ನವ ದೆಹಲಿ: ಸಾಮಾನ್ಯವಾಗಿ ಬಳಕೆಯಲ್ಲಿರುವ 48 ಔಷಧಗಳು ವೈದ್ಯಕೀಯ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ. ಕ್ಯಾಲ್ಶಿಯಮ್, ಫೋಲಿಕ್ ಆ್ಯಸಿಡ್, ಮಲ್ಟಿ ವಿಟಮಿನ್ಸ್, ಆ್ಯಂಟಿ ಬಯಾಟಿಕ್ಸ್, ಆಂಟಿ- ಡಯಾಬಿಟಿಕ್, ಕಾರ್ಡಿಯೊವಸ್ಕ್ಯುಲರ್ ಔಷಧಗಳು ಇತ್ತೀಚಿನ (Drugs Quality Test) ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (central drugs standard control organisation) ತನ್ನ ವೆಬ್‌ಸೈಟ್‌ನಲ್ಲಿ 48 ಔಷಧಗಳು ಮಾರ್ಚ್ ತಿಂಗಳಿನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ತಿಳಿಸಿದೆ. ಒಟ್ಟು 1,497 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿತ್ತು.
ಈ ಪಟ್ಟಿಯಲ್ಲಿ ಔಷಧಗಳು, ಮೆಡಿಕಲ್ ಉಪಕರಣ, ಕಾಸ್ಮೆಟಿಕ್ಸ್‌ಗಳನ್ನು ಉಲ್ಲೇಖಿಸಲಾಗಿದೆ. ಇವುಗಳು ಗುಣಮಟ್ಟದಲ್ಲಿ ಕೊರತೆ, ನಕಲಿ, ಕಲಬೆರಕೆಯಂಥ ನ್ಯೂನತೆಗಳನ್ನು ಹೊಂದಿದ್ದು, ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.
ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿರುವ ಅಪಸ್ಮಾರ ನಿಯಂತ್ರಣ ಕುರಿತ ಔಷಧ ಗಬಾಪೆಂಟಿನ್, ಹೈಪರ್ ಟೆನ್ಷನ್ ಔಷಧ ಟೆಲ್ಮಿಸರ್ಟಾನ್, ಆ್ಯಂಟಿ-ಡಯಾಬಿಟಿಕ್ ಗ್ಲಿಮೆಪಿರಿಡ್ ಮತ್ತು ಮೆಟ್‌ಫಾರ್‌ಮಿನ್, ಎಚ್‌ಐವಿ ಡ್ರಗ್ ರಿಟೋನ್‌ವಿರ್, ಹೈಪರ್ ಟೆನ್ಷನ್ ಡ್ರಗ್ ಟೆಲ್ಮಾ, ಪಟ್ಟಿಯಲ್ಲಿವೆ. ವಿಟಮಿನ್ ಸಿ, ವಿಟಮಿನ್ ಬಿ12 ನೀಡುವ ಕೆಲ ಮಾತ್ರೆಗಳು, ಫೋಲಿಕ್ ಆ್ಯಸಿಡ್, ನಿಯಾಸಿನಾಮೈಡ್ ಇಂಜೆಕ್ಷನ್‌ಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಈ ಔಷಧಗಳು ಖಾಸಗಿ ಹಾಗೂ ಸಾರ್ವಜನಿಕ ಔಷಧ ತಯಾರಕ ಕಂಪನಿಗಳಲ್ಲಿ ತಯಾರಾಗುತ್ತಿತ್ತು.
ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಔಷಧಗಳನ್ನು ತಯಾರಿಸಿದ ಕಂಪನಿಯು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕಾಗುತ್ತದೆ. ಹಿಂತೆಗೆದುಕೊಂಡ ಔಷಧಗಳ ಇಡೀ ಬ್ಯಾಚ್‌ಗಳನ್ನು ನಾಶಪಡಿಸಬೇಕಾಗುತ್ತದೆ.