ಭಾರತೀಯ ಅಡುಗೆಮನೆಗಳು ಕೆಲವೊಮ್ಮೆ ದೇಸೀ ಮದ್ದುಗಳ (fenugreek seeds for diabetes) ಉಗ್ರಾಣದಂತೆ ಕೆಲಸ ಮಾಡುತ್ತವೆ. ಸುಲಭವಾಗಿ ದೊರೆಯುವ ಒಗ್ಗರಣೆ ಪರಿಕರಗಳನ್ನೇ ಗಮನಿಸಿದರೂ, ಎಣ್ಣೆಯಿಂದ ಆರಂಭವಾಗಿ, ಸಾಸಿವೆಕಾಳು, ಉದ್ದಿನ ಬೇಳೆ, ಕಡಲೆ ಬೇಳೆ, ಇಂಗು, ಮೆಂತೆ, ಕರಿಬೇವಿನ ಸೊಪ್ಪು- ಹೀಗೆ ವ್ಯಂಜನದ ರುಚಿ ಹೆಚ್ಚಿಸುವ, ತಿಂದವರ ಆರೋಗ್ಯ ವೃದ್ಧಿಸುವ ಮತ್ತು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುವ ಗುಣಗಳು ಈ ವಸ್ತುಗಳಿಗಿವೆ. ಉದಾಹರಣೆಗೆ ಮೆಂತೆಯನ್ನೇ ಹೇಳುವುದಾದರೆ, ಒಗ್ಗರಣೆಯಲ್ಲಿ ಅದರ ಘಮವೇ ಮೂಗಿನ ಹೊರಳೆಗಳನ್ನು ಅರಳಿಸೀತು. ಮೆಂತೆ ಬೀಜಗಳನ್ನು ನೆನೆಸಿ, ಅರೆದು, ಕೂದಲಿಗೆ ಹಚ್ಚಿದರೆ ಕೇಶ ಸೌಂದರ್ಯ ಹೆಚ್ಚಾದೀತು, ತೂಕ ಇಳಿಸುವವರು ಮತ್ತು ಮಧುಮೇಹಿಗಳ ಪಾಲಿಗೆ ಪ್ರಮುಖ ಆರೋಗ್ಯವರ್ಧಕವೂ ಹೌದು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಮೆಂತೆಯನ್ನು ದಿನವೂ ಬಳಸಿದರೆ- ಸಮಸ್ಯೆ ಖತಂ!
ಆದರೆ ಕೆಲವೊಮ್ಮೆ ನಾವು ಎಡವುವುದು ಇಲ್ಲಿಯೇ! ಮೆಂತೆ ಬೀಜಗಳನ್ನು ತಿನ್ನುವುದು ಮಧುಮೇಹಿಗಳ ಪಾಲಿಗೆ ಅನುಕೂಲಕರ ಎಂಬುದು ನಿಜ. ಆದರೆ ಎಷ್ಟು ತಿನ್ನಬೇಕು ಅಥವಾ ಹೇಗೆ ತಿನ್ನಬೇಕು ಎಂಬ ಸ್ಪಷ್ಟತೆ ಇರಬೇಡವೇ? ಮದ್ದು ಹೋಗಿ ಮದ್ದಿನ ಮರವನ್ನೇ ತಿನ್ನಬಾರದಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮೆಂತೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿಯುವ ಅಪಾಯವೂ ಇದೆ. ಹಾಗಾಗಿ ಮಧುಮೇಹಿಗಳು ಮೆಂತೆ ತಿನ್ನಬೇಕು ಎನ್ನುವುದು ಸರಿ, ಆದರೆ ಎಷ್ಟು ತಿನ್ನಬೇಕು ಎಂಬುದೀಗ ಪ್ರಶ್ನೆ (fenugreek seeds for diabetes).
ತಿಂದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವಲ್ಲಿನ ಚಯಾಪಚಯ ದೋಷವೇ ಮಧುಮೇಹ ಅಮರಿಕೊಳ್ಳುವುದಕ್ಕೆ ಕಾರಣ. ಪಚನ ಕ್ರಿಯೆಯನ್ನು ಮೊದಲಿನಿಂದ ಆರಂಭಿಸುವುದಾದರೆ, ಹೊಟ್ಟೆ ಸೇರಿದ ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ, ರಕ್ತಕ್ಕೆ ಬಿಡುಗಡೆ ಮಾಡುತ್ತದೆ ನಮ್ಮ ದೇಹ. ಇದರ ಪರಿಣಾಮವಾಗಿ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯಾಗಿ ಇನ್ಸುಲಿನ್ ಬಿಡುಗಡೆ ಮಾಡುವಂತೆ ಯಕೃತ್ತಿಗೆ ಸಂದೇಶ ಹೋಗುತ್ತದೆ. ಆನಂತರ ಬಿಡುಗಡೆಯಾದ ಶಕ್ತಿಯನ್ನು ದೇಶದ ಕೋಶಗಳು ಹೀರಿಕೊಂಡು, ಬೇಕಾದಂತೆ ಬಳಸಿಕೊಳ್ಳುತ್ತವೆ. ಹಾಗಾದರೆ ಈ ಇಡೀ ಪ್ರಕ್ರಿಯೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೆಂತೆ ಬೀಜ ಹೇಗೆ ನಿಯಂತ್ರಿಸುತ್ತದೆ ಎಂಬುದು ಮುಂದಿನ ಕುತೂಹಲ.
ಮೆಂತೆ ತಿಂದರೆ ಏನಾಗುತ್ತದೆ?
ಜರ್ನಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಪತ್ರಿಕೆಯಲ್ಲಿ ಇರುವ ವಿವರಗಳನ್ನು ನೋಡುವುದಾದರೆ, ಮೆಂತೆಯಲ್ಲಿರುವ ಕರಗಬಲ್ಲ ನಾರುಗಳು ಸಕ್ಕರೆ ಅಂಶವನ್ನು ದೇಹ ಹೀರಿಕೊಳ್ಳುವ ಸಮಯವನ್ನು ದೀರ್ಘ ಮಾಡುತ್ತವೆ. ಇದಕ್ಕೆ ಪೂರಕವಾಗಿ ಮೆಂತೆಯಲ್ಲಿರುವ ಆಲ್ಕಲಾಯ್ಡ್‌ಗಳೂ ಕೆಲಸ ಮಾಡುತ್ತವೆ (fenugreek seeds for diabetes). ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಅಥವಾ ಇನ್ಸುಲಿನ್‌ಗೆ ಪ್ರತಿರೋಧ ತೋರುವುದು ಕಡಿಮೆಯಾಗುತ್ತದೆ. ಹಾಗಾಗಿ ಫಾಸ್ಟಿಂಗ್ ಶುಗರ್ (ಉಪವಾಸದಲ್ಲಿನ ಸಕ್ಕರೆ ಮಟ್ಟ) ಮತ್ತು (HbA1c) ಎಚ್‌ಬಿಎ೧ಸಿ ಅಥವಾ ಮೂರು ತಿಂಗಳಿನ ಸರಾಸರಿ ಸಕ್ಕರೆ ಮಟ್ಟದಲ್ಲಿಯೂ ಸುಧಾರಣೆ ಕಂಡುಬರುತ್ತದೆ.
ಎಷ್ಟು ತಿನ್ನಬೇಕು?
ಇದಕ್ಕೂ ರೀತಿ-ನೀತಿಯಿದೆ. ಸಾಧಾರಣವಾಗಿ ದೇಹ ತೂಕ ಹೆಚ್ಚಿರುವವರು ಮಧುಮೇಹಿಗಳಾಗಿದ್ದರೆ, ಅವರು ಮೆಂತೆ ತಿನ್ನುವುದರಿಂದ ಹೆಚ್ಚಿನ ಪ್ರಯೋಜನ ಸಾಧಿಸಬಹುದು. ಕಾರಣ, ತೂಕ ಇಳಿಕೆಗೂ ಮೆಂತೆ ಸಹಕಾರಿ. ಮೆಂತೆಯನ್ನು ಪುಡಿ ಮಾಡಿಕೊಂಡು, ಅದನ್ನು ಬಿಸಿ ನೀರಿಗೆ ಹಾಕಿ ಕುಡಿಯಬಹುದು. ಅದಲ್ಲದಿದ್ದರೆ, ರಾತ್ರಿ ನೆನೆಸಿಟ್ಟು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಅದರ ನೀರಿನೊಂದಿಗೆ ಸೇವಿಸಬಹುದು- ಅಂದಾಜು, ಒಂದು ಚಮಚದಷ್ಟು ಮೆಂತೆಯನ್ನು. ಜರ್ನಲ್ ಆಫ್ ಡಯಾಬಿಟಿಸ್ ಎಂಡ್ ಮೆಟಬಾಲಿಕ್ ಡಿಸಾರ್ಡರ್‌ನಲ್ಲಿ ತಜ್ಞರು ಹೇಳುವುದು, ದಿನಕ್ಕೆ ಅತಿ ಹೆಚ್ಚೆಂದರೆ ೧೦ ಗ್ರಾಂ ಮೆಂತೆ ಸೇವಿಸಬಹುದು. ಅತಿಯಾಗಿ ಮೆಂತೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿದು ಅಪಾಯವಾಗಬಹುದು.
ಆದರೆ ಮೆಂತೆ ಸೇವನೆಯಿಂದ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ದಾಖಲಾಗುವುದನ್ನು ಕಾಣಲು ಕೆಲವು ವಾರಗಳು, ಕೆಲವೊಮ್ಮೆ ತಿಂಗಳೂ ಬೇಕಾಗಬಹುದು. ಕಾರಣ, ಕೇವಲ ಮೆಂತೆಯೊಂದನ್ನೇ ತಿನ್ನುವುದರಿಂದ ಇದನ್ನು ಸಾಧಿಸಬಹುದು ಎಂಬುದೂ ಸತ್ಯವಲ್ಲ. ಉಳಿದಂತೆ ಆಹಾರಕ್ರಮ ಸರಿಯಾಗಿರಬೇಕು ಮತ್ತು ವ್ಯಾಯಾಮವನ್ನೂ ಕಡ್ಡಾಯವಾಗಿ ಮಾಡಬೇಕು. ಇಷ್ಟಾಗಿ, ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುವವರು ಮೆಂತೆ ಬೀಜ ಅಥವಾ ಇನ್ನಾವುದೇ ರೀತಿಯ ಮನೆಮದ್ದು ತಿನ್ನುವುದನ್ನು ತಮ್ಮ ವೈದ್ಯರಿಗೆ ಹೇಳಬೇಕಾಗುತ್ತದೆ.
ಯಾಕೆ ಹೇಳಬೇಕು?
ಯಾವುದೇ ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳುವವರು ತಮ್ಮನ್ನು ಆಗಾಗ ತಪಾಸಣೆಗೆ ಒಳಪಡಿಸಿಕೊಳ್ಳುವುದು ಅಗತ್ಯ. ಇದರಲ್ಲೂ ಹಾಗೆಯೇ. ಸಕ್ಕರೆ ಮಟ್ಟವನ್ನು ಆಗಾಗ ತಪಾಸಣೆ ಮಾಡಿಸಿಕೊಂಡು, ವೈದ್ಯರೊಂದಿಗೆ ಚರ್ಚಿಸುವುದು ಅಗತ್ಯ. ಅತಿಯಾಗಿ ಮೆಂತೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿದು ಅಪಾಯವಾಗಬಹುದು. ಸಕ್ಕರೆ ಪ್ರಮಾಣ ಹೆಚ್ಚಾದರೆ ಹೇಗೆ ಅಪಾಯವೋ, ಕಡಿಮೆಯಾದರೂ ಅಷ್ಟೇ ಅಪಾಯ. ಹಾಗಾಗಿ ಮಧುಮೇಹಿಯ ಆಹಾರ ಮತ್ತು ಆರೋಗ್ಯಕ್ಕೆ ಸರಿಯಾಗಿ ಔಷಧವನ್ನೂ ವೈದ್ಯರು ನಿಗದಿ ಮಾಡುತ್ತಾರೆ.
ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?