ದಕ್ಷಿಣ ಭಾರತೀಯರ ಆರಾಧ್ಯ ದೈವ ಇಡ್ಲಿ ಎಂಬ ದಿನನಿತ್ಯದ ಬೆಳಗಿನ ಆಹಾರದ ಮೇಲಿನ ಪ್ರೀತಿ ಒಂದೆರಡು ದಿನದ್ದಲ್ಲ. ಇಡ್ಲಿ ಎಂಬ ಸಾರ್ವಕಾಲಿಕ ಆರೋಗ್ಯದ ಗುಟ್ಟನ್ನು ನಾವು ದಕ್ಷಿಣ ಭಾರತೀಯರು ಕಂಡುಕೊಂಡದ್ದಾಗಿದೆ. ಹಾಗಾಗಿ ಇಡ್ಲಿಯನ್ನು ಮಲ್ಲಿಗೆಯಂತೆ ಹಗುರವೂ ಮೆತ್ತಗೆಯೂ ಹೇಗೆ ಮಾಡಬಹುದು ಎಂಬುದರಿಂದ ಹಿಡಿದು ಬಗೆಬಗೆಯ ಇಡ್ಲಿಯ ಸಾಧ್ಯತೆಗಳನ್ನು, ಇಡ್ಲಿಯ ಜೊತೆಗೆ ಸರಿಹೊಂದುವ ಬಗೆಬಗೆಯ ಚಟ್ನಿ ಸಾಂಬಾರಿನ ಸಾಧ್ಯತೆಗಳನ್ನೂ ಕಂಡುಕೊಂಡದ್ದಾಗಿದೆ. ಈ ಅನ್ವೇಷಣೆಯ ಹಾದಿ ಎಂದಿಗೂ ಮುಗಿಯದ್ದೂ ಆಗಿದೆ. ಇಡ್ಲಿಪ್ರಿಯ ಜನರು, ಈ ಹೊಸ ಜಗತ್ತಿನ ಶೋಧವನ್ನು ಎಂದಿಗೂ ಕೈಬಿಡಲಾರರು. ಅದಕ್ಕಾಗಿಯೇ ಇತ್ತೀಚೆಗೆ ಸ್ಟಾಂಡ್‌ಅಪ್ ಕಾಮಿಡಿಯನ್ ಒಬ್ಬರು ಇಡ್ಲಿಯ ಬಗೆಗೆ ಅದೊಂದು ರುಚಿಯೇ ಇಲ್ಲದ ಬಿಳಿ ಸ್ಪಾಂಜಿನ ತುಂಡು ಎಂದು ನಗೆಯಾಡಿದ್ದಕ್ಕೆ ಸರಿಯಾಗಿ ರುಬ್ಬಿದ್ದರು. ಹೀಗೆ ಇಡ್ಲಿ ಭಕ್ತರು ಇರುವುದರಿಂದಲೇ ಇಡ್ಲಿಯ ಜಗತ್ತು ವಿಸ್ತಾರವಾಗಿದೆ. ಹಾಗಾದರೆ ಬನ್ನಿ, ಸಾಮಾನ್ಯ ಇಡ್ಲಿಗಿಂತ ಭಿನ್ನವಾದ ಐದು ಬಗೆಯ ಯಾವೆಲ್ಲ ಇಡ್ಲಿಗಳ ಪ್ರಯೋಗ ನಾವು ಮಾಡಬಹುದು ನೋಡೋಣ.
1. ತರಕಾರಿ ಇಡ್ಲಿ: ಮಕ್ಕಳು ತರಕಾರಿ ತಿನ್ನುವುದಿಲ್ಲ ಎಂದು ತಲೆಬಿಸಿ ಮಾಡುವ ಅಮ್ಮಂದಿರಿಂದ ಹಿಡಿದು, ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತಲೆಬಿಸಿ ಮಾಡಿಕೊಳ್ಳುವ ಮಧ್ಯವಯಸ್ಕ ಮಂದಿಯವರೆಗೆ ಈ ಇಡ್ಲಿ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಕತ್ತರಿಸಿದ ಬೀನ್ಸ್, ಕ್ಯಾರೆಟ್, ಈರುಳ್ಳಿ ಮತ್ತಿತರ ತರಕಾರಿಗಳನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಬೇಯಿಸಿದರೆ ಮುಗೀತು, ತರಕಾರಿ ಇಡ್ಲಿ ರೆಡಿ. ತೆಂಗಿನಕಾಯಿ ಚಟ್ನಿಯೋ, ಟೊಮೆಟೋ ಚಟ್ನಿಯೋ, ಪುದಿನ ಅಥವಾ ಕೊತ್ತಂಬರಿ ಸೊಪ್ಪಿನ ಚಟ್ನಿಯೋ ಇದರ ಜೊತೆಗೆ ತಿನಲು ಮಾಡಿದರೆ, ಬೆಳಗಿನ ಉಪಾಹಾರಕ್ಕೆ ಬೇರೇನೂ ಬೇಕಿಲ್ಲ!
2. ಜೋಳದ ಇಡ್ಲಿ: ಅಮೆರಿಕನ್ ಕಾರ್ನ್ ಅಥವಾ ಜೋಳದ ತೆನೆಯನ್ನು ಮಾರುಕಟ್ಟೆಯಿಂದ ತಂದಿದ್ದೀರಾ? ಈ ಸಿಹಿಯಾದ ಜೋಳವನ್ನು ಸೂಪ್ ಬಿಟ್ಟರೆ ಬೇರೇನು ಮಾಡಲಿ ಎಂದು ಯೋಚಿಸಿದ್ದೀರಾ? ಅಥವಾ ಸಂಜೆ ಬೇಯಿಸಿಟ್ಟ ಜೋಳವನ್ನು ಯಾರೂ ತಿನ್ನದೆ ಹಾಗೆಯೇ ಉಳಿದು ಬಿಟ್ಟಿದೆಯಾ? ಹಾಗಾದರೆ ಇಡ್ಲಿ ಮಾಡಿ. ಬೇಯಿಸಿದ ಜೋಳವನ್ನು ಇಡ್ಲಿ ಹಿಟ್ಟಿನ ಜೊತೆಗೆ ಸೇರಿಸಿ ಬೇಯಿಸಿ. ಜೋಳದ ರುಚಿಯನ್ನು ಇಡ್ಲಿಯ ಜೊತೆ ಸವಿದು ನೋಡಿ.
3. ಪಾಲಕ್ ಇಡ್ಲಿ: ಬೆಳ್ಳಗಿನ ಇಡ್ಲಿ ನೋಡಿ, ತಿಂದು ಬೋರಾಗಿದೆಯೇ? ಹಾಗಾದರೆ ಹಸಿರು ಇಡ್ಲಿ ಮಾಡಿ. ಸ್ವಾತಂತ್ರ್ಯ ದಿನವೋ, ಗಣರಾಜ್ಯ ದಿನವೋ ಬಂದರೆ ಹಸಿರು ಬಣ್ಣದ ತಿಂಡಿಗೆ ಈ ಇಡ್ಲಿ ಬೆಸ್ಟ್. ಭರಪೂರ ಕಬ್ಬಿಣಾಂಶವಿರುವ, ಎಲ್ಲ ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಾಲಕ್ ಇಡ್ಲಿ ನೋಡಲು ಚಂದ ಕಂಡಷ್ಟೇ ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Foods For Memory: ಮರೆವು ಹೆಚ್ಚಾಯಿತೇ? ಈ ಆಹಾರಗಳನ್ನು ನೆನಪಿಟ್ಟು ತಿನ್ನಿ!
4. ಬೀಟ್‌ರೂಟ್ ಅಥವಾ ಕ್ಯಾರೆಟ್ ಇಡ್ಲಿ: ಪಿಂಕ್ ಬಣ್ಣದ ಆಕರ್ಷಕ ಇಡ್ಲಿ ಮಾಡಬೇಕೆಂದರೆ ಬೀಟ್‌ರೂಟ್ ಬಿಟ್ಟರೆ ಯಾರಿದ್ದಾರೆ ಹೇಳಿ. ಬೀಟ್‌ರೂಟ್ ಹಾಕಿ ಮಾಡಿದ ಇಡ್ಲಿ ತಿನ್ನಲು ರುಚಿ ಎಂಬುದು ಸತ್ಯವಾದರೂ, ರುಚಿಗಿಂತ ಹೆಚ್ಚು ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂಥವು. ಹಿಟ್ಟಿನ ಜೊತೆಗೆ ಬೀಟ್‌ರೂಟನ್ನೂ ಸೇರಿಸಿ ಹಿಟ್ಟು ಮಾಡಿ ಅದನ್ನು ಇಡ್ಲಿ ತಟ್ಟೆಯಲ್ಲಿ ಹಾಕಿ ಬೇಯಿಸಿದರೆ ರೆಡಿಯಾಗಿರುವ ಈ ಇಡ್ಲಿ ಈಗಷ್ಟೇ ರೋಗಗಳಿಂದ ಚೇತರಿಸುವಂಥ ಮಂದಿಗೆ, ಮಕ್ಕಳಿಗೆ ಅತ್ಯಂತ ಒಳ್ಳೆಯದು. ಬೀಟ್‌ರೂಟಿನ ಜೊತೆಗೆ ಕ್ಯಾರೆಟ್ಟನ್ನೂ ಸೇರಿಸಬಹುದು. ಅಥವಾ ಕ್ಯಾರೆಟ್ಟಿನದೇ ಇಡ್ಲಿ ಮಾಡಬಹುದು.
5. ಪೊಡಿ ಇಡ್ಲಿ: ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧವಾಗಿರುವ ಪೊಡಿ ಇಡ್ಲಿಯನ್ನು ಮನೆಯಲ್ಲೂ ಮಾಡಬಹುದು. ಬೆಳಗ್ಗೆ ಮಾಡಿದ ಇಡ್ಲಿ ಉಳಿದರೆ, ಇಡ್ಲಿಯನ್ನು ತವಾದಲ್ಲಿ ಹಾಕಿ. ಚೆನ್ನಾಗಿ ತುಪ್ಪವನ್ನು ಹಾಕಿ ಅದರ ಎರಡೂ ಬದಿಗಳಿಗೆ ದಾಲ್‌ನಿಂದ ಮಾಡಿದ ಚಟ್ನಿ ಪುಡಿಯನ್ನು ಉದುರಿಸಿದರೆ ಅತ್ಯಂತ ರುಚಿ. ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Food Care For Health: ತಿಂದಿದ್ದು ಸಿಕ್ಕಾಪಟ್ಟೆಯಾಯ್ತೇ? ರಿಪೇರಿ ಹೀಗೆ ಮಾಡಬಹುದು!