Site icon Vistara News

Work Stress: ಉದ್ಯೋಗದ ವಿಪರೀತ ಒತ್ತಡ; ಅಪಾಯದಲ್ಲಿ ಐಟಿ ನೌಕರರು!

Businessman stressed out at work

ಉದ್ಯೋಗ ಸಂಬಂಧಿ ತಲೆಬಿಸಿಗಳು (work stress) ಮಿತಿಮೀರಿರುವ ಐಟಿ ವಲಯದಲ್ಲಿನ ನೌಕರರ ಆರೋಗ್ಯದ ಬಗ್ಗೆ ಹಲವು ಕಳವಳಕಾರಿ ಮಾಹಿತಿಗಳನ್ನು ಇತ್ತೀಚಿನ ಸಮೀಕ್ಷಾ ವರದಿ ತಿಳಿಸಿದೆ. ಶೇ. 55ರಷ್ಟು ಐಟಿ ಉದ್ಯೋಗಿಗಳು ತಮ್ಮ ಆರೋಗ್ಯ ಸುಸೂತ್ರವಾಗಿಲ್ಲ ಎಂದಿದ್ದಾರೆ. ಹೆಚ್ಚಿನವರು ಆಸಿಡಿಟಿ, ಜೀರ್ಣಾಂಗದ ನಾನಾ ರೀತಿಯ ಸಮಸ್ಯೆಗಳು, ಬೆನ್ನುಹುರಿ ಮತ್ತು ಕುತ್ತಿಗೆಯ ನೋವು, ಸ್ನಾಯುಗಳ ಸಮಸ್ಯೆ, ಕಣ್ಣಿನ ತೊಂದರೆಗಳು, ಅತೀವ ತಲೆನೋವು, ತೀವ್ರ ನಿದ್ರಾಹೀನತೆ, ತೂಕ ಹೆಚ್ಚಳದಂಥ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಐಟಿ ಕೆಲಸಗಳೆಂದರೆ ನೆನಪಾಗುವುದು ಕೈ ತುಂಬಾ ಹಣ, ಐಶಾರಾಮಿ ಬದುಕು. ಮೆಟ್ರೊ ನಗರಗಳಲ್ಲಿ ಹತ್ತಿಪ್ಪತ್ತನೇ ಮಹಡಿಯಲ್ಲೊಂದು ಫ್ಲಾಟ್‌… ಇತ್ಯಾದಿಗಳು. ಆದರೀಗ ಕಾಲ ಬದಲಾಗಿದೆ. ಇತ್ತೀಚಿನ ವರದಿಯೊಂದು ಐಟಿ ಕೆಲಸಗಳ ಇನ್ನೊಂದು ಮುಖದ ಮೇಲೆ ಬೆಳಕು ಚೆಲ್ಲಿದ್ದು, ಇಲ್ಲಿನ ಮಾಹಿತಿಗಳು ಐಟಿ ನೌಕರರ ಆರೋಗ್ಯದ ಬಗ್ಗೆ ಆತಂಕ ಮೂಡಿಸಿವೆ. ದಿನದಲ್ಲಿ ದೀರ್ಘ ಕಾಲ ಕೆಲಸ ಮಾಡುವ, ರಾತ್ರಿಯಲ್ಲಿ ನಿದ್ದೆಗೆಡುವ ಈ ಉದ್ಯೋಗಿಗಳಲ್ಲಿ ಶೇ. ೪೩ರಷ್ಟು ಮಂದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಕಳವಳಕಾರಿ ಮಾಹಿತಿ

ಉದ್ಯೋಗ ಸಂಬಂಧಿ ತಲೆಬಿಸಿಗಳು ಮಿತಿಮೀರಿರುವ ಈ ವಲಯದಲ್ಲಿನ ನೌಕರರ ಆರೋಗ್ಯದ ಬಗ್ಗೆ ಹಲವು ಕಳವಳಕಾರಿ ಮಾಹಿತಿಯನ್ನು ಈ ವರದಿಯಲ್ಲಿ ಬಿಚ್ಚಿಡಲಾಗಿದೆ. ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಐಟಿ ಉದ್ಯೋಗಿಗಳು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವರದಿ ವಿಸ್ತರಿಸಿದೆ. ಹಗಲ-ರಾತ್ರಿಯೆನ್ನದೆ ದೀರ್ಘಕಾಲದವರೆಗೆ ಕೆಲಸ ಮಾಡುವ ಅನಿವಾರ್ಯತೆ, ಮಿತಿಮೀರಿದ ಔದ್ಯೋಗಿಕ ಒತ್ತಡಗಳಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಆನ್‌ಶುರಿಟಿ-ಕೆಸಿಸಿಐ ಜಂಟಿಯಾಗಿ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.

ಉದ್ಯೋಗಿಗಳ ಆರೋಗ್ಯ ಮುಖ್ಯ

ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಇನ್ನೂ ಹೆಚ್ಚಿನ ಪಾಲುದಾರಿಕೆಯನ್ನು ತಂತ್ರಜ್ಞಾನ ವಲಯ ನೀಡಬೇಕು ಎಂದು ಸರಕಾರ ಬಯಸುತ್ತಿರುವ ಹಿನ್ನೆಲೆಯಲ್ಲಿ, ತನ್ನ ಉದ್ಯೋಗಿಗಳ ಆರೋಗ್ಯವನ್ನು ಐಟಿ ಸಂಸ್ಥೆಗಳು ಆದ್ಯತೆಯಾಗಿ ಪರಿಗಣಿಸಬೇಕು. ಜೊತೆಗೆ, ಹೀಗೆ ತಂತ್ರಜ್ಞರ ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವಲ್ಲಿ ಅವರ ಆರೋಗ್ಯವೇ ಹೇಗೆ ಸವಾಲಾಗಿ ಪರಿಣಮಿಸುತ್ತಿದೆ ಎಂಬ ಬಗ್ಗೆ ಈ ವರದಿ ಸ್ಪಷ್ಟ ಮಾಹಿತಿ ನೀಡಿದೆ. ಬದುಕಿನ ಸ್ವಾಸ್ಥ್ಯವನ್ನು ಕಳೆದುಕೊಂಡು ನಲುಗುತಿರುವ ಭಾರತೀಯ ಐಟಿ ಉದ್ಯೋಗಿಗಳ ಕಳವಳಕಾರಿ ಅವಸ್ಥೆಯ ಬಗ್ಗೆ ಅದು ವಿವರವಾಗಿ ಬೆಳಕು ಚೆಲ್ಲಿದೆ.

ವರದಿಯಲ್ಲೇನಿದೆ?

ಶೇ. 55ರಷ್ಟು ಐಟಿ ಉದ್ಯೋಗಿಗಳು ತಮ್ಮ ಆರೋಗ್ಯ ಸುಸೂತ್ರವಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಹೆಚ್ಚಿನವರು ಆಸಿಡಿಟಿ, ಜೀರ್ಣಾಂಗದ ನಾನಾ ರೀತಿಯ ಸಮಸ್ಯೆಗಳು, ಬೆನ್ನುಹುರಿ ಮತ್ತು ಕುತ್ತಿಗೆಯ ನೋವು, ಸ್ನಾಯುಗಳ ಸಮಸ್ಯೆ, ಕಣ್ಣಿನ ತೊಂದರೆಗಳು, ಅತೀವ ತಲೆನೋವು, ತೀವ್ರ ನಿದ್ರಾಹೀನತೆ, ತೂಕ ಹೆಚ್ಚಳದಂಥ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಶೇ. 45ಕ್ಕಿಂತ ಹೆಚ್ಚಿನ ಮಂದಿ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಮಾನಸಿಕ ಒತ್ತಡ, ಆತಂಕ, ಖಿನ್ನತೆಯಂಥವು ಅವರ ಬದುಕಿನ ಭಾಗವಾಗಿ ಹೋಗಿವೆ ಎಂಬುದು ತೀವ್ರ ಆತಂಕಕಾರಿ ಸಂಗತಿ.
ಶೇ. 50ಕ್ಕಿಂತ ಹೆಚ್ಚಿನ ಉದ್ಯೋಗಿಗಳು ದಿನಕ್ಕೆ 9 ತಾಸುಗಳಿಗೂ ದೀರ್ಘ ಕಾಲ ಕೆಲಸ ಮಾಡುತ್ತಿದ್ದಾರೆ. ಪ್ರತಿವಾರಕ್ಕೆ 52.5 ತಾಸುಗಳ ಸರಾಸರಿ ಕೆಲಸ ಅವರಿಗೆ ಕಟ್ಟಿಟ್ಟಿದ್ದು. ಆದರೆ ವಾರಕ್ಕೆ ಕೆಲಸ ಮಾಡುವ ರಾಷ್ಟ್ರೀಯ ಸರಾಸರಿ 47.7 ತಾಸುಗಳು. ಹಾಗಾಗಿ, ಶೇ. ೫೧ಕ್ಕೂ ಹೆಚ್ಚು ಮಂದಿ ದಿನಕ್ಕೆ 5.5ರಿಂದ ಹೆಚ್ಚೆಂದರೆ 6 ತಾಸು ನಿದ್ದೆ ಮಾಡುತ್ತಿದ್ದಾರೆ. ಅದರಲ್ಲೂ ಶೇ. 26ರಷ್ಟು ಮಂದಿಯ ನಿದ್ದೆಯ ಸ್ವರೂಪವೇ ಹಾಳಾಗಿದೆ.

ವೈಯಕ್ತಿಯ ಬದುಕು

ಅವರಲ್ಲಿ ಬಹುಪಾಲು ಮಂದಿ, ಅಂದರೆ ಶೇ. 74ರಷ್ಟು ಜನರಿಗೆ ವೈಯಕ್ತಿಯ ಬದುಕು ಒತ್ತಡಕ್ಕೆ ಸಿಲುಕಿದೆ. ಕುಟುಂಬದ ಮದುವೆ-ಹಬ್ಬಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ಅವರಿಗೆ, ಕೌಟುಂಬಿಕ ಬದುಕೂ ದೊರೆಯದೆ, ಮಾನಸಿಕ ಸಮಸ್ಯೆಗಳು ಮತ್ತಷ್ಟು ತೀವ್ರವಾಗುತ್ತಿವೆ. ಉದ್ಯೋಗದ ಹೊರೆಯಿಂದಾಗಿ ಆರೋಗ್ಯವೂ ಹದಗೆಟ್ಟು, ಕೌಟುಂಬಿಕ ನೆಮ್ಮದಿಯೂ ಇಲ್ಲದೆ, ಮಾನಸಿಕ ಒತ್ತಡವೂ ಹೆಚ್ಚಿರುವ ಬಗ್ಗೆ ವರದಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಅದರಲ್ಲೂ ಕೋವಿಡ್‌ ನಂತರದ ದಿನಗಳಲ್ಲಿ ಔದ್ಯೋಗಿಕ ಒತ್ತಡಗಳು ಹೊರಲಾರದಷ್ಟು ಹೆಚ್ಚಿವೆ ಎಂಬ ಆತಂಕ ಐಟಿ ವಲಯದಲ್ಲಿ ನಿತ್ಯಸತ್ಯ ಎಂದಾಗಿದೆ.

ಸಂಸ್ಥೆಗಳು ಗಮನಿಸಬೇಕು

ಯಶಸ್ಸನ್ನು ಅರಸಿ ಹೋಗುತ್ತಿರುವ ಐಟಿ ಉದ್ಯೋಗಿಗಳ ನಿತ್ಯದ ಒತ್ತಡಗಳನ್ನು ನೋಡದೆ ಕಣ್ಣು ತಪ್ಪಿಸುವಂತಿಲ್ಲ. ಹೀಗೆ ಸ್ವಾಸ್ಥ್ಯವನ್ನು ಕಡೆಗಣಿಸುವುದರಿಂದ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳು ಯಾರಿಗೂ ಬೇಡವಾಗುವುದು ಮಾತ್ರವಲ್ಲ, ಈ ತಂತ್ರಜ್ಞರ ಸಾಮರ್ಥ್ಯವೂ ಕುಂಠಿತವಾಗುತ್ತದೆ. ಈ ವರದಿಯಿಂದ ತಂತ್ರಜ್ಞಾನ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ತಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ವರದಿಯ ಹಿಂದಿರುವ ಆನ್‌ಶುರಿಟಿ ಸಂಸ್ಥೆಯ ತಜ್ಞರು ಆಗ್ರಹಿಸಿದ್ದಾರೆ. ಉದ್ಯೋಗದ ಏರಿಳಿತಗಳು ಮತ್ತು ಕಿರಿದಾದ ಡೆಡ್‌ಲೈನ್‌ಗಳು ನೌಕರರ ಆರೋಗ್ಯವನ್ನು ಹಾಳು ಮಾಡುತ್ತಿವೆ. ಹಾಗಾಗಿ ನೌಕರರ ಸ್ವಾಸ್ಥ್ಯದ ಬಗ್ಗೆ ನೈತಿಕ ಎನ್ನುವಷ್ಟೇ ಹೊಣೆಗಿಂತಲೂ ಹೆಚ್ಚಿನ ಮಟ್ಟದಲ್ಲಿ ಇದನ್ನು ಆದ್ಯತೆಯಾಗಿ ಪರಿಗಣಿಸಬೇಕಾದ್ದು ಸಾಮಾಜಿಕ ಜವಾಬ್ದಾರಿಯೂ ಹೌದು. ಉತ್ತಮವಾದ ಕಚೇರಿಯ ವಾತಾವರಣ, ಒತ್ತಡ ರಹಿತವಾಗ ಮತ್ತು ತೃಪ್ತಿಯಾಗುವಂಥ ಕೆಲಸದ ಚೌಕಟ್ಟು- ಇವೆಲ್ಲವೂ ಆರೋಗ್ಯ ಹದಗೆಡದಿರುವಂತೆ ಮಾಡಲು ಅಗತ್ಯ. ಈ ನಿಟ್ಟಿನಲ್ಲಿ ಉದ್ಯೋಗಿಗಳ ಸ್ವಾಸ್ಥ್ಯ ಎಂಬುದು ಆದ್ಯತೆಯಲ್ಲ, ಆವಶ್ಯಕತೆಯಾಗಿ ಪರಿಣಮಿಸಿದೆ ಎಂಬುದು ಕೆಸಿಸಿಐ ತಜ್ಞರ ಅಭಿಮತ.

ಇದನ್ನೂ ಓದಿ: Healthy Drinks For Summer: ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು!

Exit mobile version