Site icon Vistara News

Foods For Brain Power: ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚಿಸಿ!

Foods For Brain Power

ಕೆಲವು ಆಹಾರಗಳು (Foods for brain power) ಸ್ಮರಣಶಕ್ತಿಯನ್ನು ಉತ್ತೇಜಿಸಬಲ್ಲವು. ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ (foods that boost brain power) ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಯೋಚನೆ, ಯೋಜನೆ, ಸೃಜನಶೀಲತೆ ಮುಂತಾದ ಬಹಳಷ್ಟನ್ನು ಪ್ರಚೋದಿಸಬಲ್ಲವು. ಹಾಗಾದರೆ ಎಂಥಾ ಆಹಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾದೀತು ನೋಡೋಣ. ದೇಹದಲ್ಲಿ ಸ್ವಲ್ಪವೇ ಜಾಗವನ್ನು ಆಕ್ರಮಿಸಿಕೊಳ್ಳುವ ಮೆದುಳು ಮಾಡುವ ಕೆಲಸಗಳು ಮಾತ್ರ ವಿರಾಟ್‌ ಸ್ವರೂಪದ್ದು. ಇಂಥ ಮೆದುಳಿಗೆ ಸೂಕ್ತವಾದ ಗ್ರಾಸ ನೀಡಬೇಡವೇ? ಆಗ ಮಾತ್ರ ದೇಹ ಮತ್ತು ಮನಸ್ಸು ಚೈತನ್ಯಪೂರ್ಣವಾಗಿರುತ್ತದೆ. ಓದುವ ಮಕ್ಕಳಿಗೆ ನೆನಪಿನ ಶಕ್ತಿ ಸರಿಯಾಗಿ ಬೆಳೆಯುವಲ್ಲಿಂದ ಹಿಡಿದು ವೃದ್ಧರ ನೆನಪು ಉಳಿಯುವಲ್ಲಿವರೆಗೆ ಮೆದುಳಿನ ಕ್ಷಮತೆ ಚೆನ್ನಾಗಿರಬೇಕು. ಹಾಗಾದರೆ ನೆನಪು ಚುರುಕು ಮಾಡುವ ಆಹಾರಗಳೂ (foods that boost brain power) ಉಂಟೇ ಎಂಬುದೀಗ ಪ್ರಶ್ನೆ.

ಉತ್ತರವೆಂದರೆ- ಹೌದು! ಕೆಲವು ಆಹಾರಗಳು ಸ್ಮರಣಶಕ್ತಿಯನ್ನು ಉತ್ತೇಜಿಸಬಲ್ಲವು. ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ (foods that boost brain power) ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಯೋಚನೆ, ಯೋಜನೆ, ಸೃಜನಶೀಲತೆ ಮುಂತಾದ ಬಹಳಷ್ಟನ್ನು ಪ್ರಚೋದಿಸಬಲ್ಲವು. ಹಾಗಾದರೆ ಎಂಥಾ ಆಹಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾದೀತು? ಅವರ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸೀತು? ಅಂಥ ಕೆಲವು ಆಹಾರಗಳು ಇಲ್ಲಿವೆ-

ಮೀನು

ಸಾಲ್ಮನ್‌ (ವಾಮೀನು), ಸೋಧಿ, ಭೂತಾಯಿ, ಗೆದರೆ, ಸಿಹಿ ನೀರಿನ ಟ್ರೌಟ್‌ಗಳು ಮುಂತಾದ ಮೀನುಗಳಲ್ಲಿ ಒಮೇಗಾ ೩ ಫ್ಯಾಟಿ ಆಮ್ಲ ಹೇರಳವಾಗಿದೆ. ಮೆದುಳಿನ ಅರ್ಧಕ್ಕರ್ಧ ಭಾಗ ಮಾಡಿರುವುದು ಕೊಬ್ಬಿನಿಂದ. ಈ ಕೊಬ್ಬಿನ ಹೆಚ್ಚಿನ ಭಾಗ ಒಮೇಗಾ ೩ ಫ್ಯಾಟ್‌ ಕೋಶಗಳಿಂದ ಆವರಿಸಿದೆ. ಹಾಗಾಗಿ ಮೆದುಳಿನ ಯೋಗಕ್ಷೇಮ ಚೆನ್ನಾಗಿರಬೇಕೆಂದರೆ ಒಮೇಗಾ ೩ ಸೇವನೆ ಕಡ್ಡಾಯ.

ಬ್ಲೂಬೆರ್ರಿ

ಆಂಥೋಸಯನಿನ್‌ಗಳಿಂದ ತುಂಬಿರುವ ಈ ಕಡುನೀಲಿ ಹಣ್ಣುಗಳು ದೇಹದಲ್ಲಿ ಉರಿಯೂತ ನಿವಾರಿಸುತ್ತವೆ. ಉರಿಯೂತ ಮತ್ತು ಆಕ್ಸಿಡೇಶನ್‌ ಹೆಚ್ಚಾಗುವುದರಿಂದ ಮೆದುಳಿಗೆ ಬೇಗ ವಯಸ್ಸಾಗುತ್ತದೆ. ಬ್ಲೂಬೆರ್ರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ವಯಸ್ಸಾಗುವುದನ್ನು ಮುಂದೂಡಿ, ಮೆದುಳಿನ ಕೋಶಗಳ ನಡುವಿನ ಸಂವಹನವನ್ನು ಸುಧಾರಿಸುತ್ತವೆ

ಅರಿಶಿನ

ಇದರಲ್ಲಿರುವ ಕರ್ಕುಮಿನ್‌ ಎಂಬ ಅಂಶ ನಿಜಕ್ಕೂ ಮಾಯಾಮದ್ದಿನಂತೆ ಕೆಲಸ ಮಾಡಬಲ್ಲದು. ಮೆದುಳಿಗೆ ಆವರಿಸುವ ಅಮೈಲಾಯ್ಡ್ ಪೊರೆಯನ್ನು ನಿವಾರಿಸುವಲ್ಲಿ ಅರಿಶಿನದ ಸಾಮರ್ಥ್ಯ ಬಹುದೊಡ್ಡದು. ಅಲ್‌ಜೈಮರ್ಸ್‌ ಇರುವ ರೋಗಿಗಳು ಸಹ ಕರ್ಕುಮಿನ್‌ ಪೂರಕ ಮಾತ್ರೆಗಳಿಗೆ ಉತ್ತಮ ಸ್ಪಂದನೆ ತೋರಿದ್ದಾರೆ. ದೇಹದಲ್ಲಿ ಸೆರೊಟೋನಿನ್‌ ಮತ್ತು ಡೋಪಮಿನ್‌ ಚೋದಕಗಳ ಮಟ್ಟವನ್ನು ಹೆಚ್ಚಿನ, ಖಿನ್ನತೆ ಆವರಿಸದಂತೆ ತಡೆಯುತ್ತದೆ. ಮಾತ್ರವಲ್ಲ, ಮೆದುಳಿನಲ್ಲಿ ಹೊಸ ಕೋಶಗಳ ಬೆಳವಣಿಯನ್ನು ಸಹ ಅರಿಶಿನದಲ್ಲಿರುವ ಕರ್ಕುಮಿನ್‌ ಉತ್ತೇಜಿಸುತ್ತದೆ.

ಬ್ರೊಕೊಲಿ

ವಿಟಮಿನ್‌ ಕೆ ಭರಪೂರ ಇರುವ ಈ ಹಸಿರು ತರಕಾರಿ ಮೆದುಳಿನ ಕ್ಷಮತೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಲ್ಲಿ, ಇಡೀ ದಿನಕ್ಕೆ ಸಾಕಾಗುವಷ್ಟು ಕೆ ಜೀವಸತ್ವ ದೊರೆಯುತ್ತದೆ. ಇದರಲ್ಲಿರುವ ಒಂದು ವಿಶಿಷ್ಟವಾದ ಲಿಪಿಡ್‌ ಮೆದುಳಿನ ಕೋಶಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಇದಲ್ಲದೆ, ಬ್ರೊಕೊಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ಹಾನಿಯಾಗದಂತೆ ರಕ್ಷಿಸಬಲ್ಲವು

ಕುಂಬಳಕಾಯಿ ಬೀಜ

ಇದರಲ್ಲಿರುವ ಮೆಗ್ನಿಶಿಯಂ, ಜಿಂಕ್‌, ಕಬ್ಬಿಣ ಮತ್ತು ತಾವ್ರದ ಸತ್ವಗಳು ಮೆದುಳಿನ ರಕ್ಷಕರಂತೆ ಕೆಲಸ ಮಾಡುತ್ತವೆ. ಜಿಂಕ್‌ ಕೊರತೆಯಾದರೆ, ಅಲ್‌ಜೈಮರ್ಸ್‌, ಪಾರ್ಕಿನ್ಸನ್‌ ಸೇರಿದಂತೆ ಗಂಭೀರವಾದ ನರರೋಗಗಳು ಅಮರಿಕೊಳ್ಳುತ್ತವೆ. ಕಲಿಕೆ ಮತ್ತು ನೆನಪಿನ ವೃದ್ಧಿಗೆ ಮೆಗ್ನೀಶಿಯಂ ಬೇಕೆಬೇಕು. ತಾಮ್ರ ಮತ್ತು ಕಬ್ಬಿಣದ ಕೊರತೆಗಳೂ ಸಹ ನೇರವಾಗಿ ಮೆದುಳಿನ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ಎಲ್ಲಾ ಖನಿಜಗಳು ಹೇರಳವಾಗಿ ಕುಂಬಳ ಬೀಜದಲ್ಲಿ ದೊರೆಯುವುದರಿಂದ, ಒಂದಿಷ್ಟು ಬಾಯಾಡುವುದು ಒಳ್ಳೆಯದು

ಕಪ್ಪು ಚಾಕೊಲೇಟ್:

ಫ್ಲವನಾಯ್ಡ್‌, ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳಿಂಬ ತುಂಬಿದ ಕಪ್ಪು ಚಾಕಲೇಟ್‌ ಹೆಚ್ಚಿನ ಜನರಿಗೆ ಅಂಥ ಇಷ್ಟವಾಗುವುದಿಲ್ಲ. ಚಾಕಲೇಟ್‌ ಹೌದಾದರೂ ರುಚಿ ಸ್ವಲ್ಪ ಕಹಿ. ಹಾಲು ಬೆರೆಸಿದ ಚಾಕಲೇಟ್‌ಗಳಿಗಿಂತ ಅಧಿಕ ಪ್ರಮಾಣದಲ್ಲಿ ಡಾರ್ಕ್‌ ಚಾಕಲೇಟ್‌ಗಳು ಕೊಕೊ ಹೊಂದಿರುತ್ತವೆ. ಹಾಗಾಗಿ ಇದರಲ್ಲಿ ಫ್ಲವನಾಯ್ಡ್‌ಗಳೂ ಸಾಂದ್ರವಾಗಿರುತ್ತವೆ. ಕಲಿಕೆ ಮತ್ತು ನೆನಪನ್ನು ಹೆಚ್ಚಿಸುವ ಸಾಮರ್ಥ್ಯ ಇವುಗಳಿಗಿದೆ.

The seeds

ಬೀಜಗಳು

ವಾಲ್‌ನಟ್‌, ಬಾದಾಮಿಯಂಥ ಬೀಜಗಳಲ್ಲಿ ಒಮೇಗಾ ೩ ಫ್ಯಾಟಿ ಆಮ್ಲಗಳಿರುವುದರಿಂದ ಮೆದುಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಇದಲ್ಲದೆ, ವಿಟಮಿನ್‌ ಇ, ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳು ವಿಫುಲವಾಗಿ ಇರುವುದರಿಂದ, ನೆನಪನ್ನು ಹೆಚ್ಚಿಸಿ, ಮೆದುಳಿಗೆ ಹಾನಿಯಾಗದಂತೆ ಕಾಪಾಡುತ್ತವೆ.

ಇದಲ್ಲದೆ, ವಿಟಮಿನ್‌ ಬಿ6, ಬಿ12, ಫೋಲೇಟ್‌ ಮತ್ತು ಕೋಲಿನ್‌ ಇರುವ ಮೊಟ್ಟೆ, ವಿಟಮಿನ್‌ ಸಿ ಸಾಂದ್ರವಾಗಿರುವ ಕಿತ್ತಳೆ ಹಣ್ಣು, ಕಾಫಿ, ಗ್ರೀನ್‌ ಟೀ ಮುಂತಾದ ಹಲವಾರು ಆಹಾರಗಳು ನೆನಪಿನ ಶಕ್ತಿ ಹೆಚ್ಚಳಕ್ಕೆ, ಮೆದುಳನ್ನು ಸಶಕ್ತವಾಗಿ ಇರಿಸುವುದಕ್ಕೆ ಸಹಕಾರ ನೀಡುವಂಥವು. ಮುಖ್ಯವಾಗಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ಆಹಾರಗಳು ಮೆದುಳನ್ನು ಘಾಸಿಗೊಳ್ಳುವುದರಿಂದ ಕಾಪಾಡಬಲ್ಲವು. ಸ್ಮರಣಶಕ್ತಿ ವೃದ್ಧಿಸಿ, ಏಕಾಗ್ರತೆ ಮತ್ತು ಕಲಿಕೆಯನ್ನು ಹೆಚ್ಚಿಸುವ ಉದ್ದೇಶವಿದ್ದರೆ ಈ ಆಹಾರಗಳು ಪೂರಕ.

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

Exit mobile version