ತೂಕ ಇಳಿಕೆಯ ಬಗ್ಗೆ ಸಾಕಷ್ಟು (Foods for Weight Loss) ಕಂಡು ಕೇಳಿದ್ದಾಗಿದೆ. ದುರದೃಷ್ಟ ಬೆನ್ನು ಹಿಡಿದರೆ 100 ಗ್ರಾಂ ತೂಕವೂ ಭೂಮಿ ತೂಕ ಎನಿಸುವುದನ್ನು ಕಂಡು ಕಣ್ಣೀರಿಟ್ಟಿದ್ದೂ ಆಗಿದೆ. ಫಿಟ್‌ನೆಸ್ ಮಾರ್ಗದಲ್ಲಿ ಇಡೀ ಬದುಕನ್ನೇ ಸವೆಸಿದವರಿಗೆ ತೂಕ ಇಳಿಸುವುದು ಇಷ್ಟು ತೊಂದರೆ ನೀಡಿದರೆ, ನಮ್ಮಂಥ ಸಾಮಾನ್ಯರ ಪಾಡೇನು ಎಂಬ ಭಾವ ಬಂದರೆ ಅಚ್ಚರಿಯಿಲ್ಲ. ಹಾಗೆಂದು ನಮ್ಮ ತೂಕ ನಿಯಂತ್ರಿಸುವ ಶ್ರಮವನ್ನು ನಾವು ಬಿಡುವಂತಿಲ್ಲವಲ್ಲ. ತರಹೇವಾರಿ ರೋಗಗಳಿಂದ ತಪ್ಪಿಸಿಕೊಳ್ಳುವುದಕ್ಕೆ ತೂಕವನ್ನು ನಿಯಂತ್ರಣದಲ್ಲಿ ಇರಿಸುವುದು ಮಹತ್ವದ್ದು. ಇದಕ್ಕೆ ಪೂರಕವಾದಂಥ ಆಹಾರಗಳು ಯಾವುವು?
ಓಟ್‌ಮೀಲ್
ಬಹಳಷ್ಟು ಸತ್ವಗಳಿರುವ ಈ ಧಾನ್ಯದಲ್ಲಿ ಕ್ಯಾಲರಿ ಕಡಿಮೆ. ಇದರಲ್ಲಿರುವ ನಾರು ಮತ್ತು ಪ್ರೊಟೀನ್ ಅಂಶಗಳು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ ಹಾಗೂ ದೇಹಕ್ಕೆ ದಣಿವಾಗದಂತೆ ಶಕ್ತಿಯನ್ನು ಪೂರೈಸುತ್ತವೆ. ಅರ್ಧ ಕಪ್‌ನಷ್ಟು ಬೇಯಿಸಿದ ಓಟ್ಸ್‌ನಲ್ಲಿ ಕೇವಲ 150 ಗ್ರಾಂ ಕ್ಯಾಲರಿ ದೊರೆಯುತ್ತದೆ. 4 ಗ್ರಾಂನಷ್ಟು ನಾರು ಲಭಿಸುತ್ತದೆ. ಬೆಳಗಿನ ತಿಂಡಿಗೆ ಇದನ್ನು ಸೇವಿಸುವುದರಿಂದ ಕಾರಣವಿಲ್ಲದೆ ಕಾಡುವ ಹಸಿವನ್ನು ದೂರ ಮಾಡಿ, ಮಧ್ಯಾಹ್ನದವರೆಗೆ ಶಕ್ತಿ ಕುಸಿಯದೆ, ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು.
ಬ್ಲ್ಯಾಕ್ ಬೀನ್
ರಾಜ್ಮಾದಂಥ ಕಂದು/ಕಪ್ಪು ಬಣ್ಣದ ಯಾವುದೇ ಕಾಳುಗಳನ್ನು ಈ ಸಾಲಿಗೆ ಸೇರಿಸಬಹುದು. ನಾರು ಮತ್ತು ಪ್ರೊಟೀನ್ ಭರಪೂರ ಇರುತ್ತವೆ ಈ ಕಾಳುಗಳಲ್ಲಿ. ಇಂಥ ಒಂದು ಕಪ್ ಕಾಳುಗಳಲ್ಲಿ ಸುಮಾರು 17 ಗ್ರಾಂ ನಾರು ಮತ್ತು 14 ಗ್ರಾಂ ಪ್ರೊಟೀನ್ ದೊರೆಯುತ್ತದೆ. ಇಷ್ಟೊಂದು ಪ್ರಮಾಣದ ಕಾಳುಗಳನ್ನು ಒಬ್ಬ ವ್ಯಕ್ತಿಗೆ ತಿನ್ನಲಾಗದು ಎನ್ನುವುದು ಹೌದಾದರೂ, ಇದರದ್ದೇ ಪಲ್ಯ, ಭಾಜಿಗಳನ್ನು ಮಾಡುವುದು ಕುಟುಂಬದ ಆರೋಗ್ಯಕ್ಕೆ ಸೂಕ್ತ.
ವಾಲ್‌ನಟ್
ಆರೋಗ್ಯಕರ ಕೊಬ್ಬು, ಪ್ರೊಟೀನ್ ಮತ್ತು ನಾರಿನಂಶ ಹೊಂದಿರುವ ಈ ನಟ್‌ಗಳು ಆರೋಗ್ಯಕ್ಕೆ ಬಹಳಷ್ಟು ರೀತಿಯ ಲಾಭಗಳನ್ನು ಒದಗಿಸಬಲ್ಲವು. ತನ್ನಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲದಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಆರೋಗ್ಯ ಸುಧಾರಿಸುವುದರಿಂದ ಹಿಡಿದು, ತೂಕ ಇಳಿಸುವವರೆಗೆ ಹಲವಾರು ರೀತಿಯಲ್ಲಿ ಸ್ವಾಸ್ಥ್ಯ ರಕ್ಷಣೆಗೆ ನೆರವಾಗುತ್ತದೆ ಇದು.
ನಿಂಬೆ ನೀರು
ಬೆಳಗಿನ ಹೊತ್ತು ನಿಂಬೆ ನೀರಿನ ಸೇವನೆಯ ಬಗ್ಗೆ ಬಹಳಷ್ಟು ಪರ-ವಿರೋಧದ ಚರ್ಚೆಗಳು ಚಾಲ್ತಿಯಲ್ಲಿವೆ. ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ತೊಡಗಿ, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪೂರೈಸುವವರೆಗೆ ಹಲವು ರೀತಿಯಲ್ಲಿ ಇದು ನಮಗೆ ಉಪಕಾರ ಮಾಡಬಲ್ಲದು. ದೇಹದ ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಕೆಗೂ ಇದು ನೆರವಾಗುತ್ತದೆ. ಆದರೆ ಆಸಿಡಿಟಿಯಂಥ ಸಮಸ್ಯೆ ಇರುವವರಿಗೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆರಸದ ನೀರು ಕುಡಿಯುವುದು ಸಮಸ್ಯೆಗಳನ್ನು ತರಬಲ್ಲದು.
ಸೊಪ್ಪುಗಳು
ಪಾಲಕ್, ಮೆಂತೆ, ಸಬ್ಬಸಿಗೆ, ನುಗ್ಗೆ, ದಂಟು, ಹೊನಗನ್ನೆ, ಚಕ್ಕೋತ, ಕೀರೆ, ಬಸಳೆ ಮುಂತಾದ ಲೆಕ್ಕವಿಲ್ಲದಷ್ಟು ಸೊಪ್ಪುಗಳು ನಮ್ಮ ನಾಡಿನ ಉದ್ದಗಲಕ್ಕೆ ಲಭ್ಯವಿವೆ. ಸ್ಥಳೀಯವಾಗಿ ಬಳಸುವ ಸೊಪ್ಪುಗಳು ಇನ್ನೂ ಬಹಳಷ್ಟು ಇರಬಹುದು. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಪೂರಕವಾದಂಥವು. ಕಡಿಮೆ ಕ್ಯಾಲರಿಯಲ್ಲಿ ದಂಡಿಯಾಗಿ ವಿಟಮಿನ್ ಮತ್ತು ಖನಿಜಗಳನ್ನು ಪೂರೈಸಬಲ್ಲವು. ನಾರು ಮತ್ತು ನೀರನ್ನು ನೀಡಬಲ್ಲವು. ಈ ಮೂಲಕ ತೂಕ ಇಳಿಕೆಗೆ ನೆರವಾಗಬಲ್ಲವು.
ಇದನ್ನೂ ಓದಿ: Mushroom Benefits: ಅಣಬೆ ಎಂಬ ವಿಟಮಿನ್ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!
ಮೊಟ್ಟೆ
ದೇಹದಲ್ಲಿ ಅಧಿಕ ಸ್ನಾಯುಗಳು ಇದ್ದಷ್ಟೂ ಕ್ಯಾಲರಿ ಕರಗುವುದು ಹೆಚ್ಚು. ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆಯಂಥ ಆಹಾರಗಳು ನೆರವಾಗುತ್ತವೆ. ಒಮ್ಮೆ ಹೊಟ್ಟೆ ತುಂಬಿದರೆ ದೀರ್ಘ ಕಾಲದವರೆಗೆ ಶಕ್ತಿಯನ್ನು ಒದಗಿಸುತ್ತಾ, ಹಸಿವೆ ಕಾಡದಂತೆ ಕಾಪಾಡುತ್ತವೆ. ಜೊತೆಗೆ ಅಗತ್ಯವಾದ ಕೊಬ್ಬು ಮತ್ತು ಖನಿಜಗಳನ್ನೂ ದೇಹಕ್ಕೆ ಪೂರೈಸುತ್ತವೆ.