ದಿನದ ಕೆಲಸದಿಂದ ಸುಸ್ತಾಗಿ ಮನೆಗೆ ಮರಳಿ ಬರುತ್ತಿದ್ದಂತೆ ಬಾಗಿಲಲ್ಲೇ ಅಡ್ಡಗಟ್ಟಿ, ಮುಖವನ್ನು ನೆಕ್ಕುವ ಪ್ರೀತಿಪಾತ್ರರು ಎದುರಾಗುವುದು ಯಾರಿಗೆ ಬೇಡ? ಅದರಲ್ಲೂ ಮನೆಯಲ್ಲೇ ನಾಯಿಗಳನ್ನು ಸಾಕಿಕೊಂಡವರಿಗಂತೂ ಬಾಲ ಆಡಿಸುತ್ತಾ, ಮೈ ಹತ್ತಿ ಮುದ್ದಾಡುವ ನಾಯಿಗಳು ದಿನದ ಆಯಾಸದಿಂದ ಬಿಡುಗಡೆ ನೀಡುತ್ತವೆ ಎನಿಸಿದರೆ ತಪ್ಪೇನಿಲ್ಲ. ಮನೆಗೆ ಕಾಲಿಡುತ್ತಲೇ ರಗಳೆ ತೆಗೆಯುವ ಮನುಷ್ಯರಿಗಿಂತ ನಿರ್ಮಲ ಪ್ರೀತಿ ತೋರುವ ಸಾಕು ಪ್ರಾಣಿಗಳೇ ವಾಸಿ ಎನಿಸಿದರೆ ಅಚ್ಚರಿಯಿಲ್ಲ. ಹಾಗಂತ ಅವುಗಳಿಂದ ಮುಖ ನೆಕ್ಕಿಸಿಕೊಳ್ಳುವುದು (Pet Dog Licking) ಸೂಕ್ತವೇ?
ಕೆಲವು ಶ್ವಾನಪ್ರೇಮಿಗಳು ಆಡಾಡುತ್ತಲೇ ತಮ್ಮತ್ತ ಬರುವ ಡೊಂಕು ಬಾಲದ ನಾಯಕರನ್ನು ಆಟದಲ್ಲೇ ದೂರ ಸರಿಸಿಬಿಡುತ್ತಾರೆ. ಅವುಗಳಿಗೆ ನಾಲಿಗೆಯಿಂದ ಕೆನ್ನೆ ಸವರುವ ಅವಕಾಶವನ್ನು ನೀಡಲು ಇಷ್ಟಪಡುವುದಿಲ್ಲ. ಆದರೆ ಎಲ್ಲರೂ ಹೀಗಿರುವುದಿಲ್ಲವಲ್ಲ; ನಾಯಿಗಳಿಂದ ಇದನ್ನೇ ಬಯಸಿ ಬಳಿಸಾರುವವರೂ ಬೇಕಷ್ಟು ಮಂದಿಯಿದ್ದಾರೆ. ಆದರೆ ಹೀಗೆ ಮಾಡುವುದಕ್ಕೆ ಅವಕಾಶ ನೀಡುವಲ್ಲಿ ಸ್ವಚ್ಛತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿದರೆ, ಹುಬ್ಬು ಗಂಟಿಕ್ಕುವ ಶ್ವಾನ ಪ್ರೇಮಿಗಳೂ ಬಹಳಷ್ಟು ಮಂದಿಯಿದ್ದಾರೆ. ಅವುಗಳನ್ನು ಮಡಿಲಲ್ಲಿ ಕೂರಿಸಿಕೊಳ್ಳಬಹುದು, ಹಾಸಿಗೆಯಲ್ಲೇ ಮಲಗಿಸಿಕೊಳ್ಳಬಹುದು, ಕಾರಲ್ಲಿ ಸುತ್ತಾಡಿಸಬಹುದು, ಒಂದು ಪಪ್ಪಿ ಕೊಟ್ಟರೆ ತಪ್ಪೇ ಎಂದು ಕಿಡಿ ಕಾರುತ್ತಾರೆ. ವಿಷಯ ಅದಲ್ಲ.
ಇದು ಪ್ರಾಣಿಗಳ ಸಹಜ ಗುಣ
ನೆಕ್ಕುವುದು ಪ್ರಾಣಿಗಳ ಸಹಜ ಚರ್ಯೆ. ಅದನ್ನು ನಿಲ್ಲಿಸಲಾಗದು. ನೀರು, ಆಹಾರವನ್ನು ಅವು ನೆಕ್ಕುವಷ್ಟೇ ಸಹಜವಾಗಿ ತಂತಮ್ಮ ಕೈ, ಕಾಲು, ಆಟದ ವಸ್ತುಗಳಿಂದ ಹಿಡಿದು ತಮ್ಮ ಮರ್ಮಾಂಗ ಅಥವಾ ವಿಸರ್ಜನೆಗಳವರೆಗೆ ಎಲ್ಲವನ್ನೂ ನೆಕ್ಕುತ್ತವೆ. ಇವೆಲ್ಲ ಪ್ರಾಣಿಗಳ ಪಾಲಿಗೆ ನೈಸರ್ಗಿಕ ವಿಷಯಗಳು. ಆದರೆ ಅದೇ ಬಾಯಲ್ಲಿ ನಮ್ಮ ಮುಖ-ಮೂತಿಗಳನ್ನೂ ನೆಕ್ಕುವುದೆಂದರೆ…? ತಮ್ಮ ಆತ್ಮೀಯತೆಯನ್ನು ಪ್ರೀತಿಯನ್ನು ತೋರಿಸಿಕೊಳ್ಳಲು ನಮ್ಮ ಭಾಷೆ ಬಾರದ ಅವುಗಳಿಗೆ ನೆಕ್ಕುವುದು ಸಹಜವೇ ಆದರೂ, ನಮ್ಮ ಬಗ್ಗೆ ನಾವು ಯೋಚಿಸಿಕೊಳ್ಳಬೇಡವೇ ಎಂಬುದು ಪ್ರಶ್ನೆ.
ಕೆಲವರ ಪಾಲಿಗೆ ಶ್ವಾನಗಳ ಎಂಜಲು ಅಪಾಯವನ್ನು ತಂದೊಡ್ಡಿದ ಉದಾಹರಣೆಗಳಿವೆ. ದೇಹದ ಪ್ರತಿರೋಧಕತೆ ಕಡಿಮೆ ಇರುವವರು, ವೃದ್ಧರು, ಪುಟ್ಟ ಮಕ್ಕಳು, ಗರ್ಭಿಣಿಯರು ಮತ್ತು ತೆರೆದ ಗಾಯಗಳು ಇರುವವರಿಗೆ ನಾಯಿಗಳಿಂದ ನೆಕ್ಕಿಸಿಕೊಳ್ಳುವುದು ತೊಂದರೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ, ಸಾಕು ನಾಯಿಗಳ ಬಾಯಲ್ಲಿರುವ ಬ್ಯಾಕ್ಟೀರಿಯಗಳು ಅವರ ಮಾಲೀಕರಿಗೆ ಅಂಥ ಅಪಾಯಕಾರಿಯಲ್ಲ ಎನ್ನಲಾಗುತ್ತದೆ. ಜೀವನುದ್ದಕ್ಕೂ ಪ್ರಾಣಿಗಳನ್ನು ಸಾಕುತ್ತಲೇ, ಅವುಗಳಿಂದ ಪಪ್ಪಿ ಕೊಡಿಸಿಕೊಳ್ಳುತ್ತಲೇ ಬದುಕಿದ ಬಹಳಷ್ಟು ಮಂದಿ ಆರೋಗ್ಯವಾಗಿಯೇ ಇದ್ದಾರೆ. ಆದಾಗ್ಯೂ, ಪ್ರಭೇದಗಳ ನಡುವೆ ವರ್ಗಾವಣೆಗೊಳ್ಳಬಹುದಾದ (ಉದಾ, ನಾಯಿಯಿಂದ ಮನುಷ್ಯರಿಗೆ) ರೋಗಾಣುಗಳು ಕೆಲವೊಮ್ಮೆ ತೀವ್ರ ಸಮಸ್ಯೆಗಳನ್ನು ತರುತ್ತವೆ.
ಮಾರಣಾಂತಿಕ ಸೋಂಕು
ಆರೋಗ್ಯವಂತ ನಾಯಿ ಮತ್ತು ಬೆಕ್ಕುಗಳ ಬಾಯಲ್ಲಿರುವ Capnocytophaga canimorsus ಎನ್ನುವ ಬ್ಯಾಕ್ಟೀರಿಯಗಳಿಂದ ಮಾರಣಾಂತಿಕ ಸೋಂಕುಗಳು ಮಾಲೀಕರಿಗೆ ಬಂದಿರುವ ಪ್ರಕರಣಗಳಿವೆ. ಮೆನಿಂಜೈಟಿಸ್ ಸೇರಿದಂತೆ ಗಂಭೀರ ಸೋಂಕುಗಳನ್ನು ಹರಡುವ Pasteurella multocida ಸೂಕ್ಷ್ಮಾಣುಗಳು ನಾಯಿಯ ಎಂಜಲಿನಲ್ಲಿ ನೆಲೆಸಿರುತ್ತವೆ. ಪ್ರತಿಜೈವಿಕಗಳಿಗೆ ಪ್ರತಿರೋಧಕತೆಯನ್ನು ಒಡ್ಡುವ ಜೀನ್‌ಗಳು ಸಹ ನಾಯಿಗಳ ಎಂಜಲಿನಲ್ಲಿ ಇರುತ್ತವೆ ಎನ್ನಲಾಗಿದ್ದು, ಮಾನವರ ಮೇಲೆ ಇದರ ದುಷ್ಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ.
ಜಾಗೃತೆ ವಹಿಸಿ
ಇದರರ್ಥ ನಾಯಿ ಸಾಕುವ ಬಗ್ಗೆ, ಅವುಗಳನ್ನು ಪ್ರೀತಿಸುವ ಬಗ್ಗೆ ಅನುಮಾನ ಪಡಬೇಕು ಎಂದಲ್ಲ. ಮನೆಯೊಳಗೆ ಇರಿಸಿಕೊಳ್ಳುವ ಪ್ರಾಣಿಗಳೆಂದರೆ ಅವುಗಳ ಸ್ವಚ್ಛತೆಯ ಬಗ್ಗೆ ನಿಶ್ಚಿತವಾಗಿ ಗಮನ ಇರಿಸಲಾಗುತ್ತದೆ. ಕಾಲಕಾಲಕ್ಕೆ ಚುಚ್ಚುಮದ್ದು, ಔಷಧಿಗಳನ್ನೆಲ್ಲ ಕೊಡಿಸುವುದೂ ಹೌದು. ಪ್ರಾಣಿ ಪ್ರಿಯರ ಪಾಲಿಗೆ ಸಾಕು ಪ್ರಾಣಿಗಳನ್ನೊಮ್ಮೆ ಮುದ್ದಾಡುವುದು ದಿನದ ಮೆಚ್ಚಿನ ಕ್ಷಣಗಳಾಗಿರಬಹುದು. ಇದಾವುದೂ ತಪ್ಪಲ್ಲ. ಆದರೆ ಅವುಗಳಿಂದ ಮುಖ ನೆಕ್ಕಿಸಿಕೊಳ್ಳುವ ಮುನ್ನ ಜಾಗ್ರತೆ ಮಾಡಿ ಎನ್ನುತ್ತವೆ ಕೆಲವು ಅಧ್ಯಯನಗಳು.
ಇದನ್ನೂ ಓದಿ: Working Tips: ಇಡೀ ದಿನ ಕುಳಿತು ಕೆಲಸ ಮಾಡುತ್ತೀರಾ? ಹಾಗಾದರೆ ಏನು ತಿನ್ನುತ್ತಿದ್ದೀರಿ ಗಮನಿಸಿ!