ಸೌಂದರ್ಯವು ನೋಡುಗರ ಕಣ್ಣಿನಲ್ಲಿದೆ ನಿಜ. ಆದರೆ ಕಣ್ಣುಗಳಿಗೇ ಬಹಳ ಸುಸ್ತಾದರೆ ಯಾವ ಸೌಂದರ್ಯವೂ ಕಣ್ಣಿಗೆ ಕಾಣದು. ಯಾಕೆಂದರೆ ಕಣ್ಣು ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಕಣ್ಣಿನ ಸೌಂದರ್ಯ ಹಾಗೂ ಆರೋಗ್ಯವೂ ಕೂಡಾ ನಮ್ಮ ಕೈಯಲ್ಲೇ ಇದೆ. ಕಣ್ಣನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಲ್ಲಿ, ಕಣ್ಣಿಗೆ ಸೂಕ್ತ ವಿಶ್ರಾಂತಿ ನೀಡುವಲ್ಲಿ ನಾವು ಅತ್ಯಂತ ನಿರ್ಲಕ್ಷ್ಯ ಮಾಡುತ್ತೇವೆ. ಕಣ್ಣಿಗೆ ಬೇಕಾದ ವಿಶ್ರಾಂತಿ ನೀಡದೆ, ಅದಕ್ಕೆ ನಿರಂತರ ಕೆಲಸ ನೀಡುತ್ತೇವೆ. ದುಡಿದು ಸುಸ್ತಾದ ದೇಹಕ್ಕೆ ಕಣ್ಣಿನಿಂದ ಮಾಡಬಹುದಾದ ಕೆಲಸವನ್ನೇ ಮಾಡು ವಿಶ್ರಾಂತಿ ಎನ್ನುತ್ತೇವೆ. ಆದರೆ, ಕಣ್ಣಿಗೆ, ಮಿದುಳಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ಕಣ್ಣಿನ ಕಾಳಜಿಯನ್ನು ನಾವು ಆಗಾಗ ಮಾಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಈ ಬಗ್ಗೆ ತುಸು ಹೆಚ್ಚೇ ಗಮನ ನೀಡಬೇಕು. ಬನ್ನಿ, ಕಣ್ಣಿನ ಆರೈಕೆಯನ್ನು ನೀವು ಹೇಗೆಲ್ಲ ಮಾಡಬಹುದು (Eye Care Tips) ಎಂಬ ಸಲಹೆಗಳು ಇಲ್ಲಿವೆ.
ತಣ್ಣೀರ ಸಿಂಚನ
ದುಡಿದು ಸುಸ್ತಾಗಿ ಬಂದಾಗ, ಬೆಳಗ್ಗೆ ಎದ್ದ ಕೂಡಲೇ ಅಥವಾ ಕೆಲಸದ ನಡುವೆ ಕಣ್ಣಿಗೆ ಸುಸ್ತೆನಿಸಿದಾಗ ಆಗಾಗ ಕಣ್ಣಿಗೆ ತಣ್ಣೀರ ಸಿಂಚನ ಮಾಡಿ. ನಳ್ಳಿಯ ನೀರು ತಿರುಗಿಸಿ ಕಣ್ಣಿಗೆ ಚಿಮುಕಿಸಿ. ಹಾಯೆನಿಸುತ್ತದೆ. ಅಥವಾ, ಒಂದು ಕೋಲ್ಡ್ ಪ್ಯಾಡನ್ನು ಫ್ರಿಜ್‌ನಲ್ಲಿಟ್ಟುಕೊಂಡಿರಿ. ಅದನ್ನು ತೆಗೆದು ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. ಕೊಂಚ ಕ್ಷಣಗಳ ಈ ನಡೆ ಕೂಡಾ ಕಣ್ಣಿಗೆ ಅಗಾಧ ಚೈತನ್ಯ ತಂದುಕೊಡುತ್ತದೆ.
ಆಲೊವೆರಾ ಜೆಲ್
ಇನ್ನೊಂದು ಬಹಳ ಅದ್ಭುತ ಟಿಪ್ಸ್ ಎಂದರೆ, ಕಣ್ಣಿಗೆ ಅಲೊವೆರಾ ಜೆಲ್ ಹಚ್ಚುವುದು. ಅಂದರೆ ಕಣ್ಣಿನ ಸುತ್ತಮುತ್ತ ಅಲೊವೆರಾ ಜೆಲ್ ಅನ್ನು ನಿತ್ಯವೂ ಹಚ್ಚಿಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ. ಆಲೊವೆರಾದಲ್ಲಿ ತಂಪುಕಾರಕ ಗುಣಗಳಿದ್ದು ಇದು ಕಣ್ಣಿನ ಸುತ್ತಲ ಚರ್ಮದ ಮೇಲೆ ಪದರದಂತೆ ಕಾಯ್ದುಕೊಂಡು ಕಣ್ಣಿನ ಮೇಲೆ ಬೀಳುವ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಇದರ ಜೊತೆಗೆ ಆಲೊವೆರಾ ರಸವನ್ನು ಫ್ರೀಜರ್‌ನಲ್ಲಿಟ್ಟು ಅದನ್ನು ಕ್ಯೂಬ್‌ನಂತೆ ಮಾಡಿ ಅದನ್ನು ಸುಸ್ತಾದ ಕಣ್ಣಿನ ಮೇಲೆ ಇಟ್ಟುಕೊಂಡು ಕೊಂಚ ಕಾಲ ಇಟ್ಟುಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಕಣ್ಣಿಗೆ ಹಾಯೆನಿಸುತ್ತದೆ. ಬಹಳ ಪ್ರಯೋಜನ ಸಿಗುತ್ತದೆ.
ಸೌತೆಕಾಯಿ
ಎಲ್ಲರಿಗೂ ತಿಳಿದಿರುವ ಅತ್ಯಂತ ಫಲಪ್ರದ ಉಪಾಯವೆಂದರೆ ಸೌತೆಕಾಯಿ. ಸೌತೆಕಾಯಿಯಲ್ಲಿರುವ ತಂಫೂಖಾರಕ ಗುಣಗಳು ಕಣ್ಣಿಗೆ ಬಹಳ ಒಳ್ಳೆಯದು. ಇದರಲ್ಲಿ ಹೆಚ್ಚು ನೀರಿನಂಶವೂ ಇರುವುದರಿಂದ ಕಣ್ಣ ಮೇಲೆ ಇಟ್ಟುಕೊಂಡರೆ ತಂಪೆನಿಸುತ್ತದೆ. ಫ್ರಿಡ್ಜ್‌ನಲ್ಲಿಟ್ಟು ತೆಗದೂ ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಕಣ್ಣುಗಳ ಮೇಲಿಡಬಹುದು. ಕಣ್ಣಿನ ಮೇಲಿಟ್ಟು ೧೦ರಿಂದ ೧೫ ನಿಮಿಷ ವಿಶ್ರಾಂತಿ ಪಡೆದು ಎದ್ದರೆ, ರಿಲ್ಯಾಕ್ಸ್ ಆಗುತ್ತದೆ. ಕಣ್ಣಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ದಣಿದ ಕಣ್ಣುಗಳಿಗೆ ಇದು ದಿವ್ಯೌಷಧ.
ಚಹಾ
ಮನೆಯಲ್ಲಿ ಗ್ರೀನ್ ಟೀ ಕುಡಿಯುವ ಅಭ್ಯಾಸವಿದ್ದರೆ, ಟೀ ಬ್ಯಾಗ್‌ಗಳನ್ನು ಬಳಸುವ ಅಭ್ಯಾಸವಿದ್ದರೆ ಬ್ಯಾಗುಗಳನ್ನು ಎಸೆಯಬೇಡಿ. ಅದನ್ನು ಬಳಸಿದ ಮೇಲೆ ಅದನ್ನು ಫ್ರಿಡ್ಜ್‌ನಲ್ಲಿಟ್ಟಿರಿ. ಸ್ವಲ್ಪ ನೀರಿನಲ್ಲಿ ಅದ್ದಿ ನಂತರ ಅದನ್ನು ಕಣ್ಣ ಮೇಲೆ ಇಟ್ಟುಕೊಂಡು ಹತ್ತು ನಿಮಿಷ ವಿಶ್ರಾಂತಿ ಪಡೆದರೆ ಕಣ್ಣಿನ ಸುಸ್ತೆಲ್ಲ ಮಾಯ.
ರೋಸ್ ವಾಟರ್
ಏನು ಮಾಡಲು ಸಮಯ ಸಿಗದಿದ್ದರೂ ಇದನ್ನು ಮಾಡಲು ಹೆಚ್ಚು ಸಮಯದ ಅವಶ್ಯಕತೆ ಇಲ್ಲ. ರೋಸ್ ವಾಟರ್ ಅಥವಾ ಗುಲಾಬಿ ಜಲದ ನಾಲ್ಕೈದು ಬಿಂದುಗಳನ್ನು ಹತ್ತಿಯಲ್ಲಿ ಹಾಕಿ ಅದರಿಂದ ಕಣ್ಣ ಸುತ್ತ ಹಚ್ಚಿಕೊಳ್ಳಿ. ಕೆಲಸದ ನಡುವೆ ಬ್ಯಾಗ್‌ನಲ್ಲೊಂದು ರೋಸ್ ವಾಟರ್ ಬಾಟಲ್ ಇಟ್ಟುಕೊಂಡಿದ್ದರೆ ಅಗತ್ಯ ಬಿದ್ದಾಗ ಕಚೇರಿಯಲ್ಲೂ ಲ್ಯಾಪ್‌ಟಾಪ್ ಪರದೆಯನ್ನೇ ನೋಡಿ ಸುಸ್ತಾದಾಗ ಹೀಗೆ ಮಾಡಿಕೊಳ್ಳಬಹುದು.