Site icon Vistara News

Stress Relieving Foods: ಒತ್ತಡ ನಿವಾರಣೆಗೆ ನೆರವಾಗುವ ಆಹಾರಗಳಿವು

Stress Relieving Foods

ಒತ್ತಡ ನಿರ್ವಹಣೆ ಎನ್ನುವುದು ನಮಗೀಗ ಗಾಳಿ, ನೀರಿನಷ್ಟೇ ಅಗತ್ಯ ಎನ್ನುವಂತಾಗಿದೆ. ಮಾನಸಿಕ ಒತ್ತಡ ಮಿತಿಮೀರಲು ಅವಕಾಶ ನೀಡಿದರೆ, ಅದಕ್ಕೆ ಬದುಕನ್ನೇ ಆಪೋಶನ ನೀಡಿದಂತೆ. ಒತ್ತಡ ನಿರ್ವಹಣೆಗೆ ಹಲವು ಮಾರ್ಗಗಳಿವೆ. ಅವುಗಳಲ್ಲಿ ಆಹಾರವೂ ಒಂದು. ಹೌದು, ಸರಿಯಾದ ಆಹಾರ ಸೇವನೆಯಿಂದಲೂ ಮಾನಸಿಕ ಒತ್ತಡಗಳನ್ನು ಹತೋಟಿಗೆ ತರುವುದಕ್ಕೆ ಸಾಧ್ಯವಿದೆ. ಆದರೆ ಅದೊಂದೇ ಎಂದಲ್ಲ, ಇದಕ್ಕೆ ವ್ಯಾಯಾಮ, ನಿದ್ದೆ, ಧ್ಯಾನ, ಪ್ರಾಣಾಯಾಮದಂಥ ಇನ್ನಿತರ ಮಾರ್ಗಗಳ ಸಾಂಗತ್ಯ ದೊರೆತರೆ ಒತ್ತಡ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಯಾವೆಲ್ಲಾ ಆಹಾರಗಳು ಈ ನಿಟ್ಟಿನಲ್ಲಿ ಸಹಕಾರಿ?

ಬೆಣ್ಣೆಹಣ್ಣು

ಬಿ ವಿಟಮಿನ್‌ಗಳು ಮಾನಸಿಕ ಸ್ಥಿತಿಗತಿಗಳ ಹತೋಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿ 8 ರೀತಿಯ ಜೀವಸತ್ವಗಳಿದ್ದು, ಅವುಗಳಲ್ಲಿ ಒಂದೊಂದೂ ದೇಹದ ಕಾರ್ಯನಿರ್ವಹಣೆಗೆ ಅಗತ್ಯವಾಗಿವೆ. ನರಮಂಡಲದ ಕೆಲಸ ಸುಸೂತ್ರವಾಗುವಲ್ಲಿ ಈ ಜೀವಸತ್ವಗಳು ಬೇಕು. ಬೆಣ್ಣೆ ಹಣ್ಣಿನಲ್ಲಿರುವ ಬಿ ಜೀವಸತ್ವಗಳು ಮೂಡ್‌ ಸುಧಾರಿಸಿ, ಆತಂಕ, ಒತ್ತಡಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.

ಬ್ಲೂಬೆರ್ರಿ

ಉತ್ಕರ್ಷಣ ನಿರೋಧಕ ಹೆಚ್ಚಿರುವ ಆಹಾರಗಳಿಗೂ ಒತ್ತಡ ನಿವಾರಣೆ ನೇರ ನಂಟಿದೆ ಎನ್ನುತ್ತವೆ ಅ‍ಧ್ಯಯನಗಳು. ಹಾಗಾಗಿ ಖಿನ್ನತೆಯಂಥ ಮಾನಸಿಕ ಸ್ಥಿತಿಯಿಂದ ನರಳುತ್ತಿರುವವರಿಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವ ಆಹಾರ ನೀಡಿದರೆ, ಅವರ ಮಾನಸಿಕ ಸ್ಥಿತಿ ಬೇಗನೇ ಸುಧಾರಿಸುತ್ತದೆ ಎಂಬುದು ತಜ್ಞರ ಅಭಿಮತ.

ಕ್ಯಾಲ್ಶಿಯಂಭರಿತ ಆಹಾರಗಳು

ಒತ್ತಡಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಎದೆಗುಂದದೆ ಇರುವಂಥ ಮನಸ್ಥಿತಿ ಬೆಳೆಸಿಕೊಳ್ಳುವಲ್ಲಿ ಕ್ಯಾಲ್ಶಿಯಂ-ಭರಿತ ಆಹಾರಗಳದ್ದೂ ಪಾತ್ರವಿದೆ ಎನ್ನುತ್ತವೆ ಅಧ್ಯಯನಗಳು. ಕ್ಯಾಲ್ಶಿಯಂ ಇರುವ ಬ್ರೊಕೊಲಿ, ಪಾಲಕ್‌ಸೊಪ್ಪು, ಡೈರಿ ಉತ್ಪನ್ನಗಳನ್ನು ಹೇರಳವಾಗಿ ಬಳಸುವ ಮತ್ತು ಇವುಗಳನ್ನು ಅಷ್ಟಾಗಿ ಬಳಸದೆ ಇರುವಂಥ ಜನರನ್ನು ಪ್ರತ್ಯೇಕವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ ಈ ವಿಷಯ ಬಹಿರಂಗಗೊಂಡಿದೆ

ಮೊಟ್ಟೆ

ಇವುಗಳಲ್ಲಿ ವಿಟಮಿನ್‌ ಡಿ ಸಮೃದ್ಧವಾಗಿದೆ. ಡಿ ಜೀವಸತ್ವವು ಮೂಡ್‌ ಸುಧಾರಣೆ ಮತ್ತು ಮನಸ್ಸನ್ನು ಸಂತೋಷವಾಗಿಡುವ ʻಹ್ಯಾಪಿ ಹಾರ್ಮೋನ್‌ʼಗಳ ಬಿಡುಗಡೆಗೆ ಬೇಕಾದಂಥದ್ದು. ಹಾಗಾಗಿ ಮೊಟ್ಟೆಯ ಸೇವನೆಯನ್ನು ನೇರವಾಗಿ ಒತ್ತಡ ನಿವಾರಣೆಗೆ ನಂಟು ಕಲ್ಪಿಸಲಾಗಿದೆ. ಮಾತ್ರವಲ್ಲ, ಖಿನ್ನತೆಯಂಥ ಕೆಲವು ಗಂಭೀರ ಮಾನಸಿಕ ಸಮಸ್ಯೆಗಳ ಚಿಕಿತ್ಸೆಗೆ ವಿಟಮಿನ್‌ ಡಿ ಮೂಲವಾಗಿರುವ ಸೂರ್ಯನ ಬೆಳಕಿನ ಚಿಕಿತ್ಸೆಯನ್ನು ಬಳಸುವ ಕ್ರಮವಿದೆ.

ಹಸಿರು ತರಕಾರಿಗಳು

ಹಲವು ರೀತಿಯ ಸೂಕ್ಷ್ಮ ಪೋಷಕಾಂಶಗಳನ್ನು ನೀಡುವ ಹಸಿರು ತರಕಾರಿಗಳು ಒತ್ತಡ ನಿರ್ವಹಣೆಗೆ ಮದ್ದಾಗಬಲ್ಲವು. ಅದರಲ್ಲೂ ಕೆಲವು ಪರಿಮಳಭರಿತ ಸೊಪ್ಪುಗಳು, ಉದಾ, ಪಾರ್ಸ್ಲಿ, ಪುದೀನಾ, ಸಬ್ಬಸಿಗೆಯಂಥ ಸೊಪುಗಳಲ್ಲಿರುವ ಕೆರೊಟಿನಾಯ್ಡ್‌ ಮತ್ತು ಫ್ಲೆವನಾಯ್ಡ್‌ಗಳು ರಕ್ತದೊತ್ತಡ ನಿಯಂತ್ರಿಸಿ, ಮನಸ್ಸಿಗೆ ಶಾಂತಿ ನೀಡುವಂಥ ಗುಣವನ್ನೂ ಹೊಂದಿವೆ. ಬ್ರೊಕೊಲಿಯಂಥ ಹಸಿರು ತರಕಾರಿಗಳಲ್ಲಿರುವ ಫೋಲೇಟ್‌ ಮತ್ತು ಮೆಗ್ನೀಶಿಯಂ ಅಂಶಗಳು ಸಹ ನರಮಂಡಲದ ಮೇಲಿನ ಒತ್ತಡ ಕಡಿಮೆ ಮಾಡುವುದಾಗಿ ಅಧ್ಯಯನಗಳು ಹೇಳುತ್ತವೆ

ಬೀಜಗಳು

ಕಾಯಿ ಮತ್ತು ಬೀಜಗಳಲ್ಲಿರುವ ಪ್ರೊಟೀನ್‌ ಮತ್ತು ಖನಿಜಗಳು ಒತ್ತಡ ನಿವಾರಣೆಗೆ ಸಹಕಾರಿ ಆದಂಥವು. ಅದರಲ್ಲೂ ಮೆಗ್ನೀಶಿಯಂ ಮತ್ತು ಜಿಂಕ್ ಹೆಚ್ಚಿರುವಂಥ ಬೀಜಗಳಲ್ಲಿ ಮನಸ್ಸಿನ ವಿಕಾರಗಳನ್ನು ಕಡಿಮೆ ಮಾಡುವ ಶಕ್ತಿ ಹೆಚ್ಚು. ಗೋಡಂಬಿ, ಕುಂಬಳಕಾಯಿ ಬೀಜ, ಚಿಯಾ ಮುಂತಾದವೆಲ್ಲ ಮೂಡ್‌ ಸುಧಾರಣೆಗೆ ಮತ್ತು ಮನಸ್ಸಿನ ದೃಢತೆಗೆ ನೆರವಾಗುವಂಥವು.

ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ

Exit mobile version