ಬಣ್ಣಬಣ್ಣದ ಆಹಾರಗಳು (Food Coloring) ನಮ್ಮನ್ನು ಆಕರ್ಷಿಸುವುದು ಹೆಚ್ಚು! ಕಾಮನಬಿಲ್ಲಿನಂತಹ ಕೇಕ್, ಪಿಂಕ್ ಬಣ್ಣದ ಹತ್ತಿಯಂಥ ಬೊಂಬಾಯಿ ಮಿಠಾಯಿ, ಬಣ್ಣಬಣ್ಣದ ಐಸ್‌ಕ್ಯಾಂಡಿಗಳು, ಮಿಠಾಯಿಗಳು, ಕಲರ್ ಕಲರ್ ಜೆಲ್ಲಿಗಳು, ಚಾಕೋಲೇಟ್‌ಗಳು, ಲಾಲಿಪಪ್‌ಗಳು, ಕುಕ್ಕೀಸ್‌ಗಳು, ಮಫೀನ್‌ಗಳು ಹೀಗೆ ಬಣ್ಣಬಣ್ಣದ ಸಿಹಿತಿಂಡಿಗಳು ನಮ್ಮನ್ನು ಆಕರ್ಷಿಸುವುದು ಹೆಚ್ಚು. ಮಕ್ಕಳ ಕಣ್ಣಿಗೆ ಇವು ಸುಂದರವಾಗಿ ಕಾಣುವುದರಿಂದ ಸಹಜವಾಗಿಯೇ, ಮಕ್ಕಳು ರುಚಿಗಿಂತ ಹೆಚ್ಚು ಈ ಬಣ್ಣಗಳಿಗೇ ಸೆಳೆಯಲ್ಪಡುತಾರೆ. ಹೆತ್ತವರಾಗಿ ನಾವು ಮಕ್ಕಳಿಗೆ ಬಗೆಬಗೆಯ ಆಕರ್ಷಕ ತಿನಿಸುಗಳನ್ನು ಬಗೆಬಗೆಯ ಬಣ್ಣಗಳಲ್ಲಿ ತಿನ್ನಿಸಲು ಪ್ರಯತ್ನಿಸುತ್ತೇವೆ. ಮಕ್ಕಳ ಹೊಟ್ಟೆಗೆ ಹೀಗೆ ಅನಗತ್ಯವಾಗಿ ಥರಹೇವಾರಿ ಬಣ್ಣಗಳು ಸದಾ ಸೇರುವುದರ ಪರಿಣಾಮದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇಷ್ಟು ಬಣ್ಣಗಳ ಆಹಾರದ ಅಗತ್ಯ ನಿಜವಾಗಿಯೂ ಇದೆಯೇ? ಹಾಗಾದರೆ ಬನ್ನಿ, ಆಹಾರದ ಬಣ್ಣಗಳ ಲೋಕದಲ್ಲೊಂದು ಸುತ್ತು ಹಾಕಿ ಸಾಧಕ ಬಾಧಕಗಳ ಬಗ್ಗೆ ತಿಳಿಯೋಣ.
ಬಹಳಷ್ಟು ಮಂದಿ, ಆಹಾರದಲ್ಲಿ ಸೇರಿಸಬಹುದಾದ ಫುಡ್‌ಗ್ರೇಡ್ ಬಣ್ಣಗಳನ್ನಷ್ಟೇ ಈ ತಿನಿಸುಗಳಲ್ಲಿ ಸೇರಿಸಿರುವುದರಿಂದ ಇವುಗಳ ಬಗ್ಗೆ ಚಿಂತೆ ಏಕೆ ಎಂಬ ವಾದ ಇಲ್ಲಿ ಮಂಡಿಸಬಹುದು. ಆದರೆ, ಈ ಆಹಾರಕ್ಕೆ ಸೇರಿಸಬಹುದಾದ ಬಣ್ಣಗಳ ಮೂಲ ಯಾವುದು ಎಂಬ ಬಗ್ಗೆ ಯೋಚಿಸಿದ್ದೀರಾ? ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಆಕ್ಯುಪೇಷನಲ್ ಅಂಡ್ ಎನ್ವಿರಾನ್‌ಮೆಂಟಲ್ ಹೆಲ್ತ್ ಪ್ರಕಾರ, ಈ ಫುಡ್‌ಗ್ರೇಡ್ ಬಣ್ಣಗಳನ್ನು ತಯಾರು ಮಾಡುವುದು ಪೆಟ್ರೋಲಿಯಂ ಹಾಗೂ ಕಲ್ಲಿದಲ ಟಾರ್‌ನಿಂದ. ಇದು ಆಹಾರಕ್ಕೆ ಒಂದು ಅತ್ಯುತ್ತಮ ಬಣ್ಣ ನೀಡುವುದಲ್ಲದೆ, ನೈಸರ್ಗಿಕವಾದ ಬಣ್ಣದಂತೆಯೇ ಕಾಣುತ್ತದೆ. ಹಲವಾರು ಸಂಶೋಧನೆಗಳು, ಈ ಆಹಾರಕ್ಕೆ ಹಾಕುವ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದ ನಮ್ಮ ದೇಹಕ್ಕೆ ಆಗುವ ಅಪಾಯದ ಬಗ್ಗೆ ಎಚ್ಚರಿಕೆಯನ್ನೂ ನೀಡಿವೆ. ಬಾಲ್ಯದಲ್ಲಿ ಈ ಬಣ್ಣಗಳ ಹೆಚ್ಚಿನ ಸೇವನೆಯಿಂದ ಹೈಪರ್ ಆಕ್ಟಿವಿಟಿಯಂತಹ ಸಮಸ್ಯೆಗಳು, ಮಕ್ಕಳಲ್ಲಿ ಕೆಲವು ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಅಥವಾ ಅತಿಯಾದ ಬಳಕೆಯಿಂದ ಇನ್ನೂ ಕೆಲವು ಸಮಸ್ಯೆಗಳಿಗೆ ನಾಂದಿಯಾಗಬಹುದು.
ಬಣ್ಣ ಸುರಕ್ಷಿತ ಅಲ್ಲವೆ?
ಹಾಗಾದರೆ, ಆಹಾರದಲ್ಲಿ ಬಳಸುವ ಬಣ್ಣ ಸುರಕ್ಷಿತವಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಏಫ್‌ಡಿಎ ಪ್ರಕಾರ, ಈ ಬಣ್ಣಗಳು ಸುರಕ್ಷಿತವೇ ಆದರೂ, ಅತಿಯಾದ ಬಳಕೆ ಯೋಗ್ಯವಲ್ಲ. ಹಿತಮಿತವಾಗಿ ಬಳಸುವುದರಿಂದ ಹಾನಿಯಿಲ್ಲ ಎಂದು ಹೇಳುತ್ತದೆ. ಹಾಗಾದರೆ, ಮಕ್ಕಳಿಗೆ ಆಕರ್ಷಕವಾಗಿ ಕಾಣಲು, ಅವರನ್ನು ಆಹಾರದತ್ತ ಸೆಳೆಯಲು, ಈ ಬಣ್ಣಗಳನ್ನು ಬಳಸದೆ ಬೇರೇನು ಮಾಡಬಹುದು ಎನ್ನುತ್ತೀರಾ? ಈ ನಿಮ್ಮ ಪ್ರಶ್ನೆಗೂ ನಿಸರ್ಗವೇ ನಿಮಗೆ ಉತ್ತರ ಕೊಟ್ಟಿದೆ. ನೈಸರ್ಗಿಕವಾಗಿ ಸಿಗುವ ಬಣ್ಣಗಳು ಯಾವತ್ತಿಗೂ ಸುರಕ್ಷಿತ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ನಿಸರ್ಗದತ್ತವಾಗಿ ಸಿಗುವ ಬಣ್ಣಗಳನ್ನು ನಿತ್ಯಾಹಾರದಲ್ಲಿ ಬಳಸಿ.
ನೈಸರ್ಗಿಕ ಬಣ್ಣ ಬಳಸಿ
ಉದಾಹರಣೆಗೆ, ಕೆಂಪು ಅಥವಾ ಪಿಂಕ್ ಬಣ್ಣ ಬರಲು, ಬೀಟ್‌ರೂಟ್ ರಸವನ್ನು ಬಳಸಬಹುದು. ಬೀಟ್‌ರೂಟ್ ಹಾಕಿದ ಪೂರಿ, ಇಡ್ಲಿ ಅಥವಾ ದೋಸೆಗಳನ್ನು ಮಾಡಿ ಮಕ್ಕಳಿಗೆ ತಿನ್ನಲು ಕೊಡಬಹುದು. ಹಸಿರು ಬಣ್ಣಕ್ಕಾಗಿ, ಪಾಲಕ್ ಅಥವಾ ಬಸಳೆಯನ್ನು ಬಳಸಬಹುದು. ಹಳದಿಗಾಗಿ ಅರಿಶಿನ ಪುಡಿಯಷ್ಟು ಯೋಗ್ಯ ನೈಸರ್ಗಿಕ ಬಣ್ಣ ಎಲ್ಲಿಂದ ಸಿಕ್ಕೀತು ಹೇಳಿ.
ಇನ್ನು ಕೇಸರಿ ಬಣ್ಣಕ್ಕಾಗಿ ಘಮಘಮಿಸುವ ಕಾಶ್ಮೀರದ ಕೇಸರಿಯನ್ನೇ ಹಾಕಬಹುದು. ಶಂಖಪುಷ್ಟ ಹೂವಿನ ರಸದಿಂದ ಅತ್ಯದ್ಭುತ ನೀಲಿ, ನೇರಳೆ ಬಣ್ಣವನ್ನು ಪಡೆಯಬಹುದು. ನೀಲಿ ಬಣ್ಣದ ದೋಸೆ, ಕೇಕ್‌ಗಳನ್ನೂ ಇದರಲ್ಲಿ ಮಾಡಬಹುದು. ಕ್ರಿಯಾತ್ಮಕವಾಗಿ ಯೋಚಿಸಿ ಅಡಿಗೆ ಮಾಡಿದರೆ, ನಿಸರ್ಗದಲ್ಲಿ ನೂರು ದಾರಿ. ಮಾಡುವ ಆಸಕ್ತಿ, ಆರೋಗ್ಯಕರವಾದ್ದನ್ನೇ ತಿನ್ನುವ, ಮಕ್ಕಳಿಗೆ ತಿನ್ನಲು ಕೊಡುವ ಪ್ರಾಮಾಣಿಕ ಉದ್ದೇಶ ಇದ್ದರೆ ನಿಸರ್ಗ ನಮ್ಮನ್ನು ಯಾವತ್ತೂ ನಿರಾಸೆ ಮಾಡಲಾರದು ಎಂಬುದನ್ನು ನೆನಪಿಡಿ!
ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ