Site icon Vistara News

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

Doctor listens to the human lungs

ನಮ್ಮ ದೇಹದ ಪ್ರಮುಖ ಅಂಗಗಳ ಪೈಕಿ ಶ್ವಾಸಕೋಶವೂ ಒಂದು. ಶ್ವಾಸಕೋಶದ ಆರೋಗ್ಯ ಅತ್ಯಂತ ಮುಖ್ಯ. ಆದರೆ ಇಂದು ನಗರೀಕರಣ, ಹೆಚ್ಚಿದ ವಾಹನಗಳು, ನಿತ್ಯವೂ ಇಂತಹ ಪರಿಸರದಲ್ಲೇ ಕೆಲಸ ಮಾಡಬೇಕಾಗಿ ಬರುವ ಅನಿವಾರ್ಯತೆ ಇತ್ಯಾದಿಗಳಿಂದಾಗಿ ನಮ್ಮ ಶ್ವಾಸಕೋಶಗೊಳಕ್ಕೆ ವಾತಾವರಣದ ಕಲುಶಿತ ಗಾಳಿಯ ಪ್ರವೇಶವಾಗಿಯೇ ಆಗುತ್ತದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಭಾರತದ ಹಲವು ನಗರಗಳು ಮನುಷ್ಯರಿಗೆ ಉಸಿರಾಡಲು ಯೋಗ್ಯವೇ ಇಲ್ಲದಂಥ ಗಾಳಿಯನ್ನೂ ಹೊಂದಿವೆ. ಇಂಥ ಸಂದರ್ಭದಲ್ಲಿ ನಮ್ಮ ಶ್ವಾಸಕೋಶವನ್ನು ಆದಷ್ಟೂ ಆರೋಗ್ಯವಾಗಿ ಇಟ್ಟುಕೊಳ್ಳುವ ಉತ್ತಮ ಆಹಾರ ಸೇವನೆ, ಪ್ರಾಣಾಯಾಮ, ಯೋಗ ಇತ್ಯಾದಿಗಳ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಿದೆ. ಶ್ವಾಸಕೋಶಕ್ಕೆ ಒಳ್ಳೆಯದನ್ನೇ ಮಾಡುವ ಆಹಾರಗಳೂ ನಮ್ಮ ಸುತ್ತಮುತ್ತಲಿವೆ. ನೈಸರ್ಗಿಕವಾಗಿ ನಮಗೆ ದಕ್ಕುವ ಶ್ವಾಸಕೋಶ ಸ್ನೇಹಿ ಆಹಾರಗಳನ್ನು ನಾವು ಸೇವನೆ ಮಾಡುವ ಮೂಲಕವೂ ಶ್ವಾಸಕೋಶವನ್ನು ಡಿಟಾಕ್ಸ್‌ ಮಾಡಬಹುದು. ಕಶ್ಮಲಗಳನ್ನು ಹೊರಹೋಗುವಂತೆ ಮಾಡಬಹುದು. ಬನ್ನಿ, ಯಾವೆಲ್ಲ ಆಹಾರಗಳು ಶ್ವಾಸಕೋಶದ ಡಿಟಾಕ್ಸ್‌ಗೆ ಒಳ್ಳೆಯದು (Health Tips for Lungs) ಎಂಬುದನ್ನು ನೋಡೋಣ.

ಕೋಸುಗಳು

ಪ್ರಕೃತಿಯ ಅಚ್ಚರಿ ನೋಡಿ. ಇಲ್ಲಿ ನಮ್ಮ ದೇಹದ ಅಂಗವನ್ನೇ ಹೋಲುವ ತರಕಾರಿಗಳೂ ಸಿಗುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಶ್ವಾಸಕೋಶದ ರಚನೆಗೆ ತಾಳೆಯಾಗುವ ತರಕಾರಿಗಳು ಯಾವುದೆಂದು ನಿಮಗೆ ಅರ್ಥವಾಗಬಹುದು. ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು ಇತ್ಯಾದಿ ಕೋಸುಗಳು ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಇವು ಶ್ವಾಸಕೋಶದ ಮಲಿನತೆಯನ್ನು ಹೊರಹಾಕುವಲ್ಲಿ (Health Tips for Lungs) ನೆರವಾಗುತ್ತವೆ.

ಶುಂಠಿ

ಶುಂಠಿಯಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿವೆ. ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ರಾಮ ಬಾಣವಾಗಿರುವ ಶುಂಠಿ, ಶ್ವಾಸಕೋಶವನ್ನು ಕಫಮುಕ್ತವನ್ನಾಗಿಸಿ ಸ್ವಚ್ಛಗೊಳಿಸುವಲ್ಲಿ ನೆರವಾಗುತ್ತದೆ. ಅಸ್ತಮಾ, ಬ್ರೋಂಕೈಟಿಸ್‌ ಹಾಗೂ ಶ್ವಾಸಕೋಶದಲ್ಲಿ ರಕ್ತ ಸಂಚಾರಕ್ಕೂ ಇದು ನೆರವಾಗುತ್ತದೆ.

ಅರಿಶಿನ

ಅರಿಶಿನದಲ್ಲಿರುವ ಕರ್‌ಕ್ಯುಮಿನ್‌ ಎಂಬ ಅಂಶದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ, ಆಂಟಿ ಇನ್‌ಫ್ಲಮೇಟರಿ ಗುಣಗಳನ್ನೂ ಹೊಂದಿರುವುದರಿಂದ ಶವಾಸಕೋಶದ ಅಂಗಾಂಶಗಳ ಮರುರಚನೆಗೆ ಹಾಗೂ ಕಶ್ಮಲಗಳನ್ನು ಹೊರಕಳಿಸಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ

ಗ್ರೀನ್‌ಟೀಯಲ್ಲಿನ ಕ್ಯಾಟ್‌ಚಿನ್‌ ಎಂಬ ಅಂಟಿ ಆಕ್ಸಿಡೆಂಟ್‌, ಶ್ವಾಸಕೋಶದಲ್ಲಿರುವ ಉರಿಯೂತದಂತಹ ಲಕ್ಷಣಗಳನ್ನು ಕಡಿಮೆ ಮಾಡಿ ಸರಾಗವಾಗಿ ಉಸಿರಾಟವಾಗುವಂತೆ ನೋಡಿಕೊಳ್ಳುತ್ತದೆ.

ಬೆರ್ರಿಗಳು

ಬ್ಲೂಬೆರ್ರಿ, ರಸ್‌ಬೆರ್ರಿ, ಸ್ಟ್ರಾಬೆರ್ರಿ ಮತ್ತಿತರ ಬೆರ್ರಿ ಜಾತಿಯ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಶ್ವಾಸಕೋಶ ಅಂಗಾಶಗಳನ್ನು ರಕ್ಷಿಸುವುದಲ್ಲದೆ, ಶ್ವಾಸಕೋಶದ ಡಿಟಾಕ್ಸ್‌ಗೆ ನೆರವಾಗುತ್ತವೆ.

ಸಿಟ್ರಸ್‌ ಹಣ್ಣುಗಳು

ಕಿತ್ತಳೆ, ನಿಂಬೆ, ಮೂಸಂಬಿ ಸೇರಿದಂತೆ ವಿಟಮಿನ್‌ ಸಿ ಹೇರಳವಾಗಿರುವ ಸಿಟ್ರಸ್‌ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ ಸಮೃದ್ಧವಾಗಿರುತ್ತವೆ. ಇವು ಶ್ವಾಸಕೋಶ ಸಂಬಂಧೀ ಕಾಯಿಲೆಗಳಿಗೆ ತುತ್ತಾಗದಂತೆ ರಕ್ಷಾಕವಚದಂತಹ ಕೆಲಸವನ್ನು ಮಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ.

ದಾಳಿಂಬೆ

ದಾಳಿಂಬೆಯಲ್ಲಿ ಪುನಿಕ್ಯಾಲಜಿನ್‌ ಎಂಬ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ ಇದ್ದು, ಇದು ಶ್ವಾಸಕೋಶದ ಅಂಗಾಂಶಗಳಿಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ.

ಸೊಪ್ಪು

ಸೊಪ್ಪುಗಳಾದ, ಪಾಲಕ್‌, ಬಸಳೆ ಇತ್ಯಾದಿಗಳಲ್ಲಿ ಕ್ಲೋರೋಫಿಲ್‌ ಇರುವುದರಿಂದ ಇವು ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ನೆರವಾಗುತ್ತವೆ. ಶ್ವಾಸಕೋಶದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಆಲಿಸಿನ್‌ ಎಂಬ ಅಂಶವಿದ್ದು ಇದರಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇವು ಶ್ವಾಸಕೋಶದ ಕಶ್ಮಲಗಳನ್ನು ಹೊರಕ್ಕೆ ಕಳಿಸಿ ಸ್ವಚ್ಛ ಮಾಡುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ಇನ್ಫೆಕ್ಷನ್‌ ಆಗದಂತೆ ತಡೆಯುವಲ್ಲಿ ಇವು ರಕ್ಷಾಕವಚದಂತೆ ನೀರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಬೀಜಗಳು

ಬಾದಾಮಿ, ವಾಲ್ನಟ್‌, ಅಗಸೆಬೀಜ ಸೇರಿದಂತೆ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹಾಘೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಶ್ವಾಸಕೋಶವನ್ನು ಡಿಟಾಕ್ಸ್‌ ಮಾಡುವಲ್ಲಿ ನೆರವಾಗುತ್ತವೆ. ಶ್ವಾಸಕೋಶದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: Health Tips For Kidney: ಕಿಡ್ನಿಯ ಆರೋಗ್ಯಕ್ಕೆ ಯಾವೆಲ್ಲ ಆಹಾರಗಳು ಒಳ್ಳೆಯದು?

Exit mobile version