Site icon Vistara News

Winter Vegetables: ಈ ಎಲ್ಲ ಸೊಪ್ಪು ತರಕಾರಿಗಳನ್ನು ಚಳಿಗಾಲದಲ್ಲಿ ಮರೆಯದೆ ತಿನ್ನಿ! ಏಕೆ ಅಂತೀರಾ?

Winter Vegetables

ನೀವು ಗಮನಿಸಿರಬಹುದು, ಚಳಿಗಾಲ ಬರುತ್ತಿದ್ದಂತೆ ತರಕಾರಿ (winter vegetables) ಮಾರುಕಟ್ಟೆ ಹಸಿರಿನಿಂದ ಕಂಗೊಳಿಸಲು ಆರಂಭವಾಗುತ್ತದೆ. ಹಸಿರು ಬಟಾಣಿ, ಹಸಿರು ಸೊಪ್ಪುಗಳಾದ, ಪಾಲಕ್‌, ಮೆಂತ್ಯ ಸೊಪ್ಪು, ಸಬ್ಬಸ್ಸಿಗೆ ಹೀಗೆ ಬಗೆಬಗೆಯ ಸೊಪ್ಪುಗಳು, ಆಗಷ್ಟೇ ಗದ್ದೆಯಿಂದ ಕಿತ್ತು ತಂದ ಮೂಲಂಗಿ, ಬೀಟ್‌ರೂಟ್‌, ಕ್ಯಾರೆಟ್ಟುಗಳು, ಅವುಗಳ ಸೊಪ್ಪುಗಳು! ಹೀಗೆ ಬಗೆಬಗೆಯ ಹಸಿರು ಸೊಪ್ಪುಗಳೂ, ತರಕಾರಿಗಳೂ, ಪ್ರತಿಯೊಬ್ಬರನ್ನೂ ಮಾರುಕಟ್ಟೆಯಲ್ಲಿ ಸೆಳೆಯದೆ ಇರಲಾರದು. ಈ ತಾಜಾ ಹಸಿರು ತರಕಾರಿಗಳಿಂದ ಬಿಸಿಬಿಸಿಯಾಗಿ ಅಡುಗೆ ಮಾಡಿ ತಿನ್ನಲು ಈ ಚಳಿಗಾಲ ಹೇಳಿ ಮಾಡಿಸಿದ್ದು ಎಂದನಿಸಿದರೂ, ಆರೋಗ್ಯದ ವಿಚಾರದಲ್ಲೂ ಅದು ಸತ್ಯವೇ. ಹೆಚ್ಚು ಹೆಚ್ಚು ರೋಗಗಳಿಗೆ ತುತ್ತಾಗುವ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಈ ಕಾಲದಲ್ಲಿ ಪ್ರಕೃತಿಯೇ ತಾನಾಗಿ ʻತಿಂದು ಗಟ್ಟಿಯಾಗಿರಿʼ ಎಂದು ನಮಗೆ ಮೊಗೆಮೊಗೆದು ಪೋಷಕಾಂಶಯುಕ್ತ ಹಸಿರು ತರಕಾರಿಗಳನ್ನು ನೀಡುವಾಗ ತಿನ್ನದೇ ಇರುವುದೇ ಹೇಳಿ! ಬನ್ನಿ, ಚಳಿಗಾಲದಲ್ಲಿ ಯಾವೆಲ್ಲ ಹಸಿರು ಸೊಪ್ಪು ತರಕಾರಿಗಳನ್ನು ಮರೆಯದೆ ತಿನ್ನಬೇಕು ಎಂಬುದನ್ನು ನೋಡೋಣ.

ಪಾಲಕ್

ಚಳಿಗಾಲ ಬರುತ್ತಿದ್ದ ಹಾಗೆ, ದಷ್ಟಪುಷ್ಟವಾಗಿ ಬೆಳೆದ ಪಾಲಕ್‌ ಎಲೆಗಳು ಮಾರುಕಟ್ಟೆಗೆ ಬರಲಾರಂಭಿಸುತ್ತದೆ. ಕಬ್ಬಿಣಾಂಶದಿಂದ ಸಮೃದ್ಧವಾಗಿರುವ, ವಿಟಮಿನ್‌ ಹಾಗೂ ಖನಿಜಾಂಶಗಳಿಂದ ತುಂಬಿಕೊಂಡಿರುವ ಈ ಹಸಿರು ಸೊಪ್ಪನ್ನು ಬಗೆಬಗೆಯ ಅಡುಗೆಗಳಲ್ಲಿ ಬಳಸಬಹುದು. ಸೂಪ್‌, ಸ್ನ್ಯಾಕ್‌ಗಳು, ಸೈಡ್‌ ಡಿಶ್‌ಗಳಲ್ಲಿ ಬಳಸುವ ಮೂಲಕ ಸೇವಿಸಬಹುದು.

ಮೆಂತ್ಯಸೊಪ್ಪು

ಕೊಂಚ ಕಹಿ/ಒಗರಿನ ರುಚಿಯಿದ್ದರೂ ಮೆಂತ್ಯ ಸೊಪ್ಪು ಹಲವಾರು ಅಡುಗೆಗಳಲ್ಲಿ ಬಳಸಲಾಗುತ್ತದೆ. ಉತ್ತರ ಭಾರತದಲ್ಲಿ, ಮೆಂತ್ಯ ಪರಾಠಾ, ಆಲೂ ಮೆಂತ್ಯ ಪಲ್ಯ ಇತ್ಯಾದಿಗಳಲ್ಲಿ ಜನಪ್ರಿಯ. ಇದಲ್ಲದೆ, ಮೆಂತ್ಯ ರೈಸ್‌ ಭಾತ್‌, ಮೆಂತ್ಯ ಸೊಪ್ಪಿನ ವಡೆ ಸೇರಿದಂತೆ ನಾನಾ ಬಗೆಯ ಅಡುಗೆಗಳನ್ನು ಮಾಡುವ ಮೂಲಕ ನಾವು ಮೆಂತ್ಯ ಸೊಪ್ಪಿನ ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ಸಾಸಿವೆ ಸೊಪ್ಪು

ಉತ್ತರ ಭಾರತದಲ್ಲಿ ಸರ್ಸೋಂ ಕಾ ಸಾಗ್‌ ಎಂದೇ ಜನಪ್ರಿಯವಾಗಿರುವ ಈ ಸೊಪ್ಪನ್ನು ಇತರ ಸೊಪ್ಪುಗಳ ಜೊತೆಗೂ ಸೇರಿಸಿ ಅಡುಗೆ ಮಾಡಲಾಗುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ಮಕ್ಕೀ ಕೀ ರೋಟಿ ಮಾಡಿದರೆ, ಚಳಿಗಾಲದಲ್ಲಿ ಸರ್‌ಸೋಂ ಕಾ ಸಾಗ್‌ ಇರಲೇಬೇಕು! ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಈ ಸೊಪ್ಪಿನಲ್ಲಿ ಚಳಿಗಾಲಕ್ಕೆ ಅಗತ್ಯವಾಗಿರುವ, ರೋಗ ನಿರೋಧಕ ಶಕ್ತಿ ಕೊಡುವ ಪೋಷಕಾಂಶಗಳಿವೆ.

ಸೋರೆಕಾಯಿ

ಸೋರೆಕಾಯಿ, ರುಚಿಯಲ್ಲಿ ಅಂತಹ ಹೆಸರುವಾಸಿಯಲ್ಲದಿದ್ದರೂ, ಇದು ಎಲ್ಲ ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿ. ಎಲ್ಲ ಕಾಳದಲ್ಲೂ ಲಭ್ಯವಾದರೂ, ಚಳಿಗಾಲದಲ್ಲಿ, ಇದರ ಆರೋಗ್ಯಕರ ಲಾಭಗಳನ್ನು ಅಗತ್ಯವಾಗಿ ಪಡೆಯಬೇಕು. ಚಳಿಗಾಲದಲ್ಲಿ ಇದರ ಬಿಸಿ ಬಿಸಿ ಸೂಪ್‌, ಸಾರು ಮಾಡಿಕೊಂಡು ಕುಡಿಯಬಹುದು, ಪಲ್ಯ ಮಾಡಿಯೂ ತಿನ್ನಬಹುದು.

ಹಸಿರು ಬಟಾಣಿ

ಚಳಿಗಾಲ ಬಂದೊಡನೆ ಮಾರುಕಟ್ಟೆಗೆ ಲಗ್ಗೆಯಿಡುವ ಹಸಿರು ತರಕಾರಿಗಳ ಪೈಕಿ ಪ್ರಮುಖವಾದುದು ಬಟಾಣಿ ಕೂಡಾ. ತಾಜಾ ಬಟಾಣಿ ಚಳಿಗಾಲದಲ್ಲಿ ದಂಡಿಯಾಗಿ ಮಾರುಕಟ್ಟೆ ಬರುತ್ತವೆ. ಸುಲಿದಿಟ್ಟು ಫ್ರಿಡ್ಜ್‌ನಲ್ಲಿ ವರ್ಷಕ್ಕಾಗುವಷ್ಟು ಶೇಖರಿಸಿಯೂ ಇಡುವ ಪದ್ಧತಿ ರೂಢಿಯಲ್ಲಿದೆ. ಉತ್ತರ ಭಾರತೀಯರಿಗೆ, ಮಟರ್‌ ಪನೀರ್‌, ಆಲೂ ಮಟರ್‌ ಇತ್ಯಾದಿ ಅಡುಗೆಗಳನ್ನು ಮಾಡಲು ಇದು ಸಕಾಲ.

ಕೊತ್ತಂಬರಿ ಸೊಪ್ಪು

ಎಲ್ಲ ಕಾಲದಲ್ಲೂ ಇದು ಲಭ್ಯವಿದ್ದರೂ ಚಳಿಗಾಲದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ರಾಶಿರಾಶಿಯಾಗಿ ಸಿಗುವ ಸೊಪ್ಪಿದು. ಬಗೆಬಗೆಯ ಚಟ್ನಿಗಳಲ್ಲಿ ಬಳಸುವ ಮೂಲಕ ನಿತ್ಯವೂ ಸೇವಿಸಬಹುದು. ಚಳಿಗಾಲದಲ್ಲಿ ಸೇವಿಸಲೇಬೇಕಾದ ಇನ್ನೊಂದು ಸೊಪ್ಪಿದು.

ಪುದಿನ

ತಾಜಾ ಘಮವಿರುವ ಈ ಸೊಪ್ಪೂ ಕೂಡ ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತದೆ. ಚಟ್ನಿಗಳು, ಚಹಾ, ಬಿರಿಯಾನಿಗಳಲ್ಲಿ, ಪರಾಠಾಗಳಲ್ಲಿ ಹೀಗೆ ಬಹುಬಗೆಯಲ್ಲಿ ಆಹಾರಕ್ಕೆ ಇವನ್ನು ಬಳಸಬಹುದು.

ಸಬ್ಬಸ್ಸಿಗೆ

ಈ ಸೊಪ್ಪೂ ಕೂಡ ತನ್ನದೇ ಆದ ವಿಶೇಷ ಘಮದಿಂದ ಚಿರಪರಿಸಿತ ಸೊಪ್ಪು. ಸಬ್ಬಸ್ಸಿಗೆಯಿಂದ ವಡೆ, ರೈಸ್‌ಬಾತ್‌, ಬಗೆಬಗೆಯ ಚಟ್ನಿಗಳು ಹೀಗೆ ತರಹೇವಾರಿ ಅಡುಗೆಗಳನ್ನು ಮಾಡಬಹುದು. ಚಳಿಗಾಲದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಈ ಸೊಪ್ಪು ನಿದ್ರಾಹೀನತೆಗೆ ಒಳ್ಳೆಯ ಮದ್ದು. ರೋಗ ನಿರೋಧಕತೆಯನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: Winter Health Tips: ಬಂದೇ ಬಿಡ್ತು ಚಳಿಗಾಲ! ಇರಲಿ ಆರೋಗ್ಯದ ಕಡೆಗೆ ಎಚ್ಚರ!

Exit mobile version