ನೀರು ಕುಡಿಯುವುದು (Drinking water tips) ಅತ್ಯಂತ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಲವೊಮ್ಮೆ ನೀರು ಕುಡಿಯುವುದೂ ಕೂಡ ಕಷ್ಟದ ಕೆಲಸವೇ. ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ನೀರು ಕುಡಿಯಲು ಕಷ್ಟವಾಗುವ, ತನ್ನ ದೇಹಕ್ಕೆ ಬೇಕಾದಷ್ಟು ನೀರು ಸೇವಿಸದೆ ಇರುವ, ಆದರೆ, ಹೆಚ್ಚು ನೀರು ಕುಡಿಯಲು ಮನಸ್ಸಿರುವ ಆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮಂದಿ ಹೆಚ್ಚು ನೀರು ಕುಡಿಯಲು ಹೀಗೆ ಮಾಡಬಹುದು.
- ನೀವು ಎಲ್ಲಿಗೇ ಹೊರಗೆ ಹೋಗುವುದಿದ್ದರೂ ಕೈಯಲ್ಲೊಂದು ನೀರಿನ ಬಾಟಲಿ ಇಟ್ಟುಕೊಳ್ಳಿ. ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ ನೀರಿನ ಬಾಟಲಿ ನಿಮ್ಮ ಜೊತೆಗಿರಲಿ. ಆ ಮೂಲಕ ಆಗಾಗ ನೀವು ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರಬಹುದು. ಹೊರಗೆ ಹೋದಾಗ, ನೀರಿನ ಮೂಲವನ್ನು ಹುಡುಕಿಕೊಂಡು ಹೋಗುವುದು ಸಾಧ್ಯವಾಗದು. ಅಥವಾ ನೀರು ಕುಡಿಯಬೇಕೆನ್ನುವ ಯೋಚನೆಯೂ ಬಾರದು. ಇಂತಹ ಸಂದರ್ಭ ನಿಮ್ಮ ಬಳಿ ಬಾಟಲಿಯಲ್ಲಿ ನೀರಿದ್ದರೆ, ಆಗಾಗ ಕುಡಿಯುವ ಮೂಲಕ ಒಂದಿಷ್ಟು ನೀರು ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಿಮ್ಮ ಹೊಟ್ಟೆ ಸೇರುತ್ತದೆ. ಅಥವಾ ನಿಮಗೆ ನಿಜವಾಗಿ ಬಾಯಾರಿಕೆಯಾದಾಗಲೂ ನಿಮ್ಮ ಸಹಾಯಕ್ಕೆ ಬರುತ್ತದೆ.
- ಈಗ ನೀರು ಕುಡಿಯಲು ರಿಮೈಂಡರ್ಗಳನ್ನೂ ಹಾಕಬಹುದು. ಅನೇಕ ಆಪ್ಗಳೂ ನಿಮ್ಮ ಸಹಾಯಕ್ಕಿವೆ. ಅವು ಆಗಾಗ ಎಷ್ಟು ನೀರು ಕುಡಿಯಬೇಕೆಂದು ನಿಮ್ಮನ್ನು ನೆನಪಿಸುತ್ತಿರುತ್ತವೆ. ಹಾಗಾಗಿ, ನಿಮಗೆ ನೆನಪಾಗದಿದ್ದರೂ, ಕೆಲಸದಲ್ಲಿ ಬ್ಯುಸಿ ಆದರೂ, ಈ ಅಲರಾಂಗಳು ನಿಮ್ಮನ್ನು ನೀರು ಕುಡಿಯಲು ನಿಮ್ಮ ಅಮ್ಮನಂತೆ ನಿಮಗೆ ನೆನಪು ಮಾಡುವ ಕೆಲಸವನ್ನು ಮಾಡುತ್ತದೆ.
- ಸೋಡಾ, ಕಾರ್ಬೋನೇಟೆಡ್ ಡ್ರಿಂಕ್ಗಳ ಬದಲಾಗಿ ನೀರನ್ನೇ ಕುಡಿಯಿರಿ. ಬಾಯಾರಿದಾಗ ನೀರಿಗಿಂತ ಒಳ್ಲೆಯ ದ್ರವಾಹಾರ ಇನ್ನೊಂದಿಲ್ಲ. ಹಾಗಾಗಿ ನೀರನ್ನೇ ಸೇವಿಸಿ.
- ನೀರು ಕುಡಿಯಲು ಸಾಧ್ಯವಾಗದಿದ್ದರೆ, ನೀರು ಹೆಚ್ಚಿರುವ ಹಣ್ಣು ಹಂಪಲುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಅನಾನಾಸು, ಖರ್ಬೂಜ, ಸೌತೆಕಾಯಿ ಇತ್ಯಾದಿಗಳನ್ನು ಸೇವಿಸಿ. ಇವುಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನಿಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇವುಗಳಲ್ಲಿ ಕ್ಯಾಲರಿಯೂ ಕಡಿಮೆ ಇರುವುದರಿಂದ ಹೊಟ್ಟೆ ಫುಲ್ ಆದ ಅನುಭವವನ್ನೂ ನೀಡುತ್ತವೆ.
- ಖಾಲಿ ನೀರನ್ನೇ ಕುಡಿಯುವುದು ನಿಮ್ಮ ಸಮಸ್ಯೆ ಆದಲ್ಲಿ, ನೀರಿಗೆ ಫ್ಲೇವರ್ ಬರಿಸಿ. ಅರ್ಥಾತ್ ಇನ್ಫ್ಯೂಸ್ಡ್ ನೀರನ್ನು ತಯಾರು ಮಾಡಿ. ನೀರಿಗೆ, ಕೊಂಚ ಪುದಿನ ಎಲೆಗಳನ್ನು ಹಾಕಿಡಿ. ಅಥವಾ ಸೌತೆಕಾಯಿ, ಲಿಂಬೆರಸ, ಕಿತ್ತಳೆ ಹೀಗೆ ಬಗೆಬಗೆಯ ನೈಸರ್ಗಿಕ ರಿಫ್ರೆಶಿಂಗ್ ಅನುಭವ ನೀಡುವ ಐಡಿಯಾಗಳನ್ನು ಮಬಹುದು. ಪುದಿನ ಎಲೆ ಹಾಕಿದ ನೀರು ತಾಜಾ ಅನುಭವವನ್ನು ನೀಡುವ ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ಮನಸ್ಸಿಗೂ ಮುದ ನೀಡುತ್ತದೆ. ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ದೇಹಕ್ಕೂ ಒಳ್ಳೆಯದು.