Site icon Vistara News

Drumstick Tea Health Benefits: ನುಗ್ಗೆ ಸೊಪ್ಪಿನ ಚಹಾದ ಸ್ಪೆಷಲ್ ಇವು!

Drumstick Tea Health Benefits

ಬೆಳಗಿನ ಹೊತ್ತು ಚಹಾ ಅಥವಾ ಕಾಫಿ ಹೊಟ್ಟೆಗೆ ಸುರಿದುಕೊಳ್ಳುವುದು ಹೆಚ್ಚಿನವರ ಅಭ್ಯಾಸ. ಒಂದೊಮ್ಮೆ ಈ ಪೇಯಗಳು ಬೇಡ ಎನಿಸಿದರೆ, ಬೇರೆ ಆರೋಗ್ಯಕರ ಪರ್ಯಾಯಗಳನ್ನು ಹುಡುಕುವುದು ಕಷ್ಟವಲ್ಲ. ಇಂಥ ಉತ್ತಮ ಪರ್ಯಾಯಗಳಲ್ಲಿ ಪ್ರಮುಖವಾಗಿ ಕೇಳಿ ಬರುವಂಥವು ನಾನಾ ರೀತಿಯ ಹರ್ಬಲ್‌ ಚಹಾಗಳು. ಇವುಗಳಲ್ಲಿ ನುಗ್ಗೆಸೊಪ್ಪಿನ ಚಹಾ (Drumstick Tea Health Benefits) ಕೂಡಾ ಒಂದು.

ನುಗ್ಗೆ ಸೊಪ್ಪಿಗಿಂತಲೂ ನುಗ್ಗೆ ಕಾಯಿಯ ಬಳಕೆ ಜನಪ್ರಿಯ ಮತ್ತು ವ್ಯಾಪಕವಾಗಿದೆ. ಆದರೆ ಸ್ವಲ್ಪ ಒಗರು ರುಚಿಯ ಸೊಪ್ಪೂ ಆರೋಗ್ಯಕ್ಕೆ ಅಷ್ಟೇ ಲಾಭದಾಯಕ. ನುಗ್ಗೆಯ ಔಷಧೀಯ ಗುಣಗಳು ಒಂದೆರಡೇ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ʻಮಿರಾಕಲ್‌ ಟೀʼ ಎಂದೇ ಕರೆಸಿಕೊಳ್ಳುತ್ತಿರುವ ನುಗ್ಗೆಸೊಪ್ಪಿನ ಚಹಾ ಈಗಾಗಲೇ ಹಲವರ ದಿನಚರಿಯ ಭಾಗವಾಗಿದೆ. ಏನೀ ಚಹಾ ಕುಡಿಯುವುದರ ಲಾಭಗಳು (Drumstick Tea Health Benefits) ಎಂಬುದನ್ನು ತಿಳಿಯೋಣ.

ಪೋಷಕಾಂಶಗಳು ಏನಿವೆ?

ಖನಿಜಗಳು ಮತ್ತು ಜೀವಸತ್ವಗಳು ನುಗ್ಗೆ ಸೊಪ್ಪಿನಲ್ಲಿ ಬೇಕಾದಷ್ಟಿವೆ. ವಿಟಮಿನ್‌ ಸಿ ಮತ್ತು ಎ, ಪೊಟಾಶಿಯಂ, ಕ್ಯಾಲ್ಶಿಯಂ, ಫ್ಲೆವನಾಯ್ಡ್‌ಗಳು ಇದರ ಮುಖ್ಯ ಸತ್ವಗಳು. ಇದಲ್ಲದೆ, ಇದರಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್‌ ಸಹ ಇರುವುದರಿಂದ, ಆಹಾರ ಭಾಗವಾಗುವುದಕ್ಕೆ ಯೋಗ್ಯವಾಗಿದೆ. ಇದರಿಂದ ದೇಹದ ಒಟ್ಟಾರೆ ಆರೋಗ್ಯವನ್ನು ಖಂಡಿತಾ ವರ್ಧಿಸಿಕೊಳ್ಳಲು ಸಾಧ್ಯವಿದೆ.

ತೂಕ ಇಳಿಕೆ

ಕೊಬ್ಬು ಮತ್ತು ಪಿಷ್ಟಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದೇಹ ಹೀರಿಕೊಳ್ಳದಂತೆ ತಡೆಯುವ ಸಾಮರ್ಥ್ಯವನ್ನು ನುಗ್ಗೆ ಸೊಪ್ಪು ಹೊಂದಿದೆ. ಈ ಸೊಪ್ಪಿನಲ್ಲಿರುವ ಕ್ಯಾಲರಿಗಳು ಕಡಿಮೆ. ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ದೇಹದ ಚಯಾಪಚಯವನ್ನು ವೃದ್ಧಿಸುವ ಕಾರಣದಿಂದ, ತೂಕ ಇಳಿಸಲು ಮತ್ತು ಕೊಬ್ಬು ಕರಗಿಸಲು ಇದನ್ನು ಬಳಕೆ ಮಾಡಲಾಗುತ್ತಿದೆ.

ರಕ್ತದೊತ್ತಡ ನಿಯಂತ್ರಣ

ಇತ್ತೀಚೆಗಿನ ಕೆಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ನುಗ್ಗೆ ಸೊಪ್ಪಿನ ಚಹಾ, ಕಷಾಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಿಸುವಲ್ಲಿ ಪೂರಕ ಪರಿಣಾಮ ಕಂಡುಬಂದಿದೆ. ಸಿಸ್ಟೋಲಿಕ್‌ ಮತ್ತು ಡಯಾಸ್ಟೋಲಿಕ್‌- ಈ ಎರಡೂ ಅಂಕಿ-ಅಂಶಗಳಲ್ಲಿ ಗಣನೀಯ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ.

ಉರಿಯೂತ ಶಮನ

ಫ್ಲೆವನಾಯ್ಡ್‌ಗಳು ಮತ್ತು ಫೆನೋಲಿಕ್‌ ಆಮ್ಲಗಳು ಸೇರಿದಂತೆ, ಪ್ರಬಲ ಉರಿಯೂತ ಶಾಮಕಗಳು ನುಗ್ಗೆ ಸೊಪ್ಪಿನಲ್ಲಿವೆ. ಹೃದ್ರೋಗ, ಕ್ಯಾನ್ಸರ್‌ನಂಥ ಗಂಭೀರ ರೋಗಗಳನ್ನು ದೂರವಿರಿಸಲು ಉರಿಯೂತ ಶಮನ ಮಾಡುವಂಥ ಸತ್ವಗಳು ಆಹಾರದಲ್ಲಿ ಅಗತ್ಯವಾಗಿ ಬೇಕು. ದೇಹದೆಲ್ಲೆಡೆ ಇರಬಹುದಾದ ಉರಿಯೂತ ತಗ್ಗಿಸುವ ಸಾಮರ್ಥ್ಯ ನುಗ್ಗೆ ಸೊಪ್ಪಿಗಿದೆ.

ರೋಗ ನಿರೋಧಕ ಶಕ್ತಿ

ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳು ನುಗ್ಗೆಯಲ್ಲಿವೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳೊಂದಿಗೆ ಹೋರಾಡಲು ಆಂಟಿ ಆಕ್ಸಿಡೆಂಟ್‌ಗಳ ದಾಸ್ತಾನು ಇದ್ದಷ್ಟೂ ಒಳ್ಳೆಯದೆ. ವಿಟಮಿನ್‌ ಸಿ ಸತ್ವವೂ ಹೇರಳವಾಗಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ.

ತಾರುಣ್ಯ ಕಾಪಾಡುತ್ತದೆ

ದೇಹದಲ್ಲಿ ಕೊಲಾಜಿನ್‌ ಹೆಚ್ಚಿಸುವಂಥ ಸಾಧ್ಯತೆ ನುಗ್ಗೆಯ ಸೊಪ್ಪಿಗಿದೆ. ಕೊಲಾಜಿನ್‌ ಪ್ರಮಾಣ ಹೆಚ್ಚಿದಂತೆ ಚರ್ಮದ ತಾರುಣ್ಯವೂ ಹೆಚ್ಚಿ, ತ್ವಚೆಯಲ್ಲಿ ನೆರಿಗೆ, ಸುಕ್ಕುಗಳು ಕಡಿಮೆಯಾಗುತ್ತವೆ. ಜೊತೆಗೆ, ಇದರ ಉತ್ಕರ್ಷಣ ನಿರೋಧಕಗಳು ದೇಹದ ಕೋಶಗಳ ಹಾನಿಯನ್ನು ಮಿತಗೊಳಿಸುವುದರಿಂದ, ಇಡೀ ದೇಹಕ್ಕೆ ವಯಸ್ಸಾಗುವುದೂ ನಿಧಾನವಾಗುತ್ತದೆ.

ಜೀರ್ಣಾಂಗದ ಕ್ಷಮತೆ

ಜಠರದ ಉರಿಯೂತವನ್ನು ಕಡಿಮೆ ಮಾಡಿ, ಜೀರ್ಣಾಂಗದಲ್ಲಿ ಇರಬೇಕಾದ ಉತ್ತಮ ಬ್ಯಾಕ್ಟೀರಿಯಾಗಳನ್ನು ವೃದ್ಧಿಸುವಲ್ಲಿ ನುಗ್ಗೆ ಸೊಪ್ಪು ಪ್ರಯೋಜನಕಾರಿ. ಇದರಿಂದ ಅಜೀರ್ಣ, ಅಸಿಡಿಟಿ, ಹೊಟ್ಟೆಯುಬ್ಬರ, ಮಲಬದ್ಧತೆ, ಡಯರಿಯಾ ಮುಂತಾದ ಹಲವು ತೊಡಕುಗಳನ್ನು ದೂರ ಇರಿಸುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ನಿಯಮಿತವಾಗಿ ಸೇವಿಸುವುದಕ್ಕೆ ಆರೋಗ್ಯಕರ ಪೇಯವನ್ನು ಅರಸುತ್ತಿರುವವರು ನೀವಾದರೆ, ನುಗ್ಗೆಸೊಪ್ಪಿನ ಚಹಾ ಬಗ್ಗೆ ಖಂಡಿತವಾಗಿಯೂ ಯೋಚಿಸಬಹುದು.

ಇದನ್ನೂ ಓದಿ: Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

Exit mobile version