Site icon Vistara News

New Year 2024: ಕಳೆಗುಂದದಿರಲಿ ಹೊಸ ವರ್ಷದ ಫಿಟ್‌ನೆಸ್‌ ನಿರ್ಧಾರಗಳು!

New Year 2024 Fitness

ಹೊಸ ವರ್ಷ ಆರಂಭವಾದ (New Year 2024) ಮೊದಲ ವಾರ ವಾಕಿಂಗ್‌ ಮಾಡಲು ಹೋಗಬಾರದೆಂಬ ಮಾತಿದೆ. ಕಾರಣ, ಹೊಸ ನಿರ್ಣಯಗಳನ್ನು ಕೈಗೊಂಡು ಆರಂಭಶೂರತ್ವ ಮೆರೆಯುವವರದ್ದು ವಾಕಿಂಗ್‌ ಜಾಗಗಳಲ್ಲಿ ನೂಕುನುಗ್ಗಲು. ಹಾಗೆಯೇ ಜನವರಿ ತಿಂಗಳಲ್ಲಿ ಜಿಮ್‌, ಯೋಗ ತರಗತಿಗಳು, ಎರೋಬಿಕ್ಸ್‌, ಜುಂಬಾ, ಪಿಲಾಟೆ ಮುಂತಾದ ಫಿಟ್‌ನೆಟ್‌ ತರಗತಿಗಳ ಸದಸ್ಯತ್ವದಲ್ಲಿ ದಿಢೀರ್‌ ಏರಿಕೆ ಕಾಣುತ್ತದೆ. ವರ್ಷ ಹಳೆಯದಾಗುತ್ತಿದ್ದಂತೆ ನಿರ್ಣಯಗಳೂ ಹಳೆಯದಾಗುತ್ತವೆ, ಮೂಲೆ ಸೇರುತ್ತವೆ! ವಾಕಿಂಗ್‌ ಜಾಗಗಳು ತೆರವಾಗುತ್ತವೆ, ಫಿಟ್‌ನೆಸ್‌ ಕ್ಲಾಸುಗಳಲ್ಲಿ ನೂಕುನುಗ್ಗಲು ಕಡಿಮೆಯಾಗಿ ಎಂದಿನಂತಾಗುತ್ತದೆ.

ಇದೇ ಅವಸ್ಥೆ ಡಯೆಟ್‌ ಮಾಡುವವರು ಮತ್ತು ತೂಕ ಇಳಿಸುವವರದ್ದು ಸಹ. ಹೊಸ ವರ್ಷದಲ್ಲಿ ಸಿಹಿ ತಿನ್ನುವುದಿಲ್ಲ, ಕರಿದ ತಿಂಡಿಗಳನ್ನು ಮುಟ್ಟುವುದಿಲ್ಲ, ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ. ಒಂದು ತಿಂಗಳಲ್ಲಿ ೫ ಕೆ.ಜಿ. ತೂಕ ಇಳಿಸುತ್ತೇನೆ… ಮುಂತಾದ ಕೈಲಾಗದ ಶಪಥಗಳನ್ನು ಮಾಡಿದರೆ, ಅವೆಲ್ಲಾ ಎಷ್ಟು ದಿನ ಉಳಿಯುವುದಕ್ಕೆ ಸಾಧ್ಯ? ಹಾಗಾದರೆ ಉಳಿಸಿಕೊಂಡು ಹೋಗುವಂಥ ಫಿಟ್‌ನೆಸ್‌ ಅಥವಾ ಡಯೆಟ್‌ ಶಪಥಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲವೇ? ಸ್ವ-ಸಹಾಯ ಅಥವಾ ಸ್ವ-ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಹಾಕುವುದಾದರೆ, ಅದಕ್ಕೆ ಸೂಕ್ತ ಆರೋಗ್ಯವೂ ಬೇಕಲ್ಲವೇ? ಆರೋಗ್ಯವೃದ್ಧಿಗೆ ಎಂಥಾ ನಿರ್ಣಯಗಳು ಸೂಕ್ತ?

ಆಗುವಂಥ ನಿರ್ಣಯಗಳು

ನಾವು ನಿರ್ಣಯಿಸಿಕೊಂಡ ಮಾತ್ರಕ್ಕೆ ಅದು ನೆರವೇರಲೇಬೇಕೆಂಬ ನಿಯಮವೇನೂ ಇಲ್ಲವಲ್ಲ. ಆದರೆ, ನೆರವೇರುವಂಥ ವಿಷಯಗಳನ್ನು ನಿರ್ಣಯಿಸಿಕೊಳ್ಳಲು ನಮಗೆ ಸಾಧ್ಯವಿದೆಯಲ್ಲ. ಉದಾ, ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಐದು ಕೆ.ಜಿ. ತೂಕ ಹೆಚ್ಚಿದೆ ಎಂದಾದರೆ, ಅದನ್ನು ಎರಡು ತಿಂಗಳಲ್ಲಿ ಇಳಿಸುವ ನಿರ್ಧಾರ ಮಾಡುವುದು ಸರಿಯೇ? ಹೆಚ್ಚುವುದಕ್ಕೆ ಒಂದಿಡೀ ವರ್ಷ; ಇಳಿಸುವುದಕ್ಕೆ ಎರಡು ತಿಂಗಳು! ಇದರಿಂದ ನಮ್ಮ ವ್ಯಾಯಾಮ, ಆಹಾರಕ್ರಮ ಏನಾಗಬೇಕು ಮತ್ತು ಆರೋಗ್ಯ ಎಷ್ಟು ಏರುಪೇರಾದೀತು ಎಂಬ ಕಲ್ಪನೆ ಇರಬೇಡವೇ? ಹಾಗಾಗಿ ಸಾಧ್ಯಾಸಾಧ್ಯತೆಯ ಕಲ್ಪನೆಯನ್ನು ಇರಿಸಿಕೊಂಡು ನಿರ್ಧಾರ ಮಾಡಿ ಹೊಸ ವರ್ಷಕ್ಕೆ.

ಡಯೆಟ್

ಬೇಕಾಬಿಟ್ಟಿ ಆಹಾರಕ್ರಮಗಳನ್ನು ಅನುಸರಿಸಬೇಡಿ. ದಿನಕ್ಕೆ ಒಂದು ಹೊತ್ತು ಕೇವಲ ಸಲಾಡ್‌, ಹಣ್ಣುಗಳನ್ನು ತಿನ್ನುವುದಾಗಿ ನಿರ್ಣಯಿಸಿದರೆ ತಪ್ಪಲ್ಲ. ಆದರೆ ದಿನಕ್ಕೆ ಅದಷ್ಟನ್ನೇ ತಿನ್ನುತ್ತೇನೆಂದು ನಿರ್ಣಯಿಸಿದರೆ ಅಪಾಯ ತಪ್ಪಿದ್ದಲ್ಲ. ಅಥವಾ ನಿಮ್ಮಿಷ್ಟದ್ದೆಲ್ಲಾ ಬಿಡುತ್ತೇನೆ ಎಂದು ನಿರ್ಧರಿಸಿದರೆ ನಾಲ್ಕು ದಿನದಲ್ಲಿ ನಿರ್ಧಾರ ಮಗುಚುತ್ತದೆ. ಡಯೆಟ್‌ ಅನುಸರಿಸುವಾಗ ಯಾವುದು ಸುಸ್ಥಿರ ಎಂಬುದನ್ನು ಮೊದಲು ತಿಳಿದುಕೊಳ್ಳಿ. ದೀರ್ಘಕಾಲದಲ್ಲಿ ಆ ಕ್ರಮಗಳಿಂದ ದೇಹ ಗಟ್ಟಿಯಾಗಬೇಕು. ಅಂದರೆ ದಿನಕ್ಕೊಂದು ಹಣ್ಣು ತಿನ್ನುವುದು, ಉಪ್ಪು ಕಡಿಮೆ ತಿನ್ನುವುದು, ಎಂಟು ಗ್ಲಾಸ್‌ ನೀರು ಕುಡಿಯುವುದು, ದಿನಾ ೩೦ ನಿಮಿಷ ವ್ಯಾಯಾಮ- ಹೀಗೆ ಸಣ್ಣ ಬದಲಾವಣೆಗಳನ್ನು ಕ್ರಮೇಣ ಮಾಡುತ್ತಾ ಬನ್ನಿ

ಊಟ ತನ್ನಿಚ್ಛೆ

ಗಾದೆ ಹಳೆಯದೇ ಆದರೂ ಇದಕ್ಕೆ ಹೊಸ ಅರ್ಥ ಹುಡುಕಿಕೊಳ್ಳಿ! ಅಂದರೆ ನಿಮ್ಮ ಊಟದ ತಟ್ಟೆಯಲ್ಲಿ ನಿಮ್ಮ ಆರೋಗ್ಯಕ್ಕೆ ಬೇಕಾಗಿದ್ದನ್ನು ಇರಿಸಿಕೊಳ್ಳಿ, ಉಳಿದವರಿಗೆ ಸರಿಹೊಂದುವಂಥದ್ದಲ್ಲ. ಇಡಿ ಧಾನ್ಯಗಳು, ಸಿರಿಧಾನ್ಯಗಳು, ಕಾಳುಗಳು ಮುಂತಾದವು ನಿಮಗೆ ಇಷ್ಟವೆಂದಾದರೆ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕು. ಕುಟುಂಬದ ಉಳಿದವರಿಗೆ ನೀವು ಮಾದರಿಯಾಗಿ ಹೊರತು, ಅವರ ಗುಜರಿ ತಿಂಡಿಗಳ ದಾರಿಯಲ್ಲಿ ನೀವು ಹೋಗಬೇಕಿಲ್ಲ.

ತಯಾರಿ

ದಿನದಿನದ ತಯಾರಿಯನ್ನು ವಾರದ ಆರಂಭದಲ್ಲೇ ಮಾಡಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ. ಈ ವಾರಕ್ಕೆಕುಟುಂಬಕ್ಕೆ ಇದಿಷ್ಟು ಹಣ್ಣು-ತರಕಾರಿಗಳು ಬೇಕು ಎಂದಿದ್ದರೆ ಅದನ್ನು ತಂದಿರಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ನೋಡಿ. ದಿನಸಿಯನ್ನೂ ಹೆಚ್ಚಿನ ಭಾಗ ಮೊದಲಿಗೇ ತಂದಿರಿಸಿಕೊಂಡರೆ, ಪದೇಪದೆ ತಲೆಬಿಸಿ ಮಾಡುವ ಗೋಜಿರುವುದಿಲ್ಲ. ಇದರಿಂದ ಯಾವುದೇ ರೀತಿಯ ಆಹಾರಕ್ರಮವನ್ನು ಅನುಸರಿಸಿದರೂ ತಯಾರಿ ಸುಲಭವಾಗುತ್ತದೆ.

ಕುಟುಂಬದೊಂದಿಗೆ ಊಟ

ಯಾವುದೇ ಊಟ ರುಚಿಸುವುದಕ್ಕೆ ಮೊದಲು ಹಸಿವಿರಬೇಡವೇ? ಹಸಿವು ಹೆಚ್ಚುವುದು ನಮ್ಮವರೊಂದಿಗೆ ಕಲೆತಾಗ. ದಿನಕ್ಕೊಂದು ಊಟವನ್ನಾದರೂ ಕುಟುಂಬದವರೊಂದಿಗೆ ಕುಳಿತು ಮಾಡಿ. ಆ ಹೊತ್ತಿಗೆ ಟಿವಿ, ಮೊಬೈಲು ಮುಂತಾದ ಯಾವ ಕಂಟಕಗಳೂ ಬೇಡ. ಇದರಿಂದ ಬದುಕಿನ ಒತ್ತಡವನ್ನು ನಿರ್ವಹಿಸುವುದು, ಊಟದ ರೀತಿ-ರಿವಾಜುಗಳು, ಕೌಟುಂಬಿಕ ಸಾಮರಸ್ಯ ಮುಂತಾದ ಹಲವೆಂಟು ವಿಷಯಗಳು ಸುಲಲಿತವಾಗುತ್ತದೆ.

ಇಂಥ ಕ್ರಮಗಳಿಂದ ಬಂದಿರುವ ಹೊಸ ವರ್ಷದಲ್ಲಿ ನೀವಂದುಕೊಂಡ ನಿರ್ಧಾರಗಳನ್ನು ನೆರವೇರಿಸಿಕೊಳ್ಳಲು ಅನುಕೂಲವಾಗುತ್ತದೆ. ಆರೋಗ್ಯ ಸುಧಾರಣೆ, ತೂಕ ಇಳಿಕೆ ಮುಂತಾದ ಯಾವುದೇ ಆರೋಗ್ಯ ಸಂಬಂಧಿ ತೀರ್ಮಾನಗಳಿದ್ದರೂ ಕೇವಲ ಆರಂಭಶೂರತ್ವವಾಗಿ ಉಳಿಯದಿರಲಿ. ನಡೆಯಲಿ ರಥ ಮುಂದೆ!

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

Exit mobile version