯಸ್ಸಾಗುತ್ತದೆಯೇ? ತ್ವಚೆ ಸುಕ್ಕಾಗುತ್ತದೆಯೇ?
ಈ ಪ್ರಶ್ನೆಗೆ ಉತ್ತರ ಸರಳವಿಲ್ಲ. ದಿನಕ್ಕೊಂದೊಂದು ಅಧ್ಯಯನಗಳು ಹೊರಬಂದು, ಸ್ಪಷ್ಟ ಉತ್ತರ ಹುಡುಕುವುದೂ ಸುಲಭವಲ್ಲ ಎಂಬಂತಾಗಿದೆ. ಕಾರಣ, ಪ್ರಸಾದನಗಳು ಮತ್ತು ಸ್ಕಿನ್‌ಕೇರ್‌ ಹೆಸರಿನಲ್ಲಿ ಮಾರುಕಟ್ಟೆಗೆ ಬರುವ ವಸ್ತುಗಳು ಉಪಯೋಗಿಸುವ ತರಹೇವಾರಿ ರಾಸಾಯನಿಕಗಳು. ಇವುಗಳಲ್ಲಿ ಯಾವುದರ ಲಾಭ-ನಷ್ಟಗಳು ಎಂಥ ಚರ್ಮದ ಮೇಲೆ ಹೇಗಾಗುತ್ತದೆ; ದೀರ್ಘಕಾಲದ ಬಳಕೆಯಿಂದ ಅಡ್ಡ ಪರಿಣಾಮಗಳುಂಟೇ ಮುಂತಾದ ಯಾವುದೇ ಪ್ರಶ್ನೆಗಳಿಗೆ ಉತ್ತರ ನಿಖರವಾಗಿಲ್ಲ.
ಆದರೆ ತಜ್ಞರ ಪ್ರಕಾರ, ಉತ್ತಮ ಗುಣಮಟ್ಟದ ಪ್ರಸಾದನಗಳನ್ನು ಬಳಸುತ್ತಿದ್ದರೆ ಮತ್ತು ಅದಕ್ಕೆ ಸೂಕ್ತವಾದ ಕಾಳಜಿಯನ್ನು ತ್ವಚೆಗೆ ತೋರಿಸುತ್ತಿದ್ದರೆ, ಮೇಕಪ್‌ನಿಂದ ನೇರವಾಗಿ ಸಮಸ್ಯೆ ಬರುವುದು ಅನುಮಾನ. ಆಯಾ ಚರ್ಮಕ್ಕೆ ಹೊಂದುವಂಥ ವಸ್ತುಗಳನ್ನು ಒಳಗೊಂಡ ಪ್ರಸಾದನಗಳ ಬಗ್ಗೆ ಗಮನ ನೀಡಬೇಕು. ಉದಾ, ಎಣ್ಣೆ ತ್ವಚೆ ಇರುವವರು ತೈಲಾಧಾರಿತ ಮೇಕಪ್‌ ಬಳಸುತ್ತಿದ್ದರೆ ಸಮಸ್ಯೆ ಆಗಬಹುದು. ಒಣ ತ್ವಚೆಯವರಿಗೆ ಡ್ರೈ ಮೇಕಪ್‌ ಸೂಕ್ತವಲ್ಲ ಇತ್ಯಾದಿ. ಅದಲ್ಲದೆ, ಇನ್ನೂ ಕೆಲವು ಮೇಕಪ್‌ ಅಭ್ಯಾಸಗಳು ಚರ್ಮದ ಆರೋಗ್ಯವನ್ನು ಹಾಳು ಮಾಡಬಹುದು. ಸುಕ್ಕಾಗಿಸಿ, ಕಳೆಗುಂದಿಸಬಹುದು. ಏನವು?

ಸ್ವಚ್ಛತೆ

ಪಾರ್ಟಿ ಮುಗಿಸಿ ಬರುತ್ತೀರಿ. ರಾತ್ರಿ ಸುಸ್ತಾಗಿದೆ. ಮೇಕಪ್‌ ತೆಗೆಯುವ ವ್ಯವಧಾನವಿಲ್ಲದೆ ಹಾಸಿಗೆಯಲ್ಲಿ ಉರುಳುವ ಮನಸ್ಸಾಗುತ್ತದೆ. ಖಂಡಿತ ಇದನ್ನು ಮಾಡಬೇಡಿ! ರಾತ್ರಿ ಮಲಗುವ ಮುನ್ನ ಮುಖದಲ್ಲಿರುವ ಪ್ರಸಾದನವನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಬೇಕು. ಚರ್ಮ ಸ್ವಚ್ಛವಾಗಿ ಉಸಿರಾಡುವಂತಿರಬೇಕು. ಇದಕ್ಕಾಗಿ ಕಠೋರವಾಗ ಕ್ಲೆನ್ಸರ್‌ಗಳಲ್ಲಿ ಬಳಸಬೇಡಿ. ಲಘುವಾದವು ಸಾಕಾಗುತ್ತದೆ. ನಂತರ ಸಾಮಾನ್ಯವಾಗಿ ಬಳಸುವ ಹೀಲಿಂಗ್‌ ಕ್ರೀಮ್‌ ಅಥವಾ ಮಾಯಿಶ್ಚರೈಸರ್‌ ಸಾಕಾಗುತ್ತದೆ.

ಸೂಕ್ಷ್ಮರಂಧ್ರಗಳ ಕಾಳಜಿ

ಸಿಕ್ಕಾಪಟ್ಟೆ ಎಣ್ಣೆಭರಿತ ಪ್ರಸಾದನಗಳು ಕೆಲವೊಮ್ಮೆ ಚರ್ಮದ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಹಾಕುತ್ತವೆ. ಇಂಥವುಗಳ ಸ್ವಚ್ಛತೆಗೆ ಲಘುವಾದ ಕ್ಲೆನ್ಸರ್‌ಗಳು ಸಾಕಾಗದೆ ಹೋಗಬಹುದು. ಕಠೋರ ಕ್ಲೆನ್ಸರ್‌ಗಳು ಚರ್ಮದ ನೈಸರ್ಗಿಕ ತೈಲದಂಶವನ್ನೂ ತೆಗೆದು ಹಾಕುತ್ತವೆ. ಜೊತೆಗೆ, ಚರ್ಮದ ಮೇಲೆ ಕಪ್ಪು ಕಲೆಗಳು, ಮೊಡವೆಯಂಥ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹಾಗಾಗಿ ತೈಲಾಧಾರಿತ ಮೇಕಪ್‌ ಬಳಸುವಾಗ ಲಘುವಾದ್ದನ್ನೇ ಬಳಸಿದರೆ ಉತ್ತಮ

ಒಣ ಚರ್ಮ

ಕೆಲವು ಪ್ರಸಾದನಗಳು ಚರ್ಮವನ್ನು ಒಣಗಿಸಿಬಿಡುತ್ತವೆ. ಅದರಲ್ಲೂ ಒಣ ಚರ್ಮದವರಿಗೆ ಡ್ರೈಮೇಕಪ್‌ ಒಗ್ಗದೆ ಇರಬಹುದು. ಆಗ ಚರ್ಮದ ಮೇಲೆ ಸುಕ್ಕು ಮೂಡುವುದು, ನೆರಿಗೆಗಳು ಬರುವುದು ಸಾಮಾನ್ಯ. ವಯಸ್ಸಾದಂತೆ ಕಂಡರೂ ಅಚ್ಚರಿಯಿಲ್ಲ. ಹಾಗಾಗಿ ಈ ಬಗ್ಗೆ ಎಚ್ಚರವಿರಲಿ. ತ್ವಚೆಗೆ ಹೊಂದುವಂಥ ಮೇಕಪ್‌ ಮಾತ್ರವೇ ಬಳಸಿ. ದೇಹಕ್ಕೆ ನೀರು ಕಡಿಮೆಯಾಗದಿರುವುದೂ ಅಗತ್ಯ. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ.

ಉಪವಾಸ!

ಅಂದರೆ ಹೊಟ್ಟೆಗಲ್ಲ… ಚರ್ಮಕ್ಕೆ! ವಿಷಯ ಮತ್ತೇನಲ್ಲ, ಆಗಾಗ ಚರ್ಮಕ್ಕೆ ಮೇಕಪ್‌ ಉಪವಾಸ ಮಾಡಿಸಿ. ಅಲೊವೇರಾ, ಲಘುವಾದ ನೈಸರ್ಗಿಕ ಎಣ್ಣೆಗಳಂಥವನ್ನು ಮಾತ್ರವೇ ಲೇಪಿಸಿಬಿಡಿ. ಇವುಗಳ ಹೊರತಾಗಿ ಇನ್ನೇನನ್ನೂ ಚರ್ಮಕ್ಕೆ ಹಚ್ಚದೆಯೆ, ಉಪವಾಸ ಮಾಡಿಸಿ. ಇದರಿಂದ ಸಂಪೂರ್ಣ ಗುಣವಾಗಿ ಮೊದಲಿನ ಸ್ಥಿತಿಗೆ ಬರುವುದಕ್ಕೆ ಅಗತ್ಯವಾದ ಕಾಲಾವಕಾಶ ಚರ್ಮಕ್ಕೆ ದೊರೆತಂತಾಗುತ್ತದೆ.

ಆಹಾರ

ಚರ್ಮದ ಕಾಂತಿ ಹೆಚ್ಚಿ, ಕೊಲಾಜಿನ್‌ ಉತ್ಪಾದನೆಗೆ ಪ್ರೋತ್ಸಾಹ ದೊರೆಯುವುದಕ್ಕೆ ಸಮತೋಲಿತವಾದ ಆಹಾರ ಸೇವನೆಯ ಅಗತ್ಯವಿದೆ. ಎ, ಸಿ ಮತ್ತು ಇ ಜೀವಸತ್ವಗಳನ್ನು ಹೊಂದಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಕರಿದ, ಎಣ್ಣೆಯ ತಿಂಡಿಗಳು ಚರ್ಮದ ತಾಜಾತನ ಕುಗ್ಗಿಸುತ್ತವೆ. ಫೇಸ್‌ಪ್ಯಾಕ್‌ಗಳನ್ನು ಮಾಡುವಾಗ ನೈಸರ್ಗಿಕ ವಸ್ತುಗಳಿಂದ ಮನೆಯಲ್ಲೇ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿ. ಇಲ್ಲಿಯೂ ಪೇಟೆಯಲ್ಲಿ ದೊರೆಯುವ ರಾಸಾಯನಿಕಗಳನ್ನು ಅವಲಂಬಿಸಬೇಡಿ.

Exit mobile version