ಬೆಂಗಳೂರು: ಈಗಾಗಲೇ ಪೂರ್ಣ ಬಹುಮತಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ನಾಲ್ಕು ಗ್ಯಾರಂಟಿ ಯೋಜನೆಯನ್ನು (Congress Guarantee Scheme) ಜಾರಿಗೊಳಿಸಿದೆ. ಐದನೇ ಗ್ಯಾರಂಟಿಯಾಗಿರುವ ಯುವ ನಿಧಿಯನ್ನು ಡಿಸೆಂಬರ್‌ನಲ್ಲಿ ಜಾರಿಗೊಳಿಸುವುದಾಗಿ ಹೇಳಿದೆ. ಈ ಮೂಲಕ ಜನಮನ್ನಣೆ ಪಡೆಯುತ್ತಿರುವ ಸರ್ಕಾರವು ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯದಲ್ಲಿ ಮತ್ತೊಂದು ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯನ್ನು (Health Scheme) ಜಾರಿಗೆ ತರಲು ಮುಂದಾಗಿದೆ. ಗೃಹ ಆರೋಗ್ಯ ಯೋಜನೆ (Gruha Arogya Scheme) ಮೂಲಕ ಮನೆ ಮನೆಗೆ ತೆರಳಿ ಆರೋಗ್ಯ ಭಾಗ್ಯವನ್ನು ನೀಡಲು ಚಿಂತನೆ ನಡೆಸಲಾಗಿದೆ.
ಕರ್ನಾಟಕದಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಸಾಂಕ್ರಾಮಿಕವಲ್ಲದ ರೋಗಗಳ (Non communicable diseases) ತಪಾಸಣೆ ಮತ್ತು ಪರೀಕ್ಷೆ ನಡೆಸಿ ಅಗತ್ಯವಿದ್ದವರಿಗೆ ಔಷಧ ಕಿಟ್‌ಗಳನ್ನು (Medicine kit) ನೀಡಲಾಗುತ್ತದೆ. ಈ ಯೋಜನೆ ಈಗ ಅನುಮೋದನೆ ಹಂತದಲ್ಲಿದ್ದು, ಸಚಿವ ಸಂಪುಟದಲ್ಲಿ (Cabinet meeting) ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Karnataka Drought : 15 ದಿನದೊಳಗೆ ಫ್ರೂಟ್ಸ್‌ನಲ್ಲಿ ಮಾಹಿತಿ ನೀಡದಿದ್ದರೆ ರೈತರಿಗಿಲ್ಲ ಬರ ಪರಿಹಾರ!
9 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ
ಈ ಗೃಹ ಆರೋಗ್ಯ ಯೋಜನೆಯನ್ನು ಪ್ರಾಥಮಿಕ ಹಂತದಲ್ಲಿ ನಾಲ್ಕು ವಿಭಾಗಗಳಲ್ಲಿ 9 ಜಿಲ್ಲೆಗಳಲ್ಲಿ ಜಾರಿ ಮಾಡಲುನಿರ್ಧಾರ ಮಾಡಲಾಗಿದೆ. ತುಮಕೂರು, ರಾಮನಗರ, ಗದಗ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಯಾದಗಿರಿ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದೆ. ಇಲ್ಲಿನ ಯಶಸ್ಸಿನ ಬಳಿಕ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
2024ರ ಜನವರಿ ವೇಳೆಗೆ ಮೊದಲ ಹಂತದ ತಪಾಸಣೆ ಕಾರ್ಯವನ್ನು ಆರೋಗ್ಯ ಅಧಿಕಾರಿಗಳ ತಂಡ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಔಷಧ ಖರೀದಿ ಪ್ರಕ್ರಿಯೆಯನ್ನು ಆರಂಭಿಸುವ ನಿರೀಕ್ಷೆ ಇದೆ.
ತಂಡದಲ್ಲಿ ಯಾರು ಇರಲಿದ್ದಾರೆ?
ಸಮುದಾಯ ಆರೋಗ್ಯ ಅಧಿಕಾರಿ (CHO), ಆಶಾ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿಗಳನ್ನು ಒಳಗೊಂಡಂತೆ ಎರಡರಿಂದ ನಾಲ್ಕು ಜನರ ತಂಡವು ಇದರಡಿ ಕಾರ್ಯನಿರ್ವಹಣೆ ಮಾಡಲಿವೆ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿ ಈ ಯೋಜನೆಯು ಜಾರಿಗೆ ಬರುತ್ತಲಿದೆ.
ಎಷ್ಟು ಅನುದಾನ ಮೀಸಲು?
ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ದೊರೆತರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 69.15 ಕೋಟಿ ರೂಪಾಯಿ ಅನುದಾನ ಮತ್ತು 15ನೇ ಹಣಕಾಸು ಆಯೋಗದಿಂದ 13.27 ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ಈ ಅನುದಾನದಿಂದ ಅಗತ್ಯ ಔಷಧ ಮತ್ತು ಪರೀಕ್ಷಾ ಸಾಧನಗಳ ಖರೀದಿ ಹಾಗೂ ಸಿಬ್ಬಂದಿಯ ಓಡಾಟ ವೆಚ್ಚ ಸೇರಿದಂತೆ ಇತರ ಖರ್ಚನ್ನು ನೋಡಿಕೊಳ್ಳಲಾಗುತ್ತದೆ.
ಕಾರ್ಯನಿರ್ವಹಣೆ ಹೇಗೆ?
ಪ್ರತಿ ಆರೋಗ್ಯ ಮತ್ತು ಕಲ್ಯಾಣ ಕೇಂದ್ರದ (HWC) ತಂಡಗಳು ಕಾರ್ಯನಿರ್ವಹಣೆ ಮಾಡಲಿದೆ. 16 ವಾರಗಳ ಕಾಲ ಕಾರ್ಯನಿರ್ವಹಣೆ ಮಾಡಲಿದ್ದು, ಸೋಮವಾರ, ಬುಧವಾರ ಮತ್ತು ಶುಕ್ರವಾರ ಮನೆ ಮನೆಗೆ ಭೇಟಿ ಸಮಯವನ್ನು ನಿಗದಿ ಮಾಡಲಾಗಿದೆ. ಈ ತಂಡಗಳು ತಲಾ 20 ಮನೆಗಳಿಗೆ ಭೇಟಿ ನೀಡಲಿವೆ. ಪ್ರತಿ ಆರೋಗ್ಯ ಮತ್ತು ಕಲ್ಯಾಣ ಕೇಂದ್ರದ ವತಿಯಿಂದ 1,000 ಮನೆಗಳನ್ನು ಒಳಗೊಂಡಿದೆ.
ಈ ವೇಳೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ 30 ವರ್ಷ ಮೇಲ್ಪಟ್ಟವರ ರೋಗ ಲಕ್ಷಣ ಗುರುತಿಸಿ ಅಗತ್ಯಬಿದ್ದರೆ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ ಮತ್ತು ಗರ್ಭಕಂಠ, ಸ್ತನ ಮತ್ತು ಬಾಯಿಯ ಕ್ಯಾನ್ಸರ್‌ಗಳಂತಹ ರೋಗಗಳು ದೃಢಪಟ್ಟರೆ ಮೂರು ತಿಂಗಳವರೆಗಿನ ಔಷಧ ಕಿಟ್ ಅನ್ನು ನೀಡಲಾಗುತ್ತದೆ.
ರೋಗಿಗಳ ದತ್ತಾಂಶ ಸಂಗ್ರಹ
ಸಮುದಾಯ ಆರೋಗ್ಯ ಕೇಂದ್ರಗಳ ಆರೋಗ್ಯಾಧಿಕಾರಿಗಳು NCD (ಸಾಂಕ್ರಾಮಿಕವಲ್ಲದ ರೋಗಗಳು) ಪೋರ್ಟಲ್‌ನಲ್ಲಿ ತಮ್ಮ ಭೇಟಿ ವೇಳೆ ಕಂಡು ಬಂದ ಪಾಸಿಟಿವ್ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮಗೆ ಕೊಡಲಾದ ABHA ID ಸಹಾಯದಿಂದ ಅಪ್ಲೋಡ್ ಮಾಡುತ್ತಾರೆ. ಇದು ರೋಗಿಗಳ ಸ್ಥಿತಿಗತಿಯನ್ನು ಸೂಚಿಸುವುದಲ್ಲದೆ, ಅವರಿಗೆ ಇರುವ ಔಷಧ ಪೂರೈಕೆಯ ಅಗತ್ಯತೆಯನ್ನು ಮನಗಾಣಲು ಸಹಾಯವಾಗುತ್ತದೆ. ಇನ್ನು ಅಂಥವರ ಮನೆಯ ಗೋಡೆಗಳಿಗೆ ಗೃಹ ಆರೋಗ್ಯ ಸ್ಟಿಕ್ಕರ್‌ಗಳನ್ನು ಸಹ ಅಂಟಿಸಲಾಗುತ್ತದೆ.
ಇದನ್ನೂ ಓದಿ : NPS Cancellation : ಡಿಸೆಂಬರ್‌ನಲ್ಲಿ ಎನ್‌ಪಿಎಸ್ ರದ್ದು? ಆರ್ಥಿಕ ಇಲಾಖೆ ಜತೆ ಶೀಘ್ರ ಸಿದ್ದರಾಮಯ್ಯ ಸಭೆ
ಆರೋಗ್ಯ ಅಧಿಕಾರಿಗಳಿಗೆ ತರಬೇತಿ
ಗೃಹ ಆರೋಗ್ಯ ಯೋಜನೆಯಡಿ ಕಾರ್ಯನಿರ್ವಹಣೆ ಮಾಡಲು ಎಲ್ಲ ಆರೋಗ್ಯ ಅಧಿಕಾರಿಗಳಿಗೆ ಹಂತ ಹಂತವಾಗಿ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ತರಬೇತಿಯನ್ನು ಪ್ರಾರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.