Site icon Vistara News

Food Tips: ಅಡುಗೆಮನೆಯ ಒಗ್ಗರಣೆ ಡಬ್ಬಿ ನಿಮ್ಮ ಲೈಂಗಿಕ ಜೀವನಕ್ಕೂ ಒಗ್ಗರಣೆಯೇ!

oggarane

ಕೆಲವರಿಗೆ ಒಗ್ಗರಣೆ ಕಂಡರಾಗದು. ಸಾಸಿವೆ ಚಟಪಟಾಯಿಸಿ ಸಾರು, ಸಾಂಬಾರಿಗೆ ಒಗ್ಗರಣೆ ಹಾಕಿದರೆ ಮೂಗು ಮುರಿಯುತ್ತಾರೆ. ಇನ್ನೂ ಕೆಲವವರಿಗೆ ಎಳ್ಳು, ಜೀರಿಗೆ, ಮೆಂತೆ ಕಂಡರಾಗದು. ಊಟದ ಮಧ್ಯೆ ಅವು ಸಿಕ್ಕರೆ ಸಾಸಿವೆ ಸಿಡಿದಂತೆ ಚಟಪಟ ಸಿಡಿಯುತ್ತಾರೆ. ಹೆಚ್ಚು ಹಾಕಿದ್ಯಾಕೆ ಎಂದು ನಿತ್ಯವೂ ಮನೆಯಲ್ಲಿ ಅಡುಗೆ ಮಾಡುವವರ ಮೇಲೆ ಹರಿಹಾಯುತ್ತಾರೆ. ಆದರೆ ಈ ಒಗ್ಗರಣೆ ಡಬ್ಬಿಯ ನಿಜವಾದ ಮ್ಯಾಜಿಕ್ಕೇ ಬೇರೆ! ಅಡುಗೆಗೆ ಒಗ್ಗರಣೆ ಬಿದ್ದರಷ್ಟೇ ಅಡುಗೆ ಆಯಿತು ಎಂದರ್ಥ. ಇಲ್ಲವಾದರೆ ಊಟಕ್ಕೆ ರುಚಿಯಿಲ್ಲ. ಒಗ್ಗರಣೆಯಿಲ್ಲದ ಅಡುಗೆ ಅಡುಗೆಯಾದರೂ ಹೇಗಾದೀತು, ಹಾಗೆಯೇ, ಲೈಂಗಿಕ ಜೀವನವಿಲ್ಲದ ದಂಪತಿಗಳ ಸಂಸಾರ ಹೇಗಿದ್ದೀತು ಯೋಚಿಸಿ. ಅದಕ್ಕೇ, ದಾಂಪತ್ಯಕ್ಕೂ ಅಡುಗೆಮನೆಯ ಒಗ್ಗರಣೆಯೂ ಮದ್ದಾಗಬಲ್ಲುದು.

ಹೌದು. ಒಗ್ಗರಣೆಯಲ್ಲೇನಿದೆ ಮಹಾ ಎಂದು ಹೇಳಬೇಡಿ. ಹಾಗೆ ನೋಡಿದರೆ ಅಡುಗೆ ಮನೆಯ ಸಾಂಬಾರಬಟ್ಟಲಲ್ಲೇ ಎಲ್ಲವೂ ಇದೆ. ಲೈಂಗಿಕವಾಗಿ ಸಧೃಢರಾಗಿರಲು, ಕ್ರಿಯಾಶೀಲರಾಗಿರಲು, ನಿಮ್ಮ ಲೈಂಗಿಕ ಶಕ್ತಿ ಹಾಗೂ ಆಸಕ್ತಿ ವೃದ್ಧಿಸಲು ಈ ಒಗ್ಗರಣೆ ಡಬ್ಬಿಯೂ ಸಹಾಯವಾಗಬಲ್ಲದು. ಸಾಸಿವೆ, ಜೀರಿಗೆ, ಮೆಂತೆ, ಓಂಕಾಳು ಇವೆಲ್ಲವೂ ಲೈಂಗಿಕ ಅರೋಗ್ಯ ವೃದ್ಧಿಗೆ ಅತ್ಯುತ್ತಮ ಮನೆಮದ್ದಂತೆ. ಅದರಲ್ಲೂ ಪುರುಷರ ಲೈಂಗಿಕಾಸಕ್ತಿ ಹಾಗೂ ಶಕ್ತಿವರ್ಧನೆಗೆ ಇದರ ಉಪಯೋಗ ಹೆಚ್ಚಂತೆ. ಹಾಗಾದರೆ, ಒಗ್ಗರಣೆ ಡಬ್ಬಿಯೆಂಬ ಅಮೂಲ್ಯ ನಿಧಿಯ ಮಹಾತ್ಮೆಯನ್ನು ಇಲ್ಲಿ ಕೇಳಿ.

೧. ಸಾಸಿವೆ: ಚೀನೀಯರ ಪ್ರಕಾರ, ಸಾಸಿವೆ ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ. ಅದರ ಫಲ ಬೆಡ್‌ರೂಂನ ಉಷ್ಣತೆಯೂ ಏರುತ್ತದೆ ಎಂಬ ಬಲವಾದ ನಂಬಿಕೆ ಅವರದ್ದು. ಸಾಸಿವೆಯಲ್ಲಿ ಹೇರಳವಾಗಿ ವಿಟಮಿನ್‌ ಸಿ, ಕೆ, ಬಿ೬, ಹಾಗೂ ಫೋಲಿಕ್‌ ಆಸಿಡ್‌ ಇದೆ. ಇದು ದೇಹದಲ್ಲಿ ಅಡ್ರಿನಾಲಿನ್‌ ಉತ್ಪಾದನೆಗೂ ಇಂಬು ಕೊಡುವುದರಿಂದ ಇದು ಲೈಂಗಿಕತೆ ವಿಭಾಗದಲ್ಲೂ ಕೆಲಸಕ್ಕೆ ಬರುತ್ತದೆ ಎನ್ನಲಾಗುತ್ತದೆ.

೨. ಎಳ್ಳು: ಎಳ್ಳಿನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಪುರುಷರಲ್ಲಿ ವೀರ್ಯವೃದ್ಧಿಗೆ ಸಹಾಯ ಮಾಡುತ್ತದೆ. ಇದು ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡಿ, ಲೈಂಗಿಕ ಸಂಪರ್ಕದ ಸಂದರ್ಭ ಅತ್ಯಂತ ಹೆಚ್ಚು ಕಾಲ ಖುಷಿಯನ್ನು ಹೊಂದಲು ಸಾಧ್ಯವಿದೆ. ಜೊತೆಗೆ ಎಳ್ಳಿನ ನಿಯಮಿತ ಸೇವನೆಯಿಂದ ಪುರುಷರಲ್ಲಿ ಸಂತಾನಹೀನತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Healthy Food | ನಾಲಿಗೆಯ ಮಾತು ಕೇಳಬೇಡಿ, ದೇಹಕ್ಕೆ ಕಲಿಸಿ ಆರೋಗ್ಯದ ಪಾಠ!

೩. ಮೆಂತ್ಯಕಾಳು: ಮೆಂತ್ಯಕಾಳಿನಲ್ಲಿರುವ ಫೈಟೋಇಸ್ಟ್ರೋಜನ್‌ ಅಂಶವು ಹಾರ್ಮೋನಿನ ತೊಂದರೆಯನ್ನು ಪರಿಹರಿಸಿ, ಪುರುಷರ ಸೆಕ್ಸ್‌ ಹಾರ್ಮೋನು ಟೆಸ್ಟೋಸ್ಟೀರಾನ್‌ ಅನ್ನು ಉದ್ದೀಪನಗೊಳಿಸುತ್ತದೆ. ಇದರಿಂದ ಲೈಂಗಿಕಾಸಕ್ತಿ ವೃದ್ಧಿಯಾಗುತ್ತದೆ. ಪುರುಷರಲ್ಲಿ ಉದ್ರೇಕದ ಸಮಸ್ಯೆ ಇದ್ದರೆ ಅದಕ್ಕೂ ಇದು ಅತ್ಯಂತ ಉತ್ತಮ ಪರಿಹಾರ.

೪. ಜೀರಿಗೆ: ಜೀರಿಗೆ, ಕಾಳುಮೆಣಸು ಹಾಗೂ ಜೇನುತುಪ್ಪದ ಮಿಶ್ರಣವನ್ನು ತಮ್ಮ ಲೈಂಗಿಕಾಸಕ್ತಿ ವೃದ್ಧಿಗೆ ಅರಬ್ಬರು ಸಾಂಪ್ರದಾಯಿಕವಾಗಿ ಸೇವಿಸುತ್ತಾರೆ. ಜೀರಿಗೆಯಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಝಿಂಕ್‌ ಇರುವುದರಿಂದ ಇದು ವೀರ್ಯವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಜೀರಿಗೆಯಲ್ಲಿರುವ ಪೊಟಾಶಿಯಂ ಉದ್ರೇಕದ ಸಮಸ್ಯೆ ಇರುವ ಪುರುಷರಿಗೆ, ಸಂಭೋಗಕ್ಕೆ ಮೊದಲೇ ವೀರ್ಯಸ್ಖಲನದ ಸಮಸ್ಯೆ ಇರುವ ಮಂದಿಗೆ ಅತ್ಯುತ್ತಮ ಪರಿಹಾರ ನೀಡುತ್ತದೆ.

೫. ಓಂಕಾಳು: ಲೈಂಗಿಕ ಜೀವನವನ್ನು ಮತ್ತಷ್ಟು ಸುಖದಾಯಕವನ್ನಾಗಿ ಮಾಡುವ ಶಕ್ತಿ ಓಂಕಾಳು ಅಥವಾ ಓಮಕ್ಕೆ ಇದೆ. ಇದು ಸೆಕ್ಸ್‌ ಹಾರ್ಮೋನನ್ನು ಉದ್ದೀಪನಗೊಳಿಸಿ ಲೈಂಗಿಕ ಸಂಪರ್ಕದ ವೇಳೆ ಶಕ್ತಿಯನ್ನು ನೀಡುವುದಲ್ಲದೆ ದೇಹಕ್ಕೆ ರಿಲ್ಯಾಕ್ಸಿಂಗ್‌ ಅನುಭವವನ್ನೂ ನೀಡುತ್ತದೆ. ಉದ್ರೇಕದ ಸಮಸ್ಯೆ, ಹೆಚ್ಚು ಹೊತ್ತು ಕ್ರಿಯೆಯಲ್ಲಿರಲಾಗದ ಸಮಸ್ಯೆ, ಬಹುಬೇಗ ವೀರ್ಯಸ್ಖಲನದಿಂದಾಗುವ ನಿರಾಸೆ ಇತ್ಯಾದಿಗಳಿಗೆ ಇದು ಒಳ್ಳೆಯ ಔಷಧಿ.

ಇನ್ನು ಮುಂದೆ, ಒಗ್ಗರಣೆ ಹೆಚ್ಚು ಹಾಕಿದಳೆಂದು ಹೆಂಡತಿಗೆ ಬೈಯಬೇಡಿ. ಒಗ್ಗರಣೆ ಮಹಾತ್ಮೆ ಅರಿತು ನಾಲಿಗೆಗೆ ಸಹಕರಿಸಲು ಹೇಳಿ!

ಇದನ್ನೂ ಓದಿ: Thyroid Gland Foods: ಥೈರಾಯ್ಡ್‌ ಗ್ರಂಥಿಯ ಆರೋಗ್ಯಕ್ಕೆ ಬೇಕಾಗುವ ಆಹಾರಗಳ ಬಗ್ಗೆ ಗೊತ್ತೆ?

Exit mobile version