ಜಾಹೀರಾತುಗಳಲ್ಲಿ ʻಫೇಸ್ ಸೀರಂʼ (Face Serum) ಎನ್ನುವ ಶಬ್ದ ಕೇಳಿದಾಗೆಲ್ಲ, ಅದೇನು, ಹೇಗೆ ಎಂದೆಲ್ಲ ಕುತೂಹಲ ತಾಳಿದವರು ಎಷ್ಟೋ ಮಂದಿ ಇರಬಹುದು. ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ಈ ಶಬ್ದ, ತ್ವಚೆಯ ಆರೈಕೆಯಲ್ಲಿ ಏನೆಲ್ಲ ಜಾದೂ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇರಬಹುದು. ಉಳಿದ ಕ್ರೀಮ್ ಅಥವಾ ಲೋಶನ್‌ಗಳಂತೆ ಮಂದವಾಗಿರದೆ, ಸಾಂದ್ರತೆಯಲ್ಲಿ ತೆಳುವಾಗಿ ಕಾಣುವ ಈ ದ್ರವ ವಸ್ತುಗಳಿಂದ ನಮ್ಮ ಚರ್ಮಕ್ಕೇನು ಪ್ರಯೋಜನ? ಎಂಥ ಚರ್ಮದವರಿಗೆ ಎಂಥಾ ಸೀರಂ ಉಪಯುಕ್ತ ಮುಂತಾದ ಹಲವಾರು ವಿಷಯಗಳು ಈ ಲೇಖನದಲ್ಲಿದೆ.
ಏನು ಹಾಗೆಂದರೆ?
ಮೊದಲಿಗೆ ಮುಖಕ್ಕೆ ಬಳಸುವ ಸೀರಂ ಎಂದರೇನು ಅನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಸಕ್ರಿಯ ಅಂಶಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಂದುವ ಮೂಲಕ ಚರ್ಮದ ಆರೈಕೆ ಮಾಡುವಂಥ ವಸ್ತುವಿದು. ಸಾಂದ್ರತೆಯಲ್ಲೂ ತೆಳುವಾಗಿಯೇ ಇರುವುದರಿಂದ, ನೇರವಾಗಿ ಚರ್ಮಕ್ಕೆ ಹೀರಿಕೊಳ್ಳಲು ಸುಲಭವಾಗಿ ಸಾಧ್ಯವಾಗುತ್ತದೆ. ಹಾಗಾಗಿ ಚರ್ಮದ ಆಳದವರೆಗೂ ತಲುಪಿ ಅರೈಕೆ ಮಾಡಲು ಇಂಥ ಸೀರಂಗಳಿಂದ ಸುಲಭಸಾಧ್ಯ. ಇದರಿಂದ ಮುಖದ ಮೇಲಿನ ಪಿಗ್ಮೆಟೇಶನ್, ಸೂಕ್ಷ್ಮ ಸುಕ್ಕುಗಳು, ಚರ್ಮದ ಬಣ್ಣ, ಕಾಂತಿ ಮುಂತಾದ ಹಲವು ವಿಷಯಗಳನ್ನು ಸುಧಾರಿಸಬಹುದು.
ಬಳಕೆ ಹೇಗೆ?
ಮುಖವನ್ನೆಲ್ಲ ಸ್ವಚ್ಛ ಮಾಡಿದ ಮೇಲೆ 2-3 ಹನಿ ಸೀರಂ ಅನ್ನು ಇಡೀ ಮುಖಕ್ಕೆ ನಯವಾಗಿ ಲೇಪಿಸಿ. ಕೆಲಕಾಲದ ನಂತರ ಮ್ಯಾಯಿಶ್ಚರೈಸರ್ ಹಚ್ಚಿ. ಕಣ್ಣಿನ ಸುತ್ತಲಿನ ಭಾಗಕ್ಕೆ ಇಂಥ ಯಾವುದನ್ನೂ ಲೇಪಿಸಬೇಡಿ. ಇದರ ಬಳಕೆಯ ಪರಿಣಾಮವನ್ನು ಸ್ಪಷ್ಟವಾಗಿ ಕಾಣುವುದಕ್ಕೆ ಸುಮಾರು 12ರಿಂದ 16 ವಾರಗಳು ಬೇಕಾಗಬಹುದು ಎನ್ನುತ್ತಾರೆ ಸೌಂದರ್ಯ ತಜ್ಞರು.
ಆಯ್ಕೆಗಳು ಯಾವುವು?
ಒಣ ಮತ್ತು ಸೂಕ್ಷ್ಮ ಚರ್ಮಗಳಿಗೆ ಸೂಕ್ತವಾದಂಥ ಆಯ್ಕೆಯೆಂದರೆ ಹ್ಯಾಲುರೋನಿಕ್ ಆಮ್ಲವನ್ನು ಇಲ್ಲವೇ ಗ್ಲಿಸರಿನ್ ಅವನ್ನು ಸಕ್ರಿಯ ಅಂಶವಾಗಿ ಹೊಂದಿರುವ ಸೀರಂಗಳು. ಚರ್ಮಕ್ಕೆ ತೇವ ಕಡಿಮೆಯಾಗಿ ಸುಕ್ಕಾಗುವುದು, ತಾಜಾತನ ಮಾಯವಾಗುವುದು, ಇದರಿಂದ ಸೂಕ್ಷ್ಮ ಸುಕ್ಕುಗಳು ಮೂಡಿ ವಯಸ್ಸಾದಂತೆ ಕಾಣುವುದು ಮುಂತಾದ ಹಲವು ಬಗೆಯ ಸಮಸ್ಯೆಗಳನ್ನು ಉದ್ದೇಶಿಸಲು ಹ್ಯಾಲುರೋನಿಕ್ ಆಮ್ಲವನ್ನು ಹೊಂದಿರುವ ಸೀರಂಗಳು ಉಪಯುಕ್ತವಾದವು.
ವಿಟಮಿನ್ ಸೀರಂಗಳು
ಸಾಮಾನ್ಯವಾಗಿ ವಿಟಮಿನ್ ಸಿ ಮತ್ತು ಇ ಅಂಶಗಳನ್ನು ಹೊಂದಿದ ಸೀರಂಗಳಿವು. ಚರ್ಮದ ಮೇಲಿನ ಸುಕ್ಕುಗಳ ನಿವಾರಣೆಗೆ ಮತ್ತು ಕಾಂತಿ ಹೆಚ್ಚಳದ ಉದ್ದೇಶವಿದ್ದರೆ ಇಂಥವು ಒಳ್ಳೆಯದ ಆಯ್ಕೆ. ಅದರಲ್ಲೂ ವಿಟಮಿನ್ ಸಿ ಇರುವಂಥ ಸೀರಂಗಳು ಚರ್ಮದಲ್ಲಿನ ಕೊಲಾಜಿನ್ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತವೆ. ಚರ್ಮದಲ್ಲಿ ಕೊಲಾಜಿನ್ ಅಂಶ ಹೆಚ್ಚಿದಷ್ಟೂ ಸುಕ್ಕುಗಳು ಮಾಯವಾಗಿ, ಚರ್ಮ ಬಿಗಿಯಾಗುತ್ತದೆ. ತಾರುಣ್ಯಭರಿತವಾಗುತ್ತದೆ.
ಪೆಪ್ಟೈಡ್ ಸೀರಂ
ಚರ್ಮದ ದುರಸ್ತಿ ಮಾಡುವುದಕ್ಕೆ ಅಗತ್ಯವಾದ ಅಂಶಗಳು ಈ ರೀತಿಯ ಸೀರಂಗಳಲ್ಲಿ ಇರುತ್ತವೆ. ನಯಸಿನಮೈಡ್‌ನಂಥ ಸಕ್ರಿಯ ಅಂಶಗಳು ಚರ್ಮಕ್ಕಾದ ಹಾನಿಯನ್ನು ಸರಿಪಡಿಸಿ, ಮಂಕಾದ ಚರ್ಮಕ್ಕೆ ಕಾಂತಿಯನ್ನು ತುಂಬುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ಚರ್ಮಕ್ಕೆ ಕಾಂತಿಯನ್ನು ಮರುಕಳಿಸುವಲ್ಲಿ ಪೆಪ್ಟೈಡ್‌ಗಳ ಪಾತ್ರ ಹಿರಿದು. ಹಾಗಾಗಿ ಯಾವ ಉದ್ದೇಶಕ್ಕಾಗಿ ಸೀರಂ ಬಳಸುತ್ತಿದ್ದೀರಿ ಎನ್ನುವುದರ ಮೇಲೆ ಯಾವ ಸೀರಂ ಸೂಕ್ತ ಎಂಬುದನ್ನು ನಿರ್ಧರಿಸಬಹುದು.
Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!ಇದನ್ನೂ ಓದಿ:
ಉದ್ದೇಶವೇನು?
ಇದು ಮುಖ್ಯವಾದ ಪ್ರಶ್ನೆ. ಇದಕ್ಕೆ ಉತ್ತರವೇನು ಎನ್ನುವುದರ ಆಧಾರ ಮೇಲೆ ಯಾವ ಸೀರಂ ಸರಿಯಾದದ್ದು ಎಂಬುದನ್ನು ನೀವೇ ನಿರ್ಧರಿಸಬಹುದು.
- ಚರ್ಮದ ತೇವ ಹೆಚ್ಚಿಸುವುದಕ್ಕೆ: ಹ್ಯಾಲುರೋನಿಕ್ ಆಮ್ಲ ಹೊಂದಿರುವ ಸೀರಂ ಸೂಕ್ತ.
- ತಾರುಣ್ಯಭರಿತ ತ್ವಚೆಗೆ: ರೆಟಿನೋಲ್, ವಿಟಮಿನ್ ಸಿ ಮತ್ತು ಪೆಪ್ಟೈಡ್ಯುಕ್ತ ಸೀರಂಗಳು ಒಳ್ಳೆಯವು
- ಕಾಂತಿ ಹೆಚ್ಚಳಕ್ಕೆ: ವಿಟಮಿನ್ ಸಿ, ನಯಸಿನಮೈಡ್ ಅಂಶಗಳಿರುವುದನ್ನು ಉಪಯೋಗಿಸಬಹುದು
- ಮೊಡವೆ ನಿಯಂತ್ರಣಕ್ಕೆ: ಸ್ಯಾಲಿಸಿಲಿಕ್ ಆಮ್ಲ ಅಥವಾ ಬೆನ್ಜೋಲ್ ಪೆರಾಕ್ಸೈಡ್ ಸೀರಂಗಳು ಉಪಯುಕ್ತ. ಟೀಟ್ರೀ ತೈಲ ಇರುವ ಸೀರಂಗಳನ್ನೂ ಬಳಸಲಾಗುತ್ತದೆ.
- ಕಿರಕಿರಿ ತಡೆಯುವುದಕ್ಕೆ: ಅಲೋವೆರಾ, ಕ್ಯಾಮೊಮೈಲ್ ಅಂಶಗಳನ್ನು ಹೊಂದಿರುವ ಸೀರಂಗಳು ಇದಕ್ಕೆ ಸಹಾಯ ಮಾಡುತ್ತವೆ.