ಲೋಕದಲ್ಲಿ ಅತ್ಯಂತ ಸುಲಭವಾದ (Weight Loss Tips) ವಿದ್ಯೆ ಎಂದರೆ ವೈದ್ಯ ವಿದ್ಯೆ ಎಂಬ ಮಾತಿದೆ. ಇದಕ್ಕೆ ಪೂರಕವಾದ ಹಳೆಯ ಕಥೆಯೂ ಇದೆ. ಆ ಕಥೆ ಗೊತ್ತಿಲ್ಲದಿದ್ದರೆ ಬೇಡ, ʻಅಯ್ಯೊ, ತಲೆನೋವುʼ ಎಂದು ಒಂದು ಬಾರಿ ಹೇಳಿ ನೋಡಿ. ಸುತ್ತಲಿಂದ ಹತ್ತಾರು ಔಷಧಿಯ ಸಲಹೆಗಳು ಕ್ಷಿಪ್ರವಾಗಿ ಬರುತ್ತವೆ. ಇನ್ನು ತೂಕ ಇಳಿಸಬೇಕು, ಹೊಟ್ಟೆ ಕರಗಿಸಬೇಕು, ಕೂದಲು ಉದುರುತ್ತಿದೆ- ಇಂಥವನ್ನೆಲ್ಲ ಹೇಳಿದರಂತೂ ಸಲಹೆಗಳ ಮಹಾಪೂರವೇ ಹರಿದುಬರುತ್ತದೆ. ಇಂಥದ್ದೇ ಇನ್ನೊಂದು ವಿಷಯವೆಂದರೆ ಡಿಟಾಕ್ಸ್ ಪೇಯಗಳು. ಇಂಟರ್ನೆಟ್ ಪೂರಾ ತುಂಬಿ ತುಳುಕಾಡುವ ಈ ಪೇಯಗಳು ವ್ಯಕ್ತಿಗತವಾಗಿ ಭಿನ್ನ ಫಲಿತಾಂಶವನ್ನು ನೀಡಬಹುದು. ಹೆಚ್ಚಿನ ಪೇಯದ ಮಾದರಿಗಳ ಬಗ್ಗೆ ವೈಜ್ಞಾನಿಕ ಪುರಾವೆಗಳು ಇಲ್ಲದಿರಬಹುದು. ಆದರೆ ಇವುಗಳನ್ನು ಬಳಸಿದರೆ ಆರೋಗ್ಯಕ್ಕೆ ಲಾಭವಿದೆ ಎಂದು ನಂಬಲಾಗಿದೆ. ಇಂಥದ್ದೇ ನಂಬಿಕೆಯ ಮದ್ದು, ದಾಲ್ಚಿನ್ನಿ ಚಕ್ಕೆಯ (Weight Loss with Cinnamon Water) ನೀರು.
ದಾಲ್ಚಿನ್ನಿ ಚಕ್ಕೆ
ಚಕ್ಕೆಯನ್ನು ನೀರಿನಲ್ಲಿ ಕುದಿಸಿ ಆರಿಸಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ತೂಕ ಇಳಿಕೆಗೆ ಅನುಕೂಲ ಎನ್ನಲಾಗುತ್ತದೆ. ತೂಕ ಇಳಿಸಲು ಮಾತ್ರವಲ್ಲ, ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೂ ಇದು ನೆರವಾಗುತ್ತದೆ ಎಂದು ಹಲವಾರು ಮಂದಿ ತಮ್ಮ ಬೆಳಗಿನ ಡಿಟಾಕ್ಸ್ ಪೇಯವನ್ನಾಗಿ ಇದನ್ನು ಸೇವಿಸುತ್ತಾರೆ. ಇದಕ್ಕೆ ತನ್ನದೇ ಆದ ಸದ್ಗುಣಗಳು ಇರುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳನ್ನು ತಂದುಕೊಟ್ಟೀತು ಈ ಪೇಯ. ಏನವು?
ಉತ್ಕರ್ಷಣ ನಿರೋಧಕಗಳು
ದಾಲ್ಚಿನ್ನಿ ಚಕ್ಕೆ ಮತ್ತು ಜೇನುತುಪ್ಪ- ಈ ಎರಡರಲ್ಲೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ಮುಕ್ತ ಕಣಗಳನ್ನು ನಿಯಂತ್ರಿಸಬಹುದು. ಈ ಮೂಲಕ ಮಾರಕ ರೋಗಗಳು ಅಮರಿಕೊಳ್ಳದಂತೆ ರಕ್ಷಣೆ ಸಾಧ್ಯವಿದೆ. ಜೊತೆಗೆ, ಶರೀರದಲ್ಲಿ ಉರಿಯೂತ ಹೆಚ್ಚದಂತೆ ಕಾಪಾಡಿ, ಸ್ವಾಸ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಜೀರ್ಣಾಂಗಗಳು ಕ್ಷೇಮ
ಪರಂಪರಾಗತ ಔಷಧಿಯಲ್ಲಿ ಈ ಎರಡೂ ವಸ್ತುಗಳನ್ನು ಜೀರ್ಣಾಂಗಗಳ ಸ್ವಾಸ್ಥ್ಯ ವೃದ್ಧಿಗೆ ಬಳಸಲಾಗುತ್ತದೆ. ಹೊಟ್ಟೆಯ ಕಿರಿಕಿರಿ, ಅಜೀರ್ಣ, ಹೊಟ್ಟೆಯುಬ್ಬರ ಮುಂತಾದ ತೊಂದರೆಗಳಿಂದ ಇವು ಆರಾಮ ನೀಡುತ್ತವೆ. ಜೇನುತುಪ್ಪದಲ್ಲಿ ಪ್ರಿಬಯಾಟಿಕ್ ಅಂಶಗಳು ಇರುವುದರಿಂದ, ಹೊಟ್ಟೆಯ ಆರೋಗ್ಯವರ್ಧನೆಗೆ ಬೇಕಾದಂಥ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಲು ಇದು ಸಹಕಾರಿ.
ಸಕ್ಕರೆಯಂಶ ನಿಯಂತ್ರಣ
ಜೇನುತುಪ್ಪ ಮಧುಮೇಹಿಗಳಿಗೆ ಅಷ್ಟೇನೂ ಹೇಳಿಸಿದ್ದಲ್ಲ, ತೀರಾ ಮಿತವಾಗಿ ಸೇವಿಸುವುದೇ ಸೂಕ್ತ. ಆದರೆ ದಾಲ್ಚಿನ್ನಿಯಲ್ಲಿ ಇನ್‌ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಗುಣವಿದೆ. ಹಾಗೆಂದು ಮಧುಮೇಹಿಗಳು ಇದನ್ನು ಔಷಧಿಯಾಗಿ ಪರಿಗಣಿಸುವಂತಿಲ್ಲ. ಕಾರಣ, ಚಕ್ಕೆಯಲ್ಲಿರುವ ಇನ್‌ಸುಲಿನ್ ಪ್ರತಿರೋಧದ ಮದ್ದು ಅತಿ ಕಡಿಮೆ ಪ್ರಮಾಣದ್ದು. ಹಾಗಾಗಿ ಈ ಬಗ್ಗೆ ವೈದ್ಯರಲ್ಲಿ ಸಲಹೆ ಕೇಳಿಯೇ ಮುಂದುವರಿಯುವುದು ಉಚಿತ.
ತೂಕ ಇಳಿಕೆ
ದೇಹತೂಕ ಇಳಿಸಿಕೊಳ್ಳುವವರಿಗೆ ಚಕ್ಕೆ-ಜೇನುತುಪ್ಪದ ನೀರು ನೆರವಾಗುತ್ತದೆ. ಆದರೆ ನೆನಪಿಡಿ, ಹಾಗೆ ತೂಕ ಇಳಿಸುವುದಕ್ಕೆ ಇದು ಮಾಯಾಪೇಯವಲ್ಲ. ಕೊಬ್ಬು ಕರಗಿಸಲು ಮತ್ತು ತೂಕ ಇಳಿಸುವಲ್ಲಿ ಸಮತೋಲಿತ ಆಹಾರ, ಸರಿಯಾದ ವ್ಯಾಯಾಮ, ಸಮರ್ಪಕ ನಿದ್ದೆಗಳೆಲ್ಲ ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ತೂಕ ಇಳಿಕೆಗೆ ಚಕ್ಕೆಯ ನೀರಿನ ಸೇವನೆಯೂ ಸೇರಿದಂತೆ ಉಳಿದೆಲ್ಲ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.
ಜಲಪೂರಣ
ಬೆಳಗಿನ ಹೊತ್ತು ಚಕ್ಕೆಯ ನೀರು ಕುಡಿಯುವುದರಿಂದ ದೇಹಕ್ಕೆ ಬೇಕಾದ ನೀರಿನ ಪೂರೈಕೆ ಮಾಡಬಹುದು. ಅದರಲ್ಲೂ ಬೇಸಿಗೆಯಲ್ಲಿ ನೀರು ಕುಡಿದಷ್ಟಕ್ಕೂ ಸಾಕಾಗುವುದಿಲ್ಲವಾದ್ದರಿಂದ, ಶರೀರಕ್ಕೆ ಅಗತ್ಯವಾದ ಜಲಪೂರಣಕ್ಕೆ ಇದು ಒಳ್ಳೆಯ ಉಪಾಯ. ಬದುಕನ್ನು ಆರೋಗ್ಯದತ್ತ ದೂಡುವುದಕ್ಕೆ ಇಂಥ ಸಣ್ಣ ಉಪಕ್ರಮಗಳೂ ಕೆಲವೊಮ್ಮೆ ಸಹಾಯವಾಗುತ್ತವೆ.
ಜಾಗ್ರತೆ!
ಇದನ್ನು ಪ್ರತಿದಿನ ವರ್ಷವಿಡೀ ಮಾಡುವುದಕ್ಕಿಂತ ವಾರಕ್ಕೆ ಮೂರು ದಿನಗಳಂತೆ ಪ್ರಯೋಗಿಸುವುದು ಸೂಕ್ತ. ಉಪಯೋಗಿಸುವ ಜೇನುತುಪ್ಪ ಶುದ್ಧವಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಚಕ್ಕೆಯ ಗುಣಮಟ್ಟ ಚೆನ್ನಾಗಿರುವುದು ಸಹ ಮುಖ್ಯವಾಗುತ್ತದೆ. ಇದೊಂದನ್ನೇ ನೆಚ್ಚಿಕೊಂಡು ತೂಕ ಇಳಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡು, ಸ್ವಾಸ್ಥ್ಯ ಪೂರ್ಣ ಬದುಕಿನತ್ತ ಮುಖ ಮಾಡಿ.