Site icon Vistara News

Eggs vs Paneer: ಮೊಟ್ಟೆ ಒಳ್ಳೆಯದೋ ಪನೀರ್ ಒಳ್ಳೆಯದೋ?

Eggs vs Paneer

ಮೊಟ್ಟೆ ಮತ್ತು ಪನೀರ್‌ (Eggs vs Paneer) ಎರಡೂ ವ್ಯಾಪಕವಾಗಿ ಉಪಯೋಗದಲ್ಲಿರುವ ಪ್ರೊಟೀನ್‌ ಮೂಲಗಳು. ಪ್ರೊಟೀನ್‌ ಸಂಪೂರ್ಣಗೊಳ್ಳುವುದಕ್ಕೆ ಅಗತ್ಯವಾದ ಎಲ್ಲಾ ಒಂಬತ್ತು ಸತ್ವಗಳು ಇವೆರಡರಲ್ಲೂ ಇವೆ. ಇವೆರಡಕ್ಕೂ ಸೂಪರ್‌ಫುಡ್‌ ಎನ್ನುವ ಹಣೆಪಟ್ಟಿಯೂ ಉಂಟು (Health tips). ಇವುಗಳ ಬಳಕೆಯಿಂದ ಆಹಾರದಲ್ಲಿ ಪೌಷ್ಟಿಕಾಂಶವನ್ನು ಸುಲಭವಾಗಿ ಹೆಚ್ಚಿಸಬಹುದು.

ತೂಕ ಇಳಿಕೆ ಎನ್ನುತ್ತಿದ್ದಂತೆ ಆಹಾರದಲ್ಲಿ ಕಾರ್ಬ್‌ ಮತ್ತು ಕೊಬ್ಬು ಕಡಿಮೆ ಮಾಡಿ, ಪ್ರೊಟೀನ್‌ ಮತ್ತು ನಾರು ಹೆಚ್ಚಿಸಬೇಕು ಎಂಬ ಸರಳ ವಾದದಲ್ಲಿ ಹುರುಳಿಲ್ಲದಿಲ್ಲ. ಆದರೆ ಪ್ರೊಟೀನ್‌ ಹೆಚ್ಚಿಸುವುದು ಎಂದರೆ ಹೇಗೆ, ಏನು ಎಂಬ ಬಗೆಗೆ ಗೊಂದಲ ಇದ್ದರೆ ಅದೇನು ತಪ್ಪಲ್ಲ. ಉದಾ, ಮೊಟ್ಟೆಯಲ್ಲಿ ಪ್ರೊಟೀನ್‌ ಸಾಂದ್ರವಾಗಿದೆ, ಪನೀರ್‌ನಲ್ಲೂ ಪ್ರೊಟೀನ್‌ ಭರಪೂರ ಇದೆ. ಹಾಗಾದರೆ ತೂಕ ಇಳಿಸುವವರ ಪಾಲಿಗೆ ಅಥವಾ ಆಹಾರದಲ್ಲಿ ಪ್ರೊಟೀನ್‌ ಹೆಚ್ಚುಸುವ ಉದ್ದೇಶ ಇರುವವರಿಗೆ (Health tips) ಯಾವುದು ಒಳ್ಳೆಯದು ಎಂಬುದೀಗ ಜಿಜ್ಞಾಸೆ.

ಇದಕ್ಕಾಗಿ ಈ ಎರಡೂ ಆಹಾರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಎರಡೂ ವ್ಯಾಪಕವಾಗಿ ಉಪಯೋಗದಲ್ಲಿರುವ ಪ್ರೊಟೀನ್‌ ಮೂಲಗಳು. ಪ್ರೊಟೀನ್‌ ಸಂಪೂರ್ಣಗೊಳ್ಳುವುದಕ್ಕೆ ಅಗತ್ಯವಾದ ಎಲ್ಲಾ ಒಂಬತ್ತು ಸತ್ವಗಳು ಇವೆರಡರಲ್ಲೂ ಇವೆ. ಇವೆರಡಕ್ಕೂ ಸೂಪರ್‌ಫುಡ್‌ ಎನ್ನುವ ಹಣೆಪಟ್ಟಿಯೂ ಉಂಟು. ಇವುಗಳ ಬಳಕೆಯಿಂದ ಆಹಾರದಲ್ಲಿ ಪೌಷ್ಟಿಕಾಂಶವನ್ನು ಸುಲಭವಾಗಿ ಹೆಚ್ಚಿಸಬಹುದು. ವ್ಯಾಯಾಮದ ಮೊದಲು ಮತ್ತು ನಂತರ- ಎರಡೂ ಸಂದರ್ಭಗಳಲ್ಲಿ (Health tips) ಇವುಗಳ ಬಳಕೆ ರೂಢಿಯಲ್ಲಿದೆ. ಸಸ್ಯಾಹಾರಿಗಳಿಗೆ ಪ್ರೊಟೀನ್‌ಗಾಗಿ ಪನೀರ್‌ನತ್ತ ಒಲವಿದ್ದರೆ, ಮಾಂಸಾಹಾರಿಗಳಿಗೆ ಮೊಟ್ಟೆ, ಚಿಕನ್‌ ಇತ್ಯಾದಿಗಳು ಪ್ರಿಯ.

ಪೌಷ್ಟಿಕಾಂಶಗಳು ಹೀಗಿವೆ

ಒಂದು ಬೇಯಿಸಿದ ಮೊಟ್ಟೆಯ (ಸುಮಾರು 45 ಗ್ರಾಂ) ಸತ್ವಗಳನ್ನು ಪರಾಂಬರಿಸಿದರೆ, ಪ್ರೊಟೀನ್ ಅಂದಾಜು 6 ಗ್ರಾಂ, ಕೊಬ್ಬು, 4 ಗ್ರಾಂ, ಕ್ಯಾಲ್ಶಿಯಂ 24.6 ಮಿ.ಗ್ರಾಂ, ಕಬ್ಬಿಣ 0.8 ಮಿ.ಗ್ರಾಂ, ಮೆಗ್ನೀಶಿಯಂ 5.3 ಮಿ.ಗ್ರಾಂ, ಫಾಸ್ಫರಸ್‌ 86 ಮಿ.ಗ್ರಾಂ, ಪೊಟಾಶಿಯಂ 60 ಮಿ.ಗ್ರಾಂ, ಜಿಂಕ್‌ 0.6 ಮಿ.ಗ್ರಾಂ, ಕೊಲೆಸ್ಟ್ರಾಲ್‌ 162 ಮಿ.ಗ್ರಾಂ, ಸೆಲೆನಿಯಂ 13.4 ಮೈಕ್ರೊ ಗ್ರಾಂ ದೊರೆಯುತ್ತವೆ.

ಕಡಿಮೆ ಕೊಬ್ಬಿನ (ಲೋ‌ ಫ್ಯಾಟ್) ಪನೀರ್‌ನಲ್ಲಿರುವ (ಅಂದಾಜು 40 ಗ್ರಾಂ) ಸತ್ವಗಳು ಏನೇನು ಎಂದು ನೋಡಿದರೆ- ಪ್ರೊಟೀನ್‌ 7.5 ಗ್ರಾಂ, ಕೊಬ್ಬು 5.8 ಗ್ರಾಂ, ಕಾರ್ಬ್ 5 ಗ್ರಾಂ,‌ ಕ್ಯಾಲ್ಶಿಯಂ 190 ಮಿ.ಗ್ರಾಂ, ಫೋಲೇಟ್‌ 37.3 ಮಿ.ಗ್ರಾಂ, ಫಾಸ್ಫರಸ್‌ 132 ಮಿ.ಗ್ರಾಂ, ಪೊಟಾಶಿಯಂ 50 ಮಿ.ಗ್ರಾಂ ಸತ್ವಗಳು ದೊರೆಯುತ್ತದೆ.

ಬೆಲೆಯನ್ನು ಹೋಲಿಸಿದಲ್ಲಿ ಮೊಟ್ಟೆಗಿಂತಲೂ ಪನೀರ್‌ ದುಬಾರಿ. ಆದರೆ ಪೋಷಕ ಸತ್ವಗಳು ಸಮೃದ್ಧವಾಗಿಯೇ ದೊರೆಯುತ್ತವೆ. ಕ್ಯಾಲ್ಶಿಯಂ ಯಥೇಚ್ಛವಾಗಿ ದೊರೆಯುವಂಥ ಆಹಾರವಿದು. ಮಾತ್ರವಲ್ಲ, ವಿಟಮಿನ್‌ ಬಿ 12, ಸೆಲೆನಿಯಂ, ರೈಬೊಫ್ಲೇವಿನ್‌ಗಳೂ ದೇಹ ಸೇರುತ್ತವೆ. ಹಲವಾರು ರೀತಿಯ ಖಾದ್ಯಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಈ ಮೂಲಕ ರುಚಿಯೂ ಹೆಚ್ಚು ಮತ್ತು ಪೋಷಕಾಂಶದ ಪ್ರಮಾಣವೂ ವೃದ್ಧಿಸುತ್ತದೆ.

ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚು ಪ್ರಮಾಣದ ಕೊಲೆಸ್ಟ್ರಾಲ್‌ ಇರುವುದು ಹೌದು. ಹಾಗೆಂದು ಹಳದಿ ಭಾಗವನ್ನು ತಿನ್ನದೇ ಬಿಟ್ಟರೆ, ಸೂಕ್ಷ್ಮ ಪೋಷಕಾಂಶಗಳು ಕೈತಪ್ಪಿ ಹೋಗುತ್ತವೆ. ಬಿಳಿಯ ಭಾಗದಲ್ಲಿ ಸಾಂದ್ರವಾಗಿರುವುದು ಪ್ರೊಟೀನ್‌ ಅಂಶ. ಉಳಿದಂತೆ, ವಿಟಮಿನ್‌ ಬಿ12, ವಿಟಮಿನ್‌ ಡಿಯಂಥ ಬಹಳಷ್ಟು ಉತ್ತಮ ಸತ್ವಗಳು ಮೊಟ್ಟೆಯಲ್ಲೂ ದೊರೆಯುತ್ತವೆ. ಬೆಳಗಿನ ತಿಂಡಿಯಲ್ಲಿ ಜನಪ್ರಿಯವಾಗಿರುವ ಆಮ್ಲೆಟ್‌ನಿಂದ ಹಿಡಿದು ಹಲವು ರೀತಿಯ ಅಡುಗೆಗಳಲ್ಲಿ ಮೊಟ್ಟೆ ಬಳಕೆಯಾಗುತ್ತದೆ. ಬೆಲೆಯೂ ಹೆಚ್ಚಿಲ್ಲದಿರುವುದರಿಂದ ಎಲ್ಲರ ಕೈಗೆಟುಕುವಂಥ ಪುಷ್ಟಿಯ ಆಹಾರವಿದು. ಈ ಎರಡೂ ಆಹಾರಗಳನ್ನು ತಿನ್ನುವ ಅಭ್ಯಾಸವಿದ್ದರೆ, ಎರಡನ್ನೂ ಜಾರಿಯಲ್ಲಿಡುವುದು ತಪ್ಪೇನಿಲ್ಲ. ತೂಕ ಇಳಿಸುವ ಉದ್ದೇಶಕ್ಕಾದರೆ ಎರಡರಲ್ಲೂ ಹೇಳುವಂಥ ವ್ಯತ್ಯಾಸವೂ ಇಲ್ಲ.

ಇದನ್ನೂ ಓದಿ: Winter Health Tips: ಬಂದೇ ಬಿಡ್ತು ಚಳಿಗಾಲ! ಇರಲಿ ಆರೋಗ್ಯದ ಕಡೆಗೆ ಎಚ್ಚರ!

Exit mobile version