Site icon Vistara News

Fish Eating Benefits: ಮೀನು ಆರೋಗ್ಯಕ್ಕೆ ಒಳ್ಳೆಯದು; ಆದರೆ ದಿನವೂ ತಿನ್ನಬಹುದಾ?

fish eating benefits

ಮತ್ಯಾಹಾರ ಅಥವಾ ಸಾಗರದ ಆಹಾರೋತ್ಪನ್ನಗಳೆಂದರೆ (fish eating benefits) ಪ್ರೊಟೀನ್‌ ಆಹಾರಗಳೆಂದೇ ಜನಜನಿತ. ಇವು ಕಡಿಮೆ ಕೊಬ್ಬಿರುವ ಉತ್ಕೃಷ್ಟ ಪ್ರೊಟೀನ್‌ ಆಹಾರಗಳು ಮಾತ್ರವೇ ಅಲ್ಲ, ಹಲವು ರೀತಿಯ ಸೂಕ್ಷ್ಮ ಪೋಷಕಾಂಶಗಳ ಆಗರವೂ ಹೌದು. ಸೀ ಫುಡ್‌ ಎಂದು ಜನಪ್ರಿಯವಾಗಿ ಕರೆಸಿಕೊಳ್ಳುವ ಈ ಆಹಾರಗಳಲ್ಲೇ ಹೆಚ್ಚಿನ ಪ್ರೊಟೋನ್‌ ಮತ್ತಿತರ ಪೌಷ್ಟಿಕಾಂಶಗಳು ಯಾವುದರಲ್ಲಿವೆ ಎಂಬುದನ್ನು ಪರಾಂಬರಿಸುವ ಯತ್ನವಿದು.
ಕಡಿಮೆ ಕೊಬ್ಬಿನ, ಪ್ರೊಟೀನ್‌ ಸಾಂದ್ರವಾದ ಆಹಾರದ್ದೊಂದು ವಿಶೇಷತೆಯಿದೆ. ಇಂಥ ಆಹಾರಗಳನ್ನು ʻಲೀನ್‌ ಪ್ರೊಟೀನ್‌ʼ ಎಂದು ಕರೆಯಲಾಗುತ್ತದೆ. ದೇಹಕ್ಕೆ ಹೆಚ್ಚಿನ ಕ್ಯಾಲರಿ ತುಂಬದೆ, ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬುಗಳನ್ನು ತುರುಕದೆ, ದೇಹಸ್ವಾಸ್ಥ್ಯಕ್ಕೆ ಪೂರಕವಾದಂಥ ಪೋಷಕಾಂಶ ಮತ್ತು ಪ್ರೊಟೀನ್‌ ನೀಡುವ ಆಹಾರಗಳನ್ನು ಲೀನ್‌ ಪ್ರೊಟೀನ್‌ ಎಂದು ಕರೆಯಲಾಗುತ್ತದೆ. ಇವುಗಳಿಂದ ಆಗುವ ಲಾಭಗಳು ಹಲವು ರೀತಿಯವು. ಕ್ರೀಡಾಪಟುಗಳು, ರಟ್ಟೆ ಬೆಳೆಸುವ ಧೀರರು, ತೂಕ ಇಳಿಸುವ ಹಮ್ಮೀರರು, ಆರೋಗ್ಯ ಕಾಪಾಡಿಕೊಳ್ಳುವ ಉತ್ಸಾಹಿಗಳು, ಆನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರು, ಬೆಳೆಯುತ್ತಿರುವ ಮಕ್ಕಳು- ಹೀಗೆ ಬಹುತೇಕ ಎಲ್ಲರಿಗೂ ಆಗುವಂಥ ಆಹಾರಗಳೆಂದರೆ ಲೀನ್‌ ಪ್ರೊಟೀನ್‌. ಸಮುದ್ರದಲ್ಲಿ ದೊರೆಯುವ ಆಹಾರಗಳು ಇಂಥ ಪ್ರೊಟೀನ್‌ಗಳಿಂದಲೇ ಭರಿತವಾಗಿವೆ. ಇವುಗಳನ್ನು ಪ್ರತಿ 100 ಗ್ರಾಂ ಸರ್ವಿಂಗ್‌ ಎಂದು ಲೆಕ್ಕ ಹಾಕಿದರೆ ದೊರೆಯುವ ಪ್ರೊಟೀನ್‌ ಎಷ್ಟು ಮತ್ತು ಇತರ ಪೋಷಕಾಂಶಗಳೇನು ದೊರೆಯುತ್ತವೆ ಎಂಬುದರ ಅಂದಾಜು ನೋಡಿದರೆ-

ಸೂರಲ್‌ ಮೀನು

ಅಥವಾ ಗೆದರೆ ಎಂದು ಕರೆಸಿಕೊಳ್ಳುವ ಈ ಜಾತಿಯ ಮೀನುಗಳ ಒಂದು ಸರ್ವಿಂಗ್‌ನಲ್ಲಿ ಸುಮಾರು 30 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಇದಕ್ಕೆ ದೊರೆಯುವುದು ಕೇವಲ 110 ಕ್ಯಾಲರಿಗಳು. ಕರಿದು, ಹುರಿದು, ಬೇಯಿಸಿ, ಸುಶಿಯಲ್ಲಿ ಹಸಿಯಾಗಿ, ಕ್ಯಾನ್‌ ಮಾಡಿದ್ದಾದರೂ ಸೈ- ಉತ್ತಮ ಗುಣಮಟ್ಟದ ಲೀನ್‌ ಪ್ರೊಟೀನ್‌ ದೊರೆಯುತ್ತದೆ. ಇದಲ್ಲದೆ, ವಿಟಮಿನ್‌ಗಳು, ಮೆಗ್ನೀಶಿಯಂ, ಸೆಲೆನಿಯಂ, ಫಾಸ್ಫರಸ್‌, ಪೊಟಾಶಿಯಂನಂಥ ಖನಿಜಗಳು ಮತ್ತು ಅತಿ ಹೆಚ್ಚಿನ ಪ್ರಮಾಣದ ಒಮೇಗಾ 3 ಕೊಬ್ಬಿನಾಮ್ಲ ಇದರಲ್ಲಿದೆ.

ಅಕ್ಟೋಪಸ್

ಉಳಿದ ಮೀನುಗಳಂತೆ ಅಕ್ಟೋಪಸ್ ಎಲ್ಲೆಡೆ ದೊರೆಯದಿದ್ದರೂ ಇದನ್ನು ಮೆಲ್ಲುವ ಉತ್ಸಾಹಿಗಳು ಕಡಿಮೆಯಿಲ್ಲ. ಒಂದು ಸರ್ವಿಂಗ್‌ನಲ್ಲಿ 30 ಗ್ರಾಂ ಪ್ರೊಟೀನ್‌ ನೀಡುವ ಇದು ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂ ಮುಂತಾದ ಖನಿಜಗಳ ಗಣಿ. ಕೊಬ್ಬು ಅತಿ ಕಡಿಮೆಯಿರುವುದರಿಂದ ಥರಹೇವಾರಿ ಸಾಸೇಜ್‌ಗಳ ಜೊತೆ ಇದು ವಿಶೇಷ ಸೀಫುಡ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಸಿಹಿ ನೀರಿನ ಟ್ರೌಟ್‌

ಇವು ಪ್ರೊಟೀನ್‌ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನವನ್ನೇ ಗಿಟ್ಟಿಸಿವೆ. ನದಿ, ಕೆರೆ ಮುಂತಾದ ಸಿಹಿ ನೀರಿನ ಸೆಲೆಗಳಲ್ಲಿ ಲಭ್ಯವಾಗುವ ಇವುಗಳ ಒಂದು ಸರ್ವಿಂಗ್‌ನಲ್ಲಿ 26 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಒಮೇಗಾ 3 ಕೊಬ್ಬಿನಾಮ್ಲದ ಜೊತೆಗೆ ವಿಟಮಿನ್‌ ಬಿ3, ಬಿ5, ಬಿ6, ಬಿ12, ಪೊಟಾಶಿಯಂ, ಸೆಲೆನಿಯಂ, ನಯಾಸಿನ್‌ ಮುಂತಾದ ಸತ್ವಗಳು ಪುಷ್ಕಳವಾಗಿ ದೊರೆಯುತ್ತವೆ.

ನಳ್ಳಿ

ಕೆಲವು ಮೀನುಗಳಿಗೆ ಹೋಲಿಸಿದರೆ ನಳ್ಳಿ ಲೀನ್‌ ಮೀಟ್‌ ಎನಿಸಿಕೊಳ್ಳದಿದ್ದರೂ, ಉಳಿದ ಪ್ರಾಣಿಜನ್ಯ ಆಹಾರಗಳಿಗೆ ಹೋಲಿಸಿದರೆ ಕಡಿಮೆ ಕೊಬ್ಬಿನದು. ಒಂದು ಸರ್ವಿಂಗ್‌ನಲ್ಲಿ 21 ಗ್ರಾಂ ನಷ್ಟು ಪ್ರೊಟೀನ್‌ ದೊರೆಯಬಹುದು. ಒಮೇಗಾ 3 ಕೊಬ್ಬಿನಾಮ್ಲ, ವಿಟಮಿನ್‌ಗಳು ಮತ್ತು ಖನಿಜಗಳು ಇದರಿಂದ ಲಭ್ಯ.

ಬಂಗುಡೆ

ಸ್ನಾಯುಗಳ ಗಾಯ ಮಾಯುವುದಕ್ಕೆ ಸೂಕ್ತವಾದ ಈ ಮೀನಿನ ಒಂದು ಸರ್ವಿಂಗ್‌ನಲ್ಲಿ 24 ಗ್ರಾಂ ಪ್ರೋಟೀನ್‌ ದೊರೆಯುತ್ತದೆ. ಜೊತೆಗೆ, ಒಮೇಗಾ 3 ಕೊಬ್ಬಿನಾಮ್ಲ, ಕಬ್ಬಿಣ, ಪೊಟಾಶಿಯಂ ಮುಂತಾದ ಖನಿಜಗಳು ದೇಹ ಸೇರುತ್ತವೆ.

ಕಾಡ್‌

ಕಡಲ ಹೆಮ್ಮೀನುಗಳು ತಣ್ಣೀರ ಮೀನುಗಳೆಂದೇ ಕರೆಸಿಕೊಳ್ಳುವಂಥವು. ಒಂದು ಸರ್ವಿಂಗ್‌ನಲ್ಲಿ ಕೇವಲ 75 ಕ್ಯಾಲರಿ ನೀಡಿ, ಸುಮಾರು 18 ಗ್ರಾಂ ಪ್ರೊಟೀನ್‌ ಲಭ್ಯವಾಗುತ್ತದೆ. ಜೊತೆಗೆ ಹಲವು ರೀತಿಯ ಬಿ ವಿಟಮಿನ್‌ಗಳು, ಒಮೇಗಾ, ಸೆಲೆನಿಯಂ, ಮೆಗ್ನೀಶಿಯಂ, ಫಾಸ್ಫರಸ್‌ ಮುಂತಾದ ಖನಿಜಗಳು ದೊರೆಯುತ್ತವೆ.

ಸೀಗಡಿ

ಪ್ರಾನ್‌, ಶ್ರಿಂಪ್‌ಗಳು ಸೀಫುಡ್‌ ಪ್ರಿಯರ ಬಾಯಲ್ಲಿ ನೀರೂರಿಸುವಂಥವು. ಒಂದು ಸರ್ವಿಂಗ್‌ನಲ್ಲಿ ಸುಮಾರು 24 ಗ್ರಾಂ ಗಳಷ್ಟು ಪ್ರೊಟೀನ್‌ ನೀಡುವುದರ ಜೊತೆಗೆ ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಮತ್ತು ಒಮೇಗಾ 3 ಕೊಬ್ಬಿನಾಮ್ಲ ಒದಗಿಸುವುದು ಈ ಆಹಾರದ ಹೆಗ್ಗುರುತು.

ಬೂತಾಯಿ

ಒಂದು ಬಾರಿಗೆ 20 ಗ್ರಾಂ ಗಳಷ್ಟು ಪ್ರೊಟೀನ್‌ ನೀಡುವ ಇದರಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಸಾಲುಸಾಲಾಗಿ ಖನಿಜಗಳಿವೆ.

ವಾಮೀನು

ಅಟ್ಲಾಂಟಿಕ್‌ ಸಾಗರದಲ್ಲಿ ದೊರೆಯುವ ವಾಮೀನುಗಳಲ್ಲಿ, ವ್ಯಕ್ತಿಯೊಬ್ಬ ಹಲವಾರು ದಿನಗಳವರೆಗೆ ತಿಂದರೆ ಸಾಕಾಗುವಷ್ಟು ಒಮೇಗಾ 3 ಕೊಬ್ಬಿನಾಮ್ಲ ನಿಕ್ಷೇಪಗೊಂಡಿದೆ. ಜೊತೆಗೆ 20 ಗ್ರಾಂ ಪ್ರೊಟೀನ್‌, ಕ್ಯಾಲ್ಶಿಯಂ, ವಿಟಮಿನ್‌ 2 ಮತ್ತು ಡಿ ಹಾಗೂ ಖನಿಜಗಳಿವೆ

ಏಡಿ

ಒಂದು ಬಾರಿಗೆ 20 ಗ್ರಾಂ ಪ್ರೊಟೀನ್‌ ನೀಡುವ ಇದಲ್ಲರಿ ವಿಫುಲವಾಗಿ ಒಮೇಗಾ 3 ಕೊಬ್ಬಿನಾಮ್ಲವಿದ್ದು, ಸೆಲೆನಿಯಂ, ಕ್ಯಾಲ್ಶಿಯಂ, ವಿಟಮಿನ್‌ಗಳು ಹೇರಳವಾಗಿವೆ.

ಸಾಗರದ ಆಹಾರಗಳಲ್ಲಿ ಒಮೇಗಾ 3 ಕೊಬ್ಬು ಇರುತ್ತದಲ್ಲ, ಮತ್ತೆ ಲೀನ್‌ ಮೀಟ್‌ ಹೇಗೆ?
ಒಮೇಗಾ 3 ಕೊಬ್ಬಿನಾಮ್ಲವು ನಮ್ಮ ದೇಹಕ್ಕೆ ಅಗತ್ಯವಾದ ಅಂಶ. ಇದರಿಂದ ಹೃದಯದಾರೋಗ್ಯ ಬಲಗೊಳ್ಳುತ್ತದೆ. ಕೊಲೆಸ್ಟ್ರಾಲ್‌ ಅಥವಾ ಎಲ್‌ಡಿಎಲ್‌ ಪ್ರಮಾಣವನ್ನಿದು ಹೆಚ್ಚಿಸುವುದಿಲ್ಲ. ಬದಲಿಗೆ, ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಪ್ರೊಟೀನ್‌ ನೀಡುತ್ತದೆ.

ದಿನಾ ಮೀನು ತಿನ್ನಬಹುದೇ?

ದಿನಾ ತಿನ್ನುವವರಿದ್ದಾರೆ. ಅದು ಅವರವರ ಜೀವನಶೈಲಿಗೆ ಬಿಟ್ಟ ಸಂಗತಿ. ಆದರೆ ದಿನಾ ತಿನ್ನುವುದಾದರೆ ಕಡಿಮೆ ಪಾದರಸದಂಶ ಇರುವಂಥ ಮೀನುಗಳಲ್ಲಿ ಬಳಸುವುದು ಒಳ್ಳೆಯದು. ಬಂಗುಡೆ ಇತ್ಯಾದಿ ಮೀನುಗಳನ್ನು ದಿನವೂ ತಿಂದರೆ ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆ ಉಂಟಾಗಬಹುದು.

ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು

Exit mobile version